12 ವರ್ಷಗಳ ಬಳಿಕ ಮತ್ತೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿರುವ ನಟಿ ಶರ್ಮಿಳಾ ಟ್ಯಾಗೋರ್ ಮಗ ಸೈಫ್ ಅಲಿ ಖಾನ್ ಹಾಗೂ ಜೀವನ ಮೌಲ್ಯದ ಕುರಿತು ಹೇಳಿದ್ದೇನು?
60-80ರ ದಶಕದಲ್ಲಿ ಬಾಲಿವುಡ್ ಆಳಿದ ನಟಿಯರಲ್ಲಿ ಒಬ್ಬರು ಡಿಂಪಲ್ ಕ್ವೀನ್ ಶರ್ಮಿಳಾ ಟ್ಯಾಗೋರ್ (Sharmila Tagore). ಅವರ ಚೆಲುವು, ಅದ್ಭುತ ಅಭಿನಯಕ್ಕೆ ಮನಸೋಲದವರೇ ಇಲ್ಲ. ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟಿ ಎಂದು ಗುರುತಿಸಿಕೊಂಡಿರುವ ಶರ್ಮಿಳಾ, ಸದಾ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ನಟಿ. ಅಮ್ಮನಾಗಿ, ಅಜ್ಜಿಯಾಗಿ ಚಿತ್ರರಂಗದಿಂದ ದೂರ ಇದ್ದ ಶರ್ಮಿಳಾ ಈಗ ಮನೋಜ್ ಬಾಜ್‌ಪೇಯಿ, ಸಿಮ್ರಾನ್ (ಶಿಮರಾನ) ಮತ್ತು ಸೂರಜ್ ಶರ್ಮಾ ಸಹ ನಟಿಸಿರುವ 'ಗುಲ್‌ಮೊಹರ್' ಮೂಲಕ ಅವರು 12 ವರ್ಷಗಳ ನಂತರ ಪುನರಾಗಮನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶರ್ಮಿಳಾ ಅವರು ನಟಿಸುವುದು ಕುಸುಮ್ ಎನ್ನುವ ಪಾತ್ರ. ಈ ಪಾತ್ರಕ್ಕೂ ಶರ್ಮಿಳಾ ಟ್ಯಾಗೋರ್ ಅವರ ಜೀವನಕ್ಕೂ ತೀರಾ ಹತ್ತಿರದ ಸಂಬಂಧವಿದೆ ಎನ್ನಲಾಗಿದೆ.
ಮಕ್ಕಳಾದ ಸೈಫ್ ಅಲಿ ಖಾನ್ (Saif Ali Khan) ಸೇರಿ ಎಲ್ಲರಿಗೂ ಜೀವನ ಮೌಲ್ಯಗಳನ್ನು ಕಲಿಸಿದ್ದುದರಲ್ಲಿ ಶರ್ಮಿಳಾ ಅವರದ್ದು ಎತ್ತಿದ ಕೈ. ಇದಕ್ಕೆ ಸಾಕ್ಷಿ ಎಂಬಂತೆ ಸೈಫ್ ಅಲಿ ಖಾನ್ ಅವರ ಸಂದರ್ಶನವೊಂದು ಬಿತ್ತರಿಕೆಯಾಗಿತ್ತು. ಇದರಲ್ಲಿ ಸೈಫ್ ಅವರ ಎರಡನೆಯ ಪತ್ನಿ ಕರೀನಾ ಕಪೂರ್ (Kareena Kapoor) ಮಗ ತೈಮೂರ್ನನ್ನು ಹೆತ್ತಾಗ ಮಾಡಿದ ಸಂದರ್ಶನವದು. ಇದರಲ್ಲಿ ಸೈಫ್ ಅಲಿ ಖಾನ್, ತಾನು ಮನೆಯಲ್ಲಿಯೇ ಇದ್ದು, ತೈಮೂರ್ನನ್ನು (Taimur Khan) ನೋಡಿಕೊಳ್ಳಬಲ್ಲೆ. ಕರೀನಾ ಬೇಕಿದ್ದರೆ ಕೆಲಸಕ್ಕೆ ಹೋಗಬಹುದು ಎಂದಿದ್ದರು. ತಮ್ಮ ತಾಯಿ ಅಂಥದ್ದೊಂದು ಮೌಲ್ಯಗಳನ್ನು ನಮಗೆ ಕಲಿಸಿದ್ದಾಳೆ. ಗಂಡನಾದವ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡರೆ ತಪ್ಪೇನಿಲ್ಲ ಎಂದಿದ್ದರು. ಅವರ ಈ ಸಂದರ್ಶನ ಬಹಳ ವೈರಲ್ ಆಗಿದ್ದು, ಸೈಫ್ ಅಲಿ ಅವರ ಬಗ್ಗೆ ಹಲವರು ಅದರಲ್ಲಿಯೂ ಮಹಿಳೆಯರು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದರು.
No Kiss Please: ಕಿಸ್ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್ ನಟ-ನಟಿಯರು!
ಅದರ ಮುಂದುವರಿದ ಭಾಗವಾಗಿ ಈ ಶರ್ಮಿಳಾ ಟ್ಯಾಗೋರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಕಮ್ಬ್ಯಾಕ್ ಮಾಡುತ್ತಿರುವ ‘ಗುಲ್‌ಮೊಹರ್’ (Gulmohar) ಕುರಿತು ಈಟಿಮ್ಸ್‌ನೊಂದಿಗೆ ಮಾತನಾಡಿರುವ ಅವರು, 'ಸಮಾಜ ಬದಲಾದರೂ ಮನಸ್ಥಿತಿ ಬದಲಾಗುತ್ತಿಲ್ಲ. ಇದೊಂದು ರೀತಿಯಲ್ಲಿ ವಿಚಿತ್ರ ಸನ್ನಿವೇಶ. ಅದೇನೆಂದರೆ ಎಲ್ಲಾ ಉದ್ಯೋಗಸ್ಥ ಮಹಿಳೆಯರನ್ನು ಕೆಣಕುವ ಕೆಲಸವನ್ನೇ ಮಾಡಲಾಗುತ್ತಿದೆ. ಯಾರಾದರೂ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋದರೆ ಅಂಥವರನ್ನು ಕೆಟ್ಟ ಮಹಿಳೆಯರು ಎಂದು ಭಾವಿಸಲಾಗುತ್ತದೆ. ನಾನೂ ಇದನ್ನು ಅನುಭವಿಸಿದ್ದೇನೆ. ಅದರ ಬಗ್ಗೆ ತುಂಬಾ ನೋವು ಇದೆ' ಎಂದಿದ್ದಾರೆ.
ಮಹಿಳೆಯರು ಮಕ್ಕಳಾದ ಮೇಲೆ ಕೆಲಸ ತೊರೆಯಬೇಕು ಎನ್ನುವ ಮನಸ್ಥಿತಿ ಸಮಾಜದಲ್ಲಿ ಇದೆ. ಅದನ್ನು ಅವರು ತ್ಯಾಗಕ್ಕೆ ಹೋಲಿಸುತ್ತಾರೆ. ಪುರುಷನ ಕೆಲಸಕ್ಕೆ ಯಾವಾಗಲೂ ಬೆಲೆ ನೀಡಲಾಗುತ್ತಿದೆ. ಮಹಿಳೆಯರ ಕೆಲಸಕ್ಕೆ ಬೆಲೆ ಇಲ್ಲ, ಪುರುಷನು ಜೀವನೋಪಾಯ ಮಾಡುತ್ತಿದ್ದಾನೆ, ಆದ್ದರಿಂದ ನಿಮ್ಮ ಪಾತ್ರವು ಅಡುಗೆಮನೆಯಲ್ಲಿದೆ ಎಂಬ ಕಲ್ಪನೆಯು ತೀರಾ ಹಳತಾದರೂ ಅದು ಬದಲಾಗಲಿಲ್ಲ. ಅಂಥ ಎಲ್ಲಾ ಸನ್ನಿವೇಶಗಳನ್ನು ನಾನು ಎದುರಿಸುವ ಹಿನ್ನೆಲೆಯಲ್ಲಿ ನನ್ನ ಗಂಡುಮಕ್ಕಳಿಗೂ ಜೀವನ ಮೌಲ್ಯಗಳನ್ನು ಕಲಿಸಿದ್ದೇನೆ ಎಂದು ಶರ್ಮಿಳಾ ಹೇಳಿದ್ದಾರೆ.
ಮಕ್ಕಳು ಪರೀಕ್ಷೆಗೆ ಹೋಗುವಾಗ ಫುಲ್ ಮಾರ್ಕ್ಸ್ (full marks) 10ಕ್ಕೆ 10 ಪಡೆಯಿರಿ ಎಂದು ಹೇಳುವಂತೆ, ನಾನು ಕೆಲಸಕ್ಕೆ ಹೋಗುವಾಗಲೂ ನನ್ನ ಮಕ್ಕಳು ನನಗೆ '10 ಕ್ಕೆ 10 ಪಡೆಯಿರಿ' ಎಂದು ಹಾರೈಸುತ್ತಿದ್ದರು. ಅದನ್ನು ನಾನು ಅವರಿಗೆ ಕಲಿಸಿದ್ದೇನೆ. ಮಹಿಳೆಯಾದವಳು ಕೆಲಸಕ್ಕೆ ಹೋದರೆ ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಾಳೆ ಎನ್ನುವುದು ಶುದ್ಧ ತಪ್ಪು. ಇದೇ ವೇಳೆ ಕೆಲಸದ ಜೊತೆಗೆ ಮಕ್ಕಳ ಬಗ್ಗೆಯೂ ಕಾಳಜಿ ತೋರುವುದು ಆಕೆಯ ಕರ್ತವ್ಯ ಕೂಡ. ನಾನು ಮಕ್ಕಳನ್ನು ನಿರ್ಲಕ್ಷಿಸಲಿಲ್ಲ. ಅದು ಅವರಿಗೆ ಖುಷಿ ಕೊಟ್ಟಿತ್ತು. ಅವರು ನನ್ನನ್ನು ಕೆಲಸ ಮಾಡುವ ವ್ಯಕ್ತಿ ಎಂದು ಒಪ್ಪಿಕೊಳ್ಳಲು ಕಲಿತುಕೊಂಡಿದ್ದರು. ನನ್ನ ಕೆಲಸದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕೆಲಸಕ್ಕೆ ಹೋಗುವ ಮೂಲಕ ಅವರನ್ನು ವಂಚಿತಗೊಳಿಸುತ್ತಿದ್ದೇನೆ ಎಂದು ಅವರಿಗೆ ಎಂದಿಗೂ ಅನ್ನಿಸಲೇ ಇದೆ. ಇದೇ ಶಿಕ್ಷಣವೇ ಸೈಫ್ ಇಂದು ಸಂದರ್ಶನದಲ್ಲಿ ಹೀಗೆ ಮಾತನಾಡುವಂತೆ ಮಾಡಿದೆ ಎಂದು ಶರ್ಮಿಳಾ ಹೇಳಿದ್ದಾರೆ.
ಚಿತ್ರದಲ್ಲಿನ ಆಕೆಯ ಪಾತ್ರವು 76 ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಉಳಿಯುವ ವೃದ್ಧೆಯ ಪಾತ್ರ. ತನ್ನ ಸ್ವಂತ ನಿಯಮಗಳ ಮೇಲೆ ಜೀವನವನ್ನು ನಡೆಸಲು ಏಕಾಂಗಿಯಾಗಿ ಉಳಿಯಲು ನಿರ್ಧರಿಸುವ ಹೆಣ್ಣಿನ ಪಾತ್ರ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶರ್ಮಿಳಾ, 'ನೀವು ಒಂದೇ ಸೂರಿನಡಿ ಇರದಿದ್ದರೆ ನಿಮ್ಮ ಸಂಬಂಧವು ಮುರಿದುಹೋಗಿದೆ ಎಂದು ಅರ್ಥವಲ್ಲ. ಭೌಗೋಳಿಕ ಸಾಮೀಪ್ಯವು ನೀವು ಹತ್ತಿರವಾಗಿದ್ದೀರಿ ಎಂದು ಅರ್ಥವಲ್ಲ, ಏಕೆಂದರೆ ಕೆಲವೊಮ್ಮೆ ಎಲ್ಲರೂ ಒಟ್ಟಿಗೆ ಇದ್ದರೂ ಸಹ. , ಜನರು ತಮ್ಮ ಫೋನ್‌ಗಳಲ್ಲಿ, (mobile phone ) ಅವರ ಕೊಠಡಿಗಳಲ್ಲಿ ಅಥವಾ ಯಾರಿಗಾದರೂ ಸಂದೇಶ ಕಳುಹಿಸುವಲ್ಲಿ ಮಗ್ನರಾಗಿರುತ್ತಾರೆ. ಆದ್ದರಿಂದ ಮಕ್ಕಳಿಗೆ ಮೌಲ್ಯಯುವ ಜೀವನ ನಡೆಸುವುದನ್ನು ಕಲಿಸಿ' ಎಂದಿದ್ದಾರೆ.
valentine's day spl: ಪ್ರಿಯಾಮಣಿಯ ಫಸ್ಟ್ ಲವ್ ಆಗಿದ್ರಾ ತರುಣ್? ನಟಿ ಹೇಳಿದ್ದೇನು?