ಕನ್ನಡದ ರಕ್ತ ಕಣ್ಣೀರು ಸಿನಿಮಾದಲ್ಲಿ ನಟಿಸಿದ್ದ ತೆಲುಗಿನ ಖ್ಯಾತ ನಟ ಕೋಟ ಶ್ರೀನಿವಾಸ ರಾವ್ ಇನ್ನಿಲ್ಲ

Published : Jul 13, 2025, 07:31 AM ISTUpdated : Jul 13, 2025, 07:34 AM IST
kota srinivasa rao

ಸಾರಾಂಶ

ತೆಲುಗಿನ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ತೆಲುಗು ಸಿನಿಮಾ ರಂಗದಲ್ಲಿ 4 ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟರು ಕನ್ನಡದಲ್ಲೂ ಹಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಹೈದರಾಬಾದ್‌: ತೆಲುಗು ಸಿನಿಮಾ ರಂಗದ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಇಹದ ಯಾತ್ರೆ ಮುಗಿಸಿ ಹೊರಟಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಫಿಲ್ಮ್ ನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಮುಂಜಾನೆ 4 ಗಂಟೆಗೆ ನಿಧನರಾಗಿದ್ದಾರೆ. ವಯಸ್ಸಾದ ಕಾರಣ ಮತ್ತು ವೃದ್ಧಾಪ್ಯದ ಸಮಸ್ಯೆಗಳಿಂದ ಹಿರಿಯ ನಟ ತೊಂದರೆ ಅನುಭವಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅವರು ನಡೆಯಲು ಸಹ ತೊಂದರೆಪಡುತ್ತಿದ್ದರು. ಕೋಟಾ ಶ್ರೀನಿವಾಸ ರಾವ್ ಅವರು ಕೊನೆಯದಾಗಿ 2023 ರಲ್ಲಿ ಬಿಡುಗಡೆಯಾದ 'ಸುವರ್ಣ ಸುಂದರಿ'ಯಲ್ಲಿ ನಟಿಸಿದ್ದರು.

ಸುಮಾರು ನಾಲ್ಕು ದಶಕಗಳ ಸಿನಿಮಾ ಪಯಣದಲ್ಲಿ ಅನೇಕ ಅದ್ಭುತ ಪಾತ್ರಗಳನ್ನು ನಿರ್ವಹಿಸಿದ್ದಾರೆ ಕೋಟ ಶ್ರೀನಿವಾಸ ರಾವ್. ತಮ್ಮ ವೃತ್ತಿಜೀವನದಲ್ಲಿ 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೋಟಾ ಶ್ರೀನಿವಾಸ ರಾವ್ ಅವರ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ತೆಲುಗು ಚಿತ್ರರಂಗದ ಜೊತೆಗೆ ತೆಲುಗು ರಾಜ್ಯದ ರಾಜಕೀಯ ಗಣ್ಯರು ಸಹ ಹಿರಿಯ ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಕೃಷ್ಣಾ ಜಿಲ್ಲೆಯ ಕಂಕಿಪಾಡಿನಲ್ಲಿ 1942 ಜುಲೈ 10 ರಂದು ಜನಿಸಿದ ಕೋಟ ಶ್ರೀನಿವಾಸ ರಾವ್ ಅವರ ತಂದೆ ಸೀತಾರಾಮಾಂಜನೇಯುಲು ಆಯುರ್ವೇದ ವೈದ್ಯರಾಗಿದ್ದರು. ಕೋಟಾ ಅವರನ್ನು ಅವರ ತಂದೆ ಚೆನ್ನಾಗಿ ಓದಿಸಿದರು. ವೈದ್ಯರಾಗಬೇಕೆಂದುಕೊಂಡಿದ್ದ ಕೋಟಾಗೆ ಬ್ಯಾಂಕಿನಲ್ಲಿ ಸರ್ಕಾರಿ ಉದ್ಯೋಗ ಸಿಕ್ಕಿತು. ಆಗಲೇ ನಾಟಕಗಳಲ್ಲಿ ಆಸಕ್ತಿ ಹೊಂದಿ ನಟನೆ ಶುರು ಮಾಡಿದ್ದ ಕೋಟಾಗೆ ನಟನೆಯ ರುಚಿ ತಿಳಿದಿದ್ದರಿಂದ ಉದ್ಯೋಗಕ್ಕೆ ರಜೆ ಹಾಕಿ ನಾಟಕಗಳನ್ನು ಮಾಡುತ್ತಿದ್ದರು. ಸಿನಿಮಾ ಅವಕಾಶಗಳು ಬರತೊಡಗಿದಾಗ, ಎರಡನ್ನೂ ನಿಭಾಯಿಸಲಾಗದೆ, ಸಿನಿಮಾಗಳಿಗಾಗಿ ಸರ್ಕಾರಿ ಉದ್ಯೋಗವನ್ನೇ ತೊರೆದರು. ಅವರು ಕೇವಲ ತೆಲುಗು ಮಾತ್ರವಲ್ಲದೇ ತಮಿಳು, ಹಿಂದಿ, ಕನ್ನಡ, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.

ಕೋಟ ಶ್ರೀನಿವಾಸ ರಾವ್ ಅವರಿಗೆ ಪತ್ನಿ ರುಕ್ಮಿಣಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದರು. ಆದರೆ ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ 2010 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಕೋಟಾ ಅವರ ತಮ್ಮ ಶಂಕರ್ ರಾವ್ ಕೂಡ ಟಾಲಿವುಡ್ ನಟರಾಗಿದ್ದಾರೆ. ಕೋಟ ಶ್ರೀನಿವಾಸ್ ನಟನೆ ಮಾತ್ರವಲ್ಲದೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಕೋಟ ಶ್ರೀನಿವಾಸ ರಾವ್ 1999 ರಿಂದ 2004 ರವರೆಗೆ ವಿಜಯವಾಡ ಪೂರ್ವದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಅವರು ಶಿವ, ಗಾಯಂ, ಮನಿ, ಶತ್ರುವು, ಅಹಾ ನಾ ಪೆಲ್ಲಂಟಾ, ಬೊಮ್ಮರಿಲ್ಲು, ಅತ್ತಾಡು, ರಕ್ತ ಚರಿತ್ರೆ, ಲೀಡರ್, S/O ಸತ್ಯಮೂರ್ತಿ, ಮತ್ತು ಅತ್ತಾರಿಂಟಿಕಿ ದಾರೇದಿ ಮುಂತಾದ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಖಳನಾಯಕ, ಪೋಷಕ ಮತ್ತು ಅವರ ಪಾತ್ರಗಳಲ್ಲಿನ ಶ್ರೇಷ್ಠತೆಗಾಗಿ ಕೋಟಾ ಅವರಿಗೆ ಒಂಬತ್ತು ನಂದಿ ಪ್ರಶಸ್ತಿಗಳು ಅರಸಿ ಬಂದಿವೆ. 2015 ರಲ್ಲಿ, ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.

ಹಾಗೆಯೇ ಅವರು ಕನ್ನಡದ ರಕ್ತ ಕಣ್ಣೀರು, ಲವ್‌, ನಮ್ಮ ಬಸವ, ಶ್ರೀಮತಿ, ಕಬ್ಜ, ನಮ್ಮಣ್ಣ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!