ಚಿಕ್ಕೋಡಿಯಲ್ಲಿ ಮೋದಿ ಮೋಡಿ: ದೋಸ್ತಿ ಸರ್ಕಾರಕ್ಕೆ ಪಿಎಂ ಸವಾಲ್!

By Web DeskFirst Published Apr 18, 2019, 5:19 PM IST
Highlights

ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ| ಚಿಕ್ಕೋಡಿ-ಬೆಳಗಾವಿ ಲೋಕಸಭಾ ಕ್ಷೇತ್ರದ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ| ರಾಜ್ಯದ ಸಮ್ಮೀಶ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ| ‘ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಎಲ್ಲಿ’?| ‘ಯುವ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ವಿಫಲ’|

ಚಿಕ್ಕೋಡಿ(ಏ.18): ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ಇಂದು ಚಿಕ್ಕೋಡಿಯಲ್ಲಿ ವಿಜಯ್ ಸಂಕಲ್ಪ ಯಾತ್ರೆ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ಕರ್ನಾಟಕದಲ್ಲಿ ಚಿತ್ರದುರ್ಗ, ಮೈಸೂರು, ಗಂಗಾವತಿ, ಮಂಗಳೂರು, ಬೆಂಗಳೂರು, ಬಾಗಲಕೋಟೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಪೂರ್ಣಗೊಳಿಸಿರುವ ಪ್ರಧಾನಿ ಮೋದಿ, ಚಿಕ್ಕೋಡಿ-ಬೆಳಗಾವಿ ಲೋಕಸಭಾ ಕ್ಷೇತ್ರದ ಜನರನ್ನುದ್ದೇಶಿಸಿ ಮಾತನಾಡಿದರು.

ವಿಶ್ವಗುರು ಬಸವಣ್ಣ, ಛತ್ರಪತಿ ಶಿವಾಜಿ, ರಾಣಿ ಚೆನ್ನಮ್ಮ ಅವರನ್ನು ನೆನೆದು ಪ್ರಧಾನಿ ಮೋದಿ ಭಾಷಣ ಮಾಡಿದ್ದು ವಿಶೇಷವಾಗಿತ್ತು.

ಭಾರತದ ಭವಿಷ್ಯ ಈ ದೇಶದ ಮತದಾರನ ಕೈಯಲ್ಲಿದ್ದು, ಸುಭದ್ರ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯ ಸಂಕಲ್ಪ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವುದು ನಮ್ಮ ಸಂಕಲ್ಪವಾಗಿದ್ದು, ನಿಮ್ಮ ಮತ ಹಣದುಬ್ಬರವನ್ನು ನಿಯಂತ್ರಿಸಲು ಸಹಾಯಕಾರಿಯಾಗಲಿದೆ ಎಂದು ಮೋದಿ ನುಡಿದರು.

ನಿಮ್ಮ ಭಾರತ್ ಮಾತಾ ಕೀ ಜೈ ಎನ್ನುವವರಿಗೆ ಸನ್ಮಾನಿಸಲು ಸಹಾಯಕಾರಿಯಾಗಲಿದ್ದು, ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರಿಗೆ ಮೋದಿ ಕಿವಿಮಾತು ಹೇಳಿದರು.

ಯುವ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ  ರಾಜ್ಯ ಸಮ್ಮಿಶ್ರ ಸರ್ಕಾರ ವಿಫಲವಾಗಿದ್ದು, ಇಂತಹ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಮೋದಿ ಗುಡುಗಿದರು.

ರಾಜ್ಯದ ಸಮ್ಮಿಶ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ನೀಡುತ್ತಿಲ್ಲ. ಆದರೆ ಮೇ ಬಳಿಕ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ ರಾಜ್ಯದ ರೈತರ ಫಲಾನುಭವಿಗಳ ಪಟ್ಟಿ ಪಡೆಯುವುದಾಗಿ ಮೋದಿ ಭರವಸೆ ನೀಡಿದರು.

ತುತ್ತು ಅನ್ನಕ್ಕಾಗಿ ಪರದಾಡುತ್ತಿರುವವರೇ ಸೇನೆಗೆ ಸೇರುತ್ತಾರೆ ಎಂಬ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ, ಸೇನೆ ಮತ್ತ ಸೈನಿಕರನ್ನು ಅಗೌರವದಿಂದ ಕಂಡ ಸಿಎಂ ಒಂದೂ ಕ್ಷಣವೂ ಅಧಿಕಾರದಲ್ಲಿರಬಾರದು ಎಂದು ಹರಿಹಾಯ್ದರು.

ದೇಶದಲ್ಲಿ ಅಪ್ಪಿತಪ್ಪಿಯೂ ದುರ್ಬಲ ಸರ್ಕಾರ ಅಧಿಕಾರಕ್ಕೆ ಬರಬಾರದು ಎಂದು ಹೇಳಿದ ಮೋದಿ, ಸಧೃಢ ಸರ್ಕಾರ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಮ್ಮು ಕಾಶ್ಮೀರದಲ್ಲಿ ಮತ್ತೊಬ್ಬ ಪ್ರಧಾನಿ ಮಾಡುವವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದು, ಇಂತಹ ಪಕ್ಷದಿಂದ ದೇಶದ ಸುರಕ್ಷತೆಯ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನವಾದೀತು ಎಂದು ಮೋದಿ ಹರಿಹಾಯ್ದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!