90ರ ದಶಕದ ಜನಪ್ರಿಯ ನಟಿ ಆಕೆ. ರಾಜಮನೆತನದವಳು. ಸಲ್ಮಾನ್ ಖಾನ್ ಜೊತೆಗೆ ಹೀರೋಯಿನ್ ಆದವಳು. ಆದರೆ ಆಕೆಯ ವೃತ್ತಿಜೀವನ ಅವಳ ಮದುವೆಯ ನಂತರ ನೆಲಕಚ್ಚಿತು. ಅವಳ ಗಂಡ, ಅವಳು ನಟಿಸುವ ಫಿಲಂಗಳ ಹೀರೋ ತಾನೇ ಆಗಬೇಕೆಂದು ವರಾತ ತೆಗೆಯುತ್ತಿದ್ದ!
ಆಕೆ ರಾಜಮನೆತನದಿಂದ ಬಂದವಳು. ಸಲ್ಮಾನ್ ಖಾನ್ ಜೊತೆಗೇ ಹೀರೋಯಿನ್ ಆಗಿ ನಟಿಸಿದವಳು. ಒಂದು ಕಾಲದ ಅದೃಷ್ಟವಂತ ಮತ್ತು ಬಾಲಿವುಡ್‌ನ ಬಹಬೇಡಿಕೆಯ ನಟಿ. ಆದರೆ ಯಾವಾಗ ಮದುವೆಯಾದಳೋ, ಆಕೆಯ ಮನೆಗೆ ಮಟಾಷ್ ಲೆಗ್ ಕಾಲಿಟ್ಟಂತಾಯಿತು. ಒಂದು ರೀತಿಯಲ್ಲಿ ಆಕೆಯ ಗಂಡನೇ ಉತ್ತುಂಗದಲ್ಲಿದ್ದ ಅವಳ ಬಾಲಿವುಡ್ ಕೆರಯರ್‌ನ ಸರ್ವನಾಶಕ್ಕೆ ಕಾರಣನಾದ.
ಈ ಸುಂದರ ನಟಿ ಬೇರೆ ಯಾರೂ ಅಲ್ಲ, 90 ರ ದಶಕದ ಜನಪ್ರಿಯ ನಟಿ ಭಾಗ್ಯಶ್ರೀ. ಸಾಂಗ್ಲಿಯ ಮರಾಠಿ ರಾಜಮನೆತನದ ಕುಡಿ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಸಾಂಗ್ಲಿ ಸಂಸ್ಥಾನದ ಕೊನೆಯ ಆಡಳಿತಗಾರನಾಗಿದ್ದ ಚಿಂತಾಮರಾವ್ ಧುಂಡಿರಾವ್ ಪಟವರ್ಧನ್ ಅವರ ಮೊಮ್ಮಗಳು. ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ 15 ಚಿತ್ರಗಳ ನಂತರವೂ ಅನೇಕರು ತಲುಪಲು ಹೆಣಗಾಡುವ ಮಟ್ಟದ ಯಶಸ್ಸನ್ನು ಒಂದೇ ಚಿತ್ರದಲ್ಲಿ ಸಾಧಿಸಿದಳು. 1989ರಲ್ಲಿ ಆಕೆ ಎಲ್ಲರೂ ಗಮನಿಸುವಷ್ಟು ಪ್ರಕಾಶಮಾನವಾಗಿ ಬೆಳಗಿದಳು. ತನ್ನ ಮುಗ್ಧತೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಳು.
ಭಾಗ್ಯಶ್ರೀ 1989ರಲ್ಲಿ ಸೂರಜ್ ಬರ್ಜತ್ಯಾ ಅವರ ಮೈನೆ ಪ್ಯಾರ್ ಕಿಯಾ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಅವಳ ಚೊಚ್ಚಲ ಪ್ರವೇಶದಲ್ಲಿಯೇ ಅನೇಕರು ಕನಸು ಕಾಣುವ ಮಟ್ಟದ ಯಶಸ್ಸನ್ನು ಸಾಧಿಸಿದಳು. ಅದರಲ್ಲಿ ಸಲ್ಮಾನ್ ಖಾನ್ ಎದುರು ನಟಿಸಿದ ಅವಳು ರಾತ್ರೋರಾತ್ರಿ ಮನೆಮಾತಾದಳು. ಇಂದಿಗೂ, ಅಪರೂಪದಲ್ಲಿ ಮಾತ್ರ ಕೆಲವೇ ನಟಿಯರು ಒಂದು ಚಿತ್ರದಿಂದ ಇಂಥ ತಾರಾಪಟ್ಟವನ್ನು ಪಡೆಯುತ್ತಾರೆ.
ಆದರೆ ಶೀಘ್ರದಲ್ಲೇ ವೈವಾಹಿಕ ಬದುಕು ಆಕೆಯನ್ನು ಬರಸೆಳೆಯಿತು. ಮೈನೆ ಪ್ಯಾರ್ ಕಿಯಾ ಚಿತ್ರೀಕರಣದ ಸಮಯದಲ್ಲಿ ಆಕೆ ಹಿಮಾಲಯ ದಾಸಾನಿ ಎಂಬಾತನೊಂದಿಗೆ ಡೇಟಿಂಗ್ ಮಾಡುತ್ತಿದ್ದಳು. ಸಲ್ಮಾನ್ ಖಾನ್ ಆಗಾಗ್ಗೆ ತನ್ನ ಹೆಸರನ್ನು ಹೇಳುವ ಮೂಲಕ ಅವಳನ್ನು ಕೀಟಲೆ ಮಾಡುತ್ತಿದ್ದ. ಚಿತ್ರ ಹಿಟ್ ಆದ ಬಳಿಕ. ಭಾಗ್ಯಶ್ರೀ 1990ರಲ್ಲಿ ಹಿಮಾಲಯನನ್ನು ವಿವಾಹವಾದಳು.
ಉದ್ಯಮಿ ಹಿಮಾಲಯ ದಾಸಾನಿ ಕೂಡ ಬಾಲಿವುಡ್‌ನಲ್ಲಿ ನಟಿಸಿ ಹೆಸರು ಮಾಡಲುಹೊಂಚು ಹಾಕುತ್ತಲೇ ಇದ್ದ. ಅವನಲ್ಲಿ ಹಣವಿತ್ತು. ಆದರೆ ಪ್ರತಿಭೆ ಮತ್ತು ಅದೃಷ್ಟ ಇರಲಿಲ್ಲ. ಅವನ ವೃತ್ತಿಜೀವನ ಎಂದಿಗೂ ಮೇಲೇರಲಿಲ್ಲ. ಭಾಗ್ಯಶ್ರೀ ವಿವಾಹದ ನಂತರ, ಅವಳು 1992ರಲ್ಲಿ ಮೂರು ಚಿತ್ರಗಳಲ್ಲಿ ನಟಿಸಿದಳು - ಖೈದ್ ಮೈ ಹೈ ಬುಲ್ಬುಲ್, ತ್ಯಾಗಿ ಮತ್ತು ಪಾಯಲ್ - ಎಲ್ಲವೂ ಆಕೆಯ ಪತಿಯೊಂದಿಗೆ! ದುರದೃಷ್ಟವಶಾತ್ ಈ ಚಿತ್ರಗಳಲ್ಲಿ ಯಾವುದೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಭಾಗ್ಯಶ್ರೀಯ ಮ್ಯಾಜಿಕ್ ಕೂಡ ಆತನನ್ನು ಬಚಾಯಿಸಲಿಲ್ಲ.
ಮದುವೆಯ ನಂತರ ಭಾಗ್ಯಶ್ರೀ ಮತ್ತೆ ತೆರೆಗೆ ಬರಲು ಪ್ರಯತ್ನಿಸಿದಳು. ಅವಳೇನೋ ತನ್ನ ವೃತ್ತಿಜೀವನದ ಬಗ್ಗೆ ಭರವಸೆ ಹೊಂದಿದ್ದಳು. ಆದರೆ ತನ್ನ ಬಳಿಗೆ ಬಂದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ, ತನ್ನ ಗಂಡನನ್ನೂ ಸಿನಿಮಾದಲ್ಲಿ ಹಾಕಿಕೊಳ್ಳಲು ಒತ್ತಾಯಿಸುತ್ತಿದ್ದಳು. ಅಥವಾ ಅವನೇ ಈಕೆಯಿಂದ ಆ ಒತ್ತಡ ಹಾಕಿಸುತ್ತಿದ್ದ. ಆದರೆ ಈ ಆಫರ್ ನಿರ್ದೇಶಕರಿಗೆ ಪಥ್ಯವಾಗಲಿಲ್ಲ. ಈ ಹಿಮಾಲಯ ಎಂಬ ದಡ್ಡ, ಪೆದ್ದು, ದುರದೃಷ್ಟವಂತ ಮನುಷ್ಯನನ್ನು ಹಾಕಿಕೊಂಡು ಹಣ ಕಳೆದುಕೊಳ್ಳುವುದು ಅವರಿಗೆ ಬೇಕಿರಲಿಲ್ಲ.
ಈ ಬೇಡಿಕೆ ದುಬಾರಿಯಾಗಿ ಪರಿಣಮಿಸಿತು. ಅದು ಅವಳ ಅವಕಾಶಗಳನ್ನು ಸೀಮಿತಗೊಳಿಸಿತು. ಮದುವೆಯ ನಂತರ ಆಕೆ ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರೂ ಅದು ಹಿಮಾಲಯನೊಂದಿಗೆ ಮಾತ್ರ. ಭಾಗ್ಯಶ್ರೀ ಆಗಾಗ್ಗೆ ನಿರ್ಮಾಪಕರನ್ನು ತನ್ನ ಪತಿಯನ್ನೂ ತನ್ನೊಂದಿಗೆ ಚಲನಚಿತ್ರಗಳಲ್ಲಿ ನಟಿಸುವಂತೆ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಳು. ಹಿಮಾಲಯ ಈ ನಿಲುವನ್ನು ಸಮರ್ಥಿಸಿಕೊಂಡ- "ನಾವು ಕೆಲಸಕ್ಕಾಗಿ ಯಾರನ್ನೂ ಸಂಪರ್ಕಿಸುವುದಿಲ್ಲ. ನಿರ್ಮಾಪಕರು ನಮ್ಮ ಮನೆಗೆ ಬಂದು ನಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತಾರೆ" ಎಂದು ಹೇಳಿದ.
ಈ ಸಿನಿಮಾ ಟಿಕೆಟ್’ಗಾಗಿ ಊಟ-ತಿಂಡಿ ಬಿಟ್ಟು, ಎರಡು ದಿನ ರಾತ್ರಿ, ಹಗಲೆನ್ನದೇ ಲೈನಲ್ಲಿ ನಿಂತಿದ್ರಂತೆ ಜನ!
ತಮ್ಮ ವೃತ್ತಿಜೀವನ ಮತ್ತು ಪತಿಯ ಪ್ರಭಾವದ ಬಗ್ಗೆ ಮಾತನಾಡುತ್ತಾ, ಭಾಗ್ಯಶ್ರೀ ಒಂದು ಸಂದರ್ಶನದಲ್ಲಿ ಹೀಗೆ ಹೇಳಿದಳು, “ಆ ಸಮಯದಲ್ಲಿ ನಾನು ಆತನೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತಿದ್ದೆ. ನಾನು ತುಂಬಾ ಪೊಸೆಸಿವ್ ಗಂಡನನ್ನು ಹೊಂದಿದ್ದೆ. ಅವನು ನಿಜವಾಗಿಯೂ ಪೊಸೆಸಿವ್ ಆಗಿದ್ದ. ಅವನು ನನ್ನ ಅವಕಾಶಗಳನ್ನು ಸೀಮಿತಗೊಳಿಸಿದ. ನಾನು ಅವನ ಹೊರತಾಗಿ ಒಂದೆರಡು ಚಲನಚಿತ್ರಗಳನ್ನು ಮಾಡಿದ್ದೆ. ಆದರೆ ನಾನು ತೆಗೆದುಕೊಳ್ಳಬಹುದಾದ ಪಾತ್ರಗಳ ವ್ಯಾಪ್ತಿ ತುಂಬಾ ಕಡಿಮೆಯಾಯಿತು. ಚಲನಚಿತ್ರಗಳಲ್ಲಿ ಪ್ರಣಯ ದೃಶ್ಯಗಳಿರುತ್ತವೆ. ನಾನು ಅವುಗಳನ್ನು ಮಾಡುವುದು ಅವನಿಗೆ ಇಷ್ಟವಿರಲಿಲ್ಲ. ನಾನು ಮೊದಲು ನಮ್ಮ ಸಂಬಂಧಕ್ಕೆ ಆದ್ಯತೆ ನೀಡಿದೆ. ಹೀಗಾಗಿ ಅಂತಹ ಚಿತ್ರಗಳನ್ನು ಒಪ್ಪಿಕೊಳ್ಳುವುದು ಅಸಾಧ್ಯವಾಯಿತು.”
ಭಾಗ್ಯಶ್ರೀ ಮತ್ತು ಹಿಮಾಲಯನಿಗೆ ಇಬ್ಬರು ಮಕ್ಕಳು, ಒಬ್ಬ ಮಗ ಮತ್ತು ಮಗಳು. ಅವರ ಮಗ ಅಭಿಮನ್ಯು ದಾಸನಿ 2019 ರ ಚಲನಚಿತ್ರ ಮರ್ದ್ ಕೋ ದರ್ದ್ ನಹಿ ಹೋತಾದಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪುರುಷ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿದ್ದಾನೆ. ಅವರ ಮಗಳು ಅವಂತಿಕಾ ದಸ್ಸಾನಿ ವೆಬ್-ಸರಣಿ ಮಿಥ್ಯಾ ಮೂಲಕ ಪದಾರ್ಪಣೆ ಮಾಡಿದಳು.
ಒಂದು ಹಿಟ್ ಸಿನೆಮಾ ಬಳಿಕ ಕೋಟಿ ಸಂಭಾವನೆ ಕೇಳಿದ ನಟಿ, ಬೇಬಿ ವೈಷ್ಣವಿ ಸಂಭಾವನೆಗೆ ಶಾಕ್ ಆದ ಟಾಲಿವುಡ್!