
ಮೈಸೂರು(ಜ.26): ಜಗತ್ತಿನಲ್ಲಿ ವಿಸ್ಮಯಗಳು ನಡೆಯುತ್ತಿರುತ್ತವೆ ಅನ್ನೋದು ನಿಜ. ಆದರೆ ಎಲ್ಲ ವಿಸ್ಮಯಗಳು ನಮಗೆ ಕಾಣಿಸೋದಿಲ್ಲ. ಕೆಲವು ಕಂಡರೂ ಗೊತ್ತಾಗೋದಿಲ್ಲ. ಆದರೆ ಕೆಲವು ವಿಸ್ಮಯಗಾರರ ಬರಹ, ಮಾತುಗಳೇ ನಮ್ಮನ್ನು ಆಶ್ಚರ್ಯ ಎಂಬ ಜಗತ್ತಿಗೆ ಕೊಂಡೊಯ್ಯುತ್ತವೆ.
ಅದರಂತೆ ಮೈಸೂರಿನ ಕೆಎಸ್‌ಆರ್‌ಟಿಸಿ ಘಟಕದಲ್ಲೋರ್ವ ವಿಸ್ಮಯಗಾರರಿದ್ದಾರೆ. ಇವರು ಬರೆದ ರಜಾ ಮನವಿ ಪತ್ರ ಅವರಷ್ಟೇ ವಿಸ್ಮಯವಾಗಿದೆ.
ಮೈಸೂರು ಕೆಎಸ್‌ಆರ್‌ಟಿಸಿ ಘಟಕದ ಚಾಲಕ ಕಂ ನಿರ್ವಾಹಕರಾಗಿರುವ ರಾಜೇಶ್.ಎಂ.ಜೆ ಎಂಬುವರು, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ನೋಡಲು ರಜೆ ಕೋರಿ ಬರೆದ ಪತ್ರ ವೈರಲ್ ಆಗಿದೆ.
ಹೌದು ರಾಜೇಶ್ ಅವರಿಗೆ ಸಿಎಂ ಕುಮಾರಸ್ವಾಮಿ ಅಂದ್ರೆ ಪಂಚಪ್ರಾಣ. ಹೇಳಿ ಕೇಳಿ ರಾಜೇಶ್ ಹಾಸನ ಜಿಲ್ಲೆಯವರು. ಕುಮಾರಣ್ಣ ಅವರ ಪುತ್ರನ ಸಿನಿಮಾ ಬಿಡುಗಡೆಯಾಗಿದೆ ಅಂತಾ ತಿಳಿದ ರಾಜೇಶ್ ಪೆನ್ನು ಕೈಗೆತ್ತಿಕೊಂಡವರೇ ರಜಾ ಮನವಿ ಪತ್ರವನ್ನು ಬರೆದಿದ್ದಾರೆ.
ರಾಜೇಶ್ ಲೀವ್ ಲೆಟರ್ ಇಂತಿದೆ:
‘ಸೀತಾರಾಮ ಕಲ್ಯಾಣ ಚಲನಚಿತ್ರ ದಿ.25-01-2019ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದ್ದು, ಈ ಚಲನಚಿತ್ರವು ಕುಟುಂಬ ಸಮೇತ ನೋಡುವಂತಹ ಒಳ್ಳೆಯ ಚಲನಚಿತ್ರವಾಗಿರುತ್ತದೆ. ಹಾಗೂ ಚಿತ್ರದ ನಾಯಕರು ಕರ್ನಾಟಕ ರಾಜ್ಯದ 'ಹೆಮ್ಮೆಯ ಜಯಪ್ರಿಯ ಮುಖ್ಯಮಂತ್ರಿ ಕುಮಾರ್ ಅಣ್ಣರವರ ಮಗ ಆಗಿರುತ್ತಾರೆ. ಹಾಗೂ ನಮ್ಮ ಜಿಲ್ಲೆ ಹಾಸನದವರಾಗಿರುತ್ತಾರೆ. ಹಾಗಾಗಿ ನಾನು 'ಸೀತಾರಾಮ ಕಲ್ಯಾಣ ಚಲನಚಿತ್ರವನ್ನು ನೋಡಲು ದಿ.26-01-2019ರಂದು ಹೋಗಬೇಕಾಗಿರುತ್ತದೆ. ಹಾಗಾಗಿ ನನ್ನ ಕರ್ತವ್ಯಕ್ಕೆ ರಜೆ ನೀಡಬೇಕಾಗಿ ತಮ್ಮಲ್ಲಿ ಸವಿನಯ ಪ್ರಾರ್ಥನೆ'.
ನೋಡದ್ರಲ್ಲಾ ಸಿಎಂ ಕುಮಾರಸ್ವಾಮಿ ಮೇಲಿನ ರಾಜೇಶ್ ಅವರ ಅಭಿಮಾನ. ಅಷ್ಟೇ ಅಲ್ಲ ಈ ಪತ್ರದ ಮೂಲಕ ರಾಜೇಶ್ ತಾವೆಷ್ಟು ಪ್ರಾಮಾಣಿಕರು ಎಂಬುದನ್ನೂ ಸಾಬೀತುಪಡಿಸಿದ್ದಾರೆ.
ಸಿನಿಮಾ ನೋಡಲೆಂದೇ ರಜೆ ಬೇಕು ಎಂದು ಮನವಿ ಮಾಡಿದ ಏಕೈಕ ಧೈರ್ಯವಂತ ಉದ್ಯೋಗಿ ಎಂದರೆ ಬಹುಶಃ ಅದು ರಾಜೇಶ್ ಅವರೊಬ್ಬರೇ ಇರಬೇಕು.
ಗುದ್ದಿದ್ರೆ ಕಿಲ್ಲರ್ ಬಿಎಂಟಿಸಿ ಅಂತಾರೆ: ಬ್ರೇಕ್ ಹಾಕಿದ್ರೆ ನೊಟೀಸ್ ಕೊಡ್ತಾರೆ!
ಸರ್ 'ಮೂಡ್' ನಲ್ಲಿರುವೆ, ನಂತರ ಬರುವೆ: ಪೊಲೀಸಪ್ಪನ ಲೀವ್ ಲೆಟರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.