ಹಿಂದೂ ದಿಲೀಪ್‌ ಕುಮಾರ್‌, ಮುಸ್ಲಿಂ ಎ.ಆರ್.ರಹಮಾನ್‌ ಆದದ್ದು ಹೇಗೆ?

By Suvarna NewsFirst Published Jan 12, 2021, 4:39 PM IST
Highlights

ಹಿಂದೂ ಹುಡುಗ ದಿಲೀಪ್ ಕುಮಾರ್, ಸೂಫಿ ಮುಸ್ಲಿಂ ಎ.ಆರ್.ರಹಮಾನ್ ಆಗಿ ದೊಡ್ಡ ಸಂಗೀತ ನಿರ್ದೇಶಕನಾದ ಕತೆ ನಿಮಗೆ ಗೊತ್ತೆ?

ಇಂದು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಹುಟ್ಟಿದ್ದು ಹಿಂದೂ ಆಗಿ. ಈಗ ಮುಸ್ಲಿಂ ಆಗಿರುವ ಅವರಿಗೆ ಅಲ್ಲಾರಖಾ ರಹಮಾನ್ ಎಂಬ ಮುಸ್ಲಿಂ ಹೆಸರನ್ನು ಇಟ್ಟುವರು ಒಬ್ಬ ಹಿಂದೂ ಜ್ಯೋತಿಷಿ. ಈ ವಿಚಾರ ನಿಮಗೆ ಗೊತ್ತಿದೆಯಾ? ಆ ಕತೆ ಇಲ್ಲಿದೆ.

ರಹಮಾನ್ ಅವರ ಹುಟ್ಟು ಹೆಸರು ದಿಲೀಪ್ ಕುಮಾರ್. ಅವರು ಇನ್ನೂ ತಾರುಣ್ಯಕ್ಕೆ ಕಾಲಿಡುತ್ತಿರುವಾಗಲೇ ಅವರ ತಂದೆ ತೀರಿಕೊಂಡರು. ಕುಟುಂಬದಲ್ಲಿ ನಾಲ್ಕು ಮಕ್ಕಳು. ಯಾರಿಗೂ ಕೆಲಸವಿಲ್ಲ. ಕುಟುಂಬದ ಆಧಾರವಾಗಿದ್ದ ತಂದೆ ತೀರಿಕೊಂಡಿದ್ದರು. ಹಣಕಾಸಿನ ಹೊರೆ ರಹಮಾನ್ ಮೇಲೆ ಬಿದ್ದಿತ್ತು. ತೀವ್ರ ಒತ್ತಡದ ಸಮಯ. ದಿಲೀಪ್ ಅವರ ತಾಯಿ ದೈವಭಕ್ತೆ. ಅವರ ಮನೆಯಲ್ಲಿ ರಾಮ ಕೃಷ್ಣ ಮುಂತಾದ ಹಿಂದೂ ದೇವ ದೇವತಗೆಗಳ ಚಿತ್ರಗಳಿದ್ದವು. ಅವುಗಳ ಜೊತೆಗೇ ಜೀಸಸ್ ಕ್ರಿಸ್ತನ ಫೋಟೋವೂ ಇತ್ತು. ಹಾಗೇ ಮೆಕ್ಕ- ಮದೀನಾ ಕಾಬಾಗಳ ಚಿತ್ರವನ್ನೂ ಜೊತೆಗೇ ಇಟ್ಟು ಪೂಜಿಸಲಾಗುತ್ತಿತ್ತು. ಒಂದು ರೀತಿಯಲ್ಲಿ ಅವರ ಮನೆ ಸರ್ವ ಧರ್ಮ ಸಮನ್ವಯದ ಭಾವದಿಂದ ಇತ್ತು. ಅವರ ತಾಯಿ, ಸೂಫಿ ಸಂತ ಕರೀಮುಲ್ಲಾ ಶಾ ಖಾದ್ರಿ ಅವರ ಮಹಾನ್ ಭಕ್ತೆಯಾಗಿದ್ದರು. ಅವರಲ್ಲಿಗೆ ತೆರಳಿ ಮಾತನಾಡಿ ಆಶೀರ್ವಾದ ಪಡೆದು ಮನಶ್ಶಾಂತಿ ಪಡೆಯುತ್ತಿದ್ದರು. 

AR ರೆಹಮಾನ್ ಅವರ ವಂದೇ ಮಾತರಂ ಸಾಂಗ್ ಹಾಡಿದ ಪೋರಿಗೆ ಮೋದಿ ಮೆಚ್ಚುಗೆ, ಇಲ್ನೋಡಿ ವಿಡಿಯೋ ...

ಹೀಗೇ ಹತ್ತು ವರ್ಷಗಳು ಕಳೆದವು. ದಿಲೀಪ್ ಮತ್ತು ಅವರ ತಾಯಿ, ಕರೀಮುಲ್ಲಾ ಖಾದ್ರಿ ಅವರಲ್ಲಿಗೆ ಹೋಗಿ ಬರುತ್ತಿದ್ದರು. ಸೂಫಿ ಸಂತರಿಗೆ ಅನಾರೋಗ್ಯವಾದಾಗ ಇವರ ತಾಯಿಯೇ ನೋಡಿಕೊಂಡರು. ಅದೇ ಸಂದರ್ಭದಲ್ಲೇ ಸ್ವ ಇಚ್ಛೆಯಿಂದ ದಿಲೀಪ್, ತಾನು ಸೂಫಿ ಇಸ್ಲಾಂಗೆ ಮತಾಂತರವಾಗುತ್ತೇನೆಂದೂ ಹೆಸರು ಬದಲಾಯಿಸಿಕೊಳ್ಳುತ್ತೇನೆಂದೂ ಹೇಳಿದ್ದು. ಅಷ್ಟರಲ್ಲಾಗಲೇ ದಿಲೀಪ್ ಕುಮಾರ್, ನಾಟಕಗಳಲ್ಲೂ ಸಣ್ಣಪುಟ್ಟ ಫಿಲಂಗಳಲ್ಲೂ ಸಂಗೀತ ನಿರ್ದೇಶನ ಕೊಡುವುದಕ್ಕೆ ಶುರು ಮಾಡಿದ್ದರು. ಆಗ ದಿಲೀಪ್ ವಯಸ್ಸು ಹತ್ತೊಂಬತ್ತು. ಶಿಕ್ಷಣವನ್ನು ಬಿಟ್ಟು ಪೂರ್ಣಾವಧಿ ಸಂಗೀತದಲ್ಲೇ ಅವರು ತೊಡಗಿಕೊಂಡಿದ್ದರು.
 

 
ಆದರೆ ದಿಲೀಪ್ ಕುಮಾರ್ ತನ್ನ ಹೆಸರಿನ ಬಗ್ಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ದಿಲೀಪ್ ಎಂದು ಕರೆದರೆ ಯಾರನ್ನೋ ಕರೆದಂತೆ ಅವರಿಗೆ ಅನಿಸುತ್ತಿತ್ತಂತೆ. ತನ್ನನ್ನು ಕರೆದದ್ದು ಅನಿಸುತ್ತಲೇ ಇರಲಿಲ್ಲವಂತೆ. ಆ ಹೆಸರಿಗೂ ತನಗೂ ಸಂಬಂದವೇ ಇಲ್ಲ ಅನಿಸುತ್ತಿತ್ತು. ಆದ್ದರಿಂದ ಹೆಸರನ್ನು ಬದಲಾಯಿಸಲು ನಿರ್ಧರಿಸಿದೆ ಎಂದು ರಹಮಾನ್ ಆಮೇಲೆ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಕಿರಿಯ ತಂಗಿಗೆ ಮದುವೆ ನಿಶ್ಚಯವಾಯಿತು. ಆಕೆಯ ಜಾತಕ ತೋರಿಸಲು ಒಬ್ಬ ಹಿಂದೂ ಜ್ಯೋತಿಷಿಯಲ್ಲಿಗೆ ಹೋದರು. ಆ ಜ್ಯೋತಿಷಿ, ರಹಮಾನ್‌ ಅವರತ್ತ ಹೆಚ್ಚು ಆಕರ್ಷಿತರಾದರು. ''ಈ ವ್ಯಕ್ತಿಯಲ್ಲಿ ಏನೋ ವಿಶೇಷತೆ ಇದೆ,'' ಎಂದು ಅವರು ಹೇಳಿದರು. ಆಗ, ತನ್ನ ಹೆಸರಿನ ಬಗ್ಗೆ ತನಗಿರುವ ಅನಾಸಕ್ತಿಯನ್ನು ದಿಲೀಪ್ ಹೇಳಿಕೊಂಡರು. ಅಷ್ಟರಲ್ಲಾಗಲೇ ಅವರ ನಂಬಿಕೆಗಳು ಹಿಂದೂ ದೇವತೆಗಳಿಂದ, ಸೂಫಿ ಇಸ್ಲಾಂನತ್ತ ತಿರುಗಿದ್ದವು. ಸೂಫಿ ಧರ್ಮ ಇಸ್ಲಾಂಗಿಂತ ಸ್ವಲ್ಪ ಭಿನ್ನ. ಅಲ್ಲಿ ಅಲ್ಲಾಹ್‌ನ ಯಾವುದೇ ಒಂದು ರೂಪವನ್ನು ಪ್ರಾರ್ಥಿಸುವುದಿಲ್ಲ. ಬದಲಾಗಿ ಎಲ್ಲರಿಗೂ ಇರುವ ಸಮಾನತೆಯ ಭಾವನೆ ಹಾಗೂ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಸೂಫಿ ಧರ್ಮದ ಹಾದಿಯಲ್ಲಿ ನಡೆದಿದ್ದ ದಿಲೀಪ್, ತಮಗೊಂದು ಪರ್ಯಾಯ ಹೆಸರನ್ನು ಸೂಚಿಸುವಂತೆಯೂ ಆ ಜ್ಯೋತಿಷಿಯನ್ನು ಪ್ರಾರ್ಥಿಸಿದರು. ಅವರು ಸೂಚಿಸಿದ ಹೆಸರುಗಳು ಎರಡು- ಅಬ್ದುಲ್ ರಹಮಾನ್ ಮತ್ತು ಅಬ್ದುಲ್ ರಹೀಮ್. ರಹಮಾನ್ ಎಂಬ ಹೆಸರು ದಿಲೀಪ್‌ಗೆ ತುಂಬಾ ಇಷ್ಟವಾಯಿತು. ಅದನ್ನೇ ಇಟ್ಟುಕೊಂಡರು. ಆಮೇಲೆ ಆ ಹೆಸರಿಗೆ ಅವರ ತಾಯಿ, ಅಲ್ಲಾರಖಾ ಎಂಬುದನ್ನು ಸೇರಿಸಿದರು. ಅಲ್ಲಾರಖಾ ಎಂದರೆ ದೇವರಿಂದ ರಕ್ಷಿಸಲ್ಪಟ್ಟವನು ಎಂದರ್ಥ.

ಲತಾ ಮಂಗೇಶ್ಕರ್‌ ಹಾಗೂ ಎ.ಆರ್. ರೆಹಮಾನ್‌ ಕಾಂಬೀನೆಷನ್‌ನ ಟಾಪ್‌ ಹಾಡುಗಳು! ...

ಈ ಹೆಸರಿನಲ್ಲಿ ಏನು ಶಕ್ತಿಯಿತ್ತೋ ಏನೋ, ರಹಮಾನ್ ಆ ಬಳಿಕ ಹಿಂದಿರುಗಿ ನೋಡಲಿಲ್ಲ. ಬಾಂಬೇ ಮುಂತಾದ ಫಿಲಂಗಳಲ್ಲಿ ಕೆಲಸ ಮಾಡಿದರು. ಅವರ ಸಂಗೀತ ಅವರನ್ನು ಆಸ್ಕರ್ ಪ್ರಶಸ್ತಿಯ ವರೆಗೂ ಕೊಂಡೊಯ್ದಿತು. ಸ್ವತಃ ರಹಮಾನ್ ಇದನ್ನು ತನ್ನ ಹೆಸರಿನ ಬದಲಾವಣೆಯಿಂದ ಆದ ಪವಾಡ ಎಂದು ಹೇಳುವುದಿಲ್ಲ. ಆದರೆ, ಸೂಫಿ ಧರ್ಮದಲ್ಲಿ ಅವರು ಇಟ್ಟಿರುವ ನಂಬಿಕೆ ಇಂದಿಗೂ ಅಚಲವಾದುದು. 
ಈ ಕತೆಯನ್ನೆಲ್ಲ ಅವರು ಇತ್ತೀಚೆಗೆ ಬಿಡುಗಡೆಯಾದ ತಮ್ಮ ಜೀವನಚರಿತ್ರೆ ದಿ ಸ್ಪಿರಿಟ್ ಆಫ್ ಮ್ಯೂಸಿಕ್ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಪತ್ರಕರ್ತೆ ನಸ್ರೀನ್ ಮುನ್ನಿ ಕಬೀರ್ ನಿರೂಪಿಸಿದ್ದಾರೆ.

ರಂಗೀಲಾಗೆ 25 ವರ್ಷ, ಈ ಸಿನಿಮಾಕ್ಕೆ 7 ಹಾಡು ಕಂಪೋಸ್ ಮಾಡಿದ್ರು ರೆಹಮಾನ್..! ...

 

click me!