
ಮುಂಬೈ (ಮೇ 23, 2023): ದೇಶದಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ಆಗಾಗಗ್ಗೆ ವರದಿಯಾಗುತ್ತಿರುತ್ತವೆ. ಆದರೂ, ಅದಕ್ಕಿಂತಲೂ ಹೆಚ್ಚಾಗಿ ಬೆದರಿಕೆ ಸಂದೇಶಗಳನ್ನು ಕಳಿಸುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಈ ಪೈಕಿ, ಬಹುತೇಕ ಬೆದರಿಕೆ ಸಂದೇಶ, ಇ - ಮೇಲ್, ಕರೆಗಳು ಸುಳ್ಳು ಎಂದು ಸಾಬೀತಾದರೂ ಪೊಲೀಸರು ಬಹುತೇಕ ಎಲ್ಲ ಕೇಸ್‌ಗಳಲ್ಲೂ ಎಚ್ಚರಿಕೆ ವಹಿಸುತ್ತಾರೆ. ಅದೇ ರೀತಿ, ಮುಂಬೈ ಪೊಲೀಸರಿಗೆ ಸಹ ಈಗ ಬೆದರಿಕೆ ಬಂದಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈ ಅನ್ನೇ ಸ್ಫೋಟಿಸೋದಾಗಿ ಬೆದರಿಕೆ ಹಾಕಿದ್ದಾರೆ.
ಹೌದು, ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮತ್ತೊಮ್ಮೆ ಭೀತಿ ಹುಟ್ಟಿಸುವ ಬೆದರಿಕೆ ಪೊಲೀಸರಿಗೆ ಬಂದಿದೆ. ಇಲ್ಲಿಯವರೆಗೂ ಪೋಲಿಸರಿಗೆ ಈ ಬೆದರಿಕೆಗಳು ಫೋನ್ ಕರೆಗಳು ಮತ್ತು ಇ-ಮೇಲ್‌ಗಳ ಮೂಲಕ ಬರುತ್ತಿದ್ದವು, ಈಗ ವ್ಯಕ್ತಿಯೊಬ್ಬರು ಟ್ವಿಟ್ಟರ್ ಮೂಲಕ ಮುಂಬೈಯನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಒಂದು ದಿನದ ಹಿಂದೆ ಸಂದೇಶವನ್ನು ಸ್ವೀಕರಿಸಲಾಗಿದೆ.
ಇದನ್ನು ಓದಿ: ಪುಣೆ ಗೂಗಲ್ ಕಚೇರಿಗೆ ಬೆದರಿಕೆ ಕರೆ: ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ವಶಕ್ಕೆ
ಮೇ 22 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಪೊಲೀಸರಿಗೆ ಬೆದರಿಕೆ ಬಂದಿದ್ದು, ವ್ಯಕ್ತಿಯೊಬ್ಬರು ಟ್ವಿಟ್ಟರ್‌ನಲ್ಲಿ "ನಾನು ಶೀಘ್ರದಲ್ಲೇ ಮುಂಬೈ ಸ್ಫೋಟಿಸಲಿದ್ದೇನೆ" ಎಂಬ ಬೆದರಿಕೆ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಸಂಬಂಧಪಟ್ಟ ಖಾತೆಯನ್ನು ತನಿಖೆ ಮಾಡಲು ಪ್ರಾರಂಭಿಸಿದರು ಮತ್ತು ವ್ಯಕ್ತಿಯನ್ನು ಗುರುತಿಸಿದರು. ವಿಚಾರಣೆಗಾಗಿ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಸೋಮವಾರ (ಮೇ 22) ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಪೊಲೀಸರ ಟ್ವಿಟ್ಟರ್ ಖಾತೆಗೆ ಸಂದೇಶ ರವಾನೆಯಾಗಿದ್ದು, ‘ನಾನು ಮುಂಬೈಯನ್ನು ಅತಿ ಶೀಘ್ರದಲ್ಲಿ ಸ್ಫೋಟಿಸಲಿದ್ದೇನೆ’’ ಎಂದು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆ ಭಯೋತ್ಪಾದಕ ಬೆದರಿಕೆ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Iran - China ಪ್ರಯಾಣಿಕ ವಿಮಾನಕ್ಕೆ ಬಾಂಬ್ ಬೆದರಿಕೆ: ಭಾರತದಲ್ಲಿ ಲ್ಯಾಂಡಿಂಗ್ ನಿರಾಕರಣೆ
"I m gonna blast the Mumbai very soon" ಎಂಬ ಸಂದೇಶವನ್ನು ಇಂಗ್ಲಿಷ್ ಭಾಷೆಯಲ್ಲಿ ಬರವಣಿಗೆಯಲ್ಲಿ ಕಳುಹಿಸಲಾಗಿದೆ. ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಸಂಬಂಧಪಟ್ಟ ಖಾತೆಯನ್ನು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಗೂಗಲ್ ಕಚೇರಿಗೂ ಬಂದಿತ್ತು ಬೆದರಿಕೆ ಕರೆ
ಮಹಾರಾಷ್ಟ್ರದ ಪುಣೆಯ ಕೋರೆಗಾಂವ್ ಉದ್ಯಾನವನದ ವಾಣಿಜ್ಯ ಸಂಕೀರ್ಣದಲ್ಲಿರುವ ಗೂಗಲ್ ಕಚೇರಿಯಲ್ಲಿ ಸ್ಫೋಟಕ ಸಾಧನವಿದೆ ಎಂದು ವ್ಯಕ್ತಿಯೊಬ್ಬ ಫೆಬ್ರವರಿ ತಿಂಗಳಲ್ಲಿ ಭಾನುವಾರ ರಾತ್ರಿ ಕರೆ ಮಾಡಿದ್ದ. ಈ ಹಿನ್ನೆಲೆ, ಪುಣೆ ಪೊಲೀಸ್ ತಂಡಗಳು ಮತ್ತು ಬಾಂಬ್ ಪತ್ತೆ ಹಾಗೂ ವಿಲೇವಾರಿ ತಂಡಗಳು (ಬಿಡಿಡಿಎಸ್) ತಡರಾತ್ರಿ ಬಂದ ಈ ಕರೆ ಹಿನ್ನೆಲೆ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ಬಾಂಬ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಈ ಹಿನ್ನೆಲೆ ಗೂಗಲ್ ಕಚೇರಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ‘ಶೀಘ್ರದಲ್ಲೇ ಯೋಗಿಯನ್ನು ಕೊಲ್ಲುತ್ತೇನೆ’: ಮಾಫಿಯಾಗೆ ಕೊನೆಮೊಳೆ ಹೊಡೀತಿರೋ ಯುಪಿ ಸಿಎಂಗೆ ಹತ್ಯೆ ಬೆದರಿಕೆ
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಗೂಗಲ್ ಕಚೇರಿಗೆ ಭಾನುವಾರ ರಾತ್ರಿ 7.54ಕ್ಕೆ ಕರೆ ಬಂದಿದ್ದು, ಕಂಪನಿಯ ಪುಣೆಯ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ. ಮುಂಧ್ವಾ ಪ್ರದೇಶದಲ್ಲಿರುವ ಬಹು ಮಹಡಿ ಕಮರ್ಷಿಯಲ್ ಕಟ್ಟಡದಲ್ಲಿರುವ ಈ ಕಚೇರಿಯ 11ನೇ ಮಹಡಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಬಂದಿದೆ ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ