ಅಪ್ಪಟ ಮಾಂಸಾಹಾರಿಯಾಗಿದ್ದ ಶಿಲ್ಪಾಶೆಟ್ಟಿ ಇದೀಗ ಕಂಪ್ಲೀಟ್ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ. ಸಾಕಪ್ಪಾ ಸಾಕು ನಾನ್‌ವೆಜ್ ಸಹವಾಸ ಅಂದಿದ್ದಾರೆ. ಅಷ್ಟಕ್ಕೂ ಶಿಲ್ಪಾ ಈ ಪರಿ ಸಸ್ಯಾಹಾರ ಪ್ರೀತಿ ಬೆಳೆಸಿಕೊಳ್ಳಲು ಏನು ಕಾರಣ?
ನಿನ್ನೆ ಶಿಲ್ಪಾ ಶೆಟ್ಟಿ ಇನ್‌ಸ್ಟಾದತ್ತ ಕಣ್ಣು ನೆಟ್ಟವರಿಗೆ ಒಂದು ಸರ್‌ಪ್ರೈಸ್ ಕಾದಿತ್ತು. ವಿಸ್ತಾರವಾದ ಹೊಲದಲ್ಲಿ ಮಗನೊಂದಿಗೆ ಎಲೆಕೋಸು ಕೀಳುತ್ತಾ ನಿಂತಿದ್ದರು ಶಿಲ್ಪಾ. ಅವರ ಮುಖದಲ್ಲೊಂದು ನಿರಾಳತೆ, ಖುಷಿ ಎದ್ದು ಕಾಣುತ್ತಿತ್ತು. ಬಾಲಿವುಡ್ ಸಾವಾಸ ಅಲ್ಲ ಅಂತ ರೖತ ಮಹಿಳೆಯಾಗ್ತಿದ್ದಾರಾ ಶಿಲ್ಪಾ ಅನ್ನೋ ಅನುಮಾನದಲ್ಲಿ ಪಕ್ಕ ನೋಡಿದ್ರೆ ಉದ್ದದ ಡಿಸ್ಕ್ರಿಪ್ಶನ್.
‘ನನ್ನ ಜೀವನದ ಅತಿದೊಡ್ಡ ಕನಸು ನಾನೇ ಬೆಳೆದು ನಾನೇ ತಿನ್ನಬೇಕು ಅನ್ನೋದು.. ಆದರೆ ಇಲ್ಲಿ ಬೇರೇನೋ ವಿಷ್ಯ ಹೇಳ್ಬೇಕಿದೆ..’ ಅಂತ ಪೀಠಿಕೆಗೆ ಶುರುವಿಟ್ಟರು. ‘ಏನವ್ವಾ ತಾಯಿ ಅಂಥಾ ಘನಂದಾರಿ ವಿಷ್ಯ’ ಅಂದ್ರೆ, ‘ನಾನೀಗ ಕಂಪ್ಲೀಟ್ ಸಸ್ಯಾಹಾರಿಯಾಗಿ ಬದಲಾಗಿದ್ದೀನಿ’ ಅಂತ ಶಾಕ್ ಕೊಟ್ರು ಈ ಕುಡ್ಲದ [ಮಂಗಳೂರು] ಪೊರ್ಲುದ ಪೊಣ್ಣು.
ಮಂಗಳೂರು ಮೂಲದ ಶಿಲ್ಪಾ ಮೊದಲಿಂದಲೂ ಮಾಂಸಾಹಾರವನ್ನು ಬಹಳ ಇಷ್ಟಪಡುತ್ತಿದ್ದವರು. ಅವರೇ ಹೇಳುವ ಹಾಗೆ, ‘ಮೀನು, ಚಿಕನ್ ಇಲ್ಲದ ದಿನಗಳನ್ನು ಕಲ್ಪಿಸಿಕೊಳ್ಳೋದೂ ನಮಗೆ ಕಷ್ಟ. ಏಕೆಂದರೆ ಕರಾವಳಿ ತೀರದ ಮೂಲದವಳಾದ ನನ್ನ ಬೇಸಿಕ್ ಆಹಾರ ಪದ್ಧತಿಯೇ ಮಾಂಸಾಹಾರ. ಶುರು ಶುರುವಿನಲ್ಲಿ ನಾನ್‌ವೆಜ್ ಮಿಸ್ ಆದರೆ ಇಡೀ ದಿನ ಏನೋ ಕಳೆದುಕೊಂಡ ಫೀಲ್ ಆಗುತ್ತಿತ್ತು. ಮತ್ತೆ ಚಿಕನ್ ಅಥವಾ ಮೀನು ತಿನ್ನೋವರೆಗೂ ಸಮಾಧಾನ ಇರಲಿಲ್ಲ.’
ಮಾಂಸಾಹಾರ ಮನುಷ್ಯನ ಮೂಲ ಆಹಾರ. ಇದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನಾನ್‌ವೆಜ್ ರುಚಿ ಹಿಡಿದವರಿಗೇ ಗೊತ್ತು, ಅಂಥಾ ರುಚಿಕರ ಆಹಾರವನ್ನು ಅವರೆಷ್ಟು ಮಿಸ್ ಮಾಡಿಕೊಳ್ತಾರೆ ಅಂತ. ಹಾಗಿರುವಲ್ಲಿ ಕಂಪ್ಲೀಟ್ ನಾನ್‌ವೆಜ್‌ಅನ್ನೇ ಬಿಟ್ಟು ಬಿಡ್ತೀನಿ ಅಂತ ಕೂತರೆ.. ಏಕೆಂದರೆ ನಾನ್ ವೆಜ್ ತುಂಬಾ ಇಷ್ಟ ಪಡೋ ಶಿಲ್ಪಾ ಈ ಹಿಂದೆ ಯೂಟ್ಯೂಬ್ ನಲ್ಲಿ ಅನೇಕ ನಾನ್ ವೆಜ್ ರೆಸಿಪಿಗಳನ್ನು ಅಪ್ ಲೋಡ್ ಮಾಡಿದ್ದರು. ಹೊಸ ಹೊಸ ನಾನ್ ವೆಜ್ ಐಟಂ ಗಳನ್ನು ಲಕ್ಷಾಂತರ ವೀಕ್ಷಕರಿಗೆ ಪರಿಚಯಿಸಿದ್ದರು. ಆದರೆ ಈಗ ‘ನಾನೀಗ ಆ ವೀಡಿಯೋಗಳನ್ನೆಲ್ಲ ಡಿಲೀಟ್ ಮಾಡ್ತೀನಿ. ಸಸ್ಯಾಹಾರದ ಅಡುಗೆಗಳನ್ನು ಅಪ್‌ಲೋಡ್ ಮಾಡುತ್ತೀನಿ. ಯಾಕೆಂದರೆ ನೀವೆಲ್ಲ ನನ್ನ ಕುಟುಂಬದ ಮುಂದುವರಿದ ಭಾಗದಂತಿರುವವರು. ನನ್ನ ಹಿತೖಷಿಗಳು. ನಾನು ಸಸ್ಯಾಹಾರದ ಮಹತ್ವ ತಿಳಿದಿದ್ದೇನೆ. ಕುಟುಂಬದ ಸದಸ್ಯರಂತಿರುವ ನಿಮಗೂ ಹೊಸ ಹೊಸ ಸಸ್ಯಾಹಾರಿ ರೆಸಿಪಿಗಳನ್ನು ತಿಳಿಸಿಕೊಡ್ತೀನಿ’ ಅಂತ ಹೊಸ ರಾಗ ಶುರು ಮಾಡಿದ್ದಾರೆ.
ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ನೀಡಿದ ದುಬಾರಿ ಗಿಫ್ಟ್‌ಗಳೇನು ಗೊತ್ತಾ?
ಶಿಲ್ಪಾ ಶೆಟ್ಟಿ ಅವರ ಈ ನಿರ್ಧಾರಕ್ಕೆ ಕಾರಣ ಸಸ್ಯಾಹಾರದ ಪ್ರಯೋಜನಗಳನ್ನು ಅವರು ಕಂಡುಕೊಂಡಿದ್ದು. ‘ಸಸ್ಯಾಹಾರದಲ್ಲಿದ್ದರೆ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಕರೆಕ್ಟಾಗಿ ಶುದ್ಧ ಸಸ್ಯಾಹಾರ ತಿನ್ನುತ್ತಿದ್ದರೆ ಡಯಾಬಿಟೀಸ್, ಹೃದಯತೊಂದರೆ, ಬೊಜ್ಜು ಬರಲ್ಲ. ಹೃದಯ ಆರೋಗ್ಯಕರವಾಗಿರುತ್ತದೆ. ದೊಡ್ಡ ದೊಡ್ಡ ರೋಗಗಳು ಹತ್ತಿರ ಸುಳಿಯಲ್ಲ. ಸಸ್ಯಾಹಾರ ನಮಗೆ ಮಾತ್ರವಲ್ಲ, ನಮ್ಮ ಪ್ಲಾನೆಟ್‌ಗೂ ಉತ್ತಮ.’ ಅನ್ನೋ ಮಾತುಗಳನ್ನಾಡಿದ್ದಾರೆ. ೪೫ ವರ್ಷಗಳ ತಮ್ಮ ಬದುಕಿನಲ್ಲಿ ಇದೀಗ ಸಸ್ಯಾಹಾರಿ ಆಗುತ್ತಿರುವುದು ಬಹಳ ಖುಷಿಕೊಟ್ಟಿದೆ ಅನ್ನೋದು ಅವರ ಮನದಾಳದ ಮಾತು.
ಪತ್ನಿ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಪತಿ ರಾಜ್‌ಕುಂದ್ರಾ
‘ಮೊದಲೆಲ್ಲ ನಾನ್ ವೆಜ್ ಇಲ್ಲದ ದಿನಗಳಿರಲಿಲ್ಲ. ಆದರೆ ನಾನು ಯೋಗವನ್ನು ಬಹಳ ಗಾಢವಾಗಿ ಅಭ್ಯಾಸ ಮಾಡಲು ಶುರು ಮಾಡಿದ ಮೇಲೆ ನಾನ್‌ವೆಜ್ ತಿಂದರೆ ಏನೋ ಒಂಥರ ಕಳೆದುಕೊಂಡ ಹಾಗೆ ಅನಿಸುತ್ತಿತ್ತು. ಈಗ ಸಂಪೂರ್ಣ ನಾನ್‌ವೆಜ್ ತ್ಯಜಿಸಿದ ಮೇಲೆ ಆ ಕಳೆದುಕೊಳ್ಳುವ ಭಾವ ಇಲ್ಲವೇ ಇಲ್ಲ’ ಅಂದಿದ್ದಾರೆ ಈ ಬೆಡಗಿ.
ಶಿಲ್ಪಾ ಶೆಟ್ಟಿ-ದಿಶಾ ಪಟಾನಿವರೆಗೆ ಟಿಕ್‌ಟಾಕ್‌ನಲ್ಲಿ ಫೇಮಸ್ ಆಗಿರೋ ಸೆಲೆಬ್ರೆಟಿಗಳು
ಜಗತ್ತಿನಾದ್ಯಂತ ಅತ್ಯಧಿಕ ಪ್ರಮಾಣದಲ್ಲಿ ಮಾಂಸದ ಉತ್ಪಾದನೆಯಾಗುತ್ತಿದೆ. ಇದರಿಂದ ವಾತಾವರಣದಲ್ಲಿ ಮಿಥೇನ್ ಪ್ರಮಾಣ ಅತೀ ಹೆಚ್ಚಾಗಿ ಸಾಕಷ್ಟು ಸಮಸ್ಯೆಗಳುಂಟಾಗುತ್ತಿವೆ. ವಿಶ್ವದ ಅತೀ ದಟ್ಟ ಕಾಡುಗಳಲ್ಲಿ ಕಾಳ್ಗಿಚ್ಚು ಹೆಚ್ಚಲೂ ಈ ಹೆಚ್ಚುತ್ತಿರುವ ಮಿಥೇನ್ ಪ್ರಮಾಣ ಕಾರಣ ಎಂಬ ಮಾತಿದೆ. ಹೀಗಿರುವಾಗ ಶಿಲ್ಪಾ ಶೆಟ್ಟಿ ತಾನು ಮಾಂಸಾಹಾರ ತ್ಯಾಗ ಮಾಡಿ ನಮ್ಮ ಭೂಮಿಯನ್ನು ಉಳಿಸಲು ಮುಂದಡಿ ಇಟ್ಟಿದ್ದೇನೆ ಅನ್ನೋದು ನಮಗೆಲ್ಲಾ ಪಾಠ ಆಗ್ಬೇಕು ಅಲ್ವಾ?