ಅಪ್ಪನಿಗೆ ಕೊಟ್ಟ ಮಾತನ್ನು ಉಳಿಸಲು ಅಜ್ಜಿಯ ಊರು ಕಾಶ್ಮೀರಕ್ಕೆ ಇನ್ನೂ ಭೇಟಿ ಕೊಡದ ಶಾರುಖ್ ಖಾನ್. ಅಷ್ಟಕ್ಕೂ ಆಗಿದ್ದೇನು?
ಬಾಲಿವುಡ್‌ನ ಸೂಪರ್ಸ್ಟಾರ್ ಶಾರುಖ್ ಖಾನ್, ಬಹುತೇಕ ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ಶೂಟಿಂಗ್ ನೆಪದಲ್ಲೋ ಇಲ್ಲವೇ ಫ್ಯಾಮಿಲಿ ಟೂರ್ಗಾಗಿಯೋ ಹಲವಾರು ದೇಶಗಳನ್ನು ಸುತ್ತಿದ್ದಿದೆ, ಜೊತೆಗೆ ಭಾರತದಲ್ಲಿರುವ ಬಹುತೇಕ ಎಲ್ಲಾ ಪ್ರವಾಸಿ ತಾಣಗಳನ್ನೂ ಸುತ್ತಿದ್ದಾರೆ. ಹೇಳಿಕೇಳಿ ಅವರ ಬಳಿ ಖಾಸಗಿ ಜೆಟ್ ಕೂಡ ಇದ್ದು, ಇದರಲ್ಲಿ ವಿಶ್ವ ಪರ್ಯಟನೆಯನ್ನೂ ಮಾಡಿದ್ದಾರೆ. ಆದರೆ ಕುತೂಹಲದ ವಿಷಯ ಏನೆಂದ್ರೆ, ಅವರು ಇನ್ನೂ ಭಾರತದ ಕಿರೀಟ ಕಾಶ್ಮೀರಕ್ಕೇ ಭೇಟಿ ಕೊಡಲಿಲ್ಲವಂತೆ! ಹೌದು... ಕಾಶ್ಮೀರಕ್ಕೆ ಭೇಟಿ ನೀಡದಿದ್ದರೆ ವಿಶೇಷವೇನು ಎಂದು ಕೇಳಬಹುದು. ಅಸಲಿಗೆ ಕಾಶ್ಮೀರವು ಇವರ ಅಜ್ಜಿಯ ಅಂದರೆ ಶಾರುಖ್ ಅವರ ಅಪ್ಪನ ಮೂಲ ಮನೆ. ಅಂದರೆ ಅಪ್ಪನ ತಾಯಿ ಇದ್ದುದು ಅಲ್ಲಿಯೇ. ಆದರೂ ಇವರು ಕಾಶ್ಮೀರಕ್ಕೆ ಇದುವರೆಗೆ ಭೇಟಿ ಕೊಟ್ಟಿಲ್ಲ, ಕಾಶ್ಮೀರನ್ನು ನೋಡುವ ಹಂಬಲವಿದ್ದರೂ ತಂದೆಗೆ ಕೊಟ್ಟಿರುವ ಮಾತಿನಂತೆ ಕಾಶ್ಮೀರಕ್ಕೆ ಅವರು ಹೋಗುವುದು ಸಂದೇಹವೇ.
ಅಷ್ಟಕ್ಕೂ ಶಾರುಖ್ ಅವರ ತಂದೆ ಮೀರ್ ರಾಜ್ ಮೊಹಮ್ಮದ್ ಖಾನ್ ಅವರು ಖುದ್ದು ಕಾಶ್ಮೀರ ನೋಡುವಂತೆ ಮಗನಿಗೆ ಹೇಳಿದ್ದರು. ಇದರ ಹೊರತಾಗಿಯೂ ಶಾರುಖ್ ಇದುವರೆಗೆ ಅಲ್ಲಿ ಭೇಟಿ ಕೊಡಲಿಲ್ಲ. ಇದಕ್ಕೆ ಕಾರಣ ಅಪ್ಪನಿಗೆ ಕೊಟ್ಟ ಮಾತು. ಹೌದು! ಶಾರುಖ್ ಖಾನ್ ಅವರ ತಂದೆ ಸದಾ ಶಾರುಖ್ ಅವರಿಗೆ ಮೂರು ಸ್ಥಳಗಳನ್ನು ನೋಡಲು ಹೇಳಿದ್ದರಂತೆ. ಅದು ಇಸ್ತಾಂಬುಲ್, ಇಟಲಿಯ ರೋಮ್ ಹಾಗೂ ಕಾಶ್ಮೀರ. ತಾವು ನಾನು ಬದುಕಿದ್ದರೂ ಇಲ್ಲದಿದ್ದರೂ ಒಮ್ಮೆಯಾದರೂ ಇಸ್ತಾಂಬುಲ್ ಮತ್ತು ರೋಮ್ ನೋಡು ಎಂದಿದ್ದರಂತೆ. ಅವರ ಅಣತಿಯಂತೆ ಶಾರುಖ್ ಇದಾಗಲೇ ಇಸ್ತಾಂಬುಲ್ ಮತ್ತು ಇಟಲಿಯ ರೋಮ್ ನೋಡಿದ್ದಾರೆ. ಆದರೆ ಅವರ ತಂದೆ ಹೀಗೆ ಹೇಳುವಾಗ ಕಾಶ್ಮೀರವನ್ನು ಮಾತ್ರ ನಾನಿಲ್ಲದೇ ನೋಡಬೇಡ. ನಾನೇ ನಿನಗೆ ಕಾಶ್ಮೀರವನ್ನು ತೋರಿಸುತ್ತೇನೆ ಎಂದಿದ್ದರಂತೆ. ಶಾರುಖ್ ಅವರು ಕೂಡ ಅಪ್ಪನಿಗೆ ಇದೇ ಮಾತನ್ನು ಕೊಟ್ಟಿದ್ದರಂತೆ.
ಆದರೆ ಮೀರ್ ರಾಜ್ ಮೊಹಮ್ಮದ್ ಖಾನ್ ಅವರು 1981ರಲ್ಲಿ ತೀರಿಕೊಂಡರು. ಆಗಿನ್ನೂ ಶಾರುಖ್ ಅವರನ್ನು ತಂದೆ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಾರುಖ್ ಅಪ್ಪನ ಮಾತನ್ನು ಉಳಿಸಿಕೊಳ್ಳಲು ಕಾಶ್ಮೀರಕ್ಕೆ ಇನ್ನೂ ಭೇಟಿ ಕೊಡಲಿಲ್ಲವಂತೆ. ಈ ಕುರಿತು ಖುದ್ದು ಶಾರುಖ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾನು ಪ್ರಪಂಚವನ್ನೆಲ್ಲ ಸುತ್ತಿದೆ. ಆದರೆ ಕಾಶ್ಮೀರ ನೋಡಲಿಲ್ಲ. ನನಗೆ ಕಾಶ್ಮೀರಕ್ಕೆ ಹೋಗುವ ಹಲವಾರು ಅವಕಾಶಗಳು ಸಿಕ್ಕಿದ್ದವು.ನನ್ನ ಮನೆಯವರು ಕಾಶ್ಮೀರಕ್ಕೆ ವೆಕೇಷನ್ ಹೋದರು. ಸ್ನೇಹಿತರು ಅಲ್ಲಿಗೆ ಕರೆದರು. ಅಲ್ಲಿಗೆ ಹೋಗುವ ಬಹಳಷ್ಟು ಅವಕಾಶಗಳು ಸಿಕ್ಕಿತ್ತು. ಆದರೆ ನಾನೆಂದೂ ಕಾಶ್ಮೀರಕ್ಕೆ ಹೋಗಲಿಲ್ಲ. ಯಾಕೆಂದರೆ ನನ್ನ ಅಪ್ಪ ನಿನಗೆ ನಾನು ಕಾಶ್ಮೀರವನ್ನು ತೋರಿಸುತ್ತೇನೆ ಎಂದು ಹೇಳಿದ್ದರು ಎಂದಿದ್ದಾರೆ.
ಇದೇ ವೇಳೆ ಶಾರುಖ್ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೂಡ ಕೊಡಲಾಗಿದೆ. ಅದೇನೆಂದರೆ, ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ "ಜವಾನ್" ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುವ ದಿನಾಂಕ ಬಹಿರಂಗಗೊಂಡಿದೆ. ನವೆಂಬರ್ 2ರಂದು ಶಾರುಖ್ ಅವರ ಹುಟ್ಟುಹಬ್ಬದ ದಿನ ಒಟಿಟಿಯಲ್ಲಿ ಜವಾನ್ ಸಿನಿಮಾ ಪ್ರಸಾರಗೊಳ್ಳಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್ 2ರಿಂದ ಜವಾನ್ ಚಿತ್ರವನ್ನು ನೋಡಬಹುದು.
Birthday Girl Kriti: ಸಲ್ಮಾನ್ ತಂಗಿ ಗಂಡನಿಗೆ ಹೃದಯದ ಜತೆ ಪಾಕೆಟ್ ಮನಿನೂ ಕೊಟ್ಟು ಸೋತ ಗೂಗ್ಲಿ ನಟಿ!