ಶಾರುಖ್ ಮನೆ ಮುಂದೆ ಛೀಮಾರಿ ಹಾಕ್ತಿರೋ ಜನ, ದುಡ್ಡಿನ ಆಸೆಗೆ ಇಂಥ ಕೆಲ್ಸನಾ ಅಂತಿದ್ದಾರೆ. ಅಷ್ಟಕ್ಕೂ ಜನ ರೊಚ್ಚಿಗೇಳಲು ಕಾರಣವೇನು?
ಶಾರುಖ್ ಖಾನ್ ಪಠಾಣ್ ಯಶಸ್ಸಿನ ಬಳಕಿ ಈಗ ಜವಾನ್ ಖುಷಿಯಲ್ಲಿದ್ದಾರೆ. ಇವರ ಜವಾನ್ ಚಿತ್ರಕ್ಕಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ ಈಗ ಮುಂಬೈನಲ್ಲಿರುವ ಶಾರುಖ್ ಮನೆಯ ಮುಂದೆ ಮುಂಬೈ ಪೊಲೀಸರ ದೊಡ್ಡ ದಂಡೇ ಹರಿದುಬಂದಿದೆ. ಶಾರುಖ್ ಮನೆಯ ಮುಂದೆ ಬಂದು ಒಂದಿಷ್ಟು ಜನ ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು ಚದುರಿಸಲು ಪೊಲೀಸರ ಕಣ್ಗಾವಲು ಹಾಕಲಾಗಿದೆ. ಇದಾಗಲೇ ಕೆಲವು ಮಂದಿಯನ್ನು ಅರೆಸ್ಟ್ ಕೂಡ ಮಾಡಲಾಗಿದೆ. ಶಾರುಖ್ ಮನೆ ಮನ್ನತ್ ಮುಂದೆ ಪ್ರತಿಭಟನೆ ಮಾಡಲು ಬಂದವರನ್ನು ಪೊಲೀಸರು ಅರೆಸ್ಟ್ ಮಾಡಿರುವ ಸುದ್ದಿ ವೈರಲ್ ಆಗುತ್ತಲೇ ಶಾರುಖ್ ಖಾನ್ಗೇ ಅಭಿಮಾನಿಗಳು ಸೇರಿ ಜನರು ಬಯ್ಯುತ್ತಿದ್ದಾರೆ, ಚಿತ್ರ ಮಾಡಿ ಸಹಸ್ರಾರು ಕೋಟಿ ರೂಪಾಯಿ ದುಡಿದದ್ದು ಸಾಲದು ಎಂದು ಇವೆಲ್ಲಾ ಕೆಟ್ಟ ಕೆಲಸ ಬೇಕಿತ್ತಾ ಅಂತಿದ್ದಾರೆ. ಪ್ರತಿಭಟನೆ ಮಾಡುತ್ತಿರುವುದೂ ಸರಿಯಾಗಿಯೇ ಇದೆ ಎನ್ನುತ್ತಿದ್ದಾರೆ.
ಅಷ್ಟಕ್ಕೂ ಈ ಪ್ರತಿಭಟನೆ ಯಾಕೆ? ಪೊಲೀಸರು ಬಂದಿದ್ದೇಕೆ ಎನ್ನುವುದಾದರೆ ವರದಿಗಳ ಪ್ರಕಾರ, ಶಾರುಖ್ ಖಾನ್ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ಪ್ರಚಾರ ಮಾಡುತ್ತಿರುವುದಕ್ಕೆ! ಕೆಲವೊಂದು ಆನ್‌ಲೈನ್ ಗೇಮ್ಸ್ ರಾಯಭಾರಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ. ಬಹುತೇಕರಿಗೆ ತಿಳಿದಿರುವಂತೆ ಆನ್‌ಲೈನ್ ಗೇಮ್ ಆಡಿ ಇದ್ದದ್ದನ್ನೆಲ್ಲಾ ಕಳೆದುಕೊಂಡು ಹುಚ್ಚರಾದವರೂ ಇದ್ದಾರೆ, ಪ್ರಾಣ ಕಳೆದುಕೊಂಡವರೂ ಇದ್ದಾರೆ. ಇದರ ಚಟಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಕೋರ್ಟ್ ಕೂಡ ಈ ಹಿಂದೆ ಆನ್‌ಲೈನ್ ಗೇಮಿಂಗ್ ಬ್ಯಾನ್ಗೆ ಆದೇಶಿಸಿತ್ತು. ಆದರೆ ಅದ್ಯಾವುದೋ ಕಾರಣಕ್ಕೆ ಕೋರ್ಟ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದಾಗಿನಿಂದಲೂ ಮತ್ತೆ ಆನ್‌ಲೈನ್ ಗೇಮ್ ಎಂಬ ರಾಕ್ಷಸನ ತೆಕ್ಕೆಗೆ ಯುವ ಪೀಳಿಗೆ ಸಾಗುತ್ತಿದೆ.
JAWAN: ಶಾರುಖ್ ಶರ್ಟ್ ಬೆಲೆ ಒಂದು ಲಕ್ಷ! ಅತಿ ಹೆಚ್ಚು ಬಜೆಟ್‌ನ ಈ ಚಿತ್ರಕ್ಕೆ ಇಷ್ಟೊಂದು ಖರ್ಚಾ?
ಯಾವುದೇ ಜಾಹೀರಾತು ಮಾಡುವುದಿದ್ದರೂ ಜಾಹೀರಾತು ಕಂಪೆನಿಗಳು ನಟರನ್ನು ಇಲ್ಲವೇ ಕ್ರಿಕೆಟ್ ತಾರೆಯರನ್ನು ತಮ್ಮ ಮೊದಲ ಆಯ್ಕೆ ಮಾಡಿಕೊಳ್ಳುವುದು ಸಹಜ. ಅದರಲ್ಲಿಯೂ ವಿಷಕಾರಿ ಪಾನೀಯವೇ ಇರಲಿ, ಯುವ ಸಮುದಾಯವನ್ನು ಹಾಳು ಮಾಡುವ ಯಾವುದೇ ವಸ್ತುವಿರಲಿ, ಆಟವಿರಲಿ... ಇವುಗಳಿಗೆ ನಟರು ಹಾಗೂ ಕ್ರಿಕೆಟಿಗರನ್ನು ಹಾಕಿಕೊಂಡರೆ ಸುಲಭದಲ್ಲಿ ಯುವಕರು ಮರುಳಾಗುತ್ತಾರೆ ಎನ್ನುವ ಅರಿವು ಜಾಹೀರಾತು ಕಂಪೆನಿಗಳಿಗೆ ಇದೆ. ಅವರು ನೀಡುವ ಕೋಟಿ ಕೋಟಿ ಆಸೆಗೆ ಬಿದ್ದು ನಟರು ಕೂಡ ಇವುಗಳಿಗೆ ರಾಯಭಾರಿಗಳಾಗಿ ಹೋಗುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇದೀಗ ಜನರೇ ಶಾರುಖ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳು ಯುವಕರನ್ನು ದಾರಿ ತಪ್ಪಿಸುತ್ತವೆ ಮತ್ತು ಭ್ರಷ್ಟಗೊಳಿಸುತ್ತವೆ ಮತ್ತು ಸೆಲೆಬ್ರಿಟಿಗಳು ಅವುಗಳನ್ನು ಸಮರ್ಥಿಸಬಾರದು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.
ಅನ್‌ಟಚ್ ಯೂತ್ ಫೌಂಡೇಶನ್ ಅವರು ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ಜಂಗ್ಲೀ ರಮ್ಮಿ, ಜುಪಿ ಮತ್ತು ಇತರ ಪೋರ್ಟಲ್‌ಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಇದಾಗಲೇ ಹೇಳಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಘಟನೆಯ ಅಧಿಕೃತ ಹೇಳಿಕೆಯಲ್ಲಿ, 'ಪ್ರಸಿದ್ಧ ನಟರು ಮತ್ತು ನಟಿಯರು ಈ ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರು ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ಹೊರಗೆ ಅನ್‌ಟಚ್ ಇಂಡಿಯಾ ಫೌಂಡೇಶನ್ ಪರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಹೊಸ ತಲೆಮಾರು ಜಂಗ್ಲಿ ರಮ್ಮಿ ಆಡುವುದರಲ್ಲಿ ತೊಡಗಿಸಿಕೊಂಡಿದೆ. ಯಾರಾದರೂ ಜಂಗ್ಲೀ ರಮ್ಮಿ ಆಡುತ್ತಿದ್ದರೆ ಅಥವಾ ಹೊರಗೆ ಜೂಜಾಡುತ್ತಿದ್ದರೆ, ಪೊಲೀಸರು ಅವರನ್ನು ಬಂಧಿಸುತ್ತಾರೆ, ಆದರೆ ಆನ್‌ಲೈನ್ ಆಟಗಳನ್ನು ಉತ್ತೇಜಿಸುವ ದೊಡ್ಡ ಬಾಲಿವುಡ್ ತಾರೆಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ತಪ್ಪು ಎಂದು ಬಾಲಿವುಡ್ ತಾರೆಯರಿಗೂ ಗೊತ್ತಿದೆ, ಆದರೆ ಅವರು ಹಣ ಪಡೆಯುತ್ತಿದ್ದಾರೆ. ಆದ್ದರಿಂದ ಅವರು ಪ್ರಚಾರ ಮಾಡುತ್ತಿದ್ದಾರೆ. ನಾವು ಈ ಸ್ಟಾರ್‌ಗಳನ್ನು ಅವರ ಚಲನಚಿತ್ರಗಳನ್ನು ನೋಡಿ ನಮ್ಮ ಹಣವನ್ನು ಖರ್ಚು ಮಾಡುವ ಮೂಲಕ ಪ್ರಸಿದ್ಧರಾಗುತ್ತೇವೆ. ಈ ಜಾಹೀರಾತುಗಳನ್ನು ನಿಲ್ಲಿಸಲು ನಾವು ಒತ್ತಾಯಿಸುತ್ತೇವೆ. ಈ ಅಪ್ಲಿಕೇಶನ್‌ಗಳು ಕಾನೂನುಬಾಹಿರ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಬಾಕ್ಸ್ ಆಫೀಸ್ ಧೂಳೆಬ್ಬಿಸ್ತಿದೆ 'ಗದರ್-2': ಶಾರುಖ್ ಖಾನ್ ಚಿತ್ರ ಪಠಾಣ್ ದಾಖಲೆ ಉಡೀಸ್
ಶಾರುಖ್ ಖಾನ್ ಹೊರತಾಗಿ, ನಾವು ಅಜಯ್ ದೇವಗನ್, ರಾಕುಲ್ ಪ್ರೀತ್ ಸಿಂಗ್, ಪ್ರಕಾಶ್ ರಾಜ್, ಅಣ್ಣು ಕಪೂರ್, ರಾಣಾ ದಗ್ಗುಬಾಟಿ ಮತ್ತು ಆನ್‌ಲೈನ್ ಆಟವನ್ನು ಉತ್ತೇಜಿಸುವ ಕ್ರಿಕೆಟಿಗರನ್ನು ವಿರೋಧಿಸುತ್ತೇವೆ. ಈ ತಾರೆಯರ ಮನೆಗಳ ಹೊರಗೆ ನಾವು ಪ್ರತಿಭಟನೆ ಮಾಡಲು ಬಯಸಿದ್ದೇವೆ, ಆದರೆ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆಯೇ ಪೊಲೀಸ್ ಭದ್ರತೆ ಇಷ್ಟೆಲ್ಲಾ ನೀಡುತ್ತಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈನಲ್ಲಿ ಮೊದಲೇ ಪೊಲೀಸರ ಕೊರತೆ ಇದೆ. ಇರೋ ಪೊಲೀಸರನ್ನು ಇಂಥವರ ರಕ್ಷಣೆಗೆ ಇಟ್ಟರೆ ದೆಹಲಿಯ ಕಥೆಯೇನು ಕೇಳುತ್ತಿದ್ದಾರೆ.