ಸ್ಮಾರ್ಟ್ಫೋನ್ನಿಂದ ಕೆಲ ಕಾಲ ದೂರವಿದ್ದ ನಟ ಆಮೀರ್ ಖಾನ್, ಆ ದಿನಗಳ ರೋಮಾಂಚಕ ಅನುಭವ ಹಂಚಿಕೊಂಡಿರುವುದು ಹೀಗೆ...
ಈಗ ಸ್ಮಾರ್ಟ್ಫೋನ್ ಇಲ್ಲದ ಜೀವನವನ್ನು ನೆನಪಿಸಿಕೊಳ್ಳುವುದೂ ಕಷ್ಟ. ಊಟನಾದ್ರೂ ಬಿಡ್ತಾರೆ, ನಿದ್ದೆಯನ್ನಾದ್ರೂ ತೊರೆಯಬಹುದು, ಆದ್ರೆ ಮಲಗಿದ್ದಾಗ ಬಿಟ್ಟು ಬೇರೆ ಸಮಯದಲ್ಲಿ ಫೋನ್ ಇರಲೇಬೇಕು, ಮಲಗುವ ಸಂದರ್ಭದಲ್ಲಿಯೂ ಪಕ್ಕದಲ್ಲಿಯೇ ಅದು ಇರಬೇಕು. ಇದು ಇಂದಿನ ಸ್ಥಿತಿ. ಹತ್ತಿಪ್ಪತ್ತು ವರ್ಷಗಳ ಹಿಂದೆ ಬದುಕಿದ್ದವರು ನಾವೇನಾ ಎಂದು ಪ್ರಶ್ನಿಸಿಕೊಳ್ಳುವ ರೀತಿಯಲ್ಲಿ ಇಂದು ಕಾಲ ಬದಲಾಗಿದೆ. ಆಗಿನ ದಿನಗಳನ್ನು ನೆನಪಿಸಿಕೊಂಡರೆ ಫೋನ್ಗಳು ಇಲ್ಲದೇ ಹೇಗೆ ಜೀವನ ಮಾಡಿದ್ದೆವು ಎಂದು ಊಹಿಸಿಕೊಳ್ಳುವುದೂ ಕಷ್ಟ ಎನಿಸಿದೆ. ಆದರೆ ಇದೇ ಫೋನ್ ಇಂದು ಇನ್ನಿಲ್ಲದ ಸಮಸ್ಯೆಗಳನ್ನು ತಂದೊಡ್ಡಿದೆ ಎನ್ನುವುದೂ ಸುಳ್ಳಲ್ಲ. ಆರೋಗ್ಯ ಸಮಸ್ಯೆಗಳು ಮಾತ್ರವಲ್ಲದೇ ಮನೆಯಲ್ಲಿನ ಸಂಬಂಧಗಳೂ ದೂರವಾಗುವಲ್ಲಿ ಮೊಬೈಲ್ ಫೋನ್ಗಳು ಬಹುದೊಡ್ಡ ಕೊಡುಗೆ ನೀಡುತ್ತಿವೆ.
ಆದರೆ ಒಂದಷ್ಟು ದಿನ ಫೋನ್ ಇಲ್ಲದೇ ಬದುಕಬಲ್ಲಿರಾ ಎಂದು ಪ್ರಶ್ನಿಸಿದರೆ, ಸಾಧ್ಯನೇ ಇಲ್ಲ ಎನ್ನುವ ಮಾತು ಕೇಳಿಬರುವುದು ಸಹಜ. ಆದರೆ ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ತಮ್ಮ ಶೂಟಿಂಗ್ ಸಮಯದಲ್ಲಿ ಬಹಳ ಸಮಯದವರೆಗೆ ಸ್ಮಾರ್ಟ್ಫೋನ್ ಬಿಟ್ಟಿದ್ದರ ಬಗ್ಗೆ ಮಾತನಾಡಿದ್ದಾರೆ. ಫೋನ್ನಿಂದ ದೂರವಿದ್ದ ಹಿನ್ನೆಲೆಯಲ್ಲಿ, ತಮ್ಮ ಜೀವನದಲ್ಲಿ ಅದು ಎಷ್ಟು ದೊಡ್ಡ ಕೊಡುಗೆ ನೀಡಿತು ಎನ್ನುವುದನ್ನು ಹೇಳಿದ್ದು, ಅದರ ವಿಡಿಯೋ ಈಗ ಪುನಃ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಗೊಂದಲವನ್ನು ತಪ್ಪಿಸಲು ತಮ್ಮ ಫೋನ್ ಆಫ್ ಮಾಡಿ, ಅದನ್ನು ಮುಟ್ಟೇ ಇರಲಿಲ್ಲ. ಇದರಿಂದ ನನ್ನ ವೈಯಕ್ತಿಕ ಜೀವನದ ಮೇಲೆ ಅಪಾರ ಪರಿಣಾಮ ಬೀರಿತು ಎಂದಿದ್ದಾರೆ ಆಮೀರ್.
ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್ 1 ನಟಿ ಆಗ್ತಾರೆ! ಆಮೀರ್ ಖಾನ್ ಹೇಳಿದ್ದೇನು ಕೇಳಿ
ಅಂದಹಾಗೆ ಆಮೀರ್ ಖಾನ್ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು 2021ರಲ್ಲಿ. ಫೆಬ್ರವರಿ 2021 ರಲ್ಲಿ, ಅವರ ಚಲನಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದ ಸಮಯದಲ್ಲಿ ಫೋನ್ನಿಂದ ದೂರವಿರಲು ನಿರ್ಧರಿಸಿದ್ದರು. ಶೂಟಿಂಗ್ ಸಮಯದಲ್ಲಿ ಫೋನ್ನಿಂದ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಅದನ್ನುಸ್ವಿಚ್ ಆಫ್ ಮಾಡಿ ದೂರವೇ ಇಟ್ಟಿದ್ದರಂತೆ. ಆದರೆ ಅದು ಇಲ್ಲವಾದ ಬಳಿಕ ತಮ್ಮ ಬದುಕಿನಲ್ಲಿ ಹಲವಾರು ಬದಲಾವಣೆ ಆದವು. ಸ್ನೇಹಿತರು, ಮನೆಯವರ ಜೊತೆ ಟೈಮ್ ಕೊಡಲು ಸಾಧ್ಯವಾಯಿತು. ಅದೆಷ್ಟು ಸುಖ ಕೊಟ್ಟಿತ್ತು ಎಂದರೆ ಮೊಬೈಲ್ ಫೋನ್ನನಿಂದ ನಾನು ನನ್ನ ಎಷ್ಟು ಸುಖ, ಸಂತೋಷಗಳನ್ನು ಕಳೆದುಕೊಂಡಿದ್ದೇನೆ ಎನ್ನುವುದು ತಿಳಿಯಿತು ಎಂದಿದ್ದಾರೆ ನಟ.
ನಾನು ಫೋನ್‌ಗೆ ಎಷ್ಟು ಅಡಿಕ್ಟ್ ಆಗಿದ್ದೇನೆ ಎನ್ನುವುದು ಆಗ ತಿಳಿಯಿತು ಎಂದಿರುವ ಆಮೀರ್ ಖಾನ್, ಸದಾ ಕಾಲ ಅಲ್ಲದಿದ್ದರೂ ಒಂದಷ್ಟು ಸಮಯ ಫೋನ್ನಿಂದ ದೂರವಿರುವಂತೆ ಸಲಹೆ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಿಂದಲೂ ದೂರವಾಗಿದ್ದರಿಂದ ಮತ್ತಷ್ಟು ಖುಷಿ ಕೊಟ್ಟಿತು. ಇದು ತಲೆ ಕೆಡಿಸುತ್ತದೆ ಎಂದಿರುವ ಅವರು, ಫೋನ್ನಿಂದ ದೂರ ಇರುವುದು ಒಳ್ಳೆಯ ಅನುಭೂತಿಯನ್ನು ನೀಡುತ್ತದೆ. ನಿಮ್ಮ ಸ್ನೇಹಿತರು, ಬಂಧು ಬಳಗವನ್ನು ಒಂದು ಮಾಡುತ್ತದೆ. ನಿಮ್ಮ ಸುಖ-ಸಂತೋಷ ವಾಪಸ್ ಸಿಗುತ್ತದೆ. ಜೀವನದ ನಿಜವಾದ ಅರ್ಥ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದಿರುವ ನಟ, ಎಲ್ಲರಿಗೂ ಸ್ವಲ್ಪ ಕಾಲ ಫೋನ್ನಿಂದ ದೂರವಿದ್ದು ನೋಡಿ ಎಂದು ಸಲಹೆ ನೀಡಿದ್ದಾರೆ.
28 ಸಿನಿಮಾ ಹಿಂದಿಕ್ಕಿ ಆಸ್ಕರ್ ಅಂಗಳಕ್ಕೆ 'ಲಾಪತಾ ಲೇಡೀಸ್': ಚೊಚ್ಚಲ ಚಿತ್ರದಲ್ಲಿ ಮೂವರು ತಾರೆಯರಿಗೆ ಧಮಾಕಾ!