'ನನ್ನ ಸಿನಿಮಾಗಳಿಗೆ ಜೀವ ತುಂಬಿದ್ದೇ ಜಾನಕಮ್ಮನ ಧ್ವನಿ..' ಗಾನಕೋಗಿಲೆಯ ಸಾವಿಗೆ ಮೆಗಾಸ್ಟಾರ್‌ ಚಿರಂಜೀವಿ ಕಂಬನಿ

Published : Jul 11, 2026, 09:26 PM IST
Tollywood actor Megastar Chiranjeevi condoles the death of legendary singer S Janaki

ಸಾರಾಂಶ

ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ವಾರ್ತೆಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು ಭಾವುಕರಾಗಿ ಸಂತಾಪ ಸೂಚಿಸಿದ್ದಾರೆ. ತಮ್ಮ ಸಿನಿಮಾಗಳ ಯಶಸ್ಸಿನಲ್ಲಿ ಜಾನಕಮ್ಮನವರ ಪಾತ್ರವನ್ನು ಸ್ಮರಿಸಿದ ಅವರು, ಅವರ ಧ್ವನಿ ಸದಾ ಅಮರ ಎಂದು ಕಂಬನಿ ಮಿಡಿದಿದ್ದಾರೆ.

ಬೆಂಗಳೂರು (ಜು.11): ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ವಾರ್ತೆ ಇಡೀ ಭಾರತೀಯ ಚಿತ್ರರಂಗವನ್ನು ಕಣ್ಣೀರಲ್ಲಿ ಮುಳುಗಿಸಿದೆ. ಜಾನಕಿ ಅಮ್ಮನವರ ನಿಧನಕ್ಕೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು ಭಾವುಕರಾಗಿ ಸಂತಾಪ ಸೂಚಿಸಿದ್ದಾರೆ. ಜಾನಕಮ್ಮ ಅವರ ನಿಧನದ ಸುದ್ದಿ ನನ್ನ ಹೃದಯವನ್ನು ಆಳವಾಗಿ ಕಲಕಿದೆ ಎಂದು ಕಂಬನಿ ಮಿಡಿದಿರುವ ಅವರು, ತಮ್ಮ ಸಿನಿಮಾಗಳ ಯಶಸ್ಸಿನ ಹಿಂದೆ ಇದ್ದ ಜಾನಕಿ ಅವರ ಕಂಠವನ್ನು ನೆನೆದು ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ನನ್ನ ಸುದೀರ್ಘ ಸಿನಿಮಾ ಪಯಣದಲ್ಲಿ, ಜಾನಕಮ್ಮ ಅವರು ಅಸಂಖ್ಯಾತ ಮರೆಯಲಾಗದ ಹಾಡುಗಳಿಗೆ ತಮ್ಮ ಸಾಟಿಯಿಲ್ಲದ ಧ್ವನಿಯನ್ನು ನೀಡಿದ್ದಾರೆ. ನಾವು ಬೆಳ್ಳಿತೆರೆಯ ಮೇಲೆ ತಂದ ಅನೇಕ ಭಾವನೆಗಳಿಗೆ ಅಕ್ಷರಶಃ ಜೀವ ತುಂಬಿದ್ದು ಅವರ ಧ್ವನಿಯೇ ಆಗಿತ್ತು. ಇಂದು ಪ್ರೇಕ್ಷಕರು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುವ ಹಲವಾರು ಸೂಪರ್ ಹಿಟ್ ಹಾಡುಗಳ ಹಿಂದೆ ಜಾನಕಮ್ಮ ಅವರ ಮಧುರ ಕಂಠವಿದೆ ಎಂದು ಚಿರಂಜೀವಿ ಅವರು ಎಸ್.ಜಾನಕಿ ಅವರನ್ನು ನೆನಪಿಸಿಕೊಂಡಿದ್ದಾರೆ.

ಹಾಡುಗಳು ಮೊಳಗಿದಾಗ ಕಣ್ಣೆದುರು ಬರುತ್ತವೆ ಆ ದಿನಗಳು!

ಆ ಹಾಡುಗಳು ರೇಡಿಯೋ ಅಥವಾ ಟಿವಿಗಳಲ್ಲಿ ಪ್ಲೇ ಆದಾಗಲೆಲ್ಲಾ.. ಆ ಹಳೆಯ ದಿನಗಳು.. ಆ ಮಧುರ ನೆನಪುಗಳು.. ನನ್ನ ಕಣ್ಣೆದುರು ಮತ್ತೊಮ್ಮೆ ಮರುಕಳಿಸುತ್ತವೆ. ಜಾನಕಮ್ಮ ಕೇವಲ ಒಬ್ಬ ಗಾಯಕಿಯಾಗಿರಲಿಲ್ಲ. ಅವರು ಭಾವನೆಗಳನ್ನು ಅದ್ಭುತ ಮಧುರ ರಾಗಗಳಾಗಿ ಪರಿವರ್ತಿಸುತ್ತಿದ್ದ ಒಬ್ಬ ಅಸಾಮಾನ್ಯ ಅಪ್ರತಿಮ ಕಲಾವಿದೆ. ಅವರು ಹಾಡಿದ ಪ್ರತಿಯೊಂದು ಹಾಡೂ ಒಂದು ಸುಂದರ ನೆನಪು, ಒಂದು ಅದ್ಭುತ ಭಾವನೆ ಹಾಗೂ ನಮ್ಮ ನಡುವಿನ ಜೀವಮಾನದ ಬಂಧವಾಗಿದೆ ಎಂದು ಮೆಗಾಸ್ಟಾರ್ ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.

ಸಂಗೀತ ಲೋಕದ ಮಹಾ ಶಿಖರಕ್ಕೆ ಮುಕ್ತಿ

ಇಂದು ನಾವು ಸಂಗೀತ ಜಗತ್ತಿನಲ್ಲಿ ಮಹಾ ಶಿಖರವನ್ನು ಕಳೆದುಕೊಂಡಿದ್ದೇವೆ. ಆದರೆ ಅವರು ಹಾಡಿಹೋಗಿರುವ ಅಮರ ಗೀತೆಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿ ಉಳಿಯಲಿವೆ. ಅಷ್ಟೇ ಅಲ್ಲದೆ, ನಮ್ಮೆಲ್ಲರ ವೈಯಕ್ತಿಕ ಜೀವನದ ಹಿನ್ನೆಲೆ ಸಂಗೀತವಾಗಿ (Background Score) ನಮ್ಮೊಂದಿಗೆ ಸದಾ ಮೊಳಗುತ್ತಿರುತ್ತವೆ. ಎಸ್. ಜಾನಕಿ ಅವರ ಕುಟುಂಬದ ಸದಸ್ಯರಿಗೆ, ಅವರ ಆತ್ಮೀಯರಿಗೆ ಮತ್ತು ಅವರನ್ನು ಆರಾಧಿಸುವ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಸಂಗೀತ ಪ್ರೇಮಿಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಜಾನಕಮ್ಮ... ನಿಮ್ಮ ಧ್ವನಿ ಸದಾ ಅಮರ. ಓಂ ಶಾಂತಿ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

ಚಿರಂಜೀವಿ ಅವರ ಈ ಭಾವುಕ ಪೋಸ್ಟ್‌ಗೆ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಲಕ್ಷಾಂತರ ಅಭಿಮಾನಿಗಳು ಲೈಕ್ ಹಾಗೂ ಕಮೆಂಟ್‌ಗಳ ಮೂಲಕ ಜಾನಕಿ ಅಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ramayana: ಕಾಮಿಕ್ ಕಾನ್‌ನಲ್ಲಿ 'ರಾಮಾಯಣ'.. ಭಾರತ್ ಮಂಟಪದಲ್ಲಿ ಯಶ್-ರಣಬೀರ್ ಒಟ್ಟಿಗೇ ಸಿಗ್ತಾರೆ!
S Janaki: ಎಸ್ ಜಾನಕಿಯ ಕೊನೆಯ ಗಾಯನ, ಕೊನೆಯ ಉಸಿರಿಗೆ ಸಾಕ್ಷಿಯಾಗಿದ್ದು ಕನ್ನಡನಾಡಿನ ಮೈಸೂರು!