'ನಾಟು ನಾಟು'ಗೆ ಪ್ರಶಸ್ತಿ ಬೆನ್ನಲ್ಲೇ ಜ್ಯೂ. ಎನ್​ಟಿಆರ್​ ಟ್ರೋಲ್: ಬೇಕಿತ್ತಾ ಈ ಸ್ಟೈಲು?

By Suvarna NewsFirst Published Jan 12, 2023, 3:25 PM IST
Highlights

ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡಿಗೆ ಜಾಗತಿಕ ಪ್ರಶಸ್ತಿಯಾದ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ಸಿಕ್ಕ ಬೆನ್ನಲ್ಲೇ ನಾಯಕ ಜ್ಯೂ. ಎನ್​ಟಿಆರ್ ಟ್ರೋಲ್​ ಆಗುತ್ತಿರುವುದೇಕೆ?​
 

ಸೂಪರ್​ಹಿಟ್​ ಚಲನಚಿತ್ರ ಆರ್‌ಆರ್‌ಆರ್‌ನ ನಾಟು ನಾಟು ಹಾಡಿಗೆ ಜಾಗತಿಕ ಪ್ರಶಸ್ತಿಯಾದ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ಸಿಕ್ಕ ಖುಷಿಯಲ್ಲಿ ಇಡೀ ತಂಡ ಬೀಗುತ್ತಿದೆ. ಅಭಿಮಾನಿಗಳೂ ಸಂತಸದಲ್ಲಿ ತೇಲಾಡುತ್ತಿದ್ದಾರೆ. ಆಸ್ಕರ್‌ ರೇಸ್‌ನಲ್ಲಿರುವ ಪ್ಯಾನ್‌ ಇಂಡಿಯಾ ಚಿತ್ರ ಆರ್‌ಆರ್‌ಆರ್​ ಚಿತ್ರತಂಡ (ಜ.12) ನಿನ್ನೆಯಷ್ಟೆ ಲಾಸ್​ ಲಾಸ್ ಏಂಜಲೀಸ್​ನಲ್ಲಿ ಗೋಲ್ಡನ್ ಗ್ಲೋಬ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿ ಬಂದಿದೆ. ಆರ್‌ಆರ್‌ಆರ್‌  ಚಿತ್ರದ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ  ಗೋಲ್ಡನ್ ಗ್ಲೋಬ್‌ ಪ್ರಶಸ್ತಿ (Golden Globe Awards) ಸ್ವೀಕರಿಸಿದ್ದು, ಪ್ರಶಸ್ತಿ ಸಮಾರಂಭದಲ್ಲಿ ಚಿತ್ರದ ನಿರ್ದೇಶಕ  ರಾಜಮೌಳಿ , ಜೂನಿಯರ್ ಎನ್‌ಟಿಆರ್ ,  ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಆದರೆ  ಇದರ ಬೆನ್ನಲ್ಲೇ ಅವಾರ್ಡ್​ ಫಂಕ್ಷನ್​ನಲ್ಲಿ ಪಾಲ್ಗೊಂಡಿದ್ದ ಜ್ಯೂ.ಎನ್​ಟಿಆರ್  (Jr.NTR) ಭಾರಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಗೋಲ್ಡನ್ ಗ್ಲೋಬ್‌ ಪ್ರಶಸ್ತಿ ಸಾಧನೆ ಮಾಡಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಕ್ಕೂ, ಟ್ರೋಲ್​ಗೂ ಏನು ಸಂಬಂಧ ಎಂದು ಅಚ್ಚರಿಯಾಗ್ತಿರಬೇಕಲ್ಲವೆ? ಅಷ್ಟಕ್ಕೂ ಟ್ರೋಲ್​ಗೆ (Troll) ಒಳಗಾಗಿರುವುದು ಪ್ರಶಸ್ತಿ ಪಡೆದಿರುವುದಕ್ಕಂತೂ ಅಲ್ಲ, ಬದಲಿಗೆ ಇವರು ಇಂಗ್ಲಿಷ್​ ಮಾತನಾಡಿದ ಶೈಲಿಗೆ! 

ಪ್ರಶಸ್ತಿ ಪಡೆದ ಖುಷಿಯಲ್ಲಿದ್ದ ತಂಡದ ಜೊತೆ ಅಮೆರಿಕನ್​ ಸಂದರ್ಶಕರೊಬ್ಬರು ಸಂದರ್ಶನ ನಡೆಸಿದರು. ಆಗ ಜ್ಯೂ. ಎನ್​ಟಿಆರ್​ ಅವರು ಮಾತನಾಡಿರುವ ಇಂಗ್ಲಿಷ್​ ಭಾರಿ ವೈರಲ್​ ಆಗಿದ್ದು, ಅದೇ ಟ್ರೋಲ್​ ಆಗುತ್ತಿದೆ. ಇದಕ್ಕೆ ಕಾರಣ, ಅವರು ಇಂಗ್ಲಿಷ್​ ಚೆನ್ನಾಗಿಯೇ ಮಾತನಾಡಿದ್ದಾರೆ. ಆದರೆ ಅದರ ಶೈಲಿ (Accent) ಮಾತ್ರ ವಿದೇಶಿಗರ ಇಂಗ್ಲಿಷ್​ನ ಹಾಗೆ ಇತ್ತು. ಸಾಮಾನ್ಯವಾಗಿ ಭಾರತೀಯರು ಮಾತನಾಡುವ ಇಂಗ್ಲಿಷ್​ಗೂ, ಇಂಗ್ಲಿಷ್​ (English) ಮಾತನಾಡುವ ವಿದೇಶಿಗರ ಭಾಷಾ ಶೈಲಿಗೆ ಬಹಳ ವ್ಯತ್ಯಾಸವಿದೆ. ಆದರೆ ಜ್ಯೂ. ಎನ್​ಟಿಆರ್​ ಅವರು, ಸಂದರ್ಶಕನ ಬಳಿ ಅವರದ್ದೇ ಆದ ಶೈಲಿಯಲ್ಲಿ ಅಂದರೆ ಪಾಶ್ಚಿಮಾತ್ಯ ಶೈಲಿಯಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವುದು ಭಾರತೀಯರ ಟೀಕೆಗೆ ಗುರಿಯಾಗಿದೆ. ಅವರು ತೀರಾ ನಾಟಕೀಯವಾಗಿ ಮಾತನಾಡಿದ್ದು, ಇಂಥ ಪೋಸ್​ ಕೊಡೋದು ಬೇಕಿತ್ತಾ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇಂಗ್ಲಿಷರನ್ನು ಆಡಿಕೊಂಡ ನಾಟು ನಾಟುಗೆ ಜಾಗತಿಕ ಪ್ರಶಸ್ತಿ ಸಿಕ್ಕಿದ್ದು ಭಾರತೀಯರಿಗೆ ಸಂದ ಗೌರವ!

ನಮ್ಮ ಭಾರತೀಯತೆಯನ್ನು ಕಾಪಾಡಿ. ವಿದೇಶಕ್ಕೆ ಹೋದ ಮಾತ್ರಕ್ಕೆ ಮಾತೂ ಬದಲಾಗಬೇಕು ಎಂದು ಸ್ಟೈಲ್​ ಮಾಡಲು ಹೋಗಬೇಡಿ. ಯಾರು ಹೇಗೆ ಇರುತ್ತಾರೋ, ಹಾಗೆ ಇದ್ದರೆ ಚೆನ್ನ. ಇಂಥ ಫೇಕ್ (Fake style) ಎನಿಸುವ ಮಾತನಾಡಿ ವಿದೇಶಿಗರನ್ನು ಮೆಚ್ಚಿಸುವ ಕ್ರಮ ಸರಿಯಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಪ್ರಶಸ್ತಿ ಪಡೆದಿರುವುದನ್ನು ನಿಮಗೆ ಏನು ಎನ್ನಿಸುತ್ತಿದೆ ಎಂದು ಸಂದರ್ಶನಕರು ಜ್ಯೂನಿಯರ್​ ಎನ್​ಟಿಆರ್​ (Jr.NTR) ಅವರನ್ನು ಪ್ರಶ್ನಿಸಿದ್ದಾರೆ. ಆಗ ಅವರು ವಿದೇಶಿ ಇಂಗ್ಲಿಷ್​ ಶೈಲಿಯಲ್ಲಿ 'ರಾಜಮೌಳಿ ಅವರ ಟ್ರ್ಯಾಕ್ ರೆಕಾರ್ಡ್ ಅನ್ನು ಗಣನೆಗೆ ತೆಗೆದುಕೊಂಡರೆ ನಾವು ಎಂದೆಂದಿಗೂ ವಿಜೇತರೇ. ಆದರೆ ಈಗ ಸಿಕ್ಕಿರುವ ಅವಾರ್ಡ್​ (Award) ಜಪಾನ್ ಮತ್ತು ಇಂದು ಅಮೆರಿಕದಲ್ಲಿ ವಿಜೇತರಿಗಿಂತ ಹೆಚ್ಚಿನದಾಗಿದೆ' ಎಂದು ಹೆಮ್ಮೆಯಿಂದ ಹೇಳಿದರು.

ಈ ಸಂದರ್ಶನ ರೆಡ್ಡಿಟ್​ನಲ್ಲಿ ಪೋಸ್ಟ್​  ಮಾಡುತ್ತಿದ್ದಂತೆಯೇ ನೆಟ್ಟಿಗರು ಕಿಡಿ ಕಾರಿದ್ದಾರೆ. 'ಜ್ಯೂ. ಎನ್‌ಟಿಆರ್ ತಮ್ಮಲ್ಲಿರುವ ಆಂತರಿಕ ಅನಿಲ್ ಕಪೂರ್‌ನನ್ನು ಬಿಚ್ಚಿಟ್ಟಿದ್ದಾರೆ.  ಅನಿಲ್ ಕಪೂರ್ ಅವರ  ಉಚ್ಚಾರಣೆಯ ಕೂಡ ಹೀಗೆಯೇ ಕಾಲಕಾಲಕ್ಕೆ ಬದಲಾಗುತ್ತದೆ ಮತ್ತು ಬಹಳಷ್ಟು ಹಾಸ್ಯಗಳಿಂದ ಕೂಡಿರುತ್ತದೆ' ಎಂದು ಒಬ್ಬ ನೆಟ್ಟಿಗ ಕಾಲೆಳೆದಿದ್ದಾರೆ. ಮತ್ತೊಬ್ಬರು, 'ಇದು ನಕಲಿ ಅಮೆರಿಕನ್​  ಮತ್ತು ಬ್ರಿಟಿಷ್ ಉಚ್ಚಾರಣೆಗಳ ವಿಲಕ್ಷಣ ಮಿಶ್ರಣವಾಗಿದೆ. ಅತ್ತ ಅಮೆರಿಕನ್ನೂ ಅಲ್ಲ, ಇತ್ತು ಬ್ರಿಟನ್ನೂ ಅಲ್ಲ. ಬೇಕಿತ್ತಾ ಇದೆಲ್ಲಾ' ಎಂದಿದ್ದಾರೆ. ಮತ್ತೋರ್ವ ನೆಟ್ಟಿಗ, 'ಒಬ್ಬ ಅಮೆರಿಕನ್ ಭಾರತಕ್ಕೆ ಬಂದಾಗ, ಅವನು ನಮ್ಮೊಂದಿಗೆ ಮಾತನಾಡುವಾಗ ಭಾರತೀಯ ಆ್ಯಕ್ಸೆಂಟ್​ ಬಳಸುತ್ತಾರೆಯೆ? ಇಲ್ಲವಲ್ಲ. ಅವರು ಯಾವುದೇ ನಾಟಕ ಮಾಡುವುದಿಲ್ಲ. ಹಾಗಿದ್ದ ಮೇಲೆ ಈ ನಾಟಕ ವಿದೇಶದಲ್ಲಿ ಏಕೆ?' ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

RRR ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ..

ಆದರೂ ಕೆಲವು ಫ್ಯಾನ್ಸ್​ ಜ್ಯೂ.ಎನ್​ಟಿಆರ್​ ಪರವಾಗಿ ಮಾತನಾಡಿದ್ದದಾರೆ. 'ಇವರನ್ನು ಬಿಟ್ಟುಬಿಡಿ. ಭಾರತೀಯರು ಉಚ್ಚಾರಣೆಗಳಿಗಾಗಿ ಇತರ ಭಾರತೀಯರನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ. ಆಸ್ಕರ್‌ನಲ್ಲಿ ಒಬ್ಬ ಭಾರತೀಯನಾಗಿರುವುದನ್ನು ಕಲ್ಪಿಸಿಕೊಳ್ಳಿ. ಸುಮ್ಮನೇ ನಾವೇ ಟ್ರೋಲ್​ ಮಾಡುವುದು ಸರಿಯಲ್ಲ' ಎಂದಿದ್ದಾರೆ. ಮತ್ತೊಬ್ಬರು 'ಅವರೊಬ್ಬ ಉತ್ತಮ ನಟ. ಆರ್​ಆರ್​ಆರ್​ ಆಸ್ಕರ್​ಗೆ ಹೋಗಿರುವುದೇ ಭಾರತೀಯರಿಗೆ ದಕ್ಕಿರುವ ಗೌರವ. ಸುಮ್ಮನೇ ಹೀಗೆ ಕಾಲೆಳೆಯುವುದನ್ನು ಮಾಡಬೇಡಿ' ಎಂದಿದ್ದಾರೆ.

 

The dapper with the press at . OMG he is making everyone go bonkers with his accent the Global star ⭐️ 🔥🔥🔥 pic.twitter.com/jKA3REkgjJ

— Mr Perfect (@kantri_munna09)
click me!