Asianet Suvarna News Asianet Suvarna News

ಇಸ್ರೇಲ್‌ ಐರನ್‌ ಡೋಮ್‌ಗೆ ಕ್ಷಿಪಣಿಗಳು ಬಡಿದು ದೂರ ಚಿಮ್ಮುವ ವೀಡಿಯೋ ವೈರಲ್‌

 ಹಮಾಸ್‌ ಉಗ್ರರ ಉಪಟಳ ತಡೆಯಲಾಗದೇ  ಇಸ್ರೇಲ್ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಐರನ್‌ ಡೋಮ್‌ನ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Israel Palestine war Video of Missiles Hitting Israels Iron Dome Goes Viral akb
Author
First Published Oct 10, 2023, 4:25 PM IST

ಜೆರುಸಲೇಂ: ಪ್ಯಾಲೆಸ್ತೀನಿ ಉಗ್ರರು ಶನಿವಾರ (ಆಕ್ಟೋಬರ್ 7) 5000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿ, ಇಸ್ರೇಲ್‌ಗೆ ಪ್ರವೇಶಿಸುವುದರೊಂದಿಗೆ ಎರಡೂ ದೇಶಗಳ ನಡುವಣ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರುವಂತಾಗಿದೆ.  ಈ ಕಿತ್ತಾಟದ ನಡುವೆ ಪುಟ್ಟ ದೇಶವಾದರೂ ಇಸ್ರೇಲ್‌ನ ಸಮರ್ಥ ರಕ್ಷಣಾ  ವ್ಯವಸ್ಥೆ ವಿಶ್ವದ ಗಮನ ಸೆಳೆಯುತ್ತಿದೆ.  ಹಮಾಸ್‌ ಉಗ್ರರ ಉಪಟಳ ತಡೆಯಲಾಗದೇ  ಇಸ್ರೇಲ್ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಐರನ್‌ ಡೋಮ್‌ನ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕ್ಷಿಪಣಿ ಹಾಗೂ ರಾಕೆಟ್ ದಾಳಿಯಿಂದ ತಪ್ಪಿಸಿಕೊಳ್ಳಲು ಇಸ್ರೇಲ್ ಈ ಐರನ್ ಡೋಮ್‌ನ್ನು ನಿರ್ಮಿಸಿತ್ತು. ಹಮಾಸ್ ಉಗ್ರರು ಉಡಾಯಿಸಿದ ಈ ರಾಕೆಟ್ ಹಾಗೂ ಕ್ಷಿಪಣಿಗಳನ್ನು ಈ ಐರನ್ ಡೋಮ್ (Iron Dome) ತಡೆಯುತ್ತಿರುವ ವೀಡಿಯೋವೊಂದು ಈಗ ವೈರಲ್ ಆಗಿದೆ. 

ಈ ವಿಡಿಯೋವನ್ನು ರೇಣು ಎಂಬುವವರು ಪೋಸ್ಟ್ ಮಾಡಿದ್ದು,  ಇದರ ಮಹತ್ವದ ಬಗ್ಗೆ ವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಇಸ್ರೇಲ್‌ನ ಕ್ಷಿಪಣಿ ವಿರೋಧಿ ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಿಸುವ ಅದ್ಭುತ ದೃಶ್ಯವಿದು ಎಂದು ಅವರು ಬರೆದುಕೊಂಡಿದ್ದಾರೆ. ಇದು ಸಾರ್ವಕಾಲಿಕ ಶ್ರೇಷ್ಠ ರಕ್ಷಣಾ ವ್ಯವಸ್ಥೆಯಾಗಿದೆ. ಗಾಜಾದಲ್ಲಿನ ಭಯೋತ್ಪಾದಕರು ಹಾಗೂ ಹೆಜ್ಬೊಲ್ಲಾಗೆ ಸೇರಿದ ಲೆಬನಾನ್‌ನಲ್ಲಿ ಇಸ್ರೇಲ್ ವಿರೋಧಿ ಹೋರಾಟಗಾರರು ನಡೆಸುವ ರಾಕೆಟ್ (Rocket) ಹಾಗೂ ಕ್ಷಿಪಣಿ ದಾಳಿಯಿಂದ (Missile Attack) ದೇಶವನ್ನು ರಕ್ಷಿಸಲು ಇದನ್ನು ನಿರ್ಮಿಸಲಾಗಿದೆ. 

ಈ ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ಮುಗಿಸುವುದು ಮಾತ್ರ ನಾವೇ: ಇಸ್ರೇಲ್ ಅಧ್ಯಕ್ಷ ಬೆಂಜಮಿನ್‌

ಇದರ ಸಾಮರ್ಥ್ಯದ ಬಗ್ಗೆ 2011ರ ಏಪ್ರಿಲ್‌ನಲ್ಲಿ ಮೊದಲ ಬಾರಿ ಜಗತ್ತಿನ ಗಮನಕ್ಕೆ ಬಂತು. ಅಂದು ಗಾಜಾದಿಂದ (Gaza) ಹಮಾಸ್‌ ಉಗ್ರರು (Hamas terrorist) ಇಸ್ರೇಲಿ ನಗರವಾದ ಅಶ್ಕೆಲೋನ್‌ಗೆ ಹಾರಿಸಿದ ರಾಕೆಟ್‌ನ್ನು ಈ ಐರನ್‌ ಡೋಮ್ ಅರ್ಧದಲ್ಲೇ ಹೊಡೆದುರುಳಿಸಿತ್ತು.  ಇದೊಂದು ಅತ್ಯಂತ ಪರಿಣಾಮಕಾರಿ ವ್ಯವಸ್ಥೆಯಾಗಿದ್ದು, ಈ ಯುದ್ಧದಲ್ಲೂ ಇಸ್ರೇಲ್‌ನಲ್ಲಿ ಉಂಟಾಗಲಿದ್ದ ಸಾವಿನ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ನಿಯಂತ್ರಿಸಿದೆ.  ಈ ಹಿಂದಿನ ರಾಕೆಟ್ ದಾಳಿ ವೇಳೆ  ಈ ವ್ಯವಸ್ಥೆಯೂ ಸಂಪೂರ್ಣ ಯಶಸ್ವಿಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿತ್ತು. 

ಇನ್ನು ಇಸ್ರೇಲ್‌ನ ಸೇನಾ ಸಾಮರ್ಥ್ಯದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ,  ಹಮಾಸ್ ಉಗ್ರರ ದಾಳಿಯನ್ನು ಅದು ಎದುರಿಸುತ್ತಿರುವ ರೀತಿಯೇ ಅದು ಎಷ್ಟು ಸಮರ್ಥ ಎಂಬುದನ್ನು ತೋರಿಸುತ್ತಿದೆ.  ಅಮೆರಿಕಾದ ನ್ಯೂಸ್‌  & ವರ್ಲ್ಡ್‌ ರಿಪೋರ್ಟ್‌ 2022ರ ಪ್ರಕಾರ, ಇಸ್ರೇಲ್ ರಾಜಕೀಯವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ಪ್ರಭಾವಶಾಲಿ ಮಿಲಿಟರಿ ಶಕ್ತಿಯನ್ನು ಹೊಂದಿರುವ ದೇಶಗಳಲ್ಲಿ ಒಂದು ಎನಿಸಿದೆ. ಇದು ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ 4 ನೇ ಸ್ಥಾನದಲ್ಲಿತ್ತು.

ನಾಯಿಗೆ ಗುಂಡಿಕ್ಕಿ ಮನೆಗೆ ಬೆಂಕಿ ಹಚ್ಚಿ ಕ್ರೌರ್ಯ ತೋರಿದ ಹಮಾಸ್ ಉಗ್ರರು: ವೀಡಿಯೋ

ಇಸ್ರೇಲ್, ಹಮಾಸ್ ನಡುವೆ ಯುದ್ಧ ಏಕೆ? 

ಜೆರುಸಲೇಂನಲ್ಲಿರುವ ಅಲ್‌-ಅಕ್ಸಾ ಮಸೀದಿ ಹಾಗೂ ಇಸ್ರೇಲ್‌-ಗಾಜಾ ಪಟ್ಟಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ಯಾಲೆಸ್ತೀನಿಗಳನ್ನು ವರ್ಷಾರಂಭದಲ್ಲಿ ಇಸ್ರೇಲ್‌ ಬಂಧಿಸಿತ್ತು. ಹೀಗಾಗಿ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪ್ಯಾಲೆಸ್ತೀನ್‌ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ, ದಶಕಗಳಿಂದ ಇಸ್ರೇಲ್‌ ನಡೆಸಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಗಾಜಾ ಹಾಗೂ ಅಲ್‌- ಅಕ್ಸಾದಂತಹ ಪವಿತ್ರ ಸ್ಥಳಗಳಲ್ಲಿ ಪ್ಯಾಲೆಸ್ತೀನಿಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಅಂತಾರಾಷ್ಟ್ರೀಯ ಸಮುದಾಯ ತಡೆಯಬೇಕಿದೆ. ಇದೇ ಕಾರಣಕ್ಕೆ ಈ ಸಮರ ಆರಂಭಿಸಿದ್ದೇವೆ ಎಂದು ಹಮಾದ್‌ ವಕ್ತಾರ ಖಾಲೀದ್‌ ಖದೋಮಿ ತಿಳಿಸಿದ್ದಾನೆ.

ಇಸ್ರೇಲ್ ಉಗ್ರ ಬೇಟೆ: 500 ಹಮಾಸ್ ನೆಲೆ ಧ್ವಂಸ: ಸಾವಿನ ಸಂಖ್ಯೆ 1400ಕ್ಕೆ ಏರಿಕೆ

ಆದರೆ ಈ ಉಭಯ ರಾಷ್ಟ್ರಗಳ ಕಿತ್ತಾಟ ಇಂದು- ನಿನ್ನೆಯದಲ್ಲ. ಇದು ದಶಕಗಳ ಘೋರ ಇತಿಹಾಸವನ್ನೇ ಹೊಂದಿದೆ. ಒಟ್ಟೋಮನ್‌ ಸಾಮ್ರಾಜ್ಯ ಒಂದನೇ ಮಹಾಯುದ್ಧದಲ್ಲಿ ಸೋತ ಬಳಿಕ ಪ್ಯಾಲೆಸ್ತೀನ್‌ ನಿಯಂತ್ರಣ ಬ್ರಿಟನ್‌ ಪಾಲಾಯಿತು. ಅಲ್ಲಿ ಆಗ ಯಹೂದಿಗಳು ಅಲ್ಪಸಂಖ್ಯಾತರಾಗಿದ್ದರು. ಅರಬ್ಬರು ಬಹುಸಂಖ್ಯಾತರಾಗಿದ್ದರು. ಈ ನಡುವೆ, ಪ್ಯಾಲೆಸ್ತೀನ್‌ನಲ್ಲಿ ಯಹೂದಿಗಳಿಗೆ ಒಂದು ನೆಲೆ ಕಟ್ಟಿಕೊಡಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರಿ, ಆ ಹೊಣೆಗಾರಿಕೆಯನ್ನು ಬ್ರಿಟನ್‌ಗೆ ವಹಿಸಿತ್ತು. ಆಗ ಯಹೂದಿ ಹಾಗೂ ಅರಬ್ಬರ ನಡುವೆ ಸಂಘರ್ಷ ಆರಂಭವಾಯಿತು.

ನಮ್ಮ ಯುದ್ಧ ನಾವೇ ಮಾಡುತ್ತೇವೆ: ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟದೇಶ ಇಸ್ರೇಲ್‌ನ ಆತ್ಮವಿಶ್ವಾಸದ ನುಡಿ

ಏತನ್ಮಧ್ಯೆ, ಪ್ಯಾಲೆಸ್ತೀನ್‌ನಲ್ಲಿ ತಮ್ಮದೊಂದು ದೇಶ ಸ್ಥಾಪನೆಯಾಗುತ್ತದೆ ಎಂಬ ಕಾರಣದಿಂದಾಗಿ 1920ರಿಂದ 1940ರ ನಡುವಣ ಅವಧಿಯಲ್ಲಿ ವಿಶ್ವದ ವಿವಿಧೆಡೆಯಲ್ಲಿ ನೆಲೆ ನಿಂತಿದ್ದ ಯಹೂದಿಗಳು ಪ್ಯಾಲೆಸ್ತೀನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದರು. ಜರ್ಮನಿಯ ಅಟ್ಟಹಾಸದಿಂದ ನಲುಗಿದ್ದ ಯಹೂದಿಗಳು ಯುರೋಪ್‌ ತೊರೆದು ಹೊಸ ದೇಶಕ್ಕೆ ಹಕ್ಕೊತ್ತಾಯ ತೀವ್ರಗೊಳಿಸಿದರು.

ಪ್ಯಾಲೆಸ್ತೀನ್‌ನಲ್ಲಿ ಯಹೂದಿ- ಅರಬ್ಬರ ಸಂಘರ್ಷದ ಜತೆಗೆ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಹೋರಾಟವೂ ತೀವ್ರವಾಯಿತು. ಪ್ಯಾಲೆಸ್ತೀನ್‌ ಅನ್ನು ಯಹೂದಿ ಹಾಗೂ ಅರಬ್‌ ರಾಜ್ಯಗಳಾಗಿ ವಿಭಜಿಸಲು ವಿಶ್ವಸಂಸ್ಥೆ 1947ರಲ್ಲಿ ಮತ ಹಾಕಿತು. ಜೆರುಸಲೇಂ ಅಂತಾರಾಷ್ಟ್ರೀಯ ನಿಯಂತ್ರಣಕ್ಕೆ ಒಳಪಟ್ಟಿತು. ಅದಕ್ಕೆ ಯಹೂದಿ ನಾಯಕತ್ವ ಒಪ್ಪಿಗೆ ನೀಡಿತು. ಆದರೆ ಅರಬ್ಬರು ತಿರಸ್ಕರಿಸಿದರು. ಅವರು  ಅದನ್ನು ಇಂದಿಗೂ ಒಪ್ಪಿಕೊಳ್ಳದ ಕಾರಣ ಸಂಘರ್ಷ ಮುಂದುವರಿದಿದೆ.

ಸಂಘರ್ಷಕ್ಕೆ ಪರಿಹಾರ ಹುಡುಕಲು ವಿಫಲರಾದ ಬ್ರಿಟಿಷರು ಜಾಗ ಖಾಲಿ ಮಾಡಿದರು. ಯಹೂದಿಗಳು ಇಸ್ರೇಲ್‌ ಸ್ಥಾಪನೆ ಘೋಷಣೆ ಮಾಡಿದರು. ಪ್ಯಾಲೆಸ್ತೀನಿಯರು ಅದಕ್ಕೆ ಆಕ್ಷೇಪ ಎತ್ತಿದರು. ಯುದ್ಧ ಆರಂಭವಾಯಿತು. ನೆರೆಹೊರೆಯ ಅರಬ್‌ ದೇಶಗಳು ಸೇನಾ ಬಲದೊಂದಿಗೆ ಇಸ್ರೇಲ್‌ ಮೇಲೆ ಮುಗಿಬಿದ್ದವು. ಈ ನಡುವೆ ಇಸ್ರೇಲ್‌ನಿಂದ ಅರಬ್ಬರನ್ನು ಹೊರ ಹಾಕಲಾಯಿತು.

ಅದಾದ ಬಳಿಕ ಕಾಲಕಾಲಕ್ಕೆ ಇಸ್ರೇಲ್‌- ಪ್ಯಾಲೆಸ್ತೀನ್‌ ನಡುವೆ ಸಣ್ಣ ಹಾಗೂ ಅಗಾಧ ಪ್ರಮಾಣದ ಸಂಘರ್ಷಗಳು ನಡೆದು ಸಹಸ್ರಾರು ಮಂದಿ ಬಲಿಯಾಗಿದ್ದಾರೆ. ಈ ನಡುವೆ 1987ರಲ್ಲಿ ಪ್ಯಾಲೆಸ್ತೀನ್‌ ಮೌಲ್ವಿ ಶೇಖ್‌ ಅಹಮದ್‌ ಯಾಸಿನ್‌,  ಹಮಾಸ್ ಉಗ್ರ ಸಂಘಟನೆ ಸ್ಥಾಪಿಸಿದ ಬಳಿಕ ಈ ಸಂಘರ್ಷ ಮತ್ತಷ್ಟು ವಿಕೋಪಕ್ಕೆ ಮುಟ್ಟಿದೆ. 2000ನೇ ಇಸ್ವಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಎರಡೂ ರಾಷ್ಟ್ರಗಳ ಪ್ರಧಾನಿಗಳ ನಡುವೆ ಸಂಧಾನ ಸಭೆ ಏರ್ಪಡಿಸಿದ್ದರು. ಅದು ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲಿಗೆ ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ವಿಷಮಗೊಳಿಸಿತು. ಹೀಗಾಗಿ ಎರಡೂ ದೇಶಗಳ ವಿವಾದ ಕಗ್ಗಂಟಾಗಿ ಮುಂದುವರಿದಿದೆ.

Follow Us:
Download App:
  • android
  • ios