
ಈ ಬಾಲಿವುಡ್ ನಟಿ ಗೊತ್ತಾ?
ಇದು ಬಾಲಿವುಡ್ ನಟಿಯೊಬ್ಬರ ಹೊಸ ವರಸೆ.. ಅದು ಅವರ ವೈಯಕ್ತಿಕ ಬದುಕು.. ಆದರೆ, ಇಷ್ಟೊಂದು ಬೋಲ್ಡ್ ಹೇಳಿಕೆ ಯಾಕೆ ಅಂತೀರಾ? ಅದು ಅವರಿಷ್ಟ ಎನ್ನಬಹುದೇನೋ!?
ಹೌದು, ಈಕೆ ಬಾಲಿವುಡ್‌ನ ಖ್ಯಾತ ಚೆಲುವೆ. ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಹತ್ತು ಹಲವು ಪಾತ್ರಗಳನ್ನು ಮಾಡಿರುವ ನಟಿ. ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಗ್ಲೋಬಲ್ ಇಂಡಿಯನ್ ಫಿಲ್ಡ್ ಅವಾರ್ಡ್ ಐಫಾ ಮತ್ತು ಫಿಲ್ಡ್ ಫೇರ್ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ ಈ ನಟಿ.
ಇಂಥ ಈ ನಟಿಗೆ ಈಗ 48ರ ಹರೆಯ. ಆದರೆ, ಇನ್ನೂ ಕೂಡ ಮದುವೆಯಾಗಿಲ್ಲ. ಆಕೆ ಮದುವೆ ಆಗದಿರಲು ಕಾರಣಗಳು ಏನೇ ಇರಬಹುದು ಆದರೆ ಈ ಕುರಿತು ಹಲವರಲ್ಲಿ ಪ್ರಶ್ನೆಗಳು ಇದ್ದೇ ಇವೆ. ಈ ಪ್ರಶ್ನೆಗಳಿಗೆ ಈಗ ಆ ನಟಿ ಉತ್ತರವನ್ನು ನೀಡಿದ್ದಾರೆ. 48 ವಯಸ್ಸಾದರೂ ಕೂಡ ಮದುವೆ ಯಾಕೆ ಆಗಿಲ್ಲ ಎಂದು ತಮ್ಮ ಕಾರಣವನ್ನು ಹೇಳಿದ್ದಾರೆ. ಆ ನಟಿ ದಿವ್ಯಾ ದತ್ತಾ.
"ಪಿಂಕ್‌ವಿಲ್ಲಾ'ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ದಿವ್ಯಾ ದತ್ತ (Divya Dutta) ಮದುವೆಗೆ 'ನಾನು ಯಾವತ್ತೂ ಕೂಡ ಮದುವೆಗೆ ಮಹತ್ವ ನೀಡಿಲ್ಲ' ಎಂದಿದ್ದಾರೆ. ಜೊತೆಗೆ, 'ನಾನು ಮಾಡಿದ ತಪ್ಪುಗಳಿಂದ ನಾನು ಪಾಠ ಕಲಿತ ಹಿನ್ನೆಲೆ ನಾನು ಮದುವೆಗೆ ಆದ್ಯತೆ ನೀಡುವುದಿಲ್ಲ' ಎಂದು ಹೇಳಿದ್ದಾರೆ.
'ಈ ಹಿಂದೆ ನಾನು ಹಲವರ ಜೊತೆ ಸಂಬಂಧದಲ್ಲಿದ್ದೆ. ಆದರೆ ಯಾರೊಂದಿಗೂ ಕೂಡ ನನಗೆ ಹೊಂದಾಣಿಕೆ ಆಗಲಿಲ್ಲ' ಎಂದಿದ್ದಾರೆ ದಿವ್ಯಾ ದತ್ತಾ. ಜತೆಗೆ, 'ನನ್ನ ಪ್ರಕಾರ ಒಂದು ಸಂಬಂಧ ಅಂದರೆ ಜೀವನ ಪರ್ಯಂತ ಜೊತೆಯಾಗಿ ಹೆಜ್ಜೆ ಹಾಕಬೇಕು.. ಕಷ್ಟದ ಸಮಯದಲ್ಲಿ ಒಬ್ಬರ ಬೆನ್ನಿಗೆ ಒಬ್ಬರು ನಿಲ್ಲಬೇಕು.. ಖುಷಿಯಲ್ಲಿ ಕೂಡ ಜೊತೆಯಾಗಿರಬೇಕು.. ಆದರೆ ನನ್ನ ಹಿಂದಿನ ಸಂಬಂಧಗಳಲ್ಲಿ ಇವೆಲ್ಲಾ ಅಂಶಗಳು ಇರಲಿಲ್ಲ. ಕೊರೊನಾ ಕಾಲದಲ್ಲಿ ನನಗೇನು ಬೇಕು ಎನ್ನುವುದು ನನಗೆ ಮನವರಿಕೆಯಾಯ್ತು' ಎಂದಿದ್ದಾರೆ.
ಇಷ್ಟೇ ಅಲ್ಲ, 'ಚಿತ್ರರಂಗದಲ್ಲಿ ಯಾವತ್ತು ಏನಾಗುತ್ತೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ.. ನನ್ನ ವೃತ್ತಿಯಲ್ಲಿ ಸ್ಥಿರತೆ ಇಲ್ಲ.. ನನ್ನ ಜೀವನ ಶೈಲಿ ಮತ್ತು ವೃತ್ತಿ ಬದುಕಿಗೆ ಹೊಂದಿಕೊಳ್ಳುವಂತಹ ವ್ಯಕ್ತಿಯೇ ಬೇಕು.. ನಾನು ಈಗಲೂ ಪ್ರೀತಿಯಲ್ಲಿ ಬೀಳುವುದಕ್ಕೆ, ಪ್ರೀತಿಸುವುದಕ್ಕೆ ರೆಡಿಯಾಗಿದ್ದೇನೆ.. ಆದರೆ ನನಗೆ ಮದುವೆಯಾಗುವ ಮನಸ್ಸು ಇಲ್ಲ' ಎಂದಿದ್ದಾರೆ ದಿವ್ಯಾ ದತ್ತಾ.
'ಪ್ರೀತಿ ಎನ್ನುವುದು ಹೃದಯದ ವಿಷಯ.. ಹೃದಯದಲ್ಲಿ ಪ್ರೀತಿ ಹುಟ್ಟಿದಾಗ ಗಟ್ಟಿಯಾದ ಸಂಬಂಧ ರೂಪಗೊಳ್ಳುತ್ತೆ.. ಮದುವೆಯ ಬಂಧನಕ್ಕಿಂತ ನನಗೆ ಶಾಂತಿ ನೆಮ್ಮದಿ ಮುಖ್ಯ' ಎಂದಿದ್ದಾರೆ ದಿವ್ಯಾ ದತ್ತಾ.
1994ರಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಬಂದ ದಿವ್ಯಾ ದತ್ತಾ ಅವರು, 2005ರಲ್ಲಿ ಲೆಫ್ಟಿನೆಂಟ್ ಕಮಾಂಡರ್ ಸಂದೀಪ್ ಶೆರ್ಗಿಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚಂಡೀಗಡದಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಆದರೆ ಆ ನಂತರ ಅದೇನಾಯ್ತೋ ಏನೋ, ಈ ನಿಶ್ಚಿತಾರ್ಥ ಮುರಿದು ಬಿತ್ತು. ದಿವ್ಯಾ ದತ್ತಾ ನಿಶ್ಚಿತಾರ್ಥ ನಡೆದಿದೆ ಎನ್ನುವ ಸುದ್ದಿಯನ್ನು ಕೂಡ ಒಪ್ಪಲಿಲ್ಲ. ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಸುದ್ದಿಯನ್ನು ಕೂಡ ಅಲ್ಲಗೆಳೆಯಲಿಲ್ಲ.
ಬದಲಿಗೆ "ಇಂಡಿಯಾ ಫೋರಂ"ಗೆ ನೀಡಿದ ಸಂದರ್ಶನದಲ್ಲಿ ಸಂದೀಪ್ ಮತ್ತು ನಾನು ಕಳೆದ ವರ್ಷ ಚಂಡೀಗಢದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಜನರಿಗೆ ವಿವರಿಸುವುದು ತುಂಬಾ ಮುಜುಗರದ ವಿಷಯ ಎಂದು ಹೇಳಿದ್ದರು. ನಿಶ್ಚಿತಾರ್ಥ ಮತ್ತು ಮದುವೆಯ ನಡುವೆ ಯಾವುದೇ ವ್ಯತ್ಯಾಸವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದರು.
ಇದೇ ಸಮಯದಲ್ಲಿ ನಟಿ ದಿವ್ಯಾ ದತ್ತಾ ಬೆಳ್ಳಿತೆರೆಯಿಂದ ಕಿರುತೆರೆಯತ್ತ ಮುಖ ಮಾಡಿದ್ದರು. "ಶನ್ನೋ ಕಿ ಶಾದಿ" ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದರು. ಈ ಸಮಯದಲ್ಲಿ ಧಾರಾವಾಹಿಯ ಸಹನಟ ವಿಕಾಸ್ ಭಲ್ಲಾ ಜೊತೆ ಈ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು. ನಿಶ್ಚಿತಾರ್ಥ ಮುರಿದು ಬೀಳಲು ಇವರಿಬ್ಬರ ನಡುವೆ ಇದ್ದ ಆಪ್ತ ಸಂಬಂಧ ಕಾರಣವೆಂದು ಹೇಳಲಾಯ್ತು. ಈ ಸುದ್ದಿಯನ್ನು ಕೂಡ ದಿವ್ಯಾ ದತ್ತಾ ತಳ್ಳಿ ಹಾಕಲಿಲ್ಲ.
ಆ ನಂತರ ವಿಕಾಸ್ ಭಲ್ಲಾ, ಹಿರಿಯ ನಟ ಪ್ರೇಮ್ ಚೋಪ್ರಾ ಅವರ ಮಗಳು ಪುನೀತಾ ಅವರನ್ನು ಮದುವೆಯಾದರು. ಹೀಗೆ ಮುರಿದು ಬಿದ್ದ ನಿಶ್ಚಿತಾರ್ಥ ಮತ್ತು ಸಹನಟನ ಜೊತೆಗಿನ ಅಫೇರ್ ಕಾರಣಕ್ಕೆ ಆಗ ಸುದ್ದಿಯಾಗಿದ್ದ ದಿವ್ಯಾ ದತ್ತಾ, ಬಳಿಕ ತಮ್ಮ ಚಿತ್ರಗಳಿಂದ ಮತ್ತು ಪಾತ್ರಗಳಿಂದ ಸುದ್ದಿಯಾದರು. ಸದ್ಯ ತಮ್ಮ ಮದುವೆ ಕುರಿತು ಈ ಬಿಂದಾಸ್ ಹೇಳಿಕೆಯನ್ನು ನೀಡಿ ಸುದ್ದಿಯಲ್ಲಿದ್ದಾರೆ. ಅವರ ಮಾತೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಆಹಾರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.