
ಮುಸ್ಲಿಮರಲ್ಲಿ ವ್ಯಾಪಕವಾಗಿರುವ ಬಹುಪತ್ನಿತ್ವ ಅಥವಾ ಮೂರ್ನಾಲ್ಕು ಮಹಿಳೆಯರನ್ನು ಮದುವೆಯಾಗುವ ರೂಢಿಯ ಬಗ್ಗೆ ಹಲವರು ಟೀಕಿಸಿದ್ದಾರೆ. ಮುಸ್ಲಿಂ ಮಹಿಳೆಯರಲ್ಲೇ ಸಾಕಷ್ಟು ಮಂದಿ ಇದನ್ನು ಪ್ರಶ್ನಿಸಿದ್ದಾರೆ. ಇದೀಗ ಬಾಲಿವುಡ್‌ನ ಹಿರಿಯ ನಟಿ, ಹುಟ್ಟಿನಿಂದ ಮುಸ್ಲಿಂ ಆಗಿರುವ ಮುಮ್ತಾಜ್ ಅವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.
ಅವರು ಹೇಳಿದ್ದು ಹೀಗೆ- ಒಬ್ಬ ಪುರುಷ ಮೂರು ಅಥವಾ ನಾಲ್ಕು ಬಾರಿ ಮದುವೆಯಾಗುವುದು ಸರಿಯಲ್ಲ. ಒಬ್ಬ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾಗುವುದು ಹೇಗೆ ಸರಿಯಾಗುತ್ತದೆ? ಅದು ಮಹಿಳೆಯರಿಗೆ ಅನ್ಯಾಯ ಮಾಡಿದಂತೆ. ಅದರಲ್ಲೂ ಮುಸ್ಲಿಂ ಪುರುಷರಲ್ಲಿ ಈ ರೂಢಿ ಹೆಚ್ಚು ಇದೆ. ತುಂಬಾ ಮಂದಿ ಹೀಗೆ ಬಹಳ ಯುವತಿಯರನ್ನು ಮದುವೆಯಾಗಿ ನಂತರ ಅವರನ್ನು ತೊರೆದಿದ್ದಾರೆ. ಹೀಗೆಲ್ಲ ಮಾಡಿದರೆ ತಾವು ಹಿಂದೂಗಳಿಗಿಂತ ಗ್ರೇಟ್ ಎನ್ನಲು ಅವರಿಂದ ಹೇಗೆ ಸಾಧ್ಯ? ಎಂಬುದು ಮುಮ್ತಾಜ್ ಪ್ರಶ್ನೆ.
ಮಹಿಳೆಯರು ಸಂಬಂಧಗಳಲ್ಲಿ ಹೆಚ್ಚು ಭಾವನಾತ್ಮಕವಾಗಿ ಬಂಧಿತರಾಗಿರುತ್ತಾರೆ. ಒಬ್ಬಳನ್ನು ಮದುವೆಯಾಗಿ ಆಕೆಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾಗುವುದು ನೈತಿಕವಾಗಿ ತಪ್ಪು, ಭಾವನಾತ್ಮಕವಾಗಿಯೂ ಆಕೆಗೆ ಹಾನಿಕರ ಎಂಬುದು ಮುಮ್ತಾಜ್ ಅಭಿಪ್ರಾಯ.
ವಿಶೇಷ ಅಂದರೆ, ಹುಟ್ಟಿನಿಂದ ಮುಸ್ಲಿಂ ಆಗಿರುವ ಮುಮ್ತಾಜ್ ಮದುವೆ ಆಗಿರುವುದು ಹಿಂದೂ ವ್ಯಕ್ತಿಯನ್ನು. ಉದ್ಯಮಿ ಮಯೂರ್ ಮಾಧ್ವಾನಿ ಅವರ ಪತಿ. ದಶಕಗಳ ಕಾಲದ ದಾಂಪತ್ಯ ಜೀವನ ನಡೆಸಿದ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ- ನತಾಶಾ ಮಾಧ್ವಾನಿ ಮತ್ತು ತಾನ್ಯಾ ಮಾಧ್ವಾನಿ. ಸಿನಿಮಾ ಲೋಕದಿಂದ ದೂರವಾದ ಬಳಿಕ ಮುಮ್ತಾಜ್ ತಮ್ಮ ಕುಟುಂಬ ಜೀವನದತ್ತ ಹೆಚ್ಚು ಗಮನ ಹರಿಸಿದ್ದಾರೆ. ಆದರೂ ಬಾಲಿವುಡ್ ಅಭಿಮಾನಿಗಳಲ್ಲಿ ಅವರು ಇನ್ನೂ ಪ್ರೀತಿಪಾತ್ರ ನಟಿಯಾಗಿ ಉಳಿದಿದ್ದಾರೆ.
1970ರ ದಶಕದಲ್ಲಿ ಬಾಲಿವುಡ್‌ನಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿ ಹೆಸರು ಮಾಡಿದ ನಟಿ ಮುಮ್ತಾಜ್ ತಮ್ಮ ವೈಯಕ್ತಿಕ ಜೀವನ, ಧಾರ್ಮಿಕ ನಂಬಿಕೆಗಳು ಮತ್ತು ಬಹುಪತ್ನೀತ್ವ (polygamy) ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ. Sitaron Ka Safar ಯೂಟ್ಯೂಬ್ ಚಾನೆಲ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಅವರು ತಮ್ಮ ಅಂತರ್ಧರ್ಮೀಯ ವಿವಾಹದ ಅನುಭವ ಮತ್ತು ಸಮಾಜದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ತಮ್ಮ ಜೀವನದಲ್ಲಿ ಧರ್ಮಕ್ಕಿಂತ ಮಾನವೀಯತೆ ಮತ್ತು ಪರಸ್ಪರ ಗೌರವವೇ ಮುಖ್ಯ ಎಂಬುದು ಮುಮ್ತಾಜ್ ಮಾತು. “ನಾನು ಎರಡೂ ಧರ್ಮಗಳನ್ನು ನಂಬುತ್ತೇನೆ. ನಾನು ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ನನ್ನ ಸಹೋದರಿಯೂ ಹಿಂದೂ ವ್ಯಕ್ತಿಯನ್ನೇ ಮದುವೆಯಾಗಿದ್ದಾಳೆ. ನಾವು ಇಬ್ಬರೂ ಸಂತೋಷವಾಗಿದ್ದೇವೆ. ನನ್ನ ಗಂಡ ನನಗೆ ತುಂಬಾ ಕಾಳಜಿ ವಹಿಸುತ್ತಾರೆ. ಹೀಗಿರುವಾಗ ಹಿಂದೂ-ಮುಸ್ಲಿಂ ಭೇದದ ಬಗ್ಗೆ ಏಕೆ ಮಾತನಾಡಬೇಕು ಎಂಬುದು ನನಗೆ ಅರ್ಥವಾಗುವುದಿಲ್ಲ.”
ಮುಮ್ತಾಜ್ ಹೇಳುವಂತೆ, ಅವರ ವೈಯಕ್ತಿಕ ಜೀವನವೇ ಒಂದು ಉದಾಹರಣೆ — ಧರ್ಮವು ಜನರನ್ನು ಬೇರ್ಪಡಿಸುವ ಅಡೆತಡೆಯಾಗಬಾರದು. ಆಕೆ ಎರಡೂ ಧರ್ಮಗಳನ್ನು ನಂಬುತ್ತಾರೆ. ಗಂಡ ಮಯೂರ್ ಹಿಂದೂ ಧರ್ಮವನ್ನು ನಂಬುತ್ತಾರೆ. ಈಕೆ ಮುಸ್ಲಿಂ ಧರ್ಮವನ್ನು, ಮಕ್ಕಳು ಎರಡೂ ಧರ್ಮದ ಒಳ್ಳೆಯ ಗುಣಗಳನ್ನು ರೂಢಿಸಿಕೊಂಡಿದ್ದಾರೆ. ಎರಡೂ ಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ. ಯುಗಾದಿ, ದೀಪಾವಳಿ, ರಂಜಾನ್, ಈದ್ ಎಲ್ಲದಕ್ಕೂ ಇವರಲ್ಲಿ ಆದ್ಯತೆ. ಮುಮ್ತಾಜ್ ಹಿಂದೂ ದೇವತೆಗಳಲ್ಲಿ ವಿಶೇಷವಾಗಿ ಶಿವ ಮತ್ತು ಗಣೇಶನಲ್ಲಿ ನಂಬಿಕೆ ಹೊಂದಿರುವುದಾಗಿ ಹೇಳಿದ್ದು ಉಂಟು. ಮಕ್ಕಳಲ್ಲಿ ನತಾಶಾ 2006ರಲ್ಲಿ ಫಿರೋಜ್ ಖಾನ್ ಅವರ ಮಗ ಫರ್ದೀನ್ ಖಾನ್ ಅವರನ್ನು ವಿವಾಹವಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.