
ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಷೋ ನಡೆಯುತ್ತಿದ್ದು, ಇದಾಗಲೇ ಕರ್ನಾಟಕದ ಮೂಲೆಮೂಲೆಗಳಿಂದ ಹಲವು ಯುವತಿಯರು ಪ್ರತಿಭೆ ಪ್ರದರ್ಶನ ಮಾಡುತ್ತಿದ್ದಾರೆ. ಸಹಸ್ರಾರು ಮಂದಿಯ ನಟನೆಯನ್ನು ನೋಡಿದ ಬಳಿಕ ಕೆಲವರನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿದ್ದು, ತಮ್ಮ ಅದ್ಭುತ ಪ್ರತಿಭೆಯಿಂದ ಅವರು ಗಮನ ಸೆಳೆಯುತ್ತಿದ್ದಾರೆ. ಇವರಲ್ಲಿ ಆಯ್ಕೆಯಾದವರಿಗೆ ಸಿನಿಮಾದಲ್ಲಿಯೂ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯನ್ನು ಹೊತ್ತು ಬಂದವರೇ ಹಲವರು. ಇದಾಗಲೇ ಕಳೆದ ಸೀಸನ್‌ನಲ್ಲಿ ಮಹಾನಟಿಯಾಗಿ ಆಯ್ಕೆಯಾಗಿದ್ದರು ಮೈಸೂರಿನ ಪ್ರಿಯಾಂಕಾ. ಅವರಿಗೆ 15 ಲಕ್ಷ ಮೌಲ್ಯದ ಬಂಗಾರದ ಕಿರೀಟವನ್ನು ನೀಡಲಾಯಿತು. ತರೀಕೆರೆಯ ಧನ್ಯಶ್ರೀ ರನ್ನರ್ ಅಪ್ ಆಗಿದ್ದರು ಮತ್ತು ಅವರಿಗೆ 10 ಲಕ್ಷ ಬಹುಮಾನ ಸಿಕ್ಕಿತು ಎನ್ನಲಾಗುತ್ತಿದೆ. ಇದರಲ್ಲಿಯೇ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಕೆಲವು ಯುವತಿಯರಿಗೆ ವಿವಿಧ ಕಡೆಗಳಲ್ಲಿ ಅವಕಾಶಗಳೂ ಸಿಗುತ್ತಿವೆ.
ಇದೀಗ ಸೀಸನ್ 2ರಲ್ಲಿ ಕೂಡ ಯುವತಿಯರು ತಮ್ಮ ಪ್ರತಿಭೆಗಳಿಂದ ಮಿಂಚುತ್ತಿದ್ದಾರೆ. ಅವರಿಗೆ ಕೆಲವು ವಿಷಯಗಳನ್ನು ನೀಡಲಾಗುತ್ತದೆ. ಅದರ ಆಧಾರದ ಮೇಲೆ ಅವರು ನಟಿಸಬೇಕಾಗುತ್ತದೆ. ಹಲವು ರೌಂಡ್ಗಳಲ್ಲಿ ಅವರು ಪಾಸ್ ಆಗಬೇಕಾಗುತ್ತದೆ. ಇದೀಗ Act to Camera Round ವೇಳೆ ತೀರ್ಪುಗಾರ್ತಿಯೂ ಆಗಿರುವ ನಟಿ ಪ್ರೇಮಾ ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅದನ್ನು ನೋಡಿ ಅಲ್ಲಿದ್ದ ಸ್ಪರ್ಧಿಗಳು ಕೂಡ ಕಣ್ಣೀರಾಗಿದ್ದರೆ, ಮತ್ತೆ ಕೆಲವರು ಬಿಟ್ಟಗಣ್ಣುಗಳಿಂದ ನೋಡುತ್ತಿದ್ದಾರೆ. ಇದರ ಪ್ರೊಮೋ ರಿಲೀಸ್ ಆಗಿದೆ.
ಅಷ್ಟಕ್ಕೂ, ಇದರಲ್ಲೇನು ನಟಿ ಪ್ರೇಮಾ ಯಾವುದೋ ವಿಷಯಕ್ಕೆ ಅತ್ತಿದ್ದಲ್ಲ. ಬದಲಿಗೆ ಬೀದರ್ನ ದಿವ್ಯಾಂಜಲಿ ಎನ್ನುವ ಯುವತಿಗೆ ಜನ ನಿಮ್ಮನ್ನು ತಪ್ಪು ತಿಳಿದುಕೊಂಡಿದ್ದಾರೆ, ಅದನ್ನು ಹೇಗೆ ತೋರಿಸುತ್ತೀರಿ ಎಂದು ರಮೇಶ್ ಅವರು ಕೇಳಿದಾಗ ದಿವ್ಯಾಂಜಲಿ ಅದ್ಭುತವಾಗಿ ನಟಿಸಿದರು. ಕೊನೆಗೆ ಅದನ್ನೇ ನಟಿ ಪ್ರೇಮಾ ತೋರಿಸಿದರು. ಮಹಿಳೆಯ ಶೀಲ ಶಂಕಿಸಿ ಅಕ್ರಮ ಸಂಬಂಧದ ಬಗ್ಗೆ ಜನರು ಮಾತನಾಡಿದಾಗ ಹೇಗೆ ರಿಯಾಕ್ಟ್ ಮಾಡುತ್ತಾಳೆ, ಆ ಮಹಿಳೆಯ ಮನಸ್ಸಿನಲ್ಲಿ ಆಗುವ ತುಮುಲಗಳೇನು ಎನ್ನುವ ಬಗ್ಗೆ ಪ್ರೇಮಾ ಅರ್ಧ ನಿಮಿಷದ ಡೈಲಾಗ್ನಲ್ಲಿಯೇ ಎಲ್ಲರ ಕಣ್ಣಿನಲ್ಲೂ ನೀರು ತರಿಸಿದರು. ಖುದ್ದು ಅವರ ಕಣ್ಣುಗಳಲ್ಲಿ ಕೂಡ ನೀರು ಇತ್ತು. ಈ ಸನ್ನಿವೇಶವನ್ನು ನೋಡಿ ಎಲ್ಲರೂ ಅಚ್ಚರಿಗೊಂಡರು. ನಟನೆಗೆ ಫಿದಾ ಆದರು.
ಇನ್ನು ನಟಿ ಪ್ರೇಮಾ ಅವರ ನಟನೆಗೆ ಫಿದಾ ಆಗದ ಅಭಿಮಾನಿಗಳೇ ಇಲ್ಲ. ಕನ್ನಡವಷ್ಟೇ ಅಲ್ಲದೇ ಸ್ಯಾಂಡಲ್‌ವುಡ್ ತಮಿಳು, ತೆಲುಗು ಸಿನಿಮಾಗಳಲ್ಲೂ ಮಿಂಚಿದ್ದಾರೆ ನಟಿ. ಹಲವು ವರ್ಷಗಳ ಕಾಲ ಪರದೆಯಿಂದ ದೂರ ಸರಿದಿದ್ದರು. ಕನ್ನಡದಲ್ಲಿ ಹಿಟ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರು ಬಹುತೇಕ ಕನ್ನಡದ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಓಂ, ಉಪೇಂದ್ರ, ಯಜಮಾನ ಸೇರಿದಂತೆ ಹಲವು ಎವರ್‌ಗ್ರೀನ್ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಪ್ರೇಮಾ ಅವರು ಹಲವು ವರ್ಷಗಳ ಬಳಿಕ ಇದೀಗ ಮಹಾನಟಿ ಷೋನಲ್ಲಿ ಜಡ್ಜ್ ಆಗುವ ಮೂಲಕ ಕಿರುತೆರೆಗೆ ಮತ್ತೊಮ್ಮೆ ಎಂಟ್ರಿಕೊಟ್ಟಿದ್ದಾರೆ.
ಇದೇ 14ರಿಂದ ಮಹಾನಟಿ ಸೀಸನ್-2 ಶುರುವಾಗಿದೆ. ಇದರಲ್ಲಿಲ್ಲಿ ಪ್ರೇಮಾ ಎರಡನೆಯ ಬಾರಿಯೂ ತೀರ್ಪುಗಾರರಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ನಟ ರಮೇಶ್ ಅರವಿಂದ್, ತರುಣ್ ಸುಧೀರ್, ನಿಶ್ವಿಕಾ ನಾಯ್ಡು ಹಾಗೂ ಪ್ರೇಮಾ ಅವರು ತೀರ್ಪುಗಾರರಾಗಿದ್ದರು. ಈ ಬಾರಿಯೂ ಅದೇ ತಂಡ ಕಾಣಿಸಿಕೊಂಡಿದೆ. ಈ ಷೋನಲ್ಲಿ ಸ್ಪರ್ಧಿಗಳ ಜೊತೆ ನಟರು ಕೂಡ ತಮ್ಮ ನಟನಾ ಕೌಶಲವನ್ನು ಆಗಾಗ್ಗೆ ತೋರಿಸಿಕೊಳ್ಳುವುದು ಇದೆ. ಅದೇ ರೀತಿ ಪ್ರೇಮಾ ಈಗ ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.