
ಇದೇ 18ರಂದು ತೆರೆ ಕಾಣಲಿರುವ ಕಿರೀಟಿ ಮತ್ತು ಶ್ರೀಲೀಲಾ ನಟನೆಯ 'ಜೂನಿಯರ್' ಸಿನಿಮಾದ 'ವೈರಲ್ ವೈಯ್ಯಾರಿ' ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಸೃಷ್ಟಿಸುತ್ತಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಮೊದಲ ಬಾರಿಗೆ ಹೀರೋ ಆಗಿ ನಟಿಸಿರುವ ಚಿತ್ರ ಇದಾಗಿದೆ. ಈಚೆಗೆ ಇದರ ವೈರಲ್ ವೈಯ್ಯಾರಿ ಹಾಡು ರಿಲೀಸ್ ಆಗಿತ್ತು. ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ತೆಲಗು ಮೂಲದ ಈ ಹಾಡಿನ ಕನ್ನಡ ವರ್ಷನ್ ಹಾಡಿಗೆ ಪವನ್ ಭಟ್ ಸಾಹಿತ್ಯ ಬರೆದಿದ್ದಾರೆ. ಇದು ಹರಿಪ್ರಿಯಾ ಮತ್ತು ದೀಪಕ ಬ್ಲೂ ಅವರ ಕಂಠದಿಂದ ಮೂಡಿ ಬಂದಿದೆ. ಇದೀಗ ನಟಿ ನಮ್ರತಾ ಗೌಡ ಮತ್ತು ನಟ ಕಿಶನ್ ಅವರು ಸ್ಟೆಪ್ ಹಾಕಿದ್ದಾರೆ. ಕಿಶನ್ ಅವರ ಕೋರಿಯೋಗ್ರಫಿಯಲ್ಲಿ ನೃತ್ಯ ಮೂಡಿ ಬಂದಿತು ಎಂದರೆ ಅಲ್ಲೊಂದು ವಿಶೇಷತೆ ಇರಲೇಬೇಕು. ಇದಾಗಲೇ ಹಲವಾರು ರೀತಿಯ ಡಾನ್ಸ್ಗಳನ್ನು ವಿವಿಧ ನಟಿಯರ ಜೊತೆ ಮಾಡಿರುವ ಕಿಶನ್ ಅವರು ನಮ್ರತಾ ಜೊತೆ ಅತಿ ಹೆಚ್ಚು ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ.
ಇದೀಗ ಈ ಹಾಡಿಗೂ ಭರ್ಜರಿ ಸ್ಟೆಪ್ ಹಾಕಿದ್ದು, ನಮ್ರತಾ ಅವರ ಡಾನ್ಸ್ ಜನರನ್ನು ಮೋಡಿ ಮಾಡಿದೆ. ಬಿಗ್ಬಾಸ್ ಮೂಲಕವೇ ಸಕತ್ ಫೇಮಸ್ ಆಗಿರೋ ಕಿಶನ್ ಬಿಳಗಲಿಯ ನೃತ್ಯ ವೈಖರಿಯನ್ನು ಕಿರುತೆರೆ ಪ್ರೇಮಿಗಳು ನೋಡಿರಲು ಸಾಕು. ಅದರಲ್ಲಿಯೂ ಹೆಚ್ಚಾಗಿ ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ಅವರ ಜೊತೆ ಕಿಶನ್ ಅವರ ರೊಮಾಂಟಿಕ್ ಸಾಂಗ್ಗಳನ್ನು ನೋಡಿರುವ ಅಭಿಮಾನಿಗಳು ಇವರಿಬ್ಬರ ಕೆಮೆಸ್ಟ್ರಿಗೆ ಫಿದಾ ಆಗ್ತಿರೋದು ಸುಳ್ಳಲ್ಲ. ಈಚೆಗೆ ಅವರು ಬಿಗ್ಬಾಸ್ ನಿವೇದಿತಾ ಗೌಡ ಜೊತೆ, ಶಿಲಾಬಾಲಿಕೆಯಂತೆ ರೆಡಿಯಾಗಿ ಅದ್ಭುತ ನೃತ್ಯ ಮಾಡಿದ್ದರು. ಬಳಿಕ ಲಕ್ಷ್ಮೀ ಬಾರಮ್ಮ ಸೀರಿಯಲ್ ಕೀರ್ತಿ ಅರ್ಥಾತ್ ನಟಿ ತನ್ವಿ ರಾವ್ ಅವರು ಕಿಶನ್ ಬಿಳಗಲಿ ಜೊತೆ ನೃತ್ಯದ ಮೋಡಿ ಮಾಡಿದ್ದರು. ನಮ್ರತಾ ಜೊತೆಯಲ್ಲಿ ವಿವಿಧ ರೀತಿಯ ನೃತ್ಯ ಮಾಡಿದ್ದು, ಇದೀಗ ವೈರಲ್ ವೈಯ್ಯಾರಿಗೂ ಸ್ಟೆಪ್ ಹಾಕಿದ್ದಾರೆ.
ಅಂದಹಾಗೆ ಕಿಶನ್ ಅವರು ಮೂಲತಃ ಡಾನ್ಸರ್ ಚಿಕ್ಕಮಗಳೂರಿನ ಇವರು ಬಿಗ್ಬಾಸ್ 7ರಿಂದ ಸಕತ್ ಫೇಮಸ್ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್. ಡಾನ್ಸ್ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್ಲೆಟ್ಗಳಿವೆ. ಬಿಗ್ಬಾಸ್ ಮೂಲಕವೇ ಫೇಮಸ್ ಆಗಿರೊ ನಟಿ ನಮ್ರತಾ ಗೌಡ ಅವರ ಬಗ್ಗೆ ಅಭಿಮಾನಿಗಳಿಗೆ ಗೊತ್ತಿದ್ದದ್ದೇ. ನಟಿ ನಮ್ರತಾ ಗೌಡ ಹೆಸರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಅದರಲ್ಲಿಯೂ ಬಿಗ್ಬಾಸ್ ವೀಕ್ಷಕರಿಗಂತೂ ತುಂಬಾ ಹತ್ತಿರವಾಗಿದ್ದಾರೆ ನಟಿ.
ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಸೀರಿಯಲ್ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್ ಸಿಕ್ಕಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 10. ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ನಮ್ರತಾ ಗೌಡ ಅವರು ಹಲವಾರು ಸೆಲೆಬ್ರಿಟಿಗಳಂತೆಯೇ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿ ಕೂಡ. ಇದೇ ಕಾರಣಕ್ಕೆ ನಟಿ ಮೂರು ವರ್ಷಗಳ ಹಿಂದೆ, ಅಂದರೆ 2022ರಲ್ಲಿ ಅಪ್ಪು ಅವರ ಜನ್ಮದಿನದ ಸಂದರ್ಭದಲ್ಲಿ ನಟನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ತಮ್ಮ ಕೈಮೇಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದರು. ಇನ್ನು ಜ್ಯೂನಿಯರ್ ಚಿತ್ರದ ಕುರಿತು ಹೇಳುವುದಾದರೆ, ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಸಾಯಿ ಕೊರ್ರಪಾಟಿ ನಿರ್ಮಾಣದ ಚಿತ್ರವಾಗಿದ್ದು, ಕೆ ಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.