ಅಯೋಧ್ಯೆ ಭೇಟಿ ಬೆನ್ನಲ್ಲೇ ನಟಿ ಕಂಗನಾ ರಣಾವತ್ ಅವರು ಎಮರ್ಜೆನ್ಸಿ ಬಿಡುಗಡೆಗೆ ಡೇಟ್ ಅನೌನ್ಸ್ ಮಾಡಿದ್ದಾರೆ. ಚಿತ್ರ ಬಿಡುಗಡೆ ಎಂದು?
ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್ ಆಗಿರೋ ನಟಿ ಕಂಗನಾ ರಣಾವತ್. ನೇರ ದಿಟ್ಟ ಮಾತಿನಿಂದ ಒಂದು ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗ್ತಿರೋ ನಟಿ ಕಂಗನಾ ಅವರ ನಟನಾ ಕೌಶಲಕ್ಕೆ ಅವರೇ ಸಾಟಿ. ಇದೀಗ ಅವರ ಬಹು ನಿರೀಕ್ಷಿತ ಹಾಗೆಯೇ ಬಹು ಚರ್ಚಿತ ಎಮರ್ಜೆನ್ಸಿ ಚಿತ್ರದ ಬಿಡುಗಡೆಯ ಡೇಟ್ ಫಿಕ್ಸ್ ಆಗಿದೆ. ಕಳೆದ ಎರಡು ವರ್ಷಗಳಿಂದ ಬಹಳ ಚರ್ಚೆಗೆ ಗ್ರಾಸವಾಗಿರೋ ಈ ಚಿತ್ರದ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಇದಾಗಲೇ ಕೆಲವು ಸಲ ಈ ಚಿತ್ರದ ಬಿಡುಗಡೆ ದಿನಾಂಕ ಒಂದಿಲ್ಲೊಂದು ಕಾರಣಗಳಿಂದ ಮುಂದೆ ಹೋಗುತ್ತಲೇ ಇದೆ. ಇದೀಗ ಕೊನೆಗೂ ಡೇಟ್ ಫಿಕ್ಸ್ ಆಗಿದೆ. ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುವ ಕಂಗನಾ ರಣಾವತ್ (Kangana Ranaut) ಅವರ ಈ ಚಿತ್ರವೂ ಸಕತ್ ಸುದ್ದಿ ಮಾಡುತ್ತಲೇ ಇದೆ. ಚಿತ್ರದ ಆರಂಭದ ಕುರಿತು ಚರ್ಚೆ ಶುರುವಾದಾಗಿನಿಂದಲೂ ಈ ಚಿತ್ರ ಹಾಗೂ ಕಂಗನಾ ಇಬ್ಬರೂ ಸಕತ್ ಸುದ್ದಿಯಲ್ಲಿದ್ದಾರೆ.
ಅಂದಹಾಗೆ ಚಿತ್ರವು, ಜೂನ್ 14ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುತ್ತದೆ ಈ ಸಿನಿಮಾ. 1975ರಲ್ಲಿ ತುರ್ತು ಪರಿಸ್ಥಿತಿ ( Emergency) ಘೋಷಣೆ ಮಾಡಿದಾಗ ದೇಶದಲ್ಲಿ ಆಗಿರುವ ಅಲ್ಲೋಲ ಕಲ್ಲೋಲಗಳೇನು? ದೇಶ ಯಾವ ಸ್ಥಿತಿಗೆ ತಲುಪಿತ್ತು ಈ ಕುರಿತು ಎಳೆಎಳೆಯಾಗಿ ಚಿತ್ರ ಬಿಚ್ಚಿಟ್ಟಿರುವುದಾಗಿ ನಟಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ತುರ್ತು ಪರಿಸ್ಥಿತಿಯು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಈ ಹಿಂದೆ ನಟಿ ಹೇಳಿದ್ದರು. ಕಂಗನಾ ಥೇಟ್ ಇಂದಿರಾ ಗಾಂಧಿಯವರಂತೆ ಮೇಕಪ್ ಮಾಡಿಕೊಂಡು, ಅವರಂತೆಯೇ ಟ್ರೇಲರ್ ಕಳೆದ ವರ್ಷವೇ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದರು. ಆದರೆ ಬಿಡುಗಡೆ ದಿನಾಂಕ ಮಾತ್ರ ಮುಂದೂಡುತ್ತಲೇ ಹೋಗುತ್ತಿದೆ.
ಬಾಲರಾಮನ ಪ್ರಾಣಪ್ರತಿಷ್ಠೆಯಾಗ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ನಟಿ ಕಂಗನಾ ರಣಾವತ್: ವಿಡಿಯೋ ವೈರಲ್
ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ 48 ವರ್ಷಗಳ ನಂತರ ಅದೇ ದಿನದಂದು ಈ ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇದೊಂದು ನಿರ್ಣಾಯಕ ಕಥೆಯಾಗಿದ್ದು, ಸಿನಿಮಾ ಆರಂಭಿಸಿದ್ದಕ್ಕಾಗಿ ಪ್ರತಿಭಾವಂತ ನಟರಾದ ದಿವಂಗತ ಸತೀಶ್ ಜಿ, ಅನುಪಮ್ ಜಿ, ಶ್ರೇಯಸ್, ಮಹಿಮಾ ಮತ್ತು ಮಿಲಿಂದ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದ ಇತಿಹಾಸದಿಂದ ಈ ಅಸಾಧಾರಣ ಸಂಚಿಕೆಯನ್ನು ದೊಡ್ಡ ಪರದೆಯ ಮೇಲೆ ತರಲು ಉತ್ಸುಕಳಾಗಿದ್ದೇನೆ ಜೈ ಹಿಂದ್ ಎಂದು ಕಂಗನಾ ಈ ಹಿಂದೆ ಹೇಳಿದ್ದರು. ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಎಮರ್ಜೆನ್ಸಿ ಸಿನಿಮಾ ಮೂಲಕ ಕಂಗನಾ ರಣಾವತ್ ನಿರ್ದೇಶಕರಾಗಿದ್ದಾರೆ. ಈಗ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಸಾರ್ವಜನಿಕರು ಸರ್ಕಾರದ ತುರ್ತು ನಿರ್ಧಾರವನ್ನು ವಿರೋಧಿಸುವುದನ್ನು ನೋಡಬಹುದು. ದೇಶದಲ್ಲಿ ತುರ್ತುಪರಿಸ್ಥಿತಿಯ ಜಾರಿಯ ಬಗ್ಗೆ ತಿಳಿಸುತ್ತಿರುವ ಪತ್ರಿಕೆಗಳ ಸುದ್ದಿಗಳ ಝಲಕ್ ಟೀಸರ್ನಲ್ಲಿದೆ. ನಂತರ, ಅನುಪಮ್ ಖೇರ್ ಜೈಲಿನ ಕಂಬಿಗಳ ಹಿಂದೆ ಕಾಣಿಸಿಕೊಂಡಿದ್ದಾರೆ. ಇದು ವಿರೋಧ ಪಕ್ಷದ ಜನರನ್ನು ಬಂಧಿಸುವುದನ್ನು ಸೂಚಿಸಿದೆ. ವಿರೋಧ ಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಇದು ನಮ್ಮದಲ್ಲ, ಈ ದೇಶದ ಸಾವು ಎಂದು ಅನುಪಮ್ ಖೇರ್ ಹೇಳುತ್ತಿದ್ದಾರೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ದೃಶ್ಯ ಟೀಸರ್‌ನಲ್ಲಿ ನೋಡಬಹುದು.
ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಿ ದೇವಾಲಯ ಶುಚಿಗೊಳಿಸಿದ ನಟಿ ಕಂಗನಾ: ನೆಟ್ಟಿಗರು ಏನಂದ್ರು?