ಹಿಮಾಚಲ ಪ್ರದೇಶದಿಂದ ಸ್ಪರ್ಧಿಸಲ್ಲ. ಅದು ತುಂಬಾ ಚಿಕ್ಕ ಪ್ರದೇಶ ಎಂದಿದ್ದ ನಟಿ ಕಂಗನಾ ರಣಾವತ್ ಹಳೆಯ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ನಟಿ ಹೇಳಿದ್ದೇನು?
ಲೋಕಸಭಾ ಕ್ಷೇತ್ರಕ್ಕೆ ಮೊದಲ ನಾಲ್ಕು ಪಟ್ಟಿಯ ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿತ್ತು. ಏಕೆಂದರೆ ಇದಾಗಲೇ ಅವರು ಲೋಕಸಭೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಮಥುರಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಟಿ, ಕೃಷ್ಣ ಕಣ್ಣುಬಿಟ್ಟರೆ ತಮಗೆ ಟಿಕೆಟ್ ಸಿಗಲಿದೆ ಎಂದಿದ್ದರು. ಅದರಂತೆಯೇ, ನಿನ್ನೆ ಅಂದರೆ ಮಾರ್ಚ್ 25ರಂದು ಬಿಜೆಪಿ 5ನೇ ಪಟ್ಟಿ ಘೋಷಣೆ ಮಾಡಿದ್ದು, ಅದರಲ್ಲಿ ನಟಿ ಕಂಗನಾ ಹೆಸರು ಇದೆ. ಇವರು ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲಿದ್ದಾರೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ನಡಿ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು, ಮಂಡಿ ಪ್ರವಾಸ ಕೈಗೊಂಡಿದ್ದಾರೆ. ಮಂಡಿ ಕ್ಷೇತ್ರದ ಮುಖಂಡರ ಜೊತೆ ಭೇಟಿ, ಸಭೆ ನಡೆಯುತ್ತಿದೆ.
ಇದೇ ವೇಳೆ, ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಂಗನಾ, ಹೋಳಿ ಶುಭಾಶಯ ಕೋರುವ ಮೂಲಕ ರಾಜಕೀಯ ಪ್ರವೇಶದ ಕುರಿತೂ ಮಾತನಾಡಿದ್ದಾರೆ. ನನಗೆ ಸವಾಲುಗಳು ಹೊಸದೇನಲ್ಲ. ನನ್ನ ಜನ್ಮಸ್ಥಳ ನನ್ನನ್ನು ಮರಳಿ ಕರೆದಿರುವುದು ನನ್ನ ಅದೃಷ್ಟ. ನಾನು ಚಿಕ್ಕ ವಯಸ್ಸಿನಲ್ಲಿಯೇ ವೃತ್ತಿಗಾಗಿ ಮನೆ ತೊರೆದಿದ್ದೇನೆ ಮತ್ತು ಅನೇಕ ಅಡೆತಡೆಗಳನ್ನು ಎದುರಿಸಿದ್ದೇನೆ. ಅದಕ್ಕಾಗಿಯೇ ದೇವರು ನನಗೆ ನನ್ನ ಜನರ ಸೇವೆ ಮಾಡುವ ಶಕ್ತಿಯನ್ನು ಕೊಟ್ಟಿದ್ದಾನೆ. ಮಂಡಿಯ ಜನರು ನನ್ನನ್ನು ಆಯ್ಕೆ ಮಾಡಿದರೆ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ. ನಾನು ಅತ್ಯಂತ ಭಾವುಕಳಾಗಿದ್ದೇನೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಭಾವನಾತ್ಮಕ ಕ್ಷಣವಾಗಿದೆ ಎಂದಿದ್ದಾರೆ.
ಸದ್ಗುರು ನೋಡಿ ದೇವರೇ ಕುಸಿದು ಬಿದ್ದಂತೆ ಭಾಸವಾಯ್ತು: ಕಂಗನಾ ಭಾವುಕ- ಆರೋಗ್ಯದ ಮಾಹಿತಿ ನೀಡಿದ ಪುತ್ರಿ
ಆದರೆ ಇದೇ ವೇಳೆ ನಟಿಯ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ಅದೇನೆಂದರೆ, ''ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ನನಗಿಲ್ಲ. ನನ್ನ ಮುಂಬರುವ ಚಿತ್ರಗಳ ಶೂಟಿಂಗ್‌ನಲ್ಲಿ ನಾನು ಬ್ಯುಸಿಯಾಗಿದ್ದೇನೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇದೆ ಆದರೆ ಕಲಾವಿದೆಯಾಗಿ ಮಾತ್ರ. ನಾನೊಬ್ಬ ಯಶಸ್ವಿ ಕಲಾವಿದೆ” ಎಂದು ನಟಿ ಎರಡು ವರ್ಷಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದರು.
ಅದಕ್ಕಿಂತಲೂ ಮುಖ್ಯವಾಗಿ ನಟಿಯ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ನಟಿ ಸಕತ್ ಟ್ರೋಲ್ ಆಗುತ್ತಿದ್ದಾರೆ. ಬಿಜೆಪಿಗೆ ಮಂಡಿ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾದ ಕೆಲವೇ ಗಂಟೆಗಳ ನಂತರ, ಕಂಗನಾ ಅವರ ಹಳೆಯ ಟ್ವೀಟ್ ರೆಡ್ಡಿಟ್‌ನಲ್ಲಿ ವೈರಲ್ ಆಗಿದೆ, ಇದರಲ್ಲಿ ನಟಿ ಕಂಗನಾ ಅವರು, ತುಂಬಾ ಕ್ಲಿಷ್ಟಕರ ಎನಿಸಿರುವ ರಾಜ್ಯದಿಂದ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಬಯಸುವುದಾಗಿ ಹೇಳಿದ್ದಾರೆ. 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನನಗೆ ಗ್ವಾಲಿಯರ್ ಆಯ್ಕೆಯನ್ನು ನೀಡಲಾಗಿತ್ತು. ಹಿಮಾಚಲ ಪ್ರದೇಶದ ಜನಸಂಖ್ಯೆ ಕೇವಲ 60ರಿಂದ 70 ಲಕ್ಷದಷ್ಟು ಮಾತ್ರ. ಇಲ್ಲಿ ಬಡತನ-ಅಪರಾಧ ಯಾವುದೂ ಇಲ್ಲ. ನಾನು ರಾಜಕೀಯಕ್ಕೆ ಬಂದರೆ, ಸಂಕೀರ್ಣತೆಗಳನ್ನು ಹೊಂದಿರುವ ರಾಜ್ಯವನ್ನು ನಾನು ಬಯಸುತ್ತೇನೆ. ನಾನು ಆ ಕ್ಷೇತ್ರದಲ್ಲೂ ರಾಣಿಯಾಗುತ್ತೇನೆ. ನಿಮ್ಮಂಥ ಚಿಕ್ಕವರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಇದೀಗ ಹಿಮಾಚಲದಿಂದಲೇ ಸ್ಪರ್ಧಿಸುತ್ತಿರುವುದರಿಂದ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ.
ಕೋತಿಗಳ ಮದ್ವೆ ಫೋಟೋ ಶೇರ್ ಮಾಡಿದ ರಾಖಿ ಸಾವಂತ್: ನಟಿ ಪ್ರಕಾರ ಇವರು ಯಾರು ಗೊತ್ತಾ?