ಇಷ್ಟು ಸುರಕ್ಷಿತ ಭಾರತದಲ್ಲಿರೋದೇ ಪುಣ್ಯ: ಇಸ್ರೇಲ್​ನಲ್ಲಿ ಸಾವಿನ ಬಾಯಿಗೆ ಹೋಗಿದ್ದ ನಟಿ ನುಶ್ರತ್ ಹೇಳಿದ್ದೇನು?

By Suvarna News  |  First Published Oct 10, 2023, 6:14 PM IST

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಸ್ರೇಲ್​ಗೆ ಹೋಗಿ ಹಮಾಸ್​ ಉಗ್ರರ ದಾಳಿಗೆ ಸಿಲುಕಿ ಸುರಕ್ಷಿತವಾಗಿ ವಾಪಸಾಗಿರುವ ಬಾಲಿವುಡ್​ ನಟಿ ನುಶ್ರತ್ ಭರೂಚಾ ಭಾರತದ ಬಗ್ಗೆ ಹೇಳಿದ್ದೇನು? 
 


ಗಾಜಾ ಸ್ಟ್ರಿಪ್‌ನಿಂದ ಕಳೆದ ಶನಿವಾರ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ಗುಂಪು ಸಾವಿರಾರು ರಾಕೆಟ್‌ಗಳ ಸುರಿಮಳೆ ಸುರಿಸಿ, ದಿಢೀರ್‌ ಯುದ್ಧ ಸಾರಿದೆ. ಇದರಿಂದ ದಿಢೀರನೇ ಇಸ್ರೇಲ್‌ ಮೇಲೆ ಸ್ಟೇಟ್‌ ಆಫ್‌ ವಾರ್‌ ಆರಂಭವಾಗಿದ್ದು, ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಯುದ್ಧ ಇನ್ನೂ ಭೀಕರವಾಗುತ್ತಲೇ ಸಾಗಿದೆ. ವಿದೇಶಿಗರನ್ನು ಉಗ್ರರು ಕಂಡ ಕಂಡಲ್ಲಿ ಹತ್ಯೆ ಮಾಡುತ್ತಿದ್ದಾರೆ.  ಏಕಾಏಕಿ ಇಸ್ರೇಲ್ ಮೇಲೆ ಮುಗಿಬಿದ್ದಿರುವ  ಉಗ್ರರು, 500ಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ಮಾಡಿದ್ದಾರೆ. ಮತ್ತೊಂದೆಡೆ, ಇಸ್ರೇಲ್‌ನಲ್ಲಿ ಹದಗೆಟ್ಟ ಪರಿಸ್ಥಿತಿಯ ನಡುವೆ, ಭಾರತೀಯ ರಾಯಭಾರ ಕಚೇರಿ ಅಲ್ಲಿರುವ ತನ್ನ ನಾಗರಿಕರಿಗೆ ಸಲಹೆಯನ್ನು ನೀಡಿದೆ. ಜಾಗರೂಕರಾಗಿ ಮತ್ತು ಸುರಕ್ಷಿತವಾಗಿರಲು ಅವರನ್ನು ಕೇಳಲಾಗಿದೆ. ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್ ಜನರೊಂದಿಗೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  

ಇದರ ನಡುವೆಯೇ, ಹಮಾಸ್​ನಿಂದ ದಾಳಿಗೊಳಗಾಗಿರುವ ಇಸ್ರೇಲ್​ನಲ್ಲಿ ಬಾಲಿವುಡ್ ನಟಿ ನುಶ್ರತ್ ಭರೂಚಾ  ಸಿಕ್ಕಿಹಾಕಿಕೊಂಡಿದ್ದರು.  ಇಸ್ರೇಸ್​ನಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಜನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಟಿ ಅಲ್ಲಿ ಸಿಲುಕಿಬಿದ್ದಿದ್ದರು. ಅಷ್ಟಕ್ಕೂ ನಟಿ,  ನುಶ್ರತ್ ಭರೂಚಾ ಅವರು ಹೈಫಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್​​ಗೆ ಹೋಗಿದ್ದರು. ಆದರೆ ಅದೇ ವೇಳೆ ಹಮಾಸ್ ಉಗ್ರರಿಂದ  ಏಕಾಏಕಿ ದಾಳಿ ನಡೆದಿದೆ.  ಹೀಗಾಗಿ ನಟಿ ದಾಳಿ ಸಂದರ್ಭ ಅಪಾಯದ ವಾತಾವರಣದಲ್ಲಿ ಇಸ್ರೇಲ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದರೆ ಭಾರತದ ಶ್ರಮದ ಫಲವಾಗಿ ನಟಿಗೆ ಏನೂ ಅನಾಹುತ ಸಂಭವಿಸಿಲ್ಲ. ನಟಿ ಸುರಕ್ಷಿತವಾಗಿ ಭಾರತವನ್ನು ತಲುಪಿದ್ದಾರೆ.  

Latest Videos

undefined

ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್ ಜತೆ ದೃಢವಾಗಿ ನಿಂತಿದೆ: ಇಸ್ರೇಲ್‌ ಪ್ರಧಾನಿಗೆ ಮೋದಿ ಅಭಯ

ಇದೀಗ ನಟಿ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ಮಾಧ್ಯಮಗಳ ಎದುರು ಬಂದು ಸಾವಿನ ಬಾಯಿಗೆ ತಾವು ಹೋಗಿದ್ದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಅಂದು ತಾವು ಉಳಿದುಕೊಂಡಿದ್ದ ಹೋಟೆಲ್ ಸಮೀಪ ಗುಂಡಿನ ದಾಳಿಯಾಗಿತ್ತು, ಏನು ಆಗುತ್ತದೆಯೋ ತಿಳಿದುಬರಲಿಲ್ಲ. ಆ ಕ್ಷಣದಲ್ಲಿ ಸಾವೇ ಹತ್ತಿರ ಬಂದ ಹಾಗಿತ್ತು ಎಂದಿದ್ದಾರೆ ನಟಿ. ಕೊನೆಗೂ ಸುರಕ್ಷಿತವಾಗಿ ಮನೆಗೆ ತಲುಪಿದ್ದೇನೆ ಎಂದಿರುವ ನಟಿ, ಇಂಥ ಸುರಕ್ಷಿತ ಭಾರತದಲ್ಲಿ ನಾವಿರುವುದೇ ಪುಣ್ಯ ಎಂದಿದ್ದಾರೆ. ಇಲ್ಲಿ ನಾವು ಸಾಕಷ್ಟು ಸುರಕ್ಷಿತವಾಗಿದ್ದೇವೆ. ಇಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದಿರುವ ನಟಿ, ಭಾರತ ಸರ್ಕಾರ ಹಾಗೂ ಇಸ್ರೇಲ್​ನಲ್ಲಿರುವ ಭಾರತ ರಾಯಭಾರ ಕಚೇರಿಯು ಹೇಗೆ ಜನರ ರಕ್ಷಣೆ ಮಾಡುವಲ್ಲಿ ಕಾರ್ಯೋನ್ಮುಖವಾಗುತ್ತದೆ ಎಂದು ನಟಿ ಬಣ್ಣಿಸಿದ್ದಾರೆ. 

ಇದೇ ವೇಳೆ ತಾವು ಸುರಕ್ಷಿತವಾಗಿ ಆಗಮಿಸುವಂತೆ ಶುಭ ಕೋರಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದು, ಇನ್ನೂ ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗೂ ಪ್ರಾರ್ಥಿಸಿದ್ದಾರೆ. ನಟಿ ಸುರಕ್ಷವಾಗಿ ವಾಪಸಾಗಿರುವುದಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಉಗ್ರರ ಕ್ರೂರ ರೂಪ ನೋಡಿ ಬಂದಿರುವಿರಿ, ಸ್ವಲ್ಪ ದಿನದಲ್ಲಿ ಪ್ಯಾಲಿಸ್ಟೈನ್​ ಬೆಂಬಲಿಸುವೆ ಎಂದು ಮಾತ್ರ ಹೇಳಬೇಡಿ ಎಂದು ಕೆಲವರು ನಟಿಗೆ ಪಾಠ ಮಾಡಿದ್ದಾರೆ. ಕಮೆಂಟ್​ ಬಾಕ್ಸ್​ ತುಂಬಾ ಜೈ ಮೋದಿಜಿ ಎಂಬ ಕಮೆಂಟ್​ಗಳು ತುಂಬಿ ಹೋಗಿವೆ. ಯಾವುದೇ ದೇಶದಲ್ಲಿ ಅನಾಹುತ ಸಂಭವಿಸಿದಾಗ ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್​ ಕರೆತರುವಲ್ಲಿ ಭಾರತ ಸರ್ಕಾರ ಮಾಡುವ ಕಾರ್ಯಾಚರಣೆ ಇನ್ನೇಲೂ ನೋಡಲು ಸಾಧ್ಯವಿಲ್ಲ ಎಂದು ಹಲವರು ಹೇಳಿದ್ದು, ನಮ್ಮ ಸರ್ಕಾರ ಹಾಗೂ ರಕ್ಷಣಾ ಪಡೆಗಳ ಕಾರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ಇನ್ನು ಕೆಲವರು ನೀವು ಅಲ್ಲಿ ದುಡ್ಡು ಮಾಡಿ ಮಜ ಮಾಡಲು ಹೋಗುತ್ತೀರಿ, ಆಪತ್ತು ಬಂದಾಗ ನಿಮಗೆ ಭಾರತದ ನೆನಪಾಗುತ್ತದೆ ಎಂದೂ ಟೀಕಿಸಿದ್ದಾರೆ. 

ಇಸ್ರೇಲ್‌ ಐರನ್‌ ಡೋಮ್‌ಗೆ ಕ್ಷಿಪಣಿಗಳು ಬಡಿದು ದೂರ ಚಿಮ್ಮುವ ವೀಡಿಯೋ ವೈರಲ್‌

click me!