ಮಣ್ಣಿನ ಕಥೆಗಳಿಗಷ್ಟೇ ಗೆಲುವು: ಬಿಗ್ ಬಜೆಟ್ ಸಿನಿಮಾಗಳ ಭ್ರಮೆ ಕಳಚಿತು ಈ 2 ಚಿತ್ರಗಳು

Published : Sep 04, 2026, 08:45 AM IST
Original Story Movies

ಸಾರಾಂಶ

ಬಿಗ್ ಬಜೆಟ್ ಮತ್ತು ಸ್ಟಾರ್‌ಗಳ ವರ್ಚಸ್ಸೇ ಸಿನಿಮಾ ಗೆಲುವಿನ ಸೂತ್ರ ಎಂಬ ನಂಬಿಕೆಗೆ ‘ಹನುಮಾನ್ ಅಂಶ್’ ಮತ್ತು ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಸಿನಿಮಾಗಳು ಹೊಸ ಪ್ರಶ್ನೆ ಎತ್ತಿವೆ. ಒರಿಜಿನಲ್ ಕಥೆ, ಸಣ್ಣ ಬಜೆಟ್ ಹಾಗೂ ಪ್ರಾಮಾಣಿಕ ನಿರೂಪಣೆಯೇ ಇಂದಿನ ಪ್ರೇಕ್ಷಕರನ್ನು ಗೆಲ್ಲುವ ಪ್ರಮುಖ ಅಸ್ತ್ರ.

- ಇಂಟ್ರೋವರ್ಟ್ ರಿಪೋರ್ಟರ್

‘ಬದುಕಲಿಕೊಂದು ಭ್ರಾಂತಿ ಇರಬೇಕು’.. ಗಿರೀಶ್ ಕಾರ್ನಾಡ್ ಬರೆದಿರುವ ‘ರಕ್ಕಸ ತಂಗಡಿ’ ನಾಟಕದ ಒಂದು ಸಾಲು ಇದು. ಅದನ್ನೇ ಸೀರಿಯಸ್ಸಾಗಿ ನಂಬಿಕೊಂಡಿರುವ ಚಿತ್ರರಂಗ ‘ಬಿಗ್ ಬಜೆಟ್’ ಮತ್ತು ಸ್ಟಾರ್‌ ಸಿನಿಮಾಗಳ ಭ್ರಮೆಯಲ್ಲಿ ಬಿದ್ದು ನಾಶದ ಹಾದಿಯಲ್ಲಿದೆ. ಥಿಯೇಟರ್‌ಗೆ ಜನರನ್ನು ಕರೆತರುವುದೇ ಸ್ಟಾರ್‌ಗಳ ಬಿಗ್‌ ಬಜೆಟ್ ಸಿನಿಮಾ ಎಂಬ ನಂಬಿಕೆಯಲ್ಲಿ ಪದೇ ಪದೇ ಸೋಲುತ್ತಿದೆ. ಆ ನಂಬಿಕೆಯನ್ನು ಹೊಡೆಯುವಂತಹ ಸಿನಿಮಾಗಳು ಬಂದರೂ ಆ ಭ್ರಮೆ ಹರಿದಿಲ್ಲ. ಈಗ ಮತ್ತೆರಡು ಸಿನಿಮಾಗಳು ಆ ನಂಬಿಕೆಯನ್ನು ಸೋಲಿಸಿವೆ. ಅದರಲ್ಲಿ ಒಂದು ಹಿಂದಿಯ ‘ಹನುಮಾನ್ ಅಂಶ್’ ಮತ್ತು ಮಲಯಾಳಂನ ‘ಬೆತ್ಲೆಹೆಮ್ ಕುಟುಂಬ ಯೂನಿಟ್’.

ಎಷ್ಟೇ ಅದ್ದೂರಿತನ ಮಾಡಲಿ, ಎಷ್ಟೇ ಬಿಲ್ಡಪ್‌ ಇರಲಿ, ವಿಮಾನಗಳು ಬಿದ್ದುಹೋಗಲಿ, ಹಡಗುಗಳು ಹಾರಿಹೋಗಲಿ, ವಿಎಫ್‌ಎಕ್ಸ್‌ ಮೂಲಕ ಹೊಸ ಲೋಕ ಸೃಷ್ಟಿ ಮಾಡಲಿ ಕೊನೆಗೂ ಗೆಲ್ಲುವುದು ಒರಿಜಿನಾಲಿಟಿ, ಅಪ್ಪಟ ಸ್ವಂತ ಕತೆ ಮಾತ್ರ ಅಂತ ಈ ಸಿನಿಮಾಗಳು ಮತ್ತೆ ನೆನಪಿಸಿವೆ. ಡಾ. ವಿಶಾಲ್ ಚತುರ್ವೇದಿಯವರು ತಾವು ನೀಮ್ ಕರೋಲಿ ಬಾಬಾ ಅವರ ಜೀವನ ಕಥೆ ಆಧರಿಸಿ ಬರೆದ ‘ಡಿವೈನ್ ಡಿಟೋರ್: ದ್ಯಾಟ್ ಚೇಂಜ್‌ಡ್‌ ಮೈ ಲೈಫ್‌’ ಎಂಬ ಕೃತಿಯನ್ನು ಇಟ್ಟುಕೊಂಡು ‘ಹನುಮಾನ್ ಅಂಶ್’ ಎಂಬ ಸಿನಿಮಾ ರೂಪಿಸಿದ್ದಾರೆ.

ಚಿರಂಜೀವಿ ಆಂಜನೇಯನ ದೈವಿಕ ಶಕ್ತಿಯನ್ನು ಸಮಕಾಲೀನ ಸಮಾಜದ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ಮನುಷ್ಯನ ಅಂತರಾತ್ಮದಲ್ಲಿ ಆ ದೈವಾಂಶ ಹೇಗೆ ಜಾಗೃತಗೊಳ್ಳುತ್ತದೆ ಎಂಬ ಎಳೆಯನ್ನು ಕಟ್ಟಿಕೊಡಲು ಯತ್ನಿಸಿರುವ ಈ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ರೂಪುಗೊಂಡ ಸಿನಿಮಾ. ಅಂಥಾ ಪ್ರಚಾರವೂ ಮಾಡಿಲ್ಲ. ಇದರ ಕತೆಯಿಂದಲೇ, ಕತೆಯ ಶಕ್ತಿಯ ಬಾಯಿ ಮಾತಿನಿಂದಲೇ ಈಗ ಈ ಚಿತ್ರ ಭಾರತದಾದ್ಯಂತ ಸಿನಿ ಪ್ರೇಕ್ಷಕರನ್ನು ಅಯಸ್ಕಾಂತದಂತೆ ಸೆಳೆಯುತ್ತಿದೆ.

ಇನ್ನೊಂದು, ‘ಪ್ರೇಮಲು’ ಎಂಬ ಸೂಪರ್‌ಹಿಟ್‌ ಸಿನಿಮಾ ನಿರ್ದೇಶಿಸಿದ್ದ ಗಿರೀಶ್‌ ಎ.ಡಿ. ನಿರ್ದೇಶನದ ‘ಬೆತ್ಲೆಹೆಮ್ ಕುಟುಂಬ ಯೂನಿಟ್’. ಯಾವುದೇ ಆಡಂಬರವಿಲ್ಲದೆ, ಕೌಟುಂಬಿಕ ಬಾಂಧವ್ಯ, ಆಂತರಿಕ ಬಿಕ್ಕಟ್ಟುಗಳು, ಆಚರಣೆಗಳು ಮತ್ತು ಮನಸ್ಸನ್ನು ತಟ್ಟುವ ಸೂಕ್ಷ್ಮ ಭಾವನೆಗಳನ್ನು ದಾಟಿಸುವ ಸಿನಿಮಾ. ಎರಡರಲ್ಲೂ ಕೃತಕ ಮಸಾಲಗಳಿಲ್ಲ, ಬದಲಿಗೆ ತಮ್ಮ ಮಣ್ಣಿನ ಕಥೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಹೇಳುವ ಗುಣವಿದೆ. ಹಾಗಾಗಿಯೇ ಈ ಎರಡೂ ಸಿನಿಮಾಗಳನ್ನು ಪ್ರೇಕ್ಷಕ ಯಾವುದೇ ಗದ್ದಲವಿಲ್ಲದೆ, ಹೋರಾಟವಿಲ್ಲದೆ, ನೆಗೆಟಿವಿಟಿಯಿಲ್ಲದೆ ಗೆಲ್ಲಿಸಿದ್ದಾನೆ.

ಈ ಸಿನಿಮಾಗಳು ಕಲಿಸಿದ ಪಾಠಗಳು:

1. ಸ್ವಂತಿಕೆಯೇ ನಿಜವಾದ ಅಸ್ತ್ರ

ಪ್ಯಾನ್ ಇಂಡಿಯಾ ಕಾರಣದಿಂದಲೋ, ಹಾಲಿವುಡ್‌ನವರು ಬಾಲಿವುಡ್‌ನವರು ಮೆಚ್ಚಬೇಕು ಎಂಬ ಕಾರಣದಿಂದಲೋ ನಮ್ಮದಲ್ಲದ, ಮನಸ್ಸು ತಟ್ಟದ ಕತೆಗಳಿಗೆ ಶರಣಾದರೆ ಗೆಲುವು ಕೈಹಿಡಿಯದು. ಪ್ರೇಕ್ಷಕ ಈಗ ಜಗತ್ತಿನ ಸಿನಿಮಾ ನೋಡುತ್ತಾನೆ. ಆತನಿಗೆ ಬೇಕಿರುವುದು ನಕಲಿ ದೃಶ್ಯಗಳಲ್ಲ, ನಮ್ಮದೇ ನೆಲದ ಹೊಸತನ. ಒರಿಜಿನಲ್ ಕತೆಗಳು.

2. ಕಡಿಮೆ ಬಜೆಟ್, ಶಕ್ತಿಶಾಲಿ ಕತೆ

‘ಹನುಮಾನ್ ಅಂಶ್’ ಲಭ್ಯವಿರುವ ಮಿತ ಬಜೆಟ್‌ನಲ್ಲೇ ಕಲಾತ್ಮಕವಾಗಿ ತಂತ್ರಜ್ಞಾನ ಬಳಸಿಕೊಂಡಿದ್ದರೆ, ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಸಹಜ ಲೊಕೇಶನ್‌ಗಳು ಮತ್ತು ಕಲಾವಿದರ ನೈಜ ಅಭಿನಯವನ್ನೇ ದೊಡ್ಡ ಬಂಡವಾಳವಾಗಿಸಿಕೊಂಡಿದೆ. ಇಲ್ಲಿ ಬಜೆಟ್‌ಗಿಂತ ಮುಖ್ಯವಾಗಿದ್ದು ಕಾಗದದ ಮೇಲಿನ ಗಟ್ಟಿಯಾದ ಚಿತ್ರಕಥೆ ಮತ್ತು ಶಿಸ್ತಿನ ಪ್ರಿ-ಪ್ರೊಡಕ್ಷನ್ ಹಾಗೂ ಶೂಟಿಂಗ್ ಯೋಜನೆ. ಈಗೀಗ ಕನ್ನಡದಲ್ಲಿ ಶೂಟಿಂಗ್ ವೆಚ್ಚಗಳು ಅತಿಯಾಗಿವೆ. ಬಜೆಟ್ ಸಣ್ಣದಾಗಿದ್ದಷ್ಟೂ ನಿರ್ಮಾಪಕನ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಿ, ಚಿತ್ರ ಲಾಭದ ದಡ ಮುಟ್ಟುವುದು ಸುಲಭವಾಗುತ್ತದೆ.

3. ಸ್ಟಾರ್‌ಗಳು ಕತೆ ತಿರುಚುವುದು ನಿಲ್ಲಬೇಕು

ಮೊದಲು ಸ್ಟಾರ್‌ಗಳ ಇಮೇಜ್ ಮತ್ತು ಕಟೌಟ್‌ಗೆ ತಕ್ಕಂತೆ ಕಥೆ ಹೆಣೆಯುತ್ತಿರುವುದು ನಿಲ್ಲಬೇಕು. ಆಮೇಲೆ ಸ್ಟಾರ್‌ಗಳು ತಮಗೆ ಹಿಡಿತವಿಲ್ಲದೆ, ಕತೆ ತಿರುಚುವುದು ನಿಲ್ಲಿಸಬೇಕು. ಕಥೆಯಲ್ಲೇ ದಮ್ಮಿಲ್ಲದಿದ್ದಾಗ ಯಾವ ಸೂಪರ್‌ಸ್ಟಾರ್ ಕೂಡ ಸಿನಿಮಾವನ್ನು ದಡ ಸೇರಿಸಲಾರ.

4. ಎಲ್ಲರನ್ನೂ ಮೆಚ್ಚಿಸುವ ಮಸಾಲಾ ಸೂತ್ರದ ಅಂತ್ಯ

ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಒಟ್ಟಿಗೆ ಖುಷಿಪಡಿಸಲು ಹೋಗಿ ನಾಲ್ಕು ಫೈಟ್, ಮೂರು ಡ್ಯುಯೆಟ್, ಕೃತಕ ಕಾಮಿಡಿ ತುರುಕುವ ಕಾಲ ಮುಗಿದುಹೋಗಿದೆ. ನಿರ್ದಿಷ್ಟ ಪ್ರೇಕ್ಷಕ ವರ್ಗವನ್ನು ಗುರುತಿಸಿ, ಅವರಿಗೆ ಸಂಪೂರ್ಣ ಪ್ರಾಮಾಣಿಕತೆಯಿಂದ ಸಿನಿಮಾ ಕಟ್ಟಿಕೊಟ್ಟರೆ ಸಾಕು. 100 ಜನರನ್ನೂ ತೃಪ್ತಿಪಡಿಸಲು ಹೋಗಿ ಸೋಲುವ ಬದಲು, 30 ಜನರ ನಿಷ್ಠಾವಂತ ಪ್ರೇಕ್ಷಕರನ್ನು ತಲುಪಿದರೆ ಸಣ್ಣ ಬಜೆಟ್‌ನ ಸಿನಿಮಾ ಗೆಲ್ಲಬಲ್ಲದು.

5. ಪ್ರಚಾರದಲ್ಲಿ ಸಿನಿಮಾ ಗೆಲ್ಲಿಸುವುದು ಬಿಡಬೇಕು

ಕತೆ ಚೆನ್ನಾಗಿ ಮಾಡುವುದು ಬಿಟ್ಟು ಪ್ರಚಾರದಲ್ಲಿ ಸಿನಿಮಾ ಗೆಲ್ಲಿಸಲು ಹೊರಡಬಾರದು. ಕಂಟೆಂಟ್ ಚೆನ್ನಾಗಿದ್ದಾಗ ಮಾತ್ರ ಪ್ರಚಾರ ಕೈಹಿಡಿಯಬಹುದೇ ಹೊರತು, ಕಂಟೆಂಟ್ ಹಾಳುಗೆಡವಿದರೆ ಯಾವ ಪ್ರಚಾರದಿಂದಲೂ ಒಳಿತಾಗದು.

ಆ್ಯಂಟಿ ಕ್ಲೈಮ್ಯಾಕ್ಸ್

‘ಹನುಮಾನ್ ಅಂಶ್’ ಮತ್ತು ‘ಬೆತ್ಲೆಹೆಮ್ ಕುಟುಂಬ ಯೂನಿಟ್’ನಂತಹ ಚಿತ್ರಗಳು ಚಿತ್ರರಂಗಕ್ಕೆ ನೀಡುತ್ತಿರುವ ಎಚ್ಚರಿಕೆಯ ಸಂದೇಶ ಒಂದೇ -ದೊಡ್ಡ ಬಂಡವಾಳ, ಸ್ಟಾರ್‌ ವರ್ಚಸ್ಸು, ಅದ್ದೂರಿ ಪ್ರಚಾರ ಚಿತ್ರವನ್ನು ರಕ್ಷಿಸಲಾರದು. ಕಥೆಯ ಸ್ವಂತಿಕೆ, ಮಣ್ಣಿನ ಮೇಲಿನ ನಿಷ್ಠೆ ಮತ್ತು ಪ್ರಾಮಾಣಿಕ ನಿರೂಪಣೆಯಿಂದ ಮಾತ್ರವೇ ಪ್ರೇಕ್ಷಕರ ಹೃದಯ ತಲುಪಲು ಸಾಧ್ಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪೈಲೆಟ್‌ ಟು ಹೀರೋಯಿನ್‌ : ಬ್ಯೂಟಿಯ ಬ್ಯೂಟಿಫುಲ್‌ ಜರ್ನಿ ಇಲ್ಲಿದೆ
ಬ್ಲಾಗರ್‌ಗಳ ಬದುಕಿನಲ್ಲೊಂದು ಭಯಾನಕ ತಿರುವು: ‘6-5=2’ ಬಳಿಕ ಬಂತು ‘ವಿಡಿಯೋ’ ವೈರಲ್