ಇನ್ನೇನು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆಗೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಆಸ್ಕರ್ ಟ್ರೋಫಿ ಕುರಿತು ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಆಸ್ಕರ್ (Oscar) ಪ್ರಶಸ್ತಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮಾರ್ಚ್ 13ರಂದು ಲಾಸ್ ಏಂಜಲಿಸ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆಯಲ್ಲಿದೆ ಆರ್.ಆರ್.ಆರ್ (RRR) ಚಿತ್ರತಂಡ. ತಂಡ ಇದಾಗಲೇ ಅಮೆರಿಕಕ್ಕೆ ಹಾರಿದೆ. ಈ ಪ್ರಶಸ್ತಿಯಲ್ಲಿ ಭಾಗಿಯಾಗಲು ಹಲವು ನಿಯಮಗಳಿದ್ದು ಆ ಎಲ್ಲ ನಿಯಮಗಳನ್ನು ಪೂರೈಸಿ, ಇದೀಗ ಅಂತಿಮ ಹಂತವನ್ನೂ ಅದು ತಲುಪಿದೆ. ಮಾರ್ಚ್ 12ರಂದು ನಡೆಯಲಿರೋ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 'RRR' ಸಿನಿಮಾದ 'ನಾಟು.. ನಾಟು..' ಹಾಡು ಪ್ರಶಸ್ತಿ ಗೆಲ್ಲುತ್ತಾ ಎನ್ನುವ ಕುತೂಹಲ ಎಲ್ಲೆಡೆ ಮನೆಮಾಡಿದೆ. ಪ್ರಶಸ್ತಿ ಘೋಷಣೆ ಮತ್ತು ಪ್ರದಾನ ಸಮಾರಂಭದಲ್ಲಿ ವೇದಿಕೆಯ ಮೇಲೆ ಆರ್.ಆರ್.ಆರ್ ಚಿತ್ರದ ನಾಯಕರಾದ ಜ್ಯೂನಿಯರ್ ಎನ್.ಟಿ.ಆರ್ (Jr. NTR,) ಹಾಗೂ ರಾಮ್ ಚರಣ್ (Ram Charan) ‘ನಾಟು ನಾಟು’ ಗೀತೆಗೆ ಹೆಜ್ಜೆ ಹಾಕಲಿದ್ದಾರೆ.
'RRR' ತಂಡ ಮಾತ್ರ ಆಸ್ಕರ್ ಪ್ರಶಸ್ತಿ ಗೆಲ್ಲಲು ಮಾಡಬೇಕಿರೋ ಎಲ್ಲಾ ಕಸರತ್ತುಗಳನ್ನು ಮಾಡುತ್ತಿದೆ. ಕೆಲ ತಿಂಗಳಿಂದ ರಾಜಮೌಳಿ, ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜಾ ಸೇರಿ ಇಡೀ ತಂಡ ಸಿನಿಮಾ ಬಗ್ಗೆ ಪ್ರಚಾರವನ್ನು ಮಾಡುತ್ತಿದೆ. ಅಂದಹಾಗೆ ಇದು, 2022ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿದೆ. 95ನೇ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಸಿನಿ ಪ್ರಿಯರು ತುದಿಗಾಲಿನಲ್ಲಿ ನಿಂತುಕೊಂಡಿದ್ದಾರೆ.
ಹಾಗಿದ್ದರೆ ಈ ಆಸ್ಕರ್ ಪ್ರಶಸ್ತಿಯ ಕುರಿತು ನಿಮಗೆ ಕೆಲವೊಂದು ಕುತೂಹಲಗಳು ಇದ್ದಿರಬೇಕಲ್ಲವೆ? ಇದಕ್ಕೆ ಯಾಕಿಷ್ಟು ಡಿಮಾಂಡ್? ಆಸ್ಕರ್ ಟ್ರೋಫಿಯ ವಿಶೇಷತೆ ಏನು? ಅದರ ಬೆಲೆ ಎಷ್ಟು? ಯಾವ ವಸ್ತುವಿನಿಂದ ಇದನ್ನು ತಯಾರಿಸುತ್ತಾರೆ? ಟ್ರೋಫಿ ತಯಾರು ಮಾಡಲು ಎಷ್ಟು ವೆಚ್ಚ ತಗುಲುತ್ತದೆ? ಚಿನ್ನದಿಂದ ತಯಾರಾಗುವಂತೆ ಕಾಣುವ ಈ ಟ್ರೋಫಿ ನಿಜಕ್ಕೂ ಚಿನ್ನದಿಂದಲೇ ಮಾಡುತ್ತಾರಾ ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕೊಡುತ್ತಿದ್ದೇವೆ. ಮೊದಲಿಗೆ ಟ್ರೋಫಿಯನ್ನು ಯಾವುದರಿಂದ ತಯಾರಿಸುತ್ತಾರೆ ಎಂದು ಹೇಳುತ್ತೇವೆ ಕೇಳಿ. ಇದು ನೋಡಲು ಚಿನ್ನದ ಬಣ್ಣದಲ್ಲಿರುತ್ತದೆ. ಆದರೆ ಅಸಲಿಗೆ ಅದು ಸಂಪೂರ್ಣವಾಗಿ ಚಿನ್ನದಿಂದ (Gold) ಇದನ್ನು ಮಾಡಿರುವುದಿಲ್ಲ. ಚಿನ್ನದ ಕೋಟಿಂಗ್ ಇರುತ್ತದೆ. ಕಂಚಿನಲ್ಲಿ ತಯಾರಿಸಿ ನಂತರ ಚಿನ್ನದ ಹೊದಿಕೆ ಅಳವಡಿಸಲಾಗುತ್ತಿತ್ತು ಆದರೆ ಈಗ ಪ್ರಶಸ್ತಿಯನ್ನು ಲೋಹದಿಂದ ತಯಾರಿಸಿ ಚಿನ್ನದ ಹೊದಿಕೆ ಹಾಕಲಾಗುತ್ತದೆ.
RRR: ಹೀಗೆಲ್ಲಾ ಮಾಡಿ ಇವ್ರಿಗೆ ಆಸ್ಕರ್ ಬೇಕಾ ಎಂದ ಖ್ಯಾತ ನಿರ್ದೇಶಕ!
ಇದರ ಎತ್ತರ, ತೂಕ ಎಷ್ಟು ಗೊತ್ತಾ? ಆಸ್ಕರ್ ಪ್ರಶಸ್ತಿ ಟ್ರೋಫಿ 13.5 ಇಂಚು ಎತ್ತರವಿದ್ದು, ಮೂರುವರೆ ಕೆಜಿಗೂ ಅಧಿಕ ತೂಗುತ್ತದೆ. ಒಂದು ಆಸ್ಕರ್ ಪ್ರಶಸ್ತಿ ಟ್ರೋಫಿ ಸಿದ್ಧಪಡಿಸಲು 400 ಡಾಲರ್‌ವರೆಗೆ ಅಂದರೆ ಸುಮಾರು 33 ಸಾವಿರ ರೂಪಾಯಿಗೂ ಅಧಿಕ ವೆಚ್ಚ ತಗಲುತ್ತದೆ. ಇದು ಆಸ್ಕರ್ ಪ್ರಶಸ್ತಿ ಪಡೆಯುವಾಗ ತೆಗೆದುಕೊಳ್ಳುವ ಬೆಲೆಯಾಯಿತು. ಇನ್ನು ಅದನ್ನು ಮಾರಾಟ ಮಾಡಿದರೆ? ಆಹಾ ಎಷ್ಟೆಲ್ಲಾ ಸಿಗಬಹುದು ಎಂದುಕೊಂಡಿರುವಿರಾ? ಇಲ್ಲವೇ ಇಲ್ಲ. ಆಸ್ಕರ್ ಟ್ರೋಫಿಯನ್ನು ಮಾರಿದರೆ ಅಬ್ಬಬ್ಬಾ ಎಂದರೆ ಒಂದು ಡಾಲರ್ ಅಂದರೆ ಸುಮಾರು 82-85ರೂಪಾಯಿ ಸಿಗಬಹುದು ಅಷ್ಟೇ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ ಅದು ಅಕಾಡೆಮಿಯ ವಿಚಿತ್ರ ನಿಯಮ. ಆ ನಿಯಮದ ಬಗ್ಗೆ ಇಲ್ಲಿ ಹೇಳ್ತೇವೆ ಕೇಳಿ.
1950ರಲ್ಲಿ ಅಮೆರಿಕದ ಸಿನಿಮಾ ನಿರ್ದೇಶಕರೊಬ್ಬರು (Director) ತಾವು ಗಳಿಸಿದ ಆಸ್ಕರ್ ಪ್ರಶಸ್ತಿಯನ್ನು ಹರಾಜು ಹಾಕಿದ್ದರು. ಹರಾಜಿನಲ್ಲಿ ಅವರು 6.5 ಕೋಟಿ ರೂ. ಬಿಡ್ ಕೂಗಿದ್ದರು. ಹೀಗೆ ಮುಂದೆಯೂ ಆಗಬಹುದು ಎಂದು ಅಂದುಕೊಮಡ ಚಲನಚಿತ್ರ ಅಕಾಡೆಮಿ ಹೊಸ ರೂಲ್ಸ್ ಜಾರಿಗೊಳಿಸಿತು. ಅದೇನೆಂದರೆ, ಅಕಾಡೆಮಿ ಅವಾರ್ಡ್‌ನ್ನು ಮಾರುವ, ಕೊಳ್ಳುವ ಹಕ್ಕು ಅಕಾಡೆಮಿ ಸಂಸ್ಥೆಗೆ ಮಾತ್ರ ಇರುವಂತೆ ನಿಬಂಧನೆಯನ್ನು ವಿಧಿಸಲಾಯಿತು. ಅದು ಕೂಡ ಆಸ್ಕರ್ ಅವಾರ್ಡ್ ಬೆಲೆ 1 ಮಿಲಿಯನ್ ದಾಟದಂತೆ ವಿಕ್ರಯಿಸುವಂತೆ ನಿಬಂಧನೆ ತರಲಾಯಿತು. ಹಾಗಾಗಿ ಆಸ್ಕರ್ ಪ್ರಶಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡುವ ಬುದ್ಧಿಯನ್ನು ಬಿಟ್ಟ ಪ್ರಶಸ್ತಿ ವಿಜೇತರು ಅದನ್ನು ಮಾರುವ ಸಾಹಸಕ್ಕೆ ಹೋಗಲಿಲ್ಲ.
RRR ಯಶಸ್ಸಿನ ಬೆನ್ನಲ್ಲೇ ರಾಜಮೌಳಿಗೆ ನಿರ್ಮಾಪಕ ರಾಮ್ಗೋಪಾಲ್ ವರ್ಮಾ ಕೊಲೆ ಬೆದರಿಕೆ!