S Janaki: ಅಜ್ಜಿ ಎಸ್ ಜಾನಕಿಗೆ ಮೊಮ್ಮಗಳು ಅಪ್ಸರಾ ಹೇಳಿದ ಕೊನೆಯ ವಿದಾಯ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು

Published : Jul 12, 2026, 08:15 PM IST
S Janaki

ಸಾರಾಂಶ

ದೇಹಕ್ಕೆ ಸಾವಿರಬಹುದು, ಆದರೆ ದೈವದತ್ತವಾದ ಆ ಧ್ವನಿಗೆ ಸಾವಿಲ್ಲ. ಕಣಿಯನಹುಂಡಿಯ ಮಣ್ಣಿನಲ್ಲಿ ಜಾನಕಮ್ಮ ಲೀನವಾಗಿದ್ದರೂ, ಅವರು ಹಾಡಿದ ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’ ಸೇರಿದಂತೆ ಸಾವಿರಾರು ಹಾಡುಗಳು ಗಾಳಿಯಲ್ಲಿ ತೇಲಿಬರುತ್ತಲೇ ಇರುತ್ತವೆ.

ಗಾನ ಕೋಗಿಲೆಯ ಮೌನ ಪಯಣ: ಮೊಮ್ಮಗಳ ಪ್ರೀತಿಯ ಮುತ್ತು, ಮೈಸೂರಿನ ಮಣ್ಣಿನಲ್ಲಿ ಲೀನವಾದ ‘ಸ್ವರ ಸರಸ್ವತಿ’!

ಸಂಗೀತದ ಆಕಾಶದಲ್ಲಿ ಏಳು ದಶಕಗಳ ಕಾಲ ಧ್ರುವತಾರೆಯಂತೆ ಹೊಳೆದು, ಕೋಟ್ಯಂತರ ಹೃದಯಗಳನ್ನು ತನ್ನ ಕಂಠಸಿರಿಯಿಂದ ತಣಿಸಿದ್ದ ‘ಗಾನ ಕೋಗಿಲೆ’ ಎಸ್‌ ಜಾನಕಿ (S Janaki) ಅಮ್ಮ ಇನ್ನು ನೆನಪು ಮಾತ್ರ. 88 ವರ್ಷಗಳ ಸುದೀರ್ಘ ಮತ್ತು ಸಾರ್ಥಕ ಬದುಕನ್ನು ನಡೆಸಿದ ಈ ಸ್ವರ ಸಾಮ್ರಾಜ್ಞಿ, ಜುಲೈ 11ರಂದು ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿಯೊಂದಿಗೆ ಭಾರತೀಯ ಸಂಗೀತ ಲೋಕದ ಒಂದು ಸುವರ್ಣ ಯುಗ ಅಂತ್ಯಗೊಂಡಿದೆ.

ಕಣ್ಣೀರು ತರಿಸಿದ ಮೊಮ್ಮಗಳ ಅಂತಿಮ ವಿದಾಯ:

ಜಾನಕಮ್ಮನವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕಂಡುಬಂದ ಒಂದು ದೃಶ್ಯ ಮಾತ್ರ ಕಲ್ಲೆದೆಯವರನ್ನೂ ಕರಗಿಸುವಂತಿತ್ತು. ಮೈಸೂರಿನ ಕಣಿಯನಹುಂಡಿ ತೋಟದಲ್ಲಿ ನಡೆದ ವಿಧಿವಿಧಾನಗಳ ವೇಳೆ, ಜಾನಕಿ ಅವರ ಪ್ರೀತಿಯ ಮೊಮ್ಮಗಳು ಅಪ್ಸರಾ (Apsara) ತನ್ನ ಅಜ್ಜಿಯ ಹಣೆಗೆ ಮುತ್ತಿಟ್ಟು, ಬಿಕ್ಕಿ ಬಿಕ್ಕಿ ಅಳುತ್ತಾ ಬೀಳ್ಕೊಟ್ಟ ಕ್ಷಣ ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. "ಅಜ್ಜಿ ನೀವು ಹಾಡಿನ ಮೂಲಕ ಸದಾ ನನ್ನ ಜೊತೆ ಇರುತ್ತೀರಿ" ಎಂಬಂತೆ ಅಪ್ಸರಾ ನೀಡಿದ ಆ ಅಂತಿಮ ಚುಂಬನ, ಅಜ್ಜಿ-ಮೊಮ್ಮಗಳ ನಡುವಿನ ಅಪಾರ ಪ್ರೀತಿಗೆ ಸಾಕ್ಷಿಯಾಗಿತ್ತು. ಇನ್ನೊಬ್ಬರು ಮಗಳು ವರ್ಷಾ ಸಹ ಹಾಜರಿದ್ದು ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.

ಸ್ವಂತ ತೋಟದಲ್ಲೇ ಅಂತ್ಯಕ್ರಿಯೆ: ನೆರವೇರಿದ ಕೊನೆಯ ಆಸೆ

ಜಾನಕಮ್ಮನವರಿಗೆ ಮೈಸೂರು ಮತ್ತು ಕನ್ನಡ ನಾಡಿನ ಮೇಲೆ ಎಲ್ಲಿಲ್ಲದ ಪ್ರೀತಿ. ನಾಲ್ಕು ವರ್ಷಗಳ ಹಿಂದೆ ಅವರು ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ರಸ್ತೆಯ ಕಣಿಯನಹುಂಡಿ ಬಳಿ ಒಂದು ಸುಂದರವಾದ ತೋಟದ ಜಮೀನನ್ನು ಖರೀದಿಸಿದ್ದರು. "ನಾನು ಮಣ್ಣಾಗುವುದಿದ್ದರೆ ಇದೇ ಜಾಗದಲ್ಲಿ ಮಣ್ಣಾಗಬೇಕು" ಎಂಬುದು ಅವರ ಕೊನೆಯ ಆಸೆಯಾಗಿತ್ತು. ಅವರ ಇಚ್ಛೆಯಂತೆಯೇ, ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಸಕಲ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕರ್ನಾಟಕ ಸರ್ಕಾರದ ಪರವಾಗಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಮಹಾನ್ ಚೇತನ ಎಸ್ ಜಾನಕಿಯವರಿಗೆ ವಿದಾಯ ಹೇಳಿದರು.

ಕನ್ನಡದ ಮೇಲಿನ ಆ ‘ಅನನ್ಯ’ ಪ್ರೀತಿ:

ಭಾರತದ ಸುಮಾರು 22ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ಬರೆದಿದ್ದರೂ, ಜಾನಕಮ್ಮನವರಿಗೆ ಕನ್ನಡ ಚಿತ್ರರಂಗದ ಮೇಲೆ ವಿಶೇಷ ಮಮಕಾರವಿತ್ತು. ಅವರು ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು ನಮ್ಮ ಹೆಮ್ಮೆಯ ಕನ್ನಡ ಭಾಷೆಯಲ್ಲೇ ಎಂಬುದು ವಿಶೇಷ. ಡಾ. ರಾಜ್‌ಕುಮಾರ್ ಜೊತೆಗಿನ ಅವರ ಜುಗಲ್ಬಂದಿ ಇಂದಿಗೂ ಕನ್ನಡಿಗರ ಮನೆಮನಗಳಲ್ಲಿ ಹಸಿರಾಗಿದೆ. ಎಸ್‌ಪಿಬಿ-ಎಸ್‌ ಜಾನಕಿ ಅವರಿಬ್ಬರ ಜೋಡಿಯ ಹಾಡಂತೂ ಸಂಗೀತ ಪ್ರೇಮಿಗಳಿಗೆ ಹಬ್ಬ.

ಹರಿದುಬಂದ ಅಭಿಮಾನಿ ಸಾಗರ:

ಜಾನಕಮ್ಮ ಕೇವಲ ಒಬ್ಬ ಗಾಯಕಿಯಾಗಿರಲಿಲ್ಲ, ಚಿತ್ರರಂಗದ ಪ್ರತಿಯೊಬ್ಬರಿಗೂ ಅವರು ‘ಅಮ್ಮ’ನಾಗಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕಣಿಯನಹುಂಡಿ ಫಾರ್ಮ್ ಹೌಸ್‌ನತ್ತ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಚಿತ್ರರಂಗದ ಖ್ಯಾತ ನಟ-ನಟಿಯರು, ಗಾಯಕರು ಮತ್ತು ರಾಜಕೀಯ ಗಣ್ಯರು ಸರತಿ ಸಾಲಿನಲ್ಲಿ ನಿಂತು ಅಗಲಿರುವ ತಮ್ಮ ಅಚ್ಚುಮೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು.

ದೇಹಕ್ಕೆ ಸಾವಿರಬಹುದು, ಆದರೆ ದೈವದತ್ತವಾದ ಆ ಧ್ವನಿಗೆ ಸಾವಿಲ್ಲ. ಕಣಿಯನಹುಂಡಿಯ ಮಣ್ಣಿನಲ್ಲಿ ಜಾನಕಮ್ಮ ಲೀನವಾಗಿದ್ದರೂ, ಅವರು ಹಾಡಿದ ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’ ಸೇರಿದಂತೆ ಸಾವಿರಾರು ಹಾಡುಗಳು ಗಾಳಿಯಲ್ಲಿ ತೇಲಿಬರುತ್ತಲೇ ಇರುತ್ತವೆ. ಈ ಜಗತ್ತು ಇರುವವರೆಗೂ ಎಸ್ ಜಾನಕಿ ಹಾಡುಗಳ ಮೂಲಕ ನಮ್ಮೆಲ್ಲರ ನಡುವೆಯೇ ಇರುತ್ತಾರೆ. ಸ್ವರ ಲೋಕದ ಈ ಧ್ರುವತಾರೆಗೆ ಕೋಟ್ಯಾಂತರ ಅಭಿಮಾನಿಗಳಿಂದ ಕೋಟಿ ಕೋಟಿ ನಮನಗಳು ಸಲ್ಲುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'Will You Marry Me?': ಸಿನಿಮಾ ಕಥೆಯಂತಿದೆ ಖ್ಯಾತ ಗಾಯಕಿ ನೇಹಾ ಕಕ್ಕರ್ ಲವ್ ಸ್ಟೋರಿ!
S Janaki - SPB: ಎಸ್‌ಪಿಬಿ ನಿಧನರಾದಾಗ ಎಸ್ ಜಾನಕಿ ಒಂದು ಪತ್ರ ಬರೆದಿದ್ದರು; ಆ ವೈರಲ್ ಲೆಟರ್‌ನಲ್ಲಿ ಏನಿತ್ತು?