ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಹಾಲಿವುಡ್ ದಿಗ್ಗಜ ಸ್ಟೀವನ್ ಸ್ಪೀಲ್ಬರ್ಗ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದರು.
ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಚಾಂದಿನಿ ಶ್ರೀದೇವಿ ನಿಧನ ಹೊಂದಿ 5 ವರ್ಷಗಳೇ ಕಳೆಯಿತು. ಫೆಬ್ರವರಿ 24 ಬಂದರೆ ಭರ್ತಿ 5 ವರ್ಷಗಳಾಗಲಿದೆ. 2018ರಲ್ಲಿ ಶ್ರೀದೇವಿ ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬ, ಚಿತ್ರರಂಗವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ದುಬೈನಲ್ಲಿ ಮದುವೆಗೆ ಹಾಜರಾಗಿದ್ದ ಶ್ರೀದೇವಿ ಹೋಟೆಲ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಶ್ರೀದೇವಿ ನಿಧನ ಬಾಲಿವುಡ್‌ಗೆ ಬರಸಿಡಿಲು ಬಡಿದಂತೆ ಆಗಿತ್ತು. ಖ್ಯಾತ ನಟಿಯ ಸಾವು ದೊಡ್ಡ ಮಟ್ಟದ ಸಂಚಲ ಹುಟ್ಟುಹಾಕಿತ್ತು. ಶ್ರೀದೇವಿ ಈಗ ನೆನಪು ಮಾತ್ರ. ಸದ್ಯ ಅವರ ಇಬ್ಬರೂ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.
5ನೇ ಪುಣ್ಯತಿಥಿ ಸಮಯದಲ್ಲಿ ಖ್ಯಾತ ನಟಿಯನ್ನು ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಅವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಖ್ಯಾತ ನಟಿ ಹಾಲಿವುಡ್ ಸಿನಿಮಾ ರಿಜೆಕ್ಟ್ ಮಾಡಿದ್ದ ವಿಚಾರ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಬಾಲಿವುಡ್‌ನಲ್ಲಿ ಸ್ಟಾರ್ ಮರೆದಿದ್ದ ಶ್ರೀದೇವಿ ಹಾಲಿವುಡ್ ದಿಗ್ಗಜ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದರು. ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಭಾರತೀಯರು ಕಾಯುತ್ತಿರುತ್ತಾರೆ. ಅದರಲ್ಲೂ ಸ್ಟೀವನ್ ಸ್ಪೀಲ್ಬರ್ಗ್ ಅಂತಹ ದಿಗ್ಗಜ ನಿರ್ದೇಶಕರ ಜೊತೆ ಕೆಲಸ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಚಿಕ್ಕ ದೃಶ್ಯವಾದರೂ ಸರಿ ಎಂದು ಎದುರು ನೋಡುತ್ತಿರುವವರೇ ಜಾಸ್ತಿ. ಆದರೆ ಶ್ರೀದೇವಿ ಹಾಗಲ್ಲ, ತನಗೆ ಇಷ್ಟವಿಲ್ಲದೆ ಇರುವ ಯಾವ ಸಿನಿಮಾವಾಗಲಿ, ಅದು ಯಾರದ್ದೇ ಚಿತ್ರವಾದರೂ ಸರಿ ನಟಿಸಲು ಇಷ್ಟಪಡಲ್ಲ.
ಅಮ್ಮ ಖರೀದಿಸಿದ ಮೊದಲ ಮನೆಯಲ್ಲಿ ನೆನಪಿನಾಳಕ್ಕೆ ಜಾರಿದ ಜಾನ್ವಿ ಕಪೂರ್
ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರು ನಟಿ ಶ್ರೀದೇವಿ ಅವರಿಗೆ ಸಿನಿಮಾದಲ್ಲಿ ನಟಿಸಲು ಆಫರ್ ಮಾಡಿದರು. ಅದೂ ಸೂಪರ್ ಹಿಟ್ ಜುರಾಸಿಕ್ ಪಾರ್ಕ್ ನಲ್ಲಿ. ಆದರೆ ಶ್ರೀದೇವಿ ಮುಲಾಜಿಲ್ಲದೇ ಆಫರ್ ನಿರಾಕರಿಸಿದರು. ಜುರಾಸಿಕ್ ಪಾರ್ಕ್ ಚಿತ್ರದ ಚಿಕ್ಕ ಪಾತ್ರದಲ್ಲಿ ನಟಿಸಲು ಶ್ರೀದೇವಿ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ ಶ್ರೀದೇವಿ ಆಗ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದ ಸಮಯ. ಆಗ ಆ ಪಾತ್ರ ತನ್ನ ಸ್ಥಾನಮಾನಕ್ಕೆ ಹೊಂದಲ್ಲ ಎಂದು ಭಾವಿಸಿ ತಿರಸ್ಕರಿಸಿದರು. ಆದರೆ ಜುರಾಸಿಕ್ ಪಾರ್ಕ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು.
ಶ್ರೀದೇವಿ ನಿರಾಕರಿಸಿದ್ದು ಜುರಾಸಿಕ್ ಪಾರ್ಕ್ ಸಿನಿಮಾ ಮಾತ್ರವಲ್ಲ. ದೊಡ್ಡ ಪಟ್ಟಿಯೇ ಇದೆ. ಬಾಲಿವುಡ್ ನ ಅನೇಕ ಸಿನಿಮಾಗಳನ್ನು ಶ್ರೀದೇವಿ ತಿರಸ್ಕರಿಸಿದ್ದಾರೆ. ಶಾರುಖ್ ಖಾನ್ ಎದುರು ಡರ್ ಸಿನಿಮಾವನ್ನು ರಿಜೆಕ್ಟ್ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶ್ರೀದೇವಿ, 'ಚಾಂದಿನಿ, ಲಮ್ಹೆ ನಂತರ ಬಂದ ಡರ್ ಸಿನಿಮಾದ ಪಾತ್ರ ನನಗೆ ಸಾಮಾನ್ಯ ಅನಿಸಿತು. ಶಾರುಖ್ ಪಾತ್ರ ಆಗಿದ್ದರೆ ನಾನು ಮಾಡುತ್ತಿದ್ದೆ. ಆ ಪಾತ್ರ ತುಂಬಾ ಇಷ್ಟವಾಯಿತು. ಜೂಹಿಗೆ ಆ ಪಾತ್ರ ಹೊಸದು ಮತ್ತು ಅದ್ಭುತವಾಗಿ ಮಾಡಿದ್ದಾರೆ. ಆದರೆ ನನಗೆ ಈ ಪಾತ್ರ ನಾನು ಆಗಲೇ ಅನೇಕ ಬಾರಿ ಮಾಡಿದ ಪಾತ್ರವಾಗಿತ್ತು' ಎಂದು ಹೇಳಿದ್ದರು.
ಶ್ರೀದೇವಿ ನಿರಾಕರಿಸಿದ ಶಿವಗಾಮಿ ಪಾತ್ರದಲ್ಲಿ ಇತಿಹಾಸ ಸೃಷ್ಟಿಸಿದ ರಮ್ಯಾ ಕೃಷ್ಣನ್
ಶ್ರೀದೇವಿ ಕೊನೆಯದಾಗಿ ಝೀರೋ ಸಿನಿಮಾದಲ್ಲಿ ನಟಿಸಿದ್ದರು. ಶಾರುಖ್ ಖಾನ್ ನಟನೆಯ ಝೀರೋ ಸಿನಿಮಾದಲ್ಲಿ ಶ್ರೀದೇವಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅದೇ ಅವರ ಕೊನೆಯ ಸಿನಿಮಾವಾಗಿದೆ. ಅದಕ್ಕೂ ಮೊದಲು ಶ್ರೀದೇವಿ ಮಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮಾಮ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಚಿತ್ರವಾಗಿದೆ.