ನಾನೇ ಬಾಲಿವುಡ್ ರಾಜಕುಮಾರ ಎಂದು ಹೇಳಿಕೊಳ್ಳುತ್ತಿರುವ ನಟ ಕಾರ್ತಿಕ್ ಆರ್ಯನ್ ಧಮಾಕಾ ಚಿತ್ರದ 10 ದಿನಗಳ ಚಿತ್ರಕ್ಕೆ ಪಡೆದ ಹಣದಿಂದ ಭಾರಿ ಸುದ್ದಿಯಲ್ಲಿದ್ದಾರೆ.
ಬಾಲಿವುಡ್‌ನ ನಂ.1 ಚಾಕೊಲೇಟ್ ಬಾಯ್ ಯಾರು ಎಂದು ಕೇಳಿದರೆ ತಕ್ಷಣ ಕೇಳಿ ಬರುವ ಹೆಸರು ಕಾರ್ತಿಕ್ ಆರ್ಯನ್ (Kartik Aaryan). ಇವರ ಹೆಸರು ಇನ್ನೂ ಒಂದು ವಿಷಯಕ್ಕೆ ಪ್ರಸಿದ್ಧಿ ಪಡೆದಿದೆ. ಅದೇನೆಂದರೆ ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಕಾರ್ತಿಕ್ ಹೆಸರು ಮುಂಚೂಣಿಯಲ್ಲಿದೆ. 'ನಾನು ಬಾಲಿವುಡ್‌ನ ಶೆಹಜಾದೆ (ರಾಜಕುಮಾರ)' ಎಂದು ತಮ್ಮನ್ನು ತಾವು ಶ್ಲಾಘಿಸಿಕೊಳ್ಳುತ್ತಿರುವ ಕಾರ್ತಿಕ್, 'ಹೀರೋ ನಂಬರ್ ಒನ್' ಚಿತ್ರದ ಯಶಸ್ಸಿನ ಬಳಿಕ 'ನಾನು ಸದಾ ನಂ.1 ನಟ' ಎಂದು ಅವಕಾಶ ಸಿಕ್ಕಾಗಲೆಲ್ಲಾ ಹೇಳಿಕೊಳ್ಳುತ್ತಿದ್ದಾರೆ. 2022 ರಲ್ಲಿ ತೆರೆ ಕಂಡ ಭೂಲ್ ಭುಲೈಯಾ 2 ಚಿತ್ರದ ನಂತರ ಕಾರ್ತಿಕ್ ಅವರ ಯಶಸ್ಸು ಏರುತ್ತಲೇ ಸಾಗಿತ್ತು. ನಂತರ ಬಂದ ಹೀರೋ ನಂಬರ್ ಒನ್ ಚಿತ್ರವು 2022 ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಗಳಿಕೆಯ ಬಾಲಿವುಡ್ ಚಲನಚಿತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದ ನಂತರ ನಾನು ಯಾವಾಗಲೂ ನನ್ನನ್ನು ನಂಬರ್ 1 ಎನ್ನುತ್ತಿದ್ದಾರೆ ಈ ಯುವ ತಾರೆ.
ಅಂದ ಹಾಗೆ, ಈಗ ಕಾರ್ತಿಕ್ ಇನ್ನೊಂದು ವಿಷಯಕ್ಕೆ ಭಾರಿ ಸುದ್ದಿಯಲ್ಲಿದ್ದಾರೆ. ಅದೇನೆಂದರೆ 'ಧಮಾಕಾ' ಚಿತ್ರ 10 ದಿನಗಳಲ್ಲಿ ಶೂಟಿಂಗ್ ಮುಗಿಸಿ ಚರ್ಚೆಯಲ್ಲಿದ್ದರೆ, ಅದಕ್ಕಿಂತಲೂ ಹೆಚ್ಚು ಚರ್ಚೆಯಲ್ಲಿ ಇರುವುದು ಕಾರ್ತಿಕ್ ಅವರು ಈ 10 ದಿನಗಳಲ್ಲಿ ಪಡೆದಿರುವ ಸಂಭಾವನೆ (Remmuneration) ಕುರಿತು. 2021ರಲ್ಲಿ ಬಿಡುಗಡೆಯಾದ ನಿರ್ಮಾಪಕ ರಾಮ್ ಮಧ್ವಾನಿ ಅವರ ಹಾರರ್ ಥ್ರಿಲ್ಲರ್ ‘ಧಮಾಕಾ’ (Dhamaka)ಚಿತ್ರದ 10 ದಿನಗಳ ಚಿತ್ರೀಕರಣಕ್ಕೆ ಕಾರ್ತಿಕ್ ಪಡೆದದ್ದು ಬರೋಬ್ಬರಿ 20 ಕೋಟಿ ರೂಪಾಯಿಗಳು! ಈ ಬಗ್ಗೆ ಬಿ ಟೌನ್ನಲ್ಲಿ ಸಾಕಷ್ಟು ಸುದ್ದಿಯಾಗಿದ್ದರೂ, ಈ ಚಾಕೊಲೇಟ್ ಬಾಯ್ ಮಾತ್ರ ಎಲ್ಲಿಯೂ ಈ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ರಜತ್ ಶರ್ಮಾ (Rajath Sharma) ಅವರು ಬಿಡಲಿಲ್ಲ. ಅಂತೂ ನಟನ ಬಾಯನ್ನು ಈಗ ಬಿಡಿಸಿದ್ದಾರೆ. ಧಮಾಕಾ ಚಿತ್ರದ 10 ದಿನಗಳ ಶೂಟಿಂಗ್‌ಗಾಗಿ 20 ಕೋಟಿ ರೂಪಾಯಿ ಪಡೆದಿರುವುದು ಸತ್ಯ ಎಂದು ಕಾರ್ತಿಕ್ ಒಪ್ಪಿಕೊಂಡಿದ್ದಾರೆ.
Shah Rukh Khan: ಮಧ್ಯರಾತ್ರಿ 2 ಗಂಟೆಗೆ ಸಿಎಂಗೆ ಕರೆ ಮಾಡಿ ರಕ್ಷಣೆ ಕೋರಿದ ಕಿಂಗ್ ಖಾನ್!
ಕೋವಿಡ್ 19 ಸಮಯದಲ್ಲಿ ಚಿತ್ರೀಕರಣಗೊಂಡ 'ಧಮಾಕಾ' ಚಿತ್ರವನ್ನು ಕಾರ್ತಿಕ್ ಕೇವಲ 10 ದಿನಗಳಲ್ಲಿ ಚಿತ್ರೀಕರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಚಿತ್ರ ಅತ್ಯಂತ ಕಡಿಮೆ ದಿನಗಳಲ್ಲಿ ಚಿತ್ರೀಕರಣಗೊಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದರೊಂದಿಗೆ ಕಾರ್ತಿಕ್ ಈ ಚಿತ್ರದ ಶುಲ್ಕದ ಬಗ್ಗೆ ಚರ್ಚೆಯಲ್ಲಿದ್ದರು. 2011ರಲ್ಲಿ ಬಿಡುಗಡೆಯಾಗಿದ್ದ ಮೊದಲ ಚಿತ್ರ ‘ಪ್ಯಾರ್ ಕಾ ಪಂಚ್ನಾಮಾ’ ದಲ್ಲಿ ಕಾರ್ತಿಕ್ ಪಡೆದದ್ದು ಕೇವಲ 1.25 ಲಕ್ಷ ರೂಪಾಯಿ ಸಂಭಾವನೆ. ಹತ್ತೇ ವರ್ಷಗಳಲ್ಲಿ ನಂ.1 ನಾಯಕ ನಾನೇ ಎಂದು ಹೇಳಿಕೊಳ್ಳುವಷ್ಟರ ಎತ್ತರಕ್ಕೆ ಬೆಳೆದ ಕಾರ್ತಿಕ್, ಈಗ 10 ದಿನಗಳ ಚಿತ್ರೀಕರಣಕ್ಕೆ 20 ಕೋಟಿ ರೂಪಾಯಿ ಸಂಭಾವನೆ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ!
ಅಷ್ಟಕ್ಕೂ ತಾನು ಇಷ್ಟೊಂದು ಬೃಹತ್ ಮೊತ್ತವನ್ನು ಪಡೆದಿರುವುದು ಏತಕ್ಕೆ ಬಂದ ಬಗ್ಗೆಯೂ ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ. ಅದೇನೆಂದರೆ ಈ ಚಿತ್ರಕ್ಕೆ ತಾವು 20 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದು ನಿಜ. ಕೋವಿಡ್ (Covid)ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಹತ್ತೇ ದಿನಕ್ಕೆ ಮುಗಿಸಬೇಕಾಗಿ ಬಂತು. ಆ ಚಿತ್ರೀಕರಣವನ್ನು ಅನಿವಾರ್ಯ ಕಾರಣಗಳಿಂದ ಬೇಗನೆ ಮುಗಿಸಿದರು, ಇಲ್ಲದಿದ್ದರೆ ಚಿತ್ರೀಕರಣ ವಿಳಂಬವಾಗುತ್ತಿತ್ತು. ಆಗಲೂ ಅಷ್ಟೇ ಹಣ ಪಡೆದರೆ ಅದು ಸುದ್ದಿಯಾಗುತ್ತಿರಲಿಲ್ಲ. ಬೇಗನೇ ಚಿತ್ರೀಕರಣ ಮುಗಿದಿರುವ ಕಾರಣ, ಇಷ್ಟು ಕಡಿಮೆ ಅವಧಿಯ ಶೂಟಿಂಗ್ಗೆ ಹೆಚ್ಚಿನ ಮೊತ್ತ ಅನಿಸುತ್ತಿದೆ ಅಷ್ಟೇ ಎಂದು ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ. ಇದೇ ವೇಳೆ, ಚಿತ್ರದ ನಿರ್ಮಾಪಕರು 10 ದಿನಗಳಲ್ಲಿ ನನಗೆ ನೀಡಿರುವ ಸಂಭಾವನೆಯ ದುಪ್ಪಟ್ಟು ಪಟ್ಟು ಹಣವನ್ನು 20 ದಿನಗಳಲ್ಲಿ ಗಳಿಸುತ್ತಾರೆ. ಆದ್ದರಿಂದ ನನಗೆ ನೀಡಲಾಗುವ ಸಂಭಾವನೆಗೆ ನಾನು ಅರ್ಹನಾಗಿದ್ದೇನೆ ಎಂದಿದ್ದಾರೆ.
ಜಾಕ್ವೆಲಿನ್, ನೋರಾ ಫತೇಹಿ, ಸುಕೇಶ್ ತ್ರಿಕೋನ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್!
ಇದರ ಜೊತೆಗೆ ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿರುವ ಖುಷಿ ಇದೆ. ನಾನೇ ನಂ.1 ಎಂದು ಅವರೂ ನಿಧಾನವಾಗಿ ತಿಳಿದುಕೊಳ್ಳುತ್ತಿದ್ದಾರೆ ಮತ್ತು ಅವರು ನನ್ನನ್ನು ಹಾಗೆ ನೋಡುತ್ತಿದ್ದಾರೆ. ನಂ.1 ಪಟ್ಟಕ್ಕಿಂತ ಪ್ರೇಕ್ಷಕರ ಪ್ರೀತಿ ನನಗೆ ಅತಿಮುಖ್ಯ. ನಾನು ಅವರ ಪ್ರೀತಿಗಾಗಿ ಹಂಬಲಿಸುತ್ತೇನೆ ಎಂದಿದ್ದಾರೆ. ಕಾರ್ತಿಕ್ ಕೊನೆಯ ಬಾರಿಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾದ ಫ್ರೆಡ್ಡಿ ಚಿತ್ರದಲ್ಲಿ ಕಾಣಿಸಿಕೊಂಡರು. ಕೃತಿ ಸನೋನ್ ಅವರೊಂದಿಗೆ ‘ಶೆಹಜಾದಾ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಕಾರ್ತಿಕ್ ಅವರ ಮುಂಬರುವ ಯೋಜನೆಗಳಲ್ಲಿ ಅನುರಾಗ್ ಬಸು ನಿರ್ದೇಶನದ ‘ಆಶಿಕಿ 3’ ಸೇರಿದೆ.