Latest Videos

ಮದ್ವೆ ಆದ್ರೂ ಕೋಟಿ, ಡೈವೋರ್ಸ್‌ ಆದ್ರೂ ಕೋಟಿ! ಬಾಲಿವುಡ್‌ನ ಅತೀ ದುಬಾರಿ ಡೈವೋರ್ಸ್‌ಗಳಿವು!

By Suvarna NewsFirst Published Jul 30, 2023, 3:52 PM IST
Highlights

ಬಾಲಿವುಡ್‌ (Bollywood) ಮತ್ತು ದಕ್ಷಿಣ ಭಾರತ (South cinema) ಸಿನಿಮಾದ ಹಲವು ಸೆಲೆಬ್ರಿಟಿಗಳ ದಾಂಪತ್ಯಗಳು (celebrity divorce) ಮುರಿದುಬಿದ್ದಿವೆ. ಇವರ ಮದುವೆ ಮುರಿದುಬೀಳುವುದು ಎಂದರೆ ಕೋಟ್ಯಂತರ ರೂಪಾಯಿ ಹಣಕ್ಕೆ ಕತ್ತರಿ ಬಿತ್ತು ಅಂತಲೇ ಅರ್ಥ. ಸಾಮಾನ್ಯವಾಗಿ ಪತ್ನಿ, ಪತಿಯಿಂದ ದುಬಾರಿ ಮೊತ್ತದ ಹಣವನ್ನು ಪರಿಹಾರವಾಗಿ ಕೇಳುತ್ತಾಳೆ. ಕೋಟಿಗಳ ಲೆಕ್ಕದಲ್ಲಿ ಸೆಟಲ್‌ಮೆಂಟ್‌ ಆಗುತ್ತದೆ. ಹೀಗೆ ಆದ ಅನೇಕ ಪ್ರಕರಣಗಳಿವೆ.

ನಮ್ಮ ಬಾಲಿವುಡ್ ಸಿನಿಮಾಗಳಲ್ಲಿ ಹೀರೋ ಮತ್ತು ಹೀರೋಯಿನ್ ಮದುವೆಯಾಗಿ ಸುಖವಾಗಿ ಬಾಳುವುದನ್ನು ನೋಡುವುದು ನಮಗೆ ಅಭ್ಯಾಸವಾಗಿದೆ. ಆದರೆ ವಾಸ್ತವದಲ್ಲಿ ಹಾಗೇನೂ ಇಲ್ಲ. ವಿಚ್ಛೇದನ ಪಡೆದು ಬೇರ್ಪಟ್ಟ ಬಾಲಿವುಡ್ ಜೋಡಿಗಳು ಹಲವು. ಬಾಲಿವುಡ್‌ನಲ್ಲಿ ಮದುವೆಗಳು ಕೋಟಿ ಲೆಕ್ಕದ್ದಾಗಿದ್ದರೆ, ವಿಚ್ಛೇದನಗಳು ಸಹ ಕೋಟಿ ಲೆಕ್ಕದಲ್ಲೇ ಇವೆ.

ಹೃತಿಕ್ ರೋಷನ್ ಮತ್ತು ಸೂಸನ್ ಖಾನ್
ಅತ್ಯಂತ ಸೆಲೆಬ್ರೇಟೆಡ್‌ ಬಾಲಿವುಡ್ ಜೋಡಿಗಳಲ್ಲಿ ಒಂದಾಗಿತ್ತು. ಇವರ ವೈವಾಹಿಕ ಜೀವನ ದುಃಖದ ಟಿಪ್ಪಣಿಯಲ್ಲಿ ಕೊನೆಗೊಂಡಿತು. ಸೂಸನ್‌ ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. 2014ರಲ್ಲಿ ಬೇರ್ಪಟ್ಟಾಗ ಅವರು ಕೇಳಿದ್ದ 400 ಕೋಟಿ ಜೀವನಾಂಶ. ಹೃತಿಕ್ ನೀಡಿದ್ದು 380 ಕೋಟಿ.

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್
2014ರಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಮೇ 2016ರಲ್ಲಿ ಕಾನೂನುಬದ್ಧವಾಗಿ ವಿಚ್ಛೇದನವನ್ನು ಪಡೆದರು. ಅವರ ಇಬ್ಬರು ಮಕ್ಕಳ (ಸಮೈರಾ, ಕಿಯಾನ್‌ ರಾಜ್)‌ ಎಲ್ಲಾ ವೆಚ್ಚವನ್ನು ಸಂಜಯ್ ಅವರು ಭರಿಸಬೇಕಿದೆ. ಕರಿಷ್ಮಾ ಅವರು ಸಂಜಯ್ ಅವರ ತಂದೆಯ ಮನೆಯನ್ನು ಅವರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಸಂಜಯ್ ಅವರು ಮಕ್ಕಳಿಗಾಗಿ 14 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದಾರೆ.

ಫರ್ಹಾನ್ ಅಖ್ತರ್ ಮತ್ತು ಅಧುನಾ ಭವಾನಿ
16 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದ ಈ ದಂಪತಿ 2017ರಲ್ಲಿ ಬೇರ್ಪಟ್ಟರು. ಮಾಸಿಕ ಭತ್ಯೆಗಳ ಬದಲಾಗಿ ಫರ್ಹಾನ್ ಒಂದು ಬಾರಿಯ ಜೀವನಾಂಶವನ್ನು ಪಾವತಿಸಿದ್ದಾರೆ. ಜೊತೆಗೆ, ಅಧುನಾ ವಿಪಸ್ಸನಾ, 10,000 ಚದರ ಅಡಿಯ ಬ್ಯಾಂಡ್‌ಸ್ಟ್ಯಾಂಡ್ ಬಂಗಲೆಯನ್ನು ಇಟ್ಟುಕೊಳ್ಳಲು ಬಯಸಿದ್ದರು. ಅದಕ್ಕಿಂತ ಹೆಚ್ಚಾಗಿ, ಫರ್ಹಾನ್ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಹೂಡಿಕೆ ಮಾಡಿದ್ದಾರೆ. ಮಕ್ಕಳ ಪಾಲನೆಯು ಅಧುನಾ ಅವರ ಬಳಿ ಇದ್ದರೂ, ಫರ್ಹಾನ್ ಬಯಸಿದಾಗ ಅವರನ್ನು ಭೇಟಿ ಮಾಡುವ ಹಕ್ಕನ್ನು ಹೊಂದಿದ್ದಾರೆ.

ಅಮೀರ್ ಖಾನ್ ಮತ್ತು ರೀನಾ ದತ್ತಾ
ಈ ದಂಪತಿಗಳು ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರು. ಹಾಗೇ ಬೇರೆಯಾದರೂ ಕೂಡ. ಅಮೀರ್‌ನ ದಾಂಪತ್ಯದಾಚೆಯ ಅಲೆದಾಟದ ಕಾರಣದಿಂದ ವಿಚ್ಛೇದನ ಆಯ್ತು ಎಂದು ಹೇಳಲಾಗಿದೆ. ಅಮೀರ್‌ ನೀಡಿದ ಜೀವನಾಂಶ 100 ಕೋಟಿಗೂ ಹೆಚ್ಚು ಎಂದು ವದಂತಿಗಳಿವೆ. ಆದರೆ ನಿಜವಾದ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್
ಸೈಫ್ ಮತ್ತು ಅಮೃತಾ ನಡುವೆ 13 ವರ್ಷಗಳ ದೊಡ್ಡ ವಯಸ್ಸಿನ ಅಂತರವಿತ್ತು. ಅವರ ದಾಂಪತ್ಯ 13 ವರ್ಷಗಳ ಕಾಲ ಮಾತ್ರ ಇತ್ತು. ನಂತರ ಅಮೃತಾ ದೊಡ್ಡ ಮೊತ್ತದ ಜೀವನಾಂಶಕ್ಕೆ ಬೇಡಿಕೆಯಿಟ್ಟರು. “ನಾನು ಅಮೃತಾಗೆ ರೂ. 5 ಕೋಟಿ ಕೊಡುತ್ತೇನೆ. ಅಲ್ಲದೆ ನಾನು ನನ್ನ ಮಗನಿಗೆ 18 ವರ್ಷ ಆಗುವವರೆಗೆ ತಿಂಗಳಿಗೆ 1 ಲಕ್ಷ ಕೊಡುತ್ತೇನೆ. ನಾನು ಶಾರುಖ್ ಖಾನ್ ಅಲ್ಲ. ನನ್ನ ಬಳಿ ಅಷ್ಟು ಹಣವಿಲ್ಲ. ಆದರೆ ಭರವಸೆ ನೀಡಿದ್ದನ್ನು ನಾನು ಸಾಯುವವರೆಗೂ ಕೊಡಲಿದ್ದೇನೆʼʼ ಎಂದು ಸೈಫ್‌ ಸಂದರ್ಶನವೊಂದರಲ್ಲಿ ಹೇಳಿದ್ದ.

ಸಂಜಯ್ ದತ್ ಮತ್ತು ರಿಯಾ ಪಿಳ್ಳೈ
ರಿಯಾ, ಸಂಜಯ್ ದತ್ ಅವರ ಎರಡನೇ ಹೆಂಡತಿಯಾಗಿದ್ದರು. ಸಂಜಯ್‌ ಅವಳನ್ನು ತುಂಬಾ ಪ್ರೀತಿಸುತ್ತಿದ್ದ. ವರದಿಗಳ ಪ್ರಕಾರ, ಸಂಜಯ್ ಅಧಿಕೃತವಾಗಿ ವಿಚ್ಛೇದನ ಪಡೆಯುವವರೆಗೆ ರಿಯಾ ಅವರ ಅಶನ- ವಸತಿ ಪಾವತಿಸಬೇಕಾಗಿತ್ತು. ಜತೆಗೆ ಆಕೆಗೆ ಜೀವನಾಂಶವಾಗಿ ಐಷಾರಾಮಿ ಕಾರು ಸೇರಿ 8 ಕೋಟಿ ರೂ. ಕೊಡಬೇಕಾಯಿತು.

ಆದಿತ್ಯ ಚೋಪ್ರಾ ಮತ್ತು ಪಾಯಲ್ ಖನ್ನಾ
ರಾಣಿ ಮತ್ತು ಆದಿತ್ಯ ಈಗ ಮದುವೆಯಾಗಿ ಸುಖವಾಗಿದ್ದಾರೆ. ಆದಿತ್ಯನ ಮೊದಲ ಹೆಂಡತಿ ಪಾಯಲ್ ಅವನ ಬಾಲ್ಯದ ಪ್ರಿಯತಮೆ. ದಂಪತಿಗಳು ಬೇರ್ಪಟ್ಟರು. ಅವರ ವಿಚ್ಛೇದನಕ್ಕೆ ಸಾಕಷ್ಟು ಸಮಯ ಹಿಡಿಯಿತು. ಪಾಯಲ್ ಕೇಳಿರುವ ದೊಡ್ಡ ಜೀವನಾಂಶವೇ ಬೇರೆ. ಜೀವನಾಂಶದ ಮೊತ್ತ ಬಹಿರಂಗಪಡಿಸದಿದ್ದರೂ, ಕೆಲವರು ಅದನ್ನು ರೂ. 50 ಕೋಟಿ ಎನ್ನುತ್ತಾರೆ.

ಸನ್ನಿ ಲಿಯೋನ್​, ಸನ್ನಿ ಡಿಯೋಲ್​ರನ್ನು ಮದ್ವೆಯಾಗಿದ್ರೆ ಏನಾಗ್ತಿತ್ತು? ನಕ್ಕುನಗಿಸುವ ಪೋಸ್ಟ್ ವೈರಲ್​

ಪ್ರಭುದೇವ ಮತ್ತು ರಮ್ಲತ್
ಪ್ರಭುದೇವ ಅತ್ಯಂತ ಪ್ರಸಿದ್ಧ ನಟ, ನೃತ್ಯಗಾರ, ನೃತ್ಯ ಸಂಯೋಜಕ. ರಮ್ಲತ್ ಅವರೊಂದಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ದಂಪತಿಗಳ ಅಗಲಿಕೆಯ ವೇಳೆಗೆ ಒಪ್ಪಿಕೊಂಡ ಜೀವನಾಂಶ ಮಾಸಿಕ 10 ಲಕ್ಷ ರೂಪಾಯಿ. ಅಲ್ಲದೆ, ಆಕೆಗೆ ಎರಡು ದುಬಾರಿ ಕಾರುಗಳನ್ನು ನೀಡಿದ. ಆಕೆಯ ಹೆಸರಿನಲ್ಲಿ 20-25 ಕೋಟಿ ರೂ. ಇಟ್ಟ.

ಅನುರಾಗ್ ಕಶ್ಯಪ್ ಮತ್ತು ಕಲ್ಕಿ ಕೊಚ್ಲಿನ್
ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ಕಲ್ಕಿ ಕೊಚ್ಲಿನ್ "ದೇವ್ ಡಿ" ಚಿತ್ರದ ಸೆಟ್‌ನಲ್ಲಿ ಭೇಟಿಯಾದವರು. 2011ರಲ್ಲಿ ಮದುವೆ. ಆದಾಗ್ಯೂ, ಎರಡು ವರ್ಷಗಳ ನಂತರ ವಿಷಯ ಸಂಗತಿ ಕೆಟ್ಟಿತು. ಅವರು ಬೇರ್ಪಟ್ಟರು. 2015ರಲ್ಲಿ ವಿಚ್ಛೇದನ ಪಡೆದರು. ಕಲ್ಕಿ ದೊಡ್ಡ ಮೊತ್ತದ ಜೀವನಾಂಶಕ್ಕೆ ಬೇಡಿಕೆಯಿಟ್ಟರು. ಅನುರಾಗ್ ಅವರ ʼಬಾಂಬೆ ವೆಲ್ವೆಟ್ʼ ಬಾಂಬ್ ಸ್ಫೋಟದ ನಂತರ, ಕಲ್ಕಿ ಅವರಿಗೆ ತುಂಬಾ ಬೇಸರವಾಗಿತ್ತು. ಕಲ್ಕಿ ಭಾರಿ ಮೊತ್ತ ತೆಗೆದುಕೊಂಡಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತವೆ.

ರಿಯಾ ಪಿಳ್ಳೈ ಮತ್ತು ಲಿಯಾಂಡರ್ ಪೇಸ್
ರಿಯಾ ಮತ್ತು ಲಿಯಾಂಡರ್ ಕೂಡ ಬೇರ್ಪಟ್ಟರು. ಮಾಧ್ಯಮಗಳ ಮುಂದೆ ಒಬ್ಬರನ್ನೊಬ್ಬರು ಟೀಕಿಸುವ ಮತ್ತು ಖಂಡಿಸುವ ಮೂಲಕ ಸಾಕಷ್ಟು ಅಸಹ್ಯ ಮಾಡಿದರು. ಮಾಸಿಕ ರೂ. 4 ಲಕ್ಷಕ್ಕೆ ರಿಯಾ ಬೇಡಿಕೆ ಇಟ್ಟಿದ್ದರು. ತನಗೆ 3 ಲಕ್ಷ ರೂ., ಮಗಳ ವಿದ್ಯಾಭ್ಯಾಸಕ್ಕೆ 90,000 ರೂ. ಪಡೆದರು. 

ಸಮಂತಾ ರುತ್ ಪ್ರಭು- ನಾಗಚೈತನ್ಯ
ಇದರಲ್ಲೆಲ್ಲ ವಿಚಿತ್ರ ಪ್ರಕರಣ ಎಂದರೆ ಸಮಂತಾ ರುತ್ ಪ್ರಭು ಹಾಗೂ ನಾಗಚೈತನ್ಯ ಅವರದು. ಇವರು ಬೇರೆಯಾದಾಗ ನಾಗಚೈತನ್ಯ 250 ಕೋಟಿ ರೂಪಾಯಿಷ್ಟಯ ಜೀವನಾಂಶ ನೀಡಲು ರೆಡಿಯಾಗಿದ್ದರು. ಆದರೆ ಸ್ವಾಭಿಮಾನಿ ಸಮಂತಾ, ನಾನೇ ದುಡಿದು ಬದುಕಬಲ್ಲೆ ಎಂದು ಆ ಹಣವನ್ನು ನಿರಾಕರಿಸಿದ್ದಾರೆ!

ಕರೀನಾ ಕಪೂರ್ ವರ್ತನೆ ಟೀಕಿಸಿದ್ದ ನಾರಾಯಣ ಮೂರ್ತಿ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್

 

 

click me!