ಕರೀನಾ ಕಪೂರ್ ಅವರನ್ನೇ ಹೋಲುವ ಯುವತಿಯೊಬ್ಬರು, ಕರೀನಾರಂತೆ ಡ್ರೆಸ್ ಮಾಡಿ ಅವರಂತೆಯೇ ಡಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ವಿಶ್ವದಲ್ಲಿ ಒಂದೇ ರೀತಿಯವರು ಏಳು ಮಂದಿ ಇರುತ್ತಾರೆ ಎನ್ನುವುದು ಮಾಮೂಲು ಮಾತು. ಅದು ನಿಜವೇ ಎಂದು ಸಾಬೀತಾಗಲು ಕೆಲವೊಮ್ಮೆ ಒಂದೇ ರೀತಿ ಇರುವ ಹಲವರನ್ನು ಕಾಣುತ್ತೇವೆ. ಅವಳಿ ಮಕ್ಕಳನ್ನು ಹೊರತುಪಡಿಸಿದರೂ ಕೆಲವು ಸಲ ಎಲ್ಲಿಯೋ ಯಾರನ್ನೋ ನೋಡಿದಾಗ ಇವರು ಅವರೇನಾ ಎನ್ನುವಷ್ಟು ಡೌಟ್ ಬರುವುದೂ ಸಹಜ. ಅದರಲ್ಲಿಯೂ ಸಿನಿಮಾ ತಾರೆಯರು ಎಂದರೆ ಕೇಳಬೇಕೆ? ಇದಾಗಲೇ ಹಲವಾರು ಮಂದಿ ನಟ ನಟಿಯರು (Actors) ಒಂದೇ ರೀತಿ ಇರುವುದನ್ನು ನೋಡಿದ್ದೇವೆ. ಸಿನಿಮಾ ತಾರೆಯರನ್ನು ಯಾರಾದರೊಬ್ಬರು ಸ್ವಲ್ಪ ಹೋಲುತ್ತಿದ್ದಾರೆ ಎಂದರೆ ಸಾಕು, ಅವರಂತೆಯೇ ಹೇರ್ಸ್ಟೈಲ್ (HairStyle), ಮೇಕಪ್, ಡ್ರೆಸ್ ಮಾಡಿಕೊಂಡರಂತೂ ಮುಗಿದೇ ಹೋಯ್ತು. ಥೇಟ್ ಅವರೇ ಇವರಂತೆ ಕಾಣಲು ಶುರುವಾಗುತ್ತಾರೆ. ಇನ್ನು ಕೆಲವರು ತಾವು ನಟ ನಟಿಯರನ್ನು ಹೋಲುತ್ತಿದ್ದೇವೆ ಎಂದು ತಿಳಿದ ತಕ್ಷಣ ಅವರ ಧ್ವನಿ, ಶೈಲಿಯನ್ನೇ ಅನುಸರಿಸಿ ಜನರನ್ನು ಮರುಳು ಮಾಡುವುದೂ ಇದೆ. ಇದಾಗಲೇ ಸೂಪರ್ಸ್ಟಾರ್ಸ್ಗಳಾದ ಡಾ.ರಾಜ್ಕುಮಾರ್, ರಜನೀಯಕಾಂತ್ ಸೇರಿದಂತೆ ಹಲವು ಚಿತ್ರನಟರನ್ನು ಹೋಲುವವರನ್ನು ನೋಡಿದ್ದೇವೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆಯಿಂದ ಹಿಡಿದು ಐಶ್ವರ್ಯ ರೈ ಬಚ್ಚನ್, ಅಮಿತಾಭ್ ಬಚ್ಚನ್, ಆಲಿಯಾ ಭಟ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಜಯ್ ದೇವಗನ್, ಅನುಷ್ಕಾ ಶರ್ಮಾ ಸೇರಿದಂತೆ ಅನೇಕ ತಾರೆಯರು ಲುಕ್‌ಲೈಕ್‌ಗಳನ್ನು ಹೊಂದಿದ್ದಾರೆ, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಬಾಲಿವುಡ್ ಸೆಲೆಬ್ರಿಟಿಗಳ ಈ ಲುಕ್‌ಗಳನ್ನು ಅಭಿಮಾನಿಗಳು ಸಹ ಇಷ್ಟಪಡುತ್ತಾರೆ. ಆದರೆ ಇದೀಗ ಅಂಥದ್ದೇ ಮತ್ತೊಂದು ಹೋಲಿಕೆ ಕಂಡುಬಂದಿದ್ದು, ಆಕೆಯ ಹೆಸರು ಅಸ್ಮಿತಾ ಗುಪ್ತಾ. ನೋಡಲು ಥೇಟ್ ಕರೀನಾ ಕಪೂರ್ ಅವರಂತೆಯೇ ಇದ್ದಾರೆ ಅಸ್ಮಿತಾ. ಅದರಲ್ಲಿಯೂ ಅಸ್ಮಿತಾ (Asmitha) ಸ್ವತಃ ಕರೀನಾ ಅವರ ದೊಡ್ಡ ಅಭಿಮಾನಿ ಮತ್ತು Instagram ಪ್ರಭಾವಿ. ಇನ್ನು ಕೇಳಬೇಕೆ? ಅಸ್ಮಿತಾ, ಕರೀನಾ ಅವರ ಹಾಡುಗಳ ವಿಡಿಯೋಗಳನ್ನು ಕರೀನಾ ರೀತಿಯಲ್ಲಿಯೇ ಮಾಡಿ ಅದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅವರಿಗೂ ದೊಡ್ಡ ಫ್ಯಾನ್ಸ್ (Fans) ಇದ್ದು, ಇನ್ನು ಕರೀನಾರಂತೆಯೇ ಕಾಣುವ ಹಿನ್ನೆಲೆಯಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಮಾತ್ರವಲ್ಲದೇ ಮೊದಲ ಬಾರಿಗೆ ನೋಡಿದರಂತೂ ಈಕೆ ಕರೀನಾ (Kareena Kapoor) ಅಲ್ಲ ಎಂದು ಹೇಳುವುದೇ ಕಷ್ಟ ಎನ್ನುವಂತಿದೆ. ಅಸ್ಮಿತಾ ಅವರ ವಿಡಿಯೋಗಳ ಕಮೆಂಟ್ಗಳಲ್ಲಿ ಹಲವು ಕರೀನಾ ಕಪೂರ್ ಅವರ ಕುರಿತಾಗಿಯೇ ಇರುತ್ತವೆ.
ಕೆಲ ವರ್ಷಗಳಿಂದ ಅಸ್ಮಿತಾ ವಿಡಿಯೋಗಳನ್ನು ಮಾಡುತ್ತಿದ್ದರೂ ಇದೀಗ ಅದು ಭಾರಿ ವೈರಲ್ ಆಗಿದ್ದು, ಅವರು ಫೇಮಸ್ ಆಗುತ್ತಿದ್ದಾರೆ. ಅವರು ಫೇಮಸ್ ಆಗಲು ಕಾರಣ ಕರೀನಾ ಅವರ ಲುಕ್ ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ಈಗ ಕಮೆಂಟಿಗರು ಸೈಫ್ ಅಲಿ ಖಾನ್ (Saif Ali Khan) ಅವರ ಕಾಲೆಳೆಯಲು ಶುರು ಮಾಡಿದ್ದಾರೆ. ಅಸ್ಮಿತಾ ಅವರನ್ನೇನಾದರೂ ಸೈಫ್ ಅಲಿ ಎದುರಿಗೆ ನೋಡಿದರೆ ಅಸ್ಮಿತಾ ಕಥೆ ಅಷ್ಟೇ ಎಂದು ಕಾಲೆಳೆಯುತ್ತಿದ್ದಾರೆ. ಕರೀನಾ ಪತಿ ಸೈಫ್ ಅಲಿ ಖಾನ್ ಕೂಡ ಗೊಂದಲಕ್ಕೊಳಗಾಗುವ ಎಲ್ಲಾ ಸಾಧ್ಯತೆ ಇದೆ ಎಂದಿರುವ ಟ್ರೋಲಿಗರು, ಕರೀನಾಗೆ ಹೇಗೋ ವಯಸ್ಸಾಗಿದೆ ಎಂದು ಮತ್ತಷ್ಟು ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಸೈಫ್ ಅಲಿ ಅವರು, ತಮ್ಮ ಮೊದಲ ಪತ್ನಿ ಅಮೃತಾ ಸಿಂಗ್ ಅವರನ್ನು ಮದುವೆಯಾಗುವ ಸಮಯದಲ್ಲಿ ಕರೀನಾ ಇನ್ನೂ ಬಾಲಕಿಯಾಗಿದ್ದರು. ತಮ್ಮ ಮದುವೆಯ ಸಮಯದಲ್ಲಿ ಬಂದಿದ್ದ ಕರೀನಾ ಅವರನ್ನು ಮಗಳೇ ಎಂದು ಕರೆದಿದ್ದರು. ನಂತರ ಪತ್ನಿಯನ್ನಾಗಿ ಮಾಡಿಕೊಂಡರು. ಇದನ್ನೂ ಉಲ್ಲೇಖಿಸಿ ಟ್ರೋಲ್ ಮಾಡುತ್ತಿರುವ ನೆಟ್ಟಿಗರು, ಅಸ್ಮಿತಾ ಅವರೇ ಪ್ಲೀಸ್ ಸೈಫ್ ಅಲಿ ಮುಂದೆ ಬರಬೇಡಿ ಎನ್ನುತ್ತಿದ್ದಾರೆ.
ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್ ಸ್ಟಾರ್!
ಅಂದಹಾಗೆ ಅಸ್ಮಿತಾ ದೆಹಲಿಯ ನಿವಾಸಿ. ಅವರು ಬಜರಂಗಿ ಭಾಯಿಜಾನ್ ಚಿತ್ರದ ಚಿಕನ್ ಕುಕ್ ಡು ಕು... ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಅಸ್ಮಿತಾ ಅವರ ಇನ್‌ಸ್ಟಾಗ್ರಾಮ್ ಅನ್ನು ನೀವು ನೋಡಿದರೆ, ಅವರು ಕರೀನಾ ಅವರ ಡ್ರೆಸ್ ಅಪ್ ಮತ್ತು ಅವರ ಸ್ಟೈಲ್ ಅನ್ನು ಅನುಸರಿಸುತ್ತಿದ್ದಾರೆಂದು ನೋಡಬಹುದು. ಇದೀಗ ಕರೀನಾ ಕಪೂರ್ ಅವರ ಹೊಸ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ (trending) ಆಗಿದೆ. ಕರೀನಾ ಅವರಂತೆ ಕಣ್ಣು ಹೊಡೆಯುವುದರಲ್ಲಿ ಮತ್ತು ಅವರಂತೆ ಸ್ಟೈಲ್ ಮಾಡುವುದರಲ್ಲಿ ಅಸ್ಮಿತಾ ಗುಪ್ತಾ ಹಿಂದೆ ಬಿದ್ದಿಲ್ಲ. ಅವರ ಸ್ಟೈಲ್ ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಕರೀನಾ ಕಪೂರ್ ಕೊನೆಯದಾಗಿ 2022 ರ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿದ್ದರು. ಆದಾಗ್ಯೂ, ಚಿತ್ರವು ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಫ್ಲಾಪ್ ಆಯಿತು. ಇನ್ನು ಸದ್ಯ ಕರೀನಾ ಅವರ ಕೆಲಸದ ವಿಷಯ ಹೇಳುವುದಾದರೆ, ಅವರು ಹನ್ಸಲ್ ಮೆಹ್ತಾ ಅವರ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ಎಂಬ ವೆಬ್ ಸರಣಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ವೆಬ್ ಸರಣಿಯ ಮೂಲಕ ಕರೀನಾ ಒಟಿಟಿಗೆ (OTT) ಪದಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕರೀನಾ ಕೆಲಸಕ್ಕೆ ಹೋಗಲಿ ಎಂದ ಸೈಫ್ ಅಲಿ- ಅಮ್ಮ ಶರ್ಮಿಳಾ ಟ್ಯಾಗೋರ್ ಹೇಳಿದ್ದೇನು?