ಮೈನೆ ಪ್ಯಾರ್ ಕಿಯಾ ಚಿತ್ರದ ದಿಲ್ ದಿವಾನಾ ಬಿನ್ ಸಜನಾಕೆ ಹಾಡಿಗೆ 35 ವರ್ಷಗಳ ಬಳಿಕ ನಟಿ ಭಾಗ್ಯಶ್ರೀ ಸ್ಟೆಪ್ ಹಾಕಿದ್ದಾರೆ. ವಿಡಿಯೋ ವೈರಲ್ ಆಗಿದೆ.
1989 ರಲ್ಲಿ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ ಮೈನೆ ಪ್ಯಾರ್ ಕಿಯಾ ಚಿತ್ರ ಸಿನಿ ರಸಿಕರ ಹುಚ್ಚೆಬ್ಬಿಸಿದ್ದು ಸುಳ್ಳಲ್ಲ. ಚಿತ್ರ ಬಿಡುಗಡೆಯಾಗಿ 35 ವರ್ಷವಾದರೂ ಇಂದಿಗೂ ಆ ಚಿತ್ರದ ಹಾಡುಗಳು ಎಲ್ಲರ ಬಾಯಲ್ಲಿ ನಲಿದಾಡುತ್ತಲೇ ಇವೆ. ನವಿರಾದ ಪ್ರೇಮ ಕಥೆ ಇರುವ ಈ ಚಿತ್ರ ಮತ್ತೆ ರೀ ರಿಲೀಸ್ ಆದರೂ ಅಷ್ಟೇ ಪ್ರೀತಿಯಿಂದ ನೋಡುವ ದೊಡ್ಡ ವರ್ಗವೇ ಇದೆ. ಈ ಚಿತ್ರ ಆಗ ಬ್ಲಾಕ್ಬಸ್ಟರ್ ಎಂದು ಸಾಬೀತಾಗಿದ್ದು ಮಾತ್ರವಲ್ಲದೇ ಸಲ್ಮಾನ್ ಮತ್ತು ಭಾಗ್ಯಶ್ರೀ ಇಬ್ಬರಿಗೂ ದೊಡ್ಡ ಬ್ರೇಕ್ ಕೊಟ್ಟಿತ್ತು. ಮುದ್ದುಮುದ್ದಾದ ಮೊಗದ ಭಾಗ್ಯಶ್ರೀಗೆ ಆಗ 25ರ ಹರೆಯ. ಆಕರ್ಷಕ ನಗು, ಒಲವಿನ ಕಣ್ಣುಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಭಾಗ್ಯಶ್ರೀ ಅವರಿಗೆ ಈಗ 55 ವರ್ಷ ವಯಸ್ಸು. ಭಾಗ್ಯಶ್ರೀ ಅವರ ಆಕರ್ಷಕ ನಗು, ಒಲವಿನ ಕಣ್ಣುಗಳಲ್ಲಿರುವ ಪ್ರೇಮಭಾವ ಇಂದಿಗೂ ಮರೆಯದವರು ಹಲವರು. ಆದರೆ ಈ ಚಿತ್ರದ ಬಳಿಕ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಮೈನೆ ಪ್ಯಾರ್ ಕಿಯಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಈಕೆ ನಟಿಸಿದ ಮೊದಲ ಚಿತ್ರವೇ ಸೂಪರ್ ಡೂಪರ್ ಹಿಟ್. ಖ್ಯಾತ ನಟ ಸಲ್ಮಾನ್ ಖಾನ್ ಎದುರು ನಾಯಕಿಯಾಗಿ ನಟಿಸಿ, ಸಲ್ಲುಗಿಂತ 5 ಪಟ್ಟು ಹೆಚ್ಚು ಸಂಭಾವನೆ ಪಡೆದು, ಚಿತ್ರದ ಸಂಪೂರ್ಣ ಗೆಲುವಿನ ಕ್ರೆಡಿಟ್ ಕೂಡಾ ಪಡೆದ್ರು.
ಇದೀಗ ವಿಮಾನ ನಿಲ್ದಾಣದಲ್ಲಿ ನಟಿ ಇದೇ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ವಯಸ್ಸು 55 ಆದರೂ ಅದೇ ಚಾರ್ಮ್ ಉಳಿಸಿಕೊಂಡಿರುವ ನಟಿಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಲ್ಲು ಭಾಯಿ ಎಲ್ಲಿ ಎಂದು ಕೇಳುತ್ತಿದ್ದಾರೆ. ಇವರ ಜೊತೆ ಕ್ಯಾಮೆರಾಮೆನ್ ಕೂಡ ಸ್ಟೆಪ್ ಹಾಕಿದ್ದರಿಂದ ಸಲ್ಮಾನ್ ಖಾನ್ ಬದಲಾದ್ರಾ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. ಇನ್ನು, ನಟಿಯ ಕುರಿತು ಹೇಳುವುದಾದರೆ, 1990ರಲ್ಲಿ ಇವರು ಹಿಮಾಲಯ ದಾಸಾನಿ ಅವರನ್ನು ಮದುವೆಯಾದರು. ನಟಿ ಭಾಗ್ಯಶ್ರೀ ಮದುವೆ ನಂತರ ಬ್ರೇಕ್ ಪಡೆದಿದ್ದರು. ಆ ನಂತರ 2019ರಲ್ಲಿ ಮತ್ತೆ ಕನ್ನಡದ ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ವಾಪಸ್ ಆಗಿದ್ದಾರೆ. ನಂತರ ತೆಲುಗಿನ ಎರಡು ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೇನೇ, ಕೆಲ ತಿಂಗಳ ಹಿಂದಷ್ಟೇ ಭಾಗ್ಯಶ್ರೀ ಅವರ ಮಗಳು ಅವಂತಿಕಾ ದಾಸಾನಿ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮ್ಯೂಸಿಕಲ್ ಲವ್ ಸ್ಟೋರಿಗೆ ಹೆಸರಾಗಿರುವ ನಿರ್ದೇಶಕ ನಾಗಶೇಖರ್ ಅವರ ಹೊಸ ಸಿನಿಮಾದಲ್ಲಿ ಭಾಗ್ಯಶ್ರೀ ಪುತ್ರಿ ನಾಯಕಿಯಾಗಲಿದ್ದಾರೆ.
ಸಲ್ಮಾನ್ ಜೊತೆ ರೊಮಾನ್ಸ್ ಮಾಡಿದ್ದ ನಟಿ ಭಾಗ್ಯಶ್ರೀ ಇಬ್ಬರು ಮಕ್ಕಳ ಜೊತೆ ಅಂಬಾನಿ ಮದ್ವೆಯಲ್ಲಿ!
ಇನ್ನು ನಟಿಯ ಮದುವೆಯ ವಿಷಯ ತುಂಬಾ ಇಂಟರೆಸ್ಟಿಂಗ್ ಆಗಿದೆ. ಮಹಾರಾಷ್ಟ್ರದ ಸಾಂಗ್ಲಿಯ ರಾಜಮನೆತನದಿಂದ ಬಂದ ಭಾಗ್ಯಶ್ರೀ, ಸಾಂಗ್ಲಿಯ ನಾಲ್ಕನೇ ಮತ್ತು ಕೊನೆಯ ರಾಜ ಮಹಾರಾಜ ವಿಜಯಸಿಂಗ್ರಾಜೆ ಪಟವರ್ಧನ್ ಅವರ ಪತ್ನಿ ಶ್ರೀಮಂತ್ ಅಖಂಡ ಸೌಭಾಗ್ಯವತಿ ರಾಣಿ ರಾಜ್ಯಲಕ್ಷ್ಮಿ ಪಟವರ್ಧನ್ ಅವರ ಪುತ್ರಿ. ಅವರು ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ಬಾಲಿವುಡ್ ಪ್ರವೇಶ ಮಾಡಿದರು. ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ 31 ಸಾವಿರ ರೂ ಸಂಭಾವನೆ ಪಡೆದಿದ್ದಾರೆ. ಆದರೆ, ಚೊಚ್ಚಲ ನಟಿ ಭಾಗ್ಯಶ್ರೀ ಅವರು ಚಿತ್ರಕ್ಕೆ 1.5 ಲಕ್ಷ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಇದು ನಟನ ಶುಲ್ಕಕ್ಕಿಂತ 5 ಪಟ್ಟು ಹೆಚ್ಚು. ಅಷ್ಟೇ ಅಲ್ಲ, ಈ ನಟಿಯ ಕಾರಣದಿಂದ ಸಿನಿಮಾದ ನಂತರ ಆರು ತಿಂಗಳ ಕಾಲ ‘ನಿರುದ್ಯೋಗಿ’ಯಾಗಿದ್ದೆ ಎಂದು ಸಂದರ್ಶನವೊಂದರಲ್ಲಿ ಸಲ್ಮಾನ್ ಬಹಿರಂಗಪಡಿಸಿದ್ದರು.
ಆದರೆ ಭಾಗ್ಯಶ್ರೀ, ತಾವು ಪ್ರೀತಿಸಿದವನನ್ನು ಮದುವೆಯಾಗಲು ಬಯಸಿದ್ದರಿಂದ ಚಲನಚಿತ್ರ ತ್ಯಜಿಸಿದರು. ಹಿಮಾಲಯ ಅವರ ಜೊತೆ ಮದುವೆಗೆ ಭಾಗ್ಯಶ್ರೀ ಮನೆಯವರ ವಿರೋಧ ಜೋರಿತ್ತು. ಆಗ ಕಠಿಣ ನಿರ್ಧಾರ ತೆಗೆದುಕೊಂಡ ಭಾಗ್ಯ, 'ನೀನು ನನ್ನನ್ನು ಪ್ರೀತಿಸುವುದೇ ಹೌದಾದರೆ ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. ನಾನು ಮನೆಯಿಂದ ಹೊರಡಲಿದ್ದೇನೆ' ಎಂದು ಪ್ರಿಯಕರನಿಗೆ ಹೇಳಿ ಕಳುಹಿಸಿದರು. ಅದಾಗಿ 15 ನಿಮಿಷಗಳಲ್ಲಿ ಅವರ ಮನೆಗೆ ಬಂದ ಹಿಮಾಲಯ, ಭಾಗ್ಯಶ್ರೀಯನ್ನು ಕರೆದುಕೊಂಡು ಹೋದರು. ಮತ್ತು ಹಿಮಾಲಯ ಅವರ ಪೋಷಕರು, ಸಲ್ಮಾನ್ ಖಾನ್, ಸೂರಜ್ ಬರ್ಜಾತ್ಯಾ ಮತ್ತು ಕೆಲವು ಸ್ನೇಹಿತರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಭಾಗ್ಯಶ್ರೀ ಜೊತೆ ಮದುವೆಯಾದರು.