ಅನಿಮಲ್ ಚಿತ್ರದಲ್ಲಿ ತನ್ನ ಮೂರು ಪತ್ನಿಯರ ಮೇಲೆ ಅತ್ಯಂತ ಕ್ರೂರವಾಗಿ ದೌರ್ಜನ್ಯ ಎಸಗುವ ಪಾತ್ರವನ್ನು ರೊಮ್ಯಾಂಟಿಕ್ ಪಾತ್ರ ಎಂದಿದ್ದಾರೆ ಬಾಬಿ ಡಿಯೋಲ್!
'ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಅನಿಮಲ್ ಚಿತ್ರ ನಾಗಾಲೋಟದಿಂದ ಓಡುತ್ತಲಿದೆ. ಈ ಚಿತ್ರದಲ್ಲಿ ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ. ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ. ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಇದೇ ಡಿಸೆಂಬರ್ 1 ರಂದು ಬಿಡುಗಡೆಯಾಗಿರುವ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ ಜಗತ್ತಿನಾದ್ಯಂತ 800 ಕೋಟಿ ರೂಪಾಯಿ ದಾಟಿದೆ. ಅಡಲ್ಟ್ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ಮುನ್ನುಗ್ಗಿ ಸಾಗುತ್ತಿದೆ.
ಅಷ್ಟಕ್ಕೂ ಇಷ್ಟು ಹಿಂಸಾತ್ಮಕ ಮನೋಭಾವನೆ ಒಬ್ಬ ನಿರ್ದೇಶಕನಲ್ಲಿ ಬರಲು ಹೇಗೆ ಸಾಧ್ಯ ಎಂದು ಚಿತ್ರ ನೋಡಿದವರು ಅಂದುಕೊಂಡಿದ್ದರು. ಅದರ ಬೆನ್ನಲ್ಲೇ, ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿತ್ತು. ಅಷ್ಟಕ್ಕೂ ಮಹಿಳೆ ಎಂದರೆ ಈ ನಿರ್ದೇಶಕನ ದೃಷ್ಟಿಯಲ್ಲಿ ಯಾವುದೇ ಸರಕಿಗಿಂತ ಕಮ್ಮಿಯೇನಲ್ಲ. ಹೆಣ್ಣೆಂದರೆ ತಮ್ಮದೇ ರೀತಿಯ ವ್ಯಾಖ್ಯಾನ ನೀಡಿರುವ ಸಂದೀಪ್ ಅವರು, ನೀವು ನಿಮ್ಮ ಪತ್ನಿಯ ಕಪಾಳಕ್ಕೆ ಹೊಡೆಯದಿದ್ದರೆ, ನೀವು ಎಲ್ಲಿ ಬೇಕು ಅಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು ಸಾಧ್ಯವಾಗದಿದ್ದರೆ, ನೀವು ಮುತ್ತು ಕೊಡಲು ಸಾಧ್ಯವಾಗದಿದ್ದರೆ ಮತ್ತು ಪತ್ನಿಯನ್ನು ಬೈಯ್ಯದಿದ್ದರೆ ಆ ಸಂಬಂಧದಲ್ಲಿ ನಾನು ಭಾವನೆಗಳನ್ನೇ ಕಾಣುವುದಿಲ್ಲ ಎಂದಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.
ಹೆಣ್ಣೆಂದರೆ 'ಅನಿಮಲ್' ನಿರ್ದೇಶಕನ ದೃಷ್ಟಿಯಲ್ಲಿ ಹೀಗಂತೆ! ಯಾವುದ್ರಿಂದ ಹೊಡಿಬೇಕು ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು
ಇದರ ನಡುವೆಯೇ ಚಿತ್ರದಲ್ಲಿ ಅಬ್ರಾರ್ ಹಖ್ ಪಾತ್ರ ಮಾಡಿರುವ ಬಾಬಿ ಡಿಯೋಲ್ ಸ್ಟೇಟ್ಮೆಂಟ್ ಹಲವರನ್ನು ದಂಗುಬಡಿಸಿದೆ. ಚಿತ್ರದಲ್ಲಿ ಅಬ್ರಾರ್ ಹಖ್ ಮೂವರು ಪತ್ನಿಯರನ್ನು ಹೊಂದಿದ ಪಾತ್ರ. ಆ ಪತ್ನಿಯರ ಮೇಲೆ ಆತ ದೌರ್ಜನ್ಯ ಎಸಗುತ್ತಾನೆ. ತುಂಬ ಕ್ರೂರವಾಗಿ ನಡೆದುಕೊಳ್ಳುತ್ತಾನೆ. ಅತಿ ಎನ್ನುವಷ್ಟು ಕ್ರೌರ್ಯ ಇದರಲ್ಲಿ ತುಂಬಿದೆ. ಇಂಥ ಕ್ರೌರ್ಯ, ರಕ್ತಪಾತ, ಪತ್ನಿಯರ ಮೇಲಿನ ದೌರ್ಜನ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಬಾಬಿ ಡಿಯೋಲ್. ‘ನನ್ನ ಆ ಪಾತ್ರವನ್ನು ನಾನು ವಿಲನ್ ಎಂದು ಪರಿಗಣಿಸುವುದಿಲ್ಲ. ಅಜ್ಜ ಆತ್ಮಹತ್ಯೆ ಮಾಡಿಕೊಳ್ಳುವುದು ನೋಡಿ ಆಘಾತಕ್ಕೆ ಒಳಗಾದ ಮಗು ಆತ. ಹಾಗಾಗಿ ಅವನಿಗೆ ಮಾತು ಹೊರಟು ಹೋಗುತ್ತದೆ. ಅಜ್ಜನ ಸಾವಿಗೆ ಸೇಡು ತೀರಿಸಿಕೊಳ್ಳಲು ಆತ ಕಾದಿರುತ್ತಾನೆ. ಅವನು ಫ್ಯಾಮಿಲಿ ಮ್ಯಾನ್. ಆತನಿಗೆ ಮೂವರು ಹೆಂಡತಿಯರು. ಹಾಗಾಗಿ ಅವನು ರೊಮ್ಯಾಂಟಿಕ್ ವ್ಯಕ್ತಿ. ಕುಟುಂಬಕ್ಕಾಗಿ ಅವನು ಪ್ರಾಣ ತೆಗೆಯಬಲ್ಲ ಮತ್ತು ಪ್ರಾಣ ಕೊಡಬಲ್ಲ’ ಎಂದು ಬಾಬಿ ಡಿಯೋಲ್ ಹೇಳಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಚಿತ್ರದ ಕೆಲವು ದೃಶ್ಯ ತಮಗೆ ಇಷ್ಟ ಆಗಿಲ್ಲ ಎಂದು ಬಾಬಿ ಡಿಯೋಲ್ ಸಹೋದರ ಸನ್ನಿ ಡಿಯೋಲ್ ಹೇಳಿದ್ದಾರೆ. ಆದರೆ ಬಾಬಿ ಡಿಯೋಲ್ಗೆ ಮಾತ್ರ ಪತ್ನಿಯರ ಮೇಲಿನ ದೌರ್ಜನ್ಯದಲ್ಲಿಯೂ ರೊಮ್ಯಾನ್ಸ್ ಕಂಡಿದೆಯಂತೆ! ಅದೇ ಇನ್ನೊಂದೆಡೆ, ಸಂದೀಪ್ ರೆಡ್ಡಿ ವಂಗಾ ಅವರ ಹೆಚ್ಚಿನ ಸಿನಿಮಾಗಳಲ್ಲಿ ಪುರುಷ ಪಾತ್ರಗಳನ್ನು ಅತ್ಯುನ್ನತ ಎಂಬಂತೆ ಬಿಂಬಿಸುತ್ತಾರೆ ಎನ್ನಲಾಗಿದೆ. ಅನಿಮಲ್ಗೂ ಮೊದಲು ಇವರು ನಿರ್ದೇಶಿಸಿದ್ದ, ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾದಲ್ಲಿಯೂ ಇದೇ ಆರೋಪ ಕೇಳಿಬಂದಿತ್ತು. ಆಗ ಈ ಸಿನಿಮಾವನ್ನು ನಟಿ ಅನಸೂಯಾ ಭಾರದ್ವಾಜ್ ಅವರು ಸಾಕಷ್ಟು ಹೀಯಾಳಿಸಿದ್ದರು. ಕಬೀರ್ ಸಿಂಗ್ ಸಿನಿಮಾದಲ್ಲಿ ಕೂಡ ಇದೇ ರೀತಿ ಇದೆ ಎನ್ನಲಾಗಿದೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆಯನ್ನು ಜನರು ಎಷ್ಟು ಇಷ್ಟಪಟ್ಟು ನೋಡುತ್ತಾರೆ, ಜನರ ಮನಸ್ಸು ಎಷ್ಟು ಹೀನಸ್ಥಿತಿಗೆ, ಹಿಂಸಾತ್ಮಕ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ಅನಿಮಲ್ ಚಿತ್ರದ ಭರ್ಜರಿ ಕಲೆಕ್ಷನ್ ನೋಡಿದರೆ ತಿಳಿಯುತ್ತದೆ.
ಅನುಷ್ಕಾ ಶರ್ಮಾ ಬೇಬಿ ಬಂಪ್ ಷೋ ಹಿಂದೆ ಇಷ್ಟೆಲ್ಲಾ ಕಥೆಯಿದ್ಯಾ? ಫೋಟೋದ ಅಸಲಿಯತ್ತೇನು?