
ಕರ್ನಾಟಕ ಮೂಲದ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸದ್ಯ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಮಗಳು ಐಶ್ವರ್ಯಾ ಸರ್ಜಾಗಾಗಿ ಅರ್ಜುನ್ ಸರ್ಜಾ ಎರಡನೇ ಬಾರಿಗೆ ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ಕೂಡ ನೆರವೇರಿತ್ತು. ಅದ್ದೂರಿಯಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಖ್ಯಾತ ನಟ ಪವನ್ ಕಲ್ಯಾಣ್ ಕ್ಲಾಪ್ ಮಾಡಿ ಶುಭಹಾರೈಸಿದ್ದರು. ಇನ್ನು ಹೆಸರಿದ ಸಿನಿಮಾದಲ್ಲಿ ಐಶ್ವರ್ಯಾ ಸರ್ಜಾಗೆ ನಾಯಕನಾಗಿ ವಿಶ್ವಕ್ ಸೇನ್ ಆಯ್ಕೆಯಾಗಿದ್ದರು. ಸಿನಿಮಾ ಮುಹೂರ್ತದಲ್ಲಿ ಖುಷಿಯಾಗೆ ಭಾಗಿಯಾಗಿದ್ದ ವಿಶ್ವಕ್ ಸೇನ್ ಇದೀಗ ಸಿನಿಮಾದಿಂದನೇ ಹೊರನಡೆದಿದ್ದಾರೆ. ವಿಶ್ವನ್ ಸೇನ್ ವಾಕ್ ಔಟ್ ಆಗಿದ್ದು ಅರ್ಜುನ್ ಸರ್ಜಾ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವಕ್ ದಿಢೀರ್ ಅಂತ ಸಿನಿಮಾದಿಂದ ಹೊರ ನಡೆದ ವಿರುದ್ಧ ಅರ್ಜುನ್ ಸರ್ಜಾ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಕೆಲವು ದಿನಗಳಿಂದ ನಾಯಕ ವಿಶ್ವಕ್ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಈಗ ಅರ್ಜುನ್ ಸರ್ಜಾ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ವಿವರಣೆ ನೀಡಿದ್ದಾರೆ. ಇಂಥ ವೃತ್ತಿಪರವಿಲ್ಲದ ನಟರ ಜೊತೆ ಕೆಲಸ ಮಾಡುವುದು ಅರ್ಥವಿಲ್ಲ ಎಂದು ಅರ್ಜುನ್ ಸರ್ಜಾ ಕಿಡಿಕಾರಿದ್ದಾರೆ.
'ಇದು ನಾನು ಬರೆದ ಅತ್ಯುತ್ತಮ ಸ್ಕ್ರಿಪ್ಟ್. ಕಥೆ ಪೂರ್ಣಗೊಳಿಸಿದ ನಂತರ, ಮುಖ್ಯ ಪಾತ್ರಕ್ಕೆ ವಿಶ್ವಕ್ ಸೇನ್ ಸೂಕ್ತ ವ್ಯಕ್ತಿ ಎಂದು ನಾನು ಭಾವಿಸಿದೆ. ಅವರು ಕೂಡ ಸ್ಕ್ರಿಪ್ಟ್ ಅನ್ನು ಸಂಪೂರ್ಣವಾಗಿ ಇಷ್ಟಪಟ್ಟ ಬಳಿಕವೇ ಸಿನಿಮಾ ಘೋಷಣೆ ಮಾಡಿದ್ದು. ಅವರ ಸಂಭಾವನೆ ಮತ್ತು ಷರತ್ತುಗಳಿಂದ ನನಗೆ ಸಂತೋಷವಾಗದಿದ್ದರೂ ಒಪ್ಪಿಕೊಂಡೆವು.
ಮೊದಲು ಅಕ್ಟೋಬರ್ ನಲ್ಲಿ ಪ್ರಮುಖ ವೇಳಾಪಟ್ಟಿಯನ್ನು ಪ್ಲಾನ್ ಮಾಡಿದೆವು. ಕೊನೆಯ ಕ್ಷಣದಲ್ಲಿ, ವಿಶ್ವಕ್ ಸೇನ್ ಅವರ ಮ್ಯಾನೇಜರ್ ನನ್ನ ಬಳಿಗೆ ಬಂದು ನಾಯಕ ವೇಳಾಪಟ್ಟಿಗೆ ಸಿದ್ಧವಾಗಿಲ್ಲ ಎಂದು ಹೇಳಿದರು. ಜಗಪತಿ ಬಾಬು ಮತ್ತು ಇತರರ ಡೇಟ್ಸ್ ಸಿಕ್ಕಿದ್ದರಿಂದ ನನಗೆ ಆಘಾತವಾಯಿತು. ಕೇರಳದ ಕಲಾವಿದರೂ ಕೂಡ ಬಂದಿದ್ದರು. ಆದರೆ ಶೆಡ್ಯೂಲ್ ರದ್ದುಗೊಳಿಸಬೇಕಾಯಿತು' ಎಂದು ಬೇಸರ ವ್ಯಕ್ತಪಡಿಸಿದರು.
ತೆಲುಗು ಚಿತ್ರರಂಗಕ್ಕೆ ಐಶ್ವರ್ಯ ಎಂಟ್ರಿ; ತಂದೆ ಅರ್ಜುನ್ ಸರ್ಜಾನೇ ಡೈರೆಕ್ಟರ್!
'ನಾನು ಯಾವುದೇ ನಟನಿಗೆ ಹಲವು ಬಾರಿ ಕರೆ ಮಾಡಿಲ್ಲ. ಆದರೆ ನನ್ನ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಅವರು ಹಲವಾರು ಚಿತ್ರಗಳಿಗೆ ಕಮಿಟ್ ಆಗಿರುವುದರಿಂದ ಅವರು ಬ್ಯುಸಿಯಾಗಿದ್ದಾರೆ ಎಂದು ನಾನು ಭಾವಿಸಿದೆ. ಕಾಸ್ಟ್ಯೂಮ್ ಅಂತಿಮಗೊಳಿಸಲು ಸಹ ಅವರಿಗೆ ಸಮಯವಿರಲಿಲ್ಲ. ನಾವು 30 ದಿನಗಳ ಶೆಡ್ಯೂಲ್ ಪ್ಲಾನ್ ಮಾಡಿದೆವು. ಆದರೆ ಮ್ಯಾನೇಜರ್ ನನ್ನ ಬಳಿಗೆ ಬಂದು ಡೇಟ್ ಹೊಂದಿಸಲು ವಿನಂತಿಸಿದರು. ನಾನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡೆ. ಆದರೆ ನಂತರ ಅವನು ಸಂಪೂರ್ಣ ಶೆಡ್ಯೂಲ್ ಗೆ ಬರದಿರಲು ನಿರ್ಧರಿಸಿದ್ದರು ಎಂದು ಗೊತ್ತಾಯಿತು. ಇದರಿಂದ ಎಲ್ಲಾ ನಟರ ಡೇಟ್ಸ್ ವ್ಯರ್ಥವಾಗಿದೆ. ಅವರು ನವೆಂಬರ್ ರಿಂದ ಡಿಸೆಂಬರ್ ವರೆಗೆ ದಿನಾಂಕಗಳನ್ನು ನಿಗಧಿ ಪಡಿಸಿದ್ದರು. ಮತ್ತೆ ಅವರಿಗಾಗಿ ಹೊಸ ಶೆಡ್ಯೂಲ್ ಪ್ಲಾನ್ ಮಾಡಿದೆವು. ಸ್ಕ್ರಿಪ್ಟ್‌ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಾನು ಅವರಿಗೆ ಹಲವು ಬಾರಿ ಕರೆ ಮಾಡಿದೆ. ಅವರು ನನ್ನ ಕರೆಗಳಿಗೆ ಉತ್ತರಿಸಲಿಲ್ಲ ಅಥವಾ ಪ್ರತಿಕ್ರಿಯಿಸಲಿಲ್ಲ. ಕೊನೆಯದಾಗಿ ಅಕ್ಟೋಬರ್ 31 ರಂದು ಬಂದರು. ನಾನು ಸ್ಕ್ರಿಪ್ಟ್ ಅನ್ನು ಸಾಕಷ್ಟು ಬಲಾಯಿಸಿದ್ದೆ, ಹೊಸ ಸಂಭಾಷಣೆಗಳೊಂದಿಗೆ ಮತ್ತೆ ನಿರೂಪಿಸಿದೆ. ಆದರೆ ಅವರು ಅಕ್ಟೋಬರ್ 3 ರಂದು ಬೆಳಿಗ್ಗೆ 4 ಗಂಟೆಗೆ ಚಿತ್ರೀಕರಣವನ್ನು ರದ್ದುಗೊಳಿಸುವಂತೆ ನನಗೆ ಮೆಸೇಜ್ ಮಾಡಿದರು' ಎಂದು ನಡೆದ ಘಟನೆ ವಿವರಿಸಿದರು.
ಮುದ್ದಾದ 'ರಾಧೆ-ಕೃಷ್ಣ' ಜೊತೆ ಅರ್ಜುನ್ ಸರ್ಜಾ ಕುಟುಂಬ; ಫೋಟೋ ವೈರಲ್
'ನಿರ್ದೇಶಕ ಮತ್ತು ನಿರ್ಮಾಪಕರ ಬಗ್ಗೆ ಗೌರವವಿಲ್ಲದ ಇಂತಹ ವೃತ್ತಿಪರವಲ್ಲದ ನಟನೊಂದಿಗೆ ಕೆಲಸ ಮಾಡುವುದರಲ್ಲಿ ಅರ್ಥವಿಲ್ಲ' ಎಂದು ಅರ್ಜುನ್ ಹೇಳಿದ್ದಾರೆ. ಸದ್ಯ ವಿಶ್ವಕ್ ಬಿಟ್ಟು ಹೋದ ಜಾಗಕ್ಕೆ ಯಾವ ನಟ ಎಂಟ್ರಿ ಕೊಡಲಿದ್ದಾರೆ ಎಂದು ಕಾದುನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.