ಬಾಲರಾಮನ ಪ್ರಾಣಪ್ರತಿಷ್ಠೆಯಾಗ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ್ದಾರೆ ನಟಿ ಕಂಗನಾ ರಣಾವತ್: ಇದರ ವಿಡಿಯೋ ವೈರಲ್ ಆಗಿದೆ.
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಯಿತು. ವಿವಿಧ ಕ್ಷೇತ್ರಗಳ, ದೇಶ-ವಿದೇಶಗಳ ಗಣ್ಯಾತಿಗಣ್ಯರು ಖುದ್ದು ಅಯೋಧ್ಯೆಯಲ್ಲಿದ್ದು ಈ ಅಭೂತಪೂರ್ವ ಕ್ಷಣವನ್ನು ಕಣ್ತುಂಬಿಸಿಕೊಂಡರು. ಒಂದು ದಿನ ಮುಂಚಿತವಾಗಿಯೇ ಅಯೋಧ್ಯೆಗೆ ಭೇಟಿ ಕೊಟ್ಟಿದ್ದ ನಟಿ ಕಂಗನಾ ರಣಾವತ್ (Kangana Ranaut) ಹನುಮಾನ್ ಯಜ್ಞದಲ್ಲಿ ಭಾಗಿಯಾಗಿದ್ದರು. ಹಣೆಗೆ ಬಿಂದಿ ಇಟ್ಟು ಆಭರಣವನ್ನು ಧರಿಸಿ ಅಪ್ಪಟ ಭಾರತೀಯ ನಾರಿಯಾಗಿ ಕಾಣಿಸಿಕೊಂಡಿದ್ದ ನಟಿ, ಪೂಜೆಯ ಬಳಿಕ ನಟಿ ದೇವಾಲಯದ ಆವರಣವನ್ನು ಶುಚಿಗೊಳಿಸಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ಸಾಧ್ಯವಾಗುವುದು ತಮ್ಮ ಹಿಂದಿನ ಜೀವನದ ಕರ್ಮದ ಫಲ ಎಂದಿದ್ದಾರೆ. ಈ ಮಹತ್ವದ ಐತಿಹಾಸಿಕ ಕ್ಷಣವನ್ನು ಇಡೀ ವಿಶ್ವ ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಇಡೀ ರಾಷ್ಟ್ರಕ್ಕಿದು ಅದೃಷ್ಟದ ಕ್ಷಣ ಎಂದು ಕಂಗನಾ ಹೇಳಿದ್ದರು. ಅಯೋಧ್ಯೆಯ ದರ್ಶನ ಪಡೆಯಲು ಹಲವು ಜನ್ಮಗಳ ಪುಣ್ಯ ಮಾಡಿರಬೇಕು ಎಂದಿದ್ದರು.
ಪ್ರಾಣಪ್ರತಿಷ್ಠೆ ಬಳಿಕ ನಟಿ ಕಂಗನಾ ರಣಾವತ್ ಖುಷಿಯಿಂದ ಕುಣಿದು ಕುಪ್ಪಳಿಸಿರುವ ವಿಡಿಯೋ ವೈರಲ್ ಆಗಿದೆ. ರಾಮ್ ಆಗಯೇ, ಜೈ ಶ್ರೀ ರಾಮ್ ಎನ್ನುತ್ತಾ ಕಂಗನಾ ಕುಣಿದು ಕುಪ್ಪಳಿಸುತ್ತಿದ್ದುದನ್ನು ವಿಡಿಯೋದಲ್ಲಿ ನೋಡಬಹುದು. 550 ವರ್ಷಗಳ ಬಳಿಕ, ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರ ಪ್ರಾಣತ್ಯಾಗದ ಬಳಿಕ ಅಯೋಧ್ಯೆಗೆ ಮರಳಿ ತನ್ನ ಮನೆ ಸೇರಿರುವ ಶ್ರೀರಾಮಚಂದ್ರನನ್ನು ಖುದ್ದು ಸ್ಥಳದಲ್ಲಿದ್ದು ಕಣ್ತುಂಬಿಸಿಕೊಳ್ಳುವುದು ಎಂದರೆ ಸಾಮಾನ್ಯ ಮಾತಲ್ಲ. ಆ ಖುಷಿ, ಸಂತೋಷ ನಟಿಯಲ್ಲಿ ಎದ್ದು ಕಾಣುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ನ ದೊಡ್ಡ ದಂಡೇ ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರು ಇತ್ತು. ಅವರ ಒಂದೊಂದೇ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.
ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಿ ದೇವಾಲಯ ಶುಚಿಗೊಳಿಸಿದ ನಟಿ ಕಂಗನಾ: ನೆಟ್ಟಿಗರು ಏನಂದ್ರು?
ನಟಿಯ ಖುಷಿಯನ್ನು ಕಂಡು ಸಹಸ್ರಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಇದು ನಿಜವಾದ ಖುಷಿ ಎಂದು ಹಲವರು ಹೇಳಿದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಈ ಖುಷಿ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ. ಬಿಜೆಪಿ ನಾಯಕರ ಜೊತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ನಟಿಗೆ ರಾಜಕೀಯ ಪ್ರವೇಶದ ಕುರಿತು ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇದ್ದವು. ಇಲ್ಲಿಯವರೆಗೂ ಆಕೆ ಅದನ್ನು ನಿರಾಕರಿಸುತ್ತಲೇ ಬಂದಿದ್ದರು. ಆದರೆ ಇತ್ತೀಚೆಗೆ ಅವರು ರಾಜಕೀಯ ಪ್ರವೇಶದ ಸುಳಿವು ನೀಡಿದ್ದರು. ತೇಜಸ್ ಚಿತ್ರದ ಬಿಡುಗಡೆಯ ನಂತರ ಗುಜರಾತ್‌ನ ದ್ವಾರಕಾದ ಜಗತ್ ಮಂದಿರಕ್ಕೆ ತೆರಳಿದ್ದ ನಟಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದರು. ಮುಂದಿನ ದಿನಗಳಲ್ಲಿ ಶ್ರೀಕೃಷ್ಣನ ಆಶೀರ್ವಾದವಿದ್ದರೆ ನಾನೂ ಕೂಡ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದರು.
ಬಳಿಕ ಹಿಮಾಚಲ ಪ್ರದೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಭೇಟಿ ನೀಡಿದ್ದರು. ಈ ಸಭೆಯ ನಂತರ, ಆಕೆಯ ತಂದೆ ಅಮರ್‌ದೀಪ್ ರಣಾವತ್ ಸ್ವತಃ ಇದನ್ನು ಖಚಿತಪಡಿಸಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಕಂಗನಾ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ನಟಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಇವರು ಚಂಡೀಗಢದಿಂದ ಸ್ಪರ್ಧಿಸುವುದು ಬಹುತೇಕ ನಿಶ್ಚಯವಾಗಿದೆ. ಚಂಡೀಗಢದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸುತ್ತಿದೆ. ಹೊಸ ಮುಖಗಳ ಪರಿಚಯಕ್ಕೂ ಪಕ್ಷ ಮುಂದಾಗಿದೆ. ಅವರಲ್ಲಿ ನಟಿ ಕಂಗನಾ ರಣಾವತ್ ಕೂಡ ಒಬ್ಬರು ಎನ್ನಲಾಗುತ್ತಿದೆ .
ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎಂದಿದ್ದ ಉರ್ಫಿಯಿಂದ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಹೋಮ-ಹವನ