ಶಾರುಖ್ ಖಾನ್ ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ಅಜ್ಜಿ ಅವರನ್ನು ದತ್ತು ಪಡೆದುಕೊಂಡು ಬೆಳೆಸಿದ್ದರು. ಕರ್ನಾಟಕದ ನಂಟಿನ ಬಗ್ಗೆ ನಟ ಹೇಳಿದ್ದೇನು?
ಬಾಲಿವುಡ್‌ಗೂ ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಭಾರಿ ನಂಟಿದೆ. ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ, ಕೃತಿ ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ನಟಿಯರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸೇರಿದವರಾಗಿದ್ದಾರೆ. ಆದರೆ ಕುತೂಹಲದ ವಿಷಯ ಏನೆಂದರೆ, ನಟ ಶಾರುಖ್ ಖಾನ್ ಕೂಡ ಮಂಗಳೂರಿನ ಮಗ. ಕರ್ನಾಟಕಕ್ಕೂ ಈ ಬಾಲಿವುಡ್ ಬಾದ್‌ಶಾಗೂ ಭಾರಿ ನಂಟಿದೆ. ಈ ವಿಷಯವನ್ನು ಖುದ್ದು ಶಾರುಖ್ ಖಾನ್ ಅವರೇ ರಿವೀಲ್ ಮಾಡಿದ್ದಾರೆ. ಮಾತ್ರವಲ್ಲದೇ ಇವರ ತಾಯಿ ಕೂಡ ಕನ್ನಡ ಚೆನ್ನಾಗಿ ಮಾತನಾಡಬಲ್ಲರು ಎಂದು ಹೇಳಿದ್ದಾರೆ. ಮಂಗಳೂರಿನ ಸಂಬಂಧದ ಕುರಿತು ನಟ ಹೇಳಿರುವ ಹಳೆಯ ವಿಡಿಯೋ ತುಣುಕು ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ನನಗೂ ಕರ್ನಾಟಕಕ್ಕೂ ನಂಟಿದೆ. ನಾನು ಮಂಗಳೂರಿನಲ್ಲಿಯೇ ಬೆಳೆದವ. ಮಂಗಳೂರಿನಲ್ಲಿದ್ದ ನನ್ನ ಅಜ್ಜಿ ನನ್ನ ದತ್ತು ಪಡೆದುಕೊಂಡಿದ್ದರು. ಅವರಿಗೆ ಗಂಡುಮಕ್ಕಳು ಇರಲಿಲ್ಲ. ಈ ಕಾರಣದಿಂದ ಅವರು ತಮ್ಮ ಮಗಳ ಮಗನಾದ ನನ್ನನ್ನು ದತ್ತು ಪಡೆದಿದ್ದರು. ನನ್ನ ಹೆಸರನ್ನು ಅಬ್ದುಲ್ ರೆಹಮಾನ್ ಎಂದು ಇಟ್ಟಿದ್ದರು' ಎಂದು ವಿಷಯವನ್ನು ಈ ವಿಡಿಯೋದಲ್ಲಿ ನಟ ಹೇಳಿದ್ದಾರೆ.
ಬಾಲ್ಯದ ಐದು ವರ್ಷ ಮಂಗಳೂರಿನಲ್ಲಿಯೇ ಕಳೆದೆ. ಅಲ್ಲಿಯವರೆಗೂ ಇವನು ನನ್ನದೇ ಮಗ ಎಂದು ಅಜ್ಜಿ ಹೇಳುತ್ತಿದ್ದರು. ಆದ್ದರಿಂದ ನನ್ನ ಬಾಲ್ಯದ ಫೋಟೋ ಎಲ್ಲವೂ ಮಂಗಳೂರಿನಲ್ಲಿಯೇ ತೆಗೆದಿದ್ದಾಗಿವೆ ಎಂದಿದ್ದಾರೆ. ಅಷ್ಟಕ್ಕೂ ಶಾರುಖ್ ಅವರ ಅಜ್ಜಿ ಮಂಗಳೂರಿನಲ್ಲಿ ಇರುವುದರ ಹಿಂದೆಯೂ ವಿಶೇಷ ಕಾರಣವಿದೆ. ಅದೇನೆಂದರೆ, ಶಾರುಖ್ ಅವರ ಅಜ್ಜ ಅಂದ್ರೆ ತಾಯಿಯ ತಂದೆ ಇಫ್ತಿಖರ್ ಅಹ್ಮದ್ ಅವರು 1960ರಲ್ಲಿ ಮಂಗಳೂರಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಆದ್ದರಿಂದ ಅವರು ಅಲ್ಲಿಯೇ ವಾಸವಾಗಿದ್ದರು. ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಇದರ ನಡುವೆಯೇ ಅಂದರೆ, 1965ರ ನವೆಂಬರ್ 2ರಂದು ಶಾರುಖ್ ಅವರ ಜನನವಾಗಿತ್ತು. ಅವರು ಹುಟ್ಟಿದ್ದು ದೆಹಲಿಯಲ್ಲಿ.
'ಜಾತ್ಯತೀತ' ಸ್ವರಾ ಭಾಸ್ಕರ್ ಖುಲ್ಲಂಖುಲ್ಲಾ ವಿಡಿಯೋ ಕೆದಕುತ್ತಲೇ ಹೀಗೆಲ್ಲಾ ರೋಸ್ಟ್ ಮಾಡೋದಾ ಯೂಟ್ಯೂಬರ್ ಶಬನಮ್?
ಆ ಸಮಯದಲ್ಲಿ, ಶಾರುಖ್ ತಾಯಿ ಮಗುವನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದರು. ಆಗಲೇ ಅಜ್ಜಿ ದತ್ತು ಪಡೆದುಕೊಂಡಿದ್ದರು. ಇದರಿಂದ ಐದು ವರ್ಷ ಶಾರುಖ್ ಖಾನ್ ಮಂಗಳೂರಿನಲ್ಲಿಯೇ ನೆಲೆಸಿದ್ದರು. ಈ ಹಿಂದೆ ಕೂಡ ಕೆಲವು ಕಾರ್ಯಕ್ರಮಗಳಲ್ಲಿ ಶಾರುಖ್ ಖಾನ್, ತಮಗೆ ಮಂಗಳೂರಿಗೆ ಇರುವ ನಂಟಿನ ಬಗ್ಗೆ ತಿಳಿಸಿದ್ದರು. ತಮ್ಮ ಬಾಲ್ಯದ ಚಿತ್ರಗಳು ಯಾವ ಊರಿನದ್ದು ಎಂಬ ಚರ್ಚೆ ಹೆಚ್ಚಾಗಿ ನಡೆದಾಗ ತಾವೇ ಟ್ವೀಟ್ ಮಾಡಿ ಅದು ಮಂಗಳೂರಿನಲ್ಲಿ ತೆಗೆದಿದ್ದ ಚಿತ್ರಗಳು ಎಂಬುದನ್ನು ತಿಳಿಸಿದ್ದರು. ಜೊತೆಗೆ ಬೆಂಗಳೂರಿನಲ್ಲಿ ಸುತ್ತಾಡಿದ ಬಗ್ಗೆಯೂ ಈ ಹಿಂದೆ ಅವರು ಮಾತನಾಡಿದ್ದರು. ನನ್ನ ಅಜ್ಜ ಮಂಗಳೂರು ಪೋರ್ಟ್‌ನ ಎಂಜಿನಿಯರ್ ಆಗಿದ್ದರಿಂದ ಬಾಲ್ಯ ಮಂಗಳೂರಿನಲ್ಲಿ ಕಳೆದೆ. ಆಗಲೇ ಬೆಂಗಳೂರಿಗೂ ಹೋಗಿದ್ದೆ. ಬೆಂಗಳೂರಿನ ನಂದಿದುರ್ಗ ರೋಡ್, ಜಯಮಹಲ್ ಬಡಾವಣೆ ಹಾಗೂ ಪ್ಯಾಲೇಸ್ ರೋಡ್‌ಗೆ ಭೇಟಿ ನೀಡಿದ್ದೆ. ಅವು ಸದಾ ನೆನಪಿನಲ್ಲಿರುವಂತ ಸ್ಥಳಗಳು ಎಂದು ಹೇಳಿದ್ದರು.
ಅಷ್ಟೇ ಅಲ್ಲದೇ, ಇನ್ನೂ ಒಂದು ಕುತೂಹಲದ ಸಂಗತಿ ಏನೆಂದರೆ, ಶಾರುಖ್ ಅವರಿಗೆ ಬಾಲ್ಯದಿಂದಲೂ ನಟನಾಗುವ ಕನಸು. ಅವರು ತಮ್ಮ ಜರ್ನಿ ಶುರು ಮಾಡಿದ್ದು, ದೂರದರ್ಶನದಲ್ಲಿ ಪ್ರಸಾರ ಆಗ್ತಿದ್ದ ಸರ್ಕಸ್ ಸೀರಿಯಲ್ ಮೂಲಕ. ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಡಬೇಕು ಎಂದು ಬಯಸಿದ್ದ ಶಾರುಖ್ ಅವರು, ಮುಂಬೈಗೆ ಕಳುಹಿಸಿದ್ದ ಮೊದಲ ಫೋಟೊ ತೆಗೆಸಿದ್ದು ಕೂಡ ಬೆಂಗಳೂರಿನಲ್ಲೇ. ಈ ಹಿಂದೆ ಅಭಿಮಾನಿಗಳ ಜೊತೆ ಟ್ವೀಟ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದ್ದರು. ಆದರೆ ಕನ್ನಡ ಏಕೆ ಕಲಿಯಲಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರಿಸಿದ್ದ ನಟ, ಮಾತ್ರ ಬಾಲ್ಯದಲ್ಲಿಯೇ ದೆಹಲಿಗೆ ಕರೆದುಕೊಂಡು ಹೋದರು. ಹೀಗಾಗಿ ಕನ್ನಡ ಕಲಿಯಲಾಗಲಿಲ್ಲ, ನನ್ನ ತಾಯಿ ಚೆನ್ನಾಗಿ ಕನ್ನಡವನ್ನು ಮಾತನಾಡುತ್ತಾರೆ ಎಂದು ತಿಳಿಸಿದ್ದರು.
ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್ ಉತ್ತರ ಕೇಳಿ...