Latest Videos

ಖಾಲಿ ಬಿದ್ದ ಸುಶಾಂತ್​ ಸಿಂಗ್​ 'ಭೂತ ಬಂಗ್ಲೆ' ಅದಾ ಶರ್ಮಾ ಖರೀದಿ? ನಟಿ ಹೇಳಿದ್ದೇನು?

By Suvarna NewsFirst Published Aug 27, 2023, 11:11 AM IST
Highlights

ಖಾಲಿ ಬಿದ್ದ ಸುಶಾಂತ್​ ಸಿಂಗ್​ 'ಭೂತ ಬಂಗ್ಲೆ'ಯನ್ನು ಅದಾ ಶರ್ಮಾ ಖರೀದಿಸ್ತಾರೆ ಎನ್ನಲಾಗುತ್ತಿದೆ. ಬಂಗ್ಲೆ ನೋಡಲು ಬಂದ ನಟಿ ಹೇಳಿದ್ದೇನು? 
 

ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದವು. ಇವರದ್ದು ಸಹಜ ಸಾವಲ್ಲ, ಕೊಲೆ ಎಂದು ಹೇಳುತ್ತಿರುವವರೇ ಬಹುತೇಕ ಮಂದಿ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.   2020 ಜೂನ್ 14ರಂದು ನಿಧನರಾದ  ಸುಶಾಂತ್ ಸಿಂಗ್ ರಜಪೂತ್  ಅವರ ಸಾವಿನ  ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಆದರೆ ಇನ್ನೂ ಕಾರಣ ಬಹಿರಂಗವಾಗಿಲ್ಲ. ತನಿಖೆಯ ಪ್ರಗತಿಯ ಬಗ್ಗೆಯೂ ಸಿಬಿಐ ತುಟಿ ಬಿಚ್ಚುತ್ತಿಲ್ಲ.  ಆದರೆ ಸುಶಾಂತ್ ಸಾವು ತೀವ್ರ ಚರ್ಚೆ ಹುಟ್ಟುಹಾಕುತ್ತಲೇ ಇದೆ. ಈ ಸಾವು ಕೆಲವು ಬಾಲಿವುಡ್ ಸ್ಟಾರ್ಸ್​ಗೆ ಸಂಕಷ್ಟ ತಂದಿತ್ತು  ಎನ್ನುವಷ್ಟರಲ್ಲಿ ಪ್ರಕರಣ ತನಿಖೆಯ ಪ್ರಗತಿ ನಿಧಾವಾಯಿತು ಎಂದು ಆರೋಪಿಸಲಾಗುತ್ತಿದೆ. ನಟನ  ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಸಾಗಿದೆ.  ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂದು ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್​ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಆಯಾಮದಲ್ಲೂ ಸಹ ಈಗಾಗಲೇ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದರ ನಡುವೆಯೇ, ಅವರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಮುಂಬೈನ ಬಂಗಲೆಗೆ ಕಳೆದ ಮೂರು ವರ್ಷಗಳಿಂದ ಯಾರೂ ಬರುತ್ತಿಲ್ಲ. ಈ ಮನೆಯಲ್ಲಿ ಸುಶಾಂತ್​ ಸಿಂಗ್​ ಬಾಡಿಗೆಗೆ ಇದ್ದರು. ಇದರ ಮಾಲೀಕ  ರಫೀಕ್‌ ಎನ್ನುವವರು. ಸುಶಾಂತ್​ ಅವರು ಬಂಗಲೆಗೆ ಮಾಸಿಕ 5 ಲಕ್ಷ ರೂ ಕೊಡುತ್ತಿದ್ದರು. ಸುಶಾಂತ್​ ಸಿಂಗ್​ ಅವರ ಸಾವಿನ ಬಳಿಕ ಅವರ ಆತ್ಮ ಅಲ್ಲಿಯೇ ಓಡಾಡುತ್ತಿದೆ ಎಂದೇ ಭಾವಿಸಲಾಗಿದೆ. ಇದೇ ಕಾರಣಕ್ಕೆ ಜನ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಅಡ್ವಾನ್ಸ್​ ದುಡ್ಡು ಕೊಟ್ಟು ನಂತರ ಮನೆಗೆ ಬರದ ಉದಾಹರಣೆಗಳೂ ಇವೆ. ಸುಶಾಂತ್​ ಸಿಂಗ್​ ಸಾವಿನ ಬಳಿಕ ರಫೀಕ್​ ಅವರು, ಈ ಮನೆಯನ್ನು ಬಾಲಿವುಡ್​ ಮಂದಿಗೆ ಕೊಡುವುದಿಲ್ಲ ಎಂದು ಮೊದಲೇ ಹೇಳಿದ್ದಾರೆ. 

ಸುಶಾಂತ್ ಸಿಂಗ್ ಸಾವಿಗೆ 'ಮಹಾ' ಟ್ವಿಸ್ಟ್​: ಮಹತ್ವದ ಸುಳಿವು ಸಿಕ್ಕಿದೆಯೆಂದ ಡಿಸಿಎಂ

ಅಂದಹಾಗೆ ಸುಶಾಂತ್​ ಅವರು ಈ ಬಂಗಲೆಯಲ್ಲಿ  ತಮ್ಮ ಪ್ರೇಯಸಿ ರಿಯಾ ಚಕ್ರವರ್ತಿಯೊಂದಿಗೆ ವಾಸವಾಗಿದ್ದರು. ಇದು ಮುಂಬೈನ ಬಾಂದ್ರಾದಲ್ಲಿದೆ. ಈ ವಿಷಯವಾಗಿ ಮಾತನಾಡಿದ್ದ ಮಾಲೀಕ ರಫೀಕ್​ ಅವರು, 'ಜನರು ಈ ಫ್ಲಾಟ್‌ಗೆ ಬರಲು ಹೆದರಿಕೊಳ್ಳುತ್ತಿದ್ದಾರೆ.  ಸುಶಾಂತ್‌ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳ ಎನ್ನುತ್ತಿದ್ದಂತೆಯೇ ಹೆದರಿ ಹೋಗುತ್ತಾರೆ.  ಈ ಪ್ರಕರಣಕ್ಕೆ ಸರಿಯಾದ ಅಂತಿಮ ಸಿಕ್ಕಿಲ್ಲ.  ಹೀಗಾಗಿ ಎಲ್ಲರೂ ಬೇಡ ಎನ್ನುತ್ತಿದ್ದಾರೆ ಎಂದಿದ್ದರು.  
ಇದೀಗ ನಟಿ ಅದಾ ಶರ್ಮಾ (Adha Sharma) ಈ ಮನೆ ಖರೀದಿಗೆ ತಯಾರಿ ನಡೆಸಿರುವುದಾಗಿ ವರದಿಯಾಗಿದೆ. ಇಂದು ಬಂಗಲೆಗೆ ಅವರು ಭೇಟಿ ಕೊಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ದಿ ಕೇರಳ ಸ್ಟೋರಿಯಲ್ಲಿ ನಟನೆಯ ಬಳಿಕ ತುಂಬಾ ಖ್ಯಾತಿ ಪಡೆದಿರುವ ನಟಿ ಅದಾ ಶರ್ಮಾ ಈ ಬಂಗಲೆಗೆ ಖರೀದಿ ಮಾಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಟಿ ನಿರಾಕರಿಸಿದರು. ಬಂಗಲೆಗೆ ಬಂದಿದ್ದ ನಟಿಯನ್ನು ಪತ್ರಕರ್ತರು ಪ್ರಶ್ನಿಸಿದಾಗ, ಮಾತನ್ನು ತೇಲಿಸಿದ ಅವರು, ಒಂದು ವೇಳೆ ಈ ಮನೆಗೆ ಬರುವುದಾದರೆ. ಅದನ್ನು ಖರೀದಿ ಮಾಡುವುದಾದರೆ, ನಾನು ಮೊದಲು ನಿಮಗೇ ವಿಷಯವನ್ನು ತಿಳಿಸುತ್ತೇನೆ, ನಿಮಗೇ ಮೊದಲು ಸ್ವೀಟ್​ ಕೊಡುತ್ತೇನೆ ಎಂದು ಹೇಳಿ ಕಾರನ್ನು ಹತ್ತಿ ಹೊರಟೇ ಬಿಟ್ಟಿದ್ದಾರೆ. ಇದೀಗ ಎಲ್ಲರಲ್ಲಿ ಕುತೂಹಲ ಹೆಚ್ಚಿದೆ. 

 

click me!