AR Rahman Controversy: 'ದೇಶಭಕ್ತಿ ಎಂಬುದು ಧರ್ಮದ ಅರ್ಧ ಭಾಗ'.. ರೆಹಮಾನ್ ಈ ಮಾತು ಮತ್ತೊಂದು ವಿವಾದ ಆಗುತ್ತಾ?

Published : Jan 27, 2026, 07:13 PM IST
AR Rahman

ಸಾರಾಂಶ

'ನಾವು 'ವಂದೇ ಮಾತರಂ' ಮಾಡಲು ನಿರ್ಧರಿಸಿದಾಗ, ಅದು ಪ್ರತಿಯೊಂದು ಧರ್ಮದ ಯುವಜನತೆಯನ್ನು, ಪ್ರಪಂಚದಾದ್ಯಂತ ಇರುವ ಭಾರತೀಯರನ್ನು ತಲುಪಬೇಕು ಎಂದು ಬಯಸಿದ್ದೆವು. ಈ ಗೀತೆಯು ಯಾವುದೇ ಪೂರ್ವಾಗ್ರಹವಿಲ್ಲದೆ ಎಲ್ಲರನ್ನೂ ಭಾವನಾತ್ಮಕವಾಗಿ ದೇಶದೊಂದಿಗೆ ಬೆಸೆಯಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು,' ಎಂದಿದ್ದಾರೆ.

ಮತ್ತೊಂದು ವಿವಾದಕ್ಕೆ ಮುನ್ನುಡಿ?

ಬೆಂಗಳೂರು: ಭಾರತೀಯ ಚಿತ್ರರಂಗದ 'ಸಂಗೀತ ಮಾಂತ್ರಿಕ', ಆಸ್ಕರ್ ವಿಜೇತ ಎ.ಆರ್. ರೆಹಮಾನ್ (AR Rahman) ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ನೇರ ಮಾತುಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ಬಾಲಿವುಡ್ ಅಥವಾ ಹಿಂದಿ ಚಿತ್ರರಂಗದಲ್ಲಿ ಕಳೆದ ಎಂಟು ವರ್ಷಗಳಿಂದ ತಮಗೆ ಕೆಲಸಗಳು ಕಡಿಮೆಯಾಗುತ್ತಿವೆ ಮತ್ತು ಇದರ ಹಿಂದೆ 'ಕೋಮು ಭಾವನೆ'ಯ (Communal bias) ಪ್ರಭಾವವಿರಬಹುದು ಎಂಬ ಅವರ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ವಿವಾದದ ಬೆನ್ನಲ್ಲೇ, ರೆಹಮಾನ್ ಅವರು ತಮ್ಮ ಐತಿಹಾಸಿಕ ದೇಶಭಕ್ತಿ ಗೀತೆ 'ಮಾ ತುಜೆ ಸಲಾಮ್' ಹುಟ್ಟಿಕೊಂಡ ಕಥೆಯನ್ನು ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗಿದೆ.

ದೇಶಭಕ್ತಿ ಎಂಬುದು ಧರ್ಮದ ಅರ್ಧ ಭಾಗ!

ಹಿರಿಯ ನಟಿ ಫರೀದಾ ಜಲಾಲ್ ಅವರ 'ಯಾದೇನ್ ಬಿ-ಟೌನ್ ಕೀ' ಎಂಬ ಜನಪ್ರಿಯ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ರೆಹಮಾನ್ ಒಂದು ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ. "ಇಸ್ಲಾಂ ಧರ್ಮದಲ್ಲಿಯೂ ಸಹ, ತನ್ನ ದೇಶದ ಮೇಲೆ ದೇಶಭಕ್ತಿ ಹೊಂದಿರುವುದು ಧರ್ಮದ ಅರ್ಧದಷ್ಟು ಭಾಗ ಎಂದು ಹೇಳಲಾಗಿದೆ. ಇದೇ ವಿಚಾರವು ನಮಗೆ ಒಂದು ದೊಡ್ಡ ದೇಶಭಕ್ತಿ ಗೀತೆಯನ್ನು ಸೃಷ್ಟಿಸಲು ಸ್ಫೂರ್ತಿ ನೀಡಿತು," ಎಂದು ಅವರು ಹೇಳಿದ್ದಾರೆ. 1997ರಲ್ಲಿ ಭಾರತದ ಸ್ವಾತಂತ್ರ್ಯದ 50ನೇ ವರ್ಷದ ಸವಿನೆನಪಿಗಾಗಿ 'ವಂದೇ ಮಾತರಂ' ಎಂಬ ಆಲ್ಬಂ ಬಿಡುಗಡೆಯಾಗಿತ್ತು. ಈ ಆಲ್ಬಂನ ಅತ್ಯಂತ ಜನಪ್ರಿಯ ಹಾಡು 'ಮಾ ತುಜೆ ಸಲಾಮ್'. ಗೀತ ಸಾಹಿತಿ ಮೆಹಬೂಬ್ ಕೊತ್ವಾಲ್ ಅವರು ಈ ಅದ್ಭುತ ಸಾಲುಗಳನ್ನು ಬರೆದಾಗ, ಅದು ದೇಶಪ್ರೇಮದ ಒಂದು ಸುಂದರ ಅಭಿವ್ಯಕ್ತಿಯಾಗಿ ಮಾರ್ಪಟ್ಟಿತು ಎಂದು ರೆಹಮಾನ್ ನೆನಪಿಸಿಕೊಂಡಿದ್ದಾರೆ.

ಯುವಜನತೆಯನ್ನು ಒಗ್ಗೂಡಿಸುವ ಕನಸು:

ಈ ಯೋಜನೆಯ ಹಿಂದೆ ನಿರ್ದೇಶಕ ಮತ್ತು ನಿರ್ಮಾಪಕ ಭರತ್ ಬಾಲಾ ಅವರ ಶ್ರಮವಿತ್ತು. ಭರತ್ ಬಾಲಾ ಅವರ ತಂದೆ, ತನ್ನ ದೇಶಕ್ಕಾಗಿ ಏನಾದರೂ ಒಂದನ್ನು ಮಾಡುವಂತೆ ಮಗನಿಗೆ ತಿಳಿಸಿದ್ದರು. ಆ ಆಸೆಯ ಫಲವೇ ಈ ಆಲ್ಬಂ. ಈ ಬಗ್ಗೆ ರೆಹಮಾನ್ ವಿವರಿಸುತ್ತಾ, "ನಾವು 'ವಂದೇ ಮಾತರಂ' ಮಾಡಲು ನಿರ್ಧರಿಸಿದಾಗ, ಅದು ಪ್ರತಿಯೊಂದು ಧರ್ಮದ ಯುವಜನತೆಯನ್ನು, ಪ್ರಪಂಚದಾದ್ಯಂತ ಇರುವ ಭಾರತೀಯರನ್ನು (NRIs) ತಲುಪಬೇಕು ಎಂದು ಬಯಸಿದ್ದೆವು. ಈ ಗೀತೆಯು ಯಾವುದೇ ಪೂರ್ವಾಗ್ರಹವಿಲ್ಲದೆ ಎಲ್ಲರನ್ನೂ ಭಾವನಾತ್ಮಕವಾಗಿ ದೇಶದೊಂದಿಗೆ ಬೆಸೆಯಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು," ಎಂದಿದ್ದಾರೆ.

ಬಾಲಿವುಡ್ ವಿವಾದದ ಬಗ್ಗೆ ಸ್ಪಷ್ಟನೆ:

ಇತ್ತೀಚೆಗೆ 'ಬಿಬಿಸಿ ಏಷ್ಯನ್ ನೆಟ್‌ವರ್ಕ್'ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಅವರು ಹಿಂದಿ ಚಿತ್ರರಂಗದ ಬಗ್ಗೆ ಆತಂಕಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದರು. "ಸೃಜನಶೀಲತೆ ಇಲ್ಲದವರು ಈಗ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನದಲ್ಲಿದ್ದಾರೆ. ಇದು ಕೋಮು ವಿಚಾರವೂ ಇರಬಹುದು ಎಂದು ನನಗೆ ಪಿಸುಮಾತುಗಳ ಮೂಲಕ ಕೇಳಿಬರುತ್ತಿದೆ. ಕೆಲವು ಸಂಗೀತ ಕಂಪನಿಗಳು ನನ್ನನ್ನು ಬುಕ್ ಮಾಡಿ, ನಂತರ ಬೇರೆ ಐವರು ಸಂಗೀತ ನಿರ್ದೇಶಕರನ್ನು ನೇಮಿಸಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಈ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿದಾಗ, "ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಭಾರತವನ್ನು ಗೌರವಿಸುವುದು ಮತ್ತು ಸೇವಿಸುವುದು ಮಾತ್ರ. ಕೆಲವೊಮ್ಮೆ ಉದ್ದೇಶಗಳನ್ನು ತಪ್ಪು ತಿಳಿಯಲಾಗುತ್ತದೆ," ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆಯಾಗಿ, ಧರ್ಮದ ಬೋಧನೆಗಳನ್ನೇ ದೇಶಪ್ರೇಮಕ್ಕೆ ಸ್ಫೂರ್ತಿಯಾಗಿ ಬಳಸಿಕೊಂಡಿದ್ದೇ ಹೌದು ಎಂದಾದರೆ, ರೆಹಮಾನ್ ಅವರ ದೃಷ್ಟಿಕೋನವು ಇಂದಿನ ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದಂತಿದೆ. 'ಮಾ ತುಜೆ ಸಲಾಮ್' ಇಂದಿಗೂ ಪ್ರತಿಯೊಬ್ಬ ಭಾರತೀಯನ ಮೈ ರೋಮಾಂಚನಗೊಳಿಸುವ ಅಪ್ರತಿಮ ಗೀತೆಯಾಗಿ ಉಳಿದಿರುವುದು ಇದಕ್ಕೆ ಸಾಕ್ಷಿ. ಆದರೆ, ರೆಹಮಾನ್ ಅವರು ಈ ಮೊದಲು ಮಾಡಿಕೊಂಡ ವಿವಾದಕ್ಕೆ ಇದು ಸ್ವತಃ ತಾವೇ ತೆರೆ ಎಳೆಯುವ ಪ್ರಯತ್ನವಾಗಿದ್ದರೆ ಇದಕ್ಕಿಂತ ವೈರುಧ್ಯ ಬೇರೇನಿಲ್ಲ. ಸತ್ಯ ಯಾವತ್ತೋ ಒಮದು ದಿನ ಹೊರಬರುತ್ತದೆ, ಬರಲೇಬೇಕು.. ಅದೇ ಸತ್ಯಕ್ಕಿರುವ ಶಕ್ತಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
ಕ್ಯಾನ್ಸರ್ ಜೊತೆ ಸೆಣೆಸುತ್ತಲೇ ಶೂಟಿಂಗ್! ಸಾವು ಗೆದ್ದ ಶಿವಣ್ಣನ ಹೋರಾಟದ ಜರ್ನಿ ಕಥೆಯೇ ‘ಸರ್ವೈವರ್’!