ಕಂಬಳದ 'ಉಸೇನ್ ಬೋಲ್ಟ್' ವಿವಾದಕ್ಕೆ ಕಾರಣವಾಯ್ತಾ ರಾಜೇಂದ್ರ ಸಿಂಗ್ ಬಾಬು ಸಿನಿಮಾ?

By Anusha KbFirst Published Jul 22, 2022, 1:50 PM IST
Highlights

 ಕಂಬಳದ ಕುರಿತು ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಸಿನಿಮಾ ಮಾಡ್ತಾ ಇದ್ದು, ಆ ಸಿನಿಮಾದಲ್ಲಿ ಶ್ರೀನಿವಾಸ ಗೌಡ ಪ್ರಧಾನ ಪಾತ್ರದಲ್ಲಿ ನಟಿಸುವುದನ್ನು ಸಹಿಸದ ಲೋಕೇಶ್ ಶೆಟ್ಟಿ ಪೊಲೀಸ್ ದೂರು ನೀಡುವ ಮೂಲಕ ತೇಜೋವಧೆ ಮಾಡಿರುವುದಾಗಿ ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ ಆರೋಪಿಸಿದ್ದಾರೆ.

ಮಂಗಳೂರು: ಕಂಬಳದ ಕುರಿತು ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಸಿನಿಮಾ ಮಾಡ್ತಾ ಇದ್ದು, ಆ ಸಿನಿಮಾದಲ್ಲಿ ಶ್ರೀನಿವಾಸ ಗೌಡ ಪ್ರಧಾನ ಪಾತ್ರದಲ್ಲಿ ನಟಿಸುವುದನ್ನು ಸಹಿಸದ ಲೋಕೇಶ್ ಶೆಟ್ಟಿ ಪೊಲೀಸ್ ದೂರು ನೀಡುವ ಮೂಲಕ ತೇಜೋವಧೆ ಮಾಡಿರುವುದಾಗಿ ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ ಆರೋಪಿಸಿದ್ದಾರೆ.

ಕಂಬಳದ 'ಉಸೇನ್ ಬೋಲ್ಟ್' ಶ್ರೀನಿವಾಸ ಗೌಡ ವಿರುದ್ಧ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ ವಿಚಾರ ಸಂಬಂಧ ಮಂಗಳೂರಿನಲ್ಲಿ ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ ಸುದ್ದಿಗೋಷ್ಠಿ ‌ನಡೆಸಿದ್ದಾರೆ. ಗುಣಪಾಲ ಕಡಂಬ ವಿರುದ್ದವೂ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ‌ನಡೆಸಿದ್ದಾರೆ‌. ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಂಬಳದ ಬಗ್ಗೆ 'ಬಿರ್ದುದ ಕಂಬಳ' ಎಂಬ ತುಳುಚಿತ್ರ ಮಾಡುತ್ತಿದ್ದು, ನಾನು ಆ ಸಿನಿಮಾಗೆ ಪೂರಕ ಮಾಹಿತಿ‌ ಒದಗಿಸಿದ್ದೇನೆ. ಅಲ್ಲದೇ ಈ ಸಿನಿಮಾದಲ್ಲಿ ಶ್ರೀನಿವಾಸ ಗೌಡರಿಗೆ ಪ್ರಧಾನ ಪಾತ್ರವೊಂದಿದ್ದು, ಅದನ್ನ ಕುಗ್ಗಿಸುವ ನಿಟ್ಟಿನಲ್ಲಿ ಕಂಬಳದ ಲೇಸರ್ ಬೀಮ್ ತಂತ್ರಜ್ಞಾನವನ್ನು ದೂರುವ ಮೂಲಕ ಶ್ರೀನಿವಾಸ ಗೌಡ ಶ್ರೇಷ್ಠ ಓಟಗಾರನಲ್ಲ ಅಂತ ತೇಜೋವಧೆ ಮಾಡಲಾಗುತ್ತಿದೆ ಅಂತ ಕಡಂಬ ಆರೋಪಿಸಿದ್ದಾರೆ. ಈ ಹಿಂದೆಯೂ ಪ್ರಶಾಂತ ಬಂಗೇರಾ ಎಂಬಾತನ ಮೂಲಕ ಲೋಕೇಶ್ ಶೆಟ್ಟಿಯು ಶ್ರೀನಿವಾಸ ಗೌಡ ವಿರುದ್ದ ಪಿತೂರಿ ನಡೆಸಿ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದಿದ್ದಾರೆ. 

ಲೇಸರ್ ಬೀಮ್ ತಂತ್ರಜ್ಞಾನದಲ್ಲಿ ಪಾರದರ್ಶಕತೆ ಇದೆ!

ಲೇಸರ್ ಬೀಮ್ ವ್ಯವಸ್ಥೆಗಾಗಿ ನಾವು ಲಕ್ಷಾಂತರ ರೂ. ಖರ್ಚು ಮಾಡಿದ್ದೇವೆ. ಕಾರ್ಕಳದ ಸ್ಕೈ ವ್ಯೂ ಸಂಸ್ಥೆಯ ರತ್ನಾಕರ ತಯಾರಿಸಿದ ತಂತ್ರಜ್ಞಾನ ಇದು. ಲೇಸರ್ ಬೀಮ್ ಮತ್ತು ಇಲೆಕ್ಟ್ರಾನಿಕ್ ಟೈಮಿಂಗ್ ಸಿಸ್ಟಮ್. ಕಳೆದ  9 ವರ್ಷಗಳಿಂದ ಈ ತಂತ್ರಜ್ಞಾನ ಕಂಬಳ ಕ್ಷೇತ್ರದಲ್ಲಿ ಪಾರದರ್ಶಕತೆ ಹೊಂದಿದೆ. ಇದಕ್ಕೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮುಖ್ಯಸ್ಥ ಕರ್ನಲ್ ಸಂಜಯ್ ಮೆಚ್ಚುಗೆ ಸೂಚಿಸಿದ್ದಾರೆ ಎಂದು ತಂತ್ರಜ್ಞಾನವನ್ನು ಗುಣಪಾಲ ಕಡಂಬ ಸಮರ್ಥಿಸಿಕೊಂಡಿದ್ದಾರೆ.

ಕಂಬಳ ವೇಗಿ ಶ್ರೀನಿವಾಸ ಗೌಡ ಸೇರಿ ಮೂವರ ವಿರುದ್ಧ ದೂರು

1989ರಲ್ಲಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕಂಬಳ ಸಮಿತಿ ರಚನೆಯಾಗಿದೆ. ಅಲ್ಲಿಂದ 2013ರವರೆಗೆ ಸಮಿತಿಯ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸಿದ್ದೆ. ಆ ಬಳಿಕ 2011ರಲ್ಲಿ ಕಂಬಳ ಸಂರಕ್ಷಣೆ ಮತ್ತು ತರಬೇತಿಗಾಗಿ ಅಕಾಡೆಮಿ ಸ್ಥಾಪನೆಯಾಗಿದೆ. ಇದು ಸಮಾನ ಮನಸ್ಕರ ಸಮಿತಿಯಾಗಿದ್ದು, ನಾನು ಸಂಚಾಲಕನಾಗಿದ್ದೇನೆ. ಈ ಅಕಾಡೆಮಿಯಲ್ಲಿ ಶ್ರೀನಿವಾಸ ಗೌಡ ಮತ್ತು 60 ಜನ ಓಟಗಾರರು ತರಬೇತಿ ಪಡೆದಿದ್ದಾರೆ.‌ ಈ ಅಕಾಡೆಮಿ ಚಟುವಟಿಕೆ ಗಮನಿಸಿ ಸರ್ಕಾರ 5 ಲಕ್ಷ ನಗದು ಬಹುಮಾನ ನೀಡಿದೆ. ಇನ್ನು ಕ್ರೀಡಾರತ್ನ ಪ್ರಶಸ್ತಿ ಶ್ರೀನಿವಾಸ ಗೌಡನಿಗೂ ಮೊದಲು ನಾಲ್ಕು ಜನರಿಗೆ ಸಿಕ್ಕಿದೆ.

ಆ ಬಳಿಕ ಶ್ರೀನಿವಾಸ ಗೌಡ ಜಾಗತಿಕ ದಾಖಲೆಗಳನ್ನು ‌ಮಾಡಿದ್ದಾರೆ. 2019-20ರಲ್ಲಿ ಐಕಳ ಕಂಬಳದಲ್ಲಿ 9.55 ಸೆಕೆಂಡ್‌ಲ್ಲಿ ಓಡಿ ದಾಖಲೆ ಮಾಡಿದ್ದ. ಆದರೆ ಎಲ್ಲೂ ನಾವು ಶ್ರೀನಿವಾಸ ಗೌಡರನ್ನ ಉಸೇನ್ ಬೋಲ್ಟ್ ಗೆ ಹೋಲಿಸಿಲ್ಲ. ಆದರೆ ಕಂಬಳದ ವಿಜಯ್ ಕುಮಾರ್ ಕಂಗಿನ ಮನೆ ಎಂಬವರು ಇದನ್ನ ಪ್ರಚಾರ ಮಾಡಿದ್ದಾರೆ.‌ ಆದರೆ ಲೋಕೇಶ್ ಶೆಟ್ಟಿಗೆ ನಮ್ಮ ಮೇಲೆ ಮತ್ತು ಶ್ರೀನಿವಾಸ ಗೌಡ ಮೇಲೆ ಅಸೂಯೆ.‌ ಲೋಕೇಶ್ ಶೆಟ್ಟಿ ದೂರು ಸತ್ಯಕ್ಕೆ ದೂರವಾಗಿದ್ದು, ಯಾವುದೇ ವಂಚನೆ ‌ಮಾಡಿಲ್ಲ ಎಂದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಆರೋಪ ಹೊತ್ತ ಗುಣಪಾಲ ಕಡಂಬ ಮತ್ತು ಸ್ಕೈ ವೀವ್ ಸಂಸ್ಥೆಯ ರತ್ನಾಕರ ಹಾಜರಿದ್ದರೂ ಆರೋಪ ಹೊತ್ತ ಶ್ರೀನಿವಾಸ ಗೌಡ ಮಾತ್ರ ಗೈರಾಗಿದ್ದು ಅನುಮಾನ ಮೂಡಿಸಿದೆ‌.

ಶ್ರೀನಿವಾಸ್‌ ಗೌಡ ವಿರುದ್ಧ ದೂರು: ಕಂಬಳ ಸಮಿತಿ ಹೇಳೋದೇನು?

ವಿವಾದದ ಹಿನ್ನೆಲೆ ಏನು?

ಶ್ರೀನಿವಾಸ ಗೌಡ, ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದು ಸುಳ್ಳು ಅಂತ ಮಿಜಾರಿನ ಶ್ರೀನಿವಾಸ ಗೌಡ ವಿರುದ್ದ ದೂರು ದಾಖಲಿಸಲಾಗಿದೆ. ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ದ‌.ಕ ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಎಂಬವರು ದೂರು ನೀಡಿದ್ದಾರೆ. ಕಂಬಳ ಓಟಗಾರ ಶ್ರೀನಿವಾಸ ಗೌಡ, ಗುಣಪಾಲ ಕಡಂಬ ಮತ್ತು ರತ್ನಾಕರ ಎಂಬವರ ವಿರುದ್ದ ಕೇಸು ದಾಖಲಿಸುವಂತೆ ದೂರು ನೀಡಿದ್ದಾರೆ. ಕಂಬಳ ಅಕಾಡೆಮಿ ನಡೆಸುತ್ತಿರುವ ಗುಣಪಾಲ ಕಡಂಬರಿಂದ ಶ್ರೀನಿವಾಸ ಗೌಡ ಬಳಸಿ ವಂಚನೆ ಆರೋಪ ಮಾಡಲಾಗಿದ್ದು, ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ್ ವಿರುದ್ದವೂ ದೂರು ನೀಡಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ. ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ ಲಕ್ಷಾಂತರ ಹಣ ಸಂಗ್ರಹ ಆರೋಪ ಹೊರಿಸಿ ದೂರು ನೀಡಲಾಗಿದೆ. ಅಧಿಕೃತ ಮಾನ್ಯತೆ ಪಡೆಯದ, ನಂಬಲಾರ್ಹವಲ್ಲದ ಸ್ಕೈ ವೀವ್ ಸಂಸ್ಥೆಯಿಂದ ಸುಳ್ಳು ತೀರ್ಪಿನ ದಾಖಲೆ ಸೃಷ್ಟಿಸಿದ್ದು, ಶ್ರೀನಿವಾಸ ಗೌಡ ಓಟದ ವೇಗದ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
 

click me!