ಸಂಗೀತ ಬಾರದವರಿಗೂ ಹಾಡಲು ಕಲಿಸಿದ ಗಾಯಕ ಕಿಶೋರ್ ಕುಮಾರ್ ಹುಟ್ಟಿದಬ್ಬ

By Suvarna NewsFirst Published Aug 4, 2023, 10:37 AM IST
Highlights

ಕೆಲವರ ದನಿಯಲ್ಲಿ ಒಂದು ರೀತಿಯ ಅಧ್ಯಾತ್ಮದ ಮಿಳಿತವಿರುತ್ತದೆ. ಅಂಥವರ ಹಾಡು ಕೇಳಿದರೆ ಸಾಕು, ನಾವು ಇನ್ನೆಲ್ಲೋ ತೇಲಿ ಹೋಗುತ್ತೇವೆ. ನಮ್ಮನ್ನೇ ನಾವು ಮರೆಯುವಂಥ ಹಾಡು ಹಾಡಿದ ಕಿಶೋರ್ ಕುಮಾರ್‌ Birth Day ಇವತ್ತು. 

- ವಿನಯ್ ಶಿವಮೊಗ್ಗ

'ಆನೇವಾಲ ಪಲ್ ಜಾನೆವಾಲ ಹೈ….. ಹೋಸಕೆ ತೋ ಇಸ್ಮೆ ಜಿಂದಗೀ ಬಿತಾದೋ ಪಲ್ ಜೋ ಏ ಜಾನೆವಾಲ ಹೈ.'  ಇದು ಬರೀ ಒಂದು ಸಿನಿಮಾ ಹಾಡಲ್ಲವೆಂದು ನನ್ನ ಅನಿಸಿಕೆ. ಪರಮಾರ್ಥ ಚಿಂತನೆಯ ತತ್ವ ಸಾರವನ್ನು ಸರಾಗವಾಗಿ ಕಟ್ಟಿಕೊಟ್ಟು ಕೇಳುಗನ ಮನಸಿಗೆ ಸಾಂತ್ವನ ಕೊಟ್ಟ ಹಾಡು ಬರೀ ಹಾಡು ಹೇಗಾದೀತು?
 
ಕೆಲವರ ದನಿಯಲ್ಲೇ ಒಂದು ತರದ inbuilt ಅಧ್ಯಾತ್ಮವಿರುತ್ತದೆ. ಈ ಕಿಶೋರ್ ಕುಮಾರ್ ಎಂಬ ಹುಚ್ಚು ಕಲಾವಿದ ಭಾರತದ ಉದ್ದಗಲ ಜನಸಾಮಾನ್ಯರನ್ನು ಆವರಿಸಿದ ರೀತಿ ನನಗೆ ಇನ್ನೂ ಒಂದು ತರದ mystery!ಸಂಗೀತವೇ ಗೊತ್ತಿರದ, ಹಾಡಲು ಬಾರದ ಅದೆೊಷ್ಟೋ ಜನ ಕಿಶೋರ್ ಕುಮಾರ್ ಹಾಡುಗಳನ್ನು ಹಾಡಿ ಹಗುರಾದ ಉದಾಹರಣೆ ಸಾಕಷ್ಟು ಉಂಟು! ಹಿಂದಿ ಬರದ ಅದೆಷ್ಟೋ ಮಂದಿಯ ನಾಲಿಗೆಯಲ್ಲೂ ಕಿಶೋರ್ ಹಾಡುಗಳು ನಲಿದಾಡುತ್ತಿರುವುದು ಸಾಮಾನ್ಯದ ಸಂಗತಿಯಲ್ಲ. 
 
ಕಿಶೋರ್ ಕುಮಾರ್ ಒಂದು ತರಹ ವಿಲಕ್ಷಣ ಸ್ವಾಭಾವದ ಹುಟ್ಟು ಕಲಾವಿದ! ತನ್ನ ಮನಸ್ಸಿಗೆ ತೋಚಿಸಿದಂತೆ ಬದುಕಿದವ. ಅವನ ಪ್ರೀತಿ, ನಟನೆ, ಮದುವೆ, ನಖರಾ ಎಲ್ಲವೂ ವಿಶೇಷವೆ! ಆದರೆ ಅವನ ದನಿಯ ಮಾರ್ದವತೆ, ಆದರ ಆಳ, ಗಂಭೀರವಾದ ಶಾರೀರ, ಭಾವ ಪಕ್ವವಾದ ಹಾಡುವ ಶೈಲಿಗೆ ಕಿಶೋರಿಗೆ ಕಿಶೋರ್ ಮಾತ್ರ ಸಾಟಿ. 

ತುರ್ತು ಪರಿಸ್ಥಿತಿ ಸಮಯದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉತ್ತೇಜಿಸುವ ಹಾಡನ್ನು ಹೇಳಲು ಕಿಶೋರ್ ಕುಮಾರ್‌ ಅವರನ್ನು ಕೇಳಿ ಕೊಂಡಿತ್ತು. ಆದರೆ, ಅದನ್ನು ಕಿಶೋರ್ ಕುಮಾರ್ ವಿರೋಧಿಸಿದ್ದರು. ಕಿಶೋರ್ ಕುಮಾರ್ ಹಾಡಿದ ಹಾಡುಗಳನ್ನು ಆಲ್ ಇಂಡಿಯಾ ರೇಡಿಯೋದಲ್ಲಿ ನಿಷೇಧಿಸಲಾಯಿತು. ಕಿಶೋರ್ ಕುಮಾರ್ ಅವರು ಲತಾ ಮಂಗೇಶ್ಕರ್ ಅವರನ್ನು ತುಂಬಾ ಆಶ್ಚರ್ಯಗೊಳಿಸುತ್ತಿದ್ದರು. ಅನೇಕ ಬಾರಿ ಅವರು ಹಾಡನ್ನು ಬೇರೆ ರೀತಿ ಹಾಡಿ ರೆಕಾರ್ಡಿಂಗ್‌ ಮಾಡುವಾಗ  ಲತಾ ಜೀ ಅವರಿಗೆ ಕೇಳಿಸುತ್ತಿದ್ದರು. ಅನೇಕ ಬಾರಿ ಲತಾ ಜೀ ಅವರು ತಮ್ಮ ಹಾಡಿನ ಭಾಗವನ್ನು ಹಾಡಿದ ನಂತರ ಸ್ಟುಡಿಯೊದಿಂದ ಬೇಗನೆ ಹೊರಡುತ್ತಿದ್ದರು.

ತುರ್ತುಪರಿಸ್ಥಿತಿಯಲ್ಲಿ ಈ ಗಾಯಕನನ್ನು ಬ್ಯಾನ್ ಮಾಡಿದ್ದ ಸರ್ಕಾರ!
 
ಕಾಲಿಗೆ ರೆಕ್ಕೆ ಕಟ್ಟಿಕೊಂಡು ಓಡುತ್ತಿರುವ ಕಾಲಪುರುಷ ಇಲ್ಲಿ ಯಾವುದನ್ನೂ ಶಾಶ್ವತವಾಗಿ ಇರಗೊಡುವುದಿಲ್ಲ! ಅದರೂ ಅವನ ಕಣ್ಣ್ ತಪ್ಪಿಸಿ ಇಂತಹ ಗಾನಗಂಧರ್ವರು ಸಂಗೀತವೆಂಬ ಜೀವನಪ್ರೀತಿಯ ಮೂಲಕ ಬೆಚ್ಚಗೆ ನಮ್ಮ ಮನಸ್ಸಿಗೆ ಕಚಗುಳಿ ಇಡುತ್ತಲೇ ಇರುತ್ತಾರೆ .  ಅಂದಹಾಗೆ ಇವತ್ತು ಈ ಕಿಶೋರ್ ಕುಮಾರ್ ಎಂಬ ಮಹಾನ್ ಕಲಾವಿದನ 94ನೇ ಹುಟ್ಟುಹಬ್ಬ.  ನಮ್ಮ ಜೀವನದ ಸಹಜವಾದ ಹತ್ತು ಹಲವು ಭಾವನಗಳಿಗೆ ದನಿಯಾಗಿ ಹೆಗಲುಕೊಟ್ಟ  ಭಾರತದ most celebrated playback singerಗೆ ಒಂದು ಪ್ರೀತಿಯ ನಮಸ್ಕಾರ. 

click me!