
ಡೆಹ್ರಾಡೂನ್/ನೈನಿತಾಲ್ (ಜುಲೈ 23, 2023): ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿ ನಡೆದ 32 ವರ್ಷದ ವ್ಯಕ್ತಿಯ ಕೊಲೆಯ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸ್ತಿದ್ದಾರೆ. ಅಪರಾಧದ ಬಳಿಕ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹಿ ಆರ್ಯಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಕೊಲೆಗೆ ಯೋಜಿಸಲು ಕಳೆದ ಎರಡು ತಿಂಗಳಿನಿಂದ ಅಪರಾಧ ಕಾರ್ಯಕ್ರಮ ‘ಕ್ರೈಮ್ ಪ್ಯಾಟ್ರೋಲ್’ ಸಂಚಿಕೆಗಳನ್ನು ಅರೋಪಿ ವೀಕ್ಷಿಸುತ್ತಿದ್ದಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಮಹಿ ಆರ್ಯ ತನ್ನ 'ಪ್ರಸ್ತುತ ಬಾಯ್‌ಫ್ರೆಂಡ್’ ದೀಪ್ ಕಂಡ್‌ಪಾಲ್, ಆಕೆಯ ಸೇವಕಿ ಉಷಾದೇವಿ ಮತ್ತು ಆಕೆಯ ಸೇವಕಿಯ ಪತಿ ರಾಮಾವತಾರ್ ಜೊತೆಗೂಡಿ ಎಕ್ಸ್ ಬಾಯ್‌ಫ್ರೆಂಡ್ ಅಂಕಿತ್ ಚೌಹಾಣ್‌ನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿರುವುದು ಬಯಲಾಗಿದೆ. ಅಂಕಿತ್ ಚೌಹಾಣ್‌ಗೆ ಕಚ್ಚಲು ತನ್ನ ನಾಗರಹಾವನ್ನು ಬಳಸಿದ್ದ ಬಂಧಿತ ಹಾವು ಆಡಿಸುವವರ ವಿಚಾರಣೆಯ ಸಮಯದಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಸ್ಕೆಚ್ ಹಾಕಿ, ನಾಗರಹಾವು ಕಚ್ಚಿಸಿ ಪ್ರಿಯಕರನ ಕೊಲೆ ಮಾಡಿಸಿದ ಯುವತಿ!
ಪ್ರಮುಖ ಅರೋಪಿ ಮಹಿ ಆರ್ಯ ಅವರು ‘ಕ್ರೈಮ್ ಪ್ಯಾಟ್ರೋಲ್’ನ ವಿವಿಧ ಸಂಚಿಕೆಗಳನ್ನು ನೋಡಿ ಅಂಕಿತ್ ಚೌಹಾಣ್ ತನ್ನ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರಿಂದ ಕೊಲೆಯನ್ನು ಹೇಗೆ ಮಾಡಬೇಕೆಂದು ತಿಳಿದುಕೊಳ್ತಿದ್ದರು. ಹಾಗೆ, ಸಾಕ್ಷ್ಯವನ್ನು ಮರೆಮಾಡುವುದು ಮತ್ತು ಕುರುಹು ಬಿಡದೆ ಅಪರಾಧ ಮಾಡಿದ ನಂತರ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಕಾರ್ಯಕ್ರಮಗಳನ್ನು ಆಕೆ ಇಂಟರ್ನೆಟ್‌ನಲ್ಲಿ ವೀಕ್ಷಿಸುತ್ತಿದ್ದರು ಎಂದೂ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಾವಾಡಿಸುವವರು ಇದನ್ನು ಬಾಯ್ಬಿಟ್ಟಿದ್ದಾರೆ ಎಂದೂ ತಿಳಿದುಬಂದಿದೆ.
ಮಹಿ ಆರ್ಯ ತನ್ನ ಮನೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ಡಿವಿಆರ್‌ನೊಂದಿಗೆ ಪರಾರಿಯಾಗಿರುವುದು ತನಿಖೆಯ ಸಮಯದಲ್ಲಿ ಕಂಡುಬಂದಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ. "ಯೋಜಿತ ಪ್ಲ್ಯಾನ್‌ನಂತೆ ಕೊಲೆಗೆ 20 ದಿನಗಳ ಮೊದಲು ಆಕೆ ತನ್ನ ಮನೆಯಲ್ಲಿ ಅಳವಡಿಸಲಾದ 2 ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್ ಮಾಡಿದ್ದಳು" ಎಂದೂ ಪೊಲೀಸರು ಹೇಳಿದರು.
ಇದನ್ನೂ ಓದಿ: Software Engineer ಮನೆಯಲ್ಲಿ ಕದಿಯಲು ಏನೂ ಇಲ್ಲ ಎಂದು 500 ರೂ. ಇಟ್ಟು ಹೋದ ಕಳ್ಳರ ಗ್ಯಾಂಗ್!
ಈ ಮಧ್ಯೆ, ಗುರುವಾರ ನೈನಿತಾಲ್‌ನ ಎಸ್‌ಎಸ್‌ಪಿ ಪಂಕಜ್ ಭಟ್ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಹಿಡಿಯಲು ತಲಾ 25,000 ರೂ. ಬಹುಮಾನ ಘೋಷಿಸಿದ್ದಾರೆ. "ನಾವು ಸಾಧ್ಯವಾದಷ್ಟು ಬೇಗ ಅವರನ್ನು ಹಿಡಿಯಲು ಅವರ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ" ಎಂದು ಪಂಕಜ್ ಭಟ್ ಹೇಳಿದರು.
ಕೊಲೆಯ ವಿವರ..
ಜುಲೈ 15 ರಂದು ಕಾರಿನ ಹಿಂಬದಿ ಸೀಟಲ್ಲಿ ಅಂಕಿತ್ ಶವವಾಗಿ ಪತ್ತೆಯಾಗಿದ್ದ. ಈ ವೇಳೆ ಕಾರಿನ ಎಸಿಯಿಂದ ಕಾರ್ಬನ್ ಮೊನಾಕ್ಸೈಡ್ ಹೊರಹೊಮ್ಮುತ್ತಿದ್ದರಿಂದ ಆತ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ 2 ಕಾಲುಗಳಿಗೆ ಹಾವು ಕಚ್ಚಿ ಅಂಕಿತ್ ಮೃತಪಟ್ಟಿದ್ದಾಗಿ ತಿಳಿದು ಬಂದಿದ್ದು. ಬಳಿಕ ಅಂಕಿತ್ ಸೋದರಿ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಮಹಿ, ಹಾವಾಡಿನೊಬ್ಬನಿಗೆ ಕರೆ ಮಾಡಿದ್ದು ಬೆಳಕಿಗೆ ಬಂದಿತ್ತು. ಪೊಲೀಸರು ಆತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಮಹಿ ಮನೆಗೆ ಅಂಕಿತ್ ಭೇಟಿ ನೀಡಿದಾಗ ಆತನ ಕಾಲಿಗೆ ಎರಡು ಬಾರಿ ಹಾವಿನಿಂದ ಕಡಿಸಿದ್ದೆ. ಇದಕ್ಕಾಗಿ ಮಹಿ ನನಗೆ 10,000 ರೂ. ನೀಡಿದ್ದರು ಎಂದು ಹಾವಾಡಿಗ ಒಪ್ಪಿಕೊಂಡಿದ್ದಾನೆ. ಅಂಕಿತ್‌ಗೆ ಕುಡಿತದ ಚಟ ಇದ್ದ ಕಾರಣ, ಆತ ಕುಡಿದ ಮತ್ತಿನಲ್ಲಿ ಇದ್ದಾಗ ಹಾವಿನಿಂದ ಕಡಿಸಿರಬಹುದು ಎನ್ನಲಾಗಿದೆ. ಇದಾದ ಬಳಿಕ ಆತನ ದೇಹವನ್ನು ಕಾರಿನಲ್ಲಿಟ್ಟು ಆಕಸ್ಮಿಕ ಸಾವಿನ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಆನ್‌ಲೈನ್ ಜೂಜಾಟದಲ್ಲಿ 5 ಕೋಟಿ ಗೆದ್ದ ಸಂಭ್ರಮದಲ್ಲಿದ್ದ ಉದ್ಯಮಿಗೆ ಶಾಕ್: ಬರೋಬ್ಬರಿ 58 ಕೋಟಿ ರೂ. ನಷ್ಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ