
ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Agnihotri) ಇದೀಗ ಮತ್ತೊಂದು ಇಂಟ್ರಸ್ಟಿಂಗ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು ಅಲ್ಲದೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊರೊನಾ ಬಳಿಕ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಕಮಾಯಿ ಮಾಡಿದ ಹಿಂದಿ ಸಿನಿಮಾ ಎನ್ನುವ ಖ್ಯಾತಿಯನ್ನು ಗಳಿಸಿದೆ. ನಿರ್ದೇಶಕ ಅಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ಗಣ್ಯರು ಮತ್ತು ರಾಜಕೀಯ ಗಣ್ಯರು ಸಹ ಹಾಡಿಹೊಗಳಿದ್ದರು.
ಈ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಅಗ್ನಿಹೋತ್ರಿ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟುಹಾಕಿತ್ತು. ಅದರಂತೆ ಈ ಯಶಸ್ಸಿನ ಖುಷಿಯಲ್ಲಿ ಅಗ್ನಿಹೋತ್ರಿ ಇತಿಹಾಸದಲ್ಲಿ ದಾಖಲಾಗದ ಮತ್ತೆಡರು ಕಥೆಯನ್ನು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿ ಮತ್ತಷ್ಟು ಕುತೂಹಲ ಹೆಚ್ಚಿಸಿದರು. ಮತ್ತೆ ಯಾವ ಘಟನೆಯನ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ತರ್ತಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಏಪ್ರಿಲ್ 15ರಂದು ದಿ ದೆಹಲಿ ಫೈಲ್ಸ್(The Delhi Files) ಸಿನಿಮಾ ಅನೌನ್ಸ್ ಮಾಡಿದರು.
ದೆಹಲಿ ಫೈಲ್ಸ್ ಮೂಲಕ ಅಗ್ನಿಹೋತ್ರಿ ಯಾವ ಘಟನೆಯನ್ನು ಬೆಳಕಿಗೆ ತರುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿರಲಿಲ್ಲ. ಇದೀಗ ಅಗ್ನಿಹೋತ್ರಿ ದೆಹಲಿ ಫೈಲ್ಸ್ ಸಿನಿಮಾದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಸಿನಿಮಾ 1984ರ ಕರಾಳ ಅಧ್ಯಾಯದ ಬಗ್ಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ದೆಹಲು ಮಾತ್ರವಲ್ಲದೇ ತಮಿಳುನಾಡಿನ ಬಗ್ಗೆಯೂ ಈ ಸಿನಿಮಾದಲ್ಲಿ ಹೆಚ್ಚು ಹೇಳಲಾಗುತ್ತಿದೆ ಎಂದು ಹೇಳಿದರು.
Kashmir Files ಆಯ್ತು ಇದೀಗ 'ದಿ ದೆಹಲಿ ಫೈಲ್ಸ್' ಸಿನಿಮಾ ಘೋಷಿಸಿದ ಅಗ್ನಿಹೋತ್ರಿ
ಎ ಎನ್ ಐ ಜೊತೆ ಮಾತನಾಡಿದ ಅಗ್ನಿಹೋತ್ರಿ, '1984ರಲ್ಲಿ ಭಾರತೀಯ ಇತಿಹಾಸದಲ್ಲಿ ದಾಖಲಾಗದ ಒಂದು ಕರಾಳ ಅಧ್ಯಾಯದ ಬಗ್ಗೆ ಇರಲಿದೆ. ಪಂಜಾಬ್ ಭಯೋತ್ಪಾದನೆಯ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಮಾನವೀಯವಾಗಿತ್ತು. ಇದು ಸಂಪೂರ್ಣವಾಗಿ ಮತಬ್ಯಾಂಕ್ ರಾಜಕಾರಣಕ್ಕಾಗಿ ಮತ್ತು ಅದಕ್ಕಾಗಿಯೇ ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷ ಭಯೋತ್ಪಾದನೆಯನ್ನು ಬೆಳೆಸಿತು. ಮೊದಲು ಬೆಳೆಸಿದರು. ಬಳಿಕ ನಂತರ ನಾಶ ಮಾಡಿದರು. ಬಹಳಷ್ಟು ಅಮಾಯಕರನ್ನು ಕೊಲ್ಲಲಾಯಿತು. ಅದನ್ನು ಮುಚ್ಚಿಡಲಾಗಿದೆ. ಅವರಿಗೆ ಯಾವುದೇ ನ್ಯಾಯ ಸಿಕ್ಕಿಲ್ಲ ಅದು ಅತ್ಯಂತ ಕೆಟ್ಟದ್ದು' ಎಂದು ಹೇಳಿದ್ದಾರೆ.
ಇತಿಹಾಸವನ್ನು ಜನರಿಗೆ ಹೇಳಿದರೆ ಮತ್ತು ಅದರ ಸತ್ಯವನ್ನು ತಿಳಿಸಿದರೆ ಜನರು ನಿಲುವು ತಾಳುತ್ತಾರೆ ಮತ್ತು ನ್ಯಾಯವನ್ನು ಹುಡುಕುತ್ತಾರೆ ಎಂದು ಹೇಳಿದರು. 'ದೆಹಲಿ ಫೈಲ್ಸ್ ತಮಿಳುನಾಡಿನ ಬಗ್ಗೆ ಸಾಕಷ್ಟು ಸತ್ಯವನ್ನು ಹೇಳುತ್ತಿದೆ. ಇದು ಕೇವಲ ದೆಹಲಿ ಬಗ್ಗೆ ಅಲ್ಲ. ಇಷ್ಟು ವರ್ಷಗಳಿಂದ ದೆಹಲಿ ಹೇಗೆ ಭಾರತವನ್ನು ನಾಶ ಪಡಿಸುತ್ತಿದೆ ಎಂಬುದನ್ನು ತೋರಿಸಿದೆ. ದೆಹಲಿ ಆಳಿದ ಮೋಘಲ್ ರಾಜರಿಂದ, ಬ್ರಿಟಿಷರಿಂದ ಅಧುನಿಕ ಕಾಲದವರೆಗೆ ಎಲ್ಲವನ್ನೂ ನಾಶಪಡಿಸಿದರು' ಎಂದು ಅಗ್ನಿಹೋತ್ರಿ ಬಹಿರಂಗ ಪಡಿಸಿದರು.
'ಭಾರತೀಯ ರಾಜಕೀಯ ಅಜೆಂಡಾ ಯಾವಾಗಲು ಪಾಶ್ಚಿಮಾತ್ಯ ಜಾತ್ಯತೀತ ಆಗಿರುತ್ತದೆ. ಶ್ರೇಷ್ಠ ಹಿಂದೂಗಳನ್ನು ಯಾವಾಗಲೂ ಕಡೆಗಣಿಸಲಾಗುತ್ತಿದೆ. ದುರ್ಬಲ ಜನರು ಎಂದು ನಂಬುವಂತೆ ಮಾಡುತ್ತದೆ' ಎಂದು ಹೇಳಿದರು. ಅಗ್ನಿಹೋತ್ರಿ ಮಾತು ದೆಹಲಿ ಫೈಲ್ಸ್ ಸಿನಿಮಾ ಮೇಲೆ ಕುತೂಹಲ ಮತ್ತು ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
The Kashmir Files ಬಿಡುಗಡೆಯಾಗಿ 34 ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಕೆ ಎಷ್ಟು ಗೊತ್ತಾ?
ಅಂದಹಾಗೆ ಈ ಮೊದಲೇ ಬಹಿರಂಗ ಪಡಿಸಿದ ಹಾಗೆ ಕಾಶ್ಮೀರ್ ಫೈಲ್ಸ್ ಸಿನಿಮಾತಂಡವೇ ಮತ್ತೆ ಒಂದಾಗಿ ದೆಹಲಿ ಫೈಲ್ಸ್ ಚಿತ್ರದಲ್ಲಿ ಕೆಲಸ ಮಾಡುತ್ತಿದೆ. ನಿರ್ದೇಶಕ ಅಗ್ನಿ ಹೋತ್ರಿ, ಅಭಿಷೇಕ್ ಅಗರ್ವಾಲ್ ಮತ್ತು ಪಲ್ಲವಿ ಜೋಶಿ ಈ ಮೂವರು ಸೇರಿ ಮತ್ತೊಂದು ನೈಜ ಘಟನೆ ಆಧಾರಿತ ಕಥೆಯನ್ನು ಸಿನಿಮಾ ಮಾಡಲು ತಯಾರಾಗಿದ್ದಾರೆ.
ನೌಟಂಕಿ ಸಿನಿಮಾ ಮುಗಿಸಿರುವ ಅಗ್ನಿಹೋತ್ರಿ
ಕಾಶ್ಮೀರ್ ಫೈಲ್ಸ್ ಸಕ್ಸಸ್ ಖುಷಿಯಲ್ಲೇ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ನೌಟಂಕಿ ಚಿತ್ರೀಕರಣ ಮುಗಿಸಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಲಾಕ್ ಡೌನ್ ನಿಂದ ಕಾಶ್ಮೀರ್ ಫೈಲ್ಸ್ ಸಿನಿಮಾ ಚಿತ್ರೀಕರಣ ನಿಂತ ಸಮಯದಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಿರುವುದಾಗಿ ಹೇಳಿದ್ದಾರೆ. ರೆಡಿ ಇದ್ದ ಸ್ಕ್ರಿಪ್ಟ್ ಅನ್ನು ಗ್ಯಾಪ್ ನಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ ಅಗ್ನಿಹೋತ್ರಿ. ನೌಟಂಕಿ ಸಿನಿಮಾ ಕೂಡ ತುಂಬಾ ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನಿಮಾ. ಸದ್ಯ ಮತ್ತೆ ಎರಡು ಘಟನಗಳನ್ನು ತೆರೆಮೇಲೆ ತರಲು ಸಿದ್ಧರಾಗಿರುವ ಅಗ್ನಿಹೋತ್ರಿ ಒಂದು ಘಟನೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ದೆಹಲಿ ಫೈಲ್ಸ್ ಮುಗಿದ ಬಳಿಕ ಮತ್ತೊಂದು ಸಿನಿಮಾ ಘೋಷಣೆ ಮಾಡುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.