ಸಿಎಎ ಜಾರಿ: ನಟ ದಳಪತಿ ವಿಜಯ್​ ತೀವ್ರ ವಿರೋಧ- ತಿರುಗೇಟು ಕೊಟ್ಟ ನಟಿ ಕಂಗನಾ ರಣಾವತ್​

By Suvarna NewsFirst Published Mar 12, 2024, 5:57 PM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗುತ್ತಿದ್ದಂತೆಯೇ ನಟ ದಳಪತಿ ವಿಜಯ್​ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಂಗನಾ  ತಿರುಗೇಟು ನೀಡಿದ್ದಾರೆ. 
 

ಸದ್ಯ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಕುರಿತು ಭಾರಿ ಚರ್ಚೆ ಶುರುವಾಗಿದೆ. ಇದಕ್ಕೆ ಪರ-ವಿರೋಧಗಳ ನಿಲುವು ವ್ಯಕ್ತವಾಗುತ್ತಿದೆ. 2024ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಜಾರಿಗೊಳಿಸಲಾಗಿರುವ ಈ ಕಾಯ್ದೆ ಬಗ್ಗೆ ಇದಾಗಲೇ ಪ್ರತಿಭಟನೆಗಳೂ ಶುರುವಾಗಿವೆ.  ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ಕ್ಕಿಂತಲೂ ಮುಂಚಿತವಾಗಿ ಬಂದಿರುವ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ಇದು ಮತ್ತಷ್ಟು ದಾರಿ ಮಾಡಿಕೊಟ್ಟಿದ್ದು, ಇದನ್ನು ಹಲವರು ಸ್ವಾಗತಿಸಿಯೂ ಇದ್ದಾರೆ. 2014ರವರೆಗೆ ಭಾರತಕ್ಕೆ ಆಗಮಿಸಿದ ಈ ದೇಶಗಳಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು ಅವಕಾಶ ನೀಡುತ್ತದೆ. ಇವುಗಳಲ್ಲಿ ಕ್ರಿಶ್ಚಿಯನ್ನರು, ಪಾರ್ಸಿಗಳು, ಬೌದ್ಧರು, ಜೈನರು, ಸಿಖ್ಖರು ಮತ್ತು ಹಿಂದೂಗಳು ಇದ್ದಾರೆ. ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಇದರ ಕಾವು ಜೋರಾಗಿದ್ದು, ಪ್ರತಿಭಟನೆ ಶುರುವಾಗಿದೆ.  
 
ಇದರ ನಡುವೆಯೇ, ಕೇಂದ್ರ ಸರ್ಕಾರದ ವಿರುದ್ಧದ ನಟ ದಳಪತಿ ವಿಜಯ್​ ವಾಗ್ದಾಳಿ ನಡೆಸಿದ್ದಾರೆ. ತಮಿಳು ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್, ಅವರು ಈ ಪೌರತ್ವ ತಿದ್ದುಪಡಿ ಕಾಯ್ದೆ ಸ್ವೀಕಾರಾರ್ಹವಲ್ಲ, ತಮಿಳುನಾಡಿನಲ್ಲಿ ಅದನ್ನು ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.  ಪೌರತ್ವ ತಿದ್ದುಪಡಿ 2019ರಂತಹ ಯಾವುದೇ ಕಾನೂನನ್ನು ದೇಶದಲ್ಲಿ ಸಹಿಸಲು ಸಾಧ್ಯವಿಲ್ಲ. ದೇಶದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬಾಳುತ್ತಿರುವಾಗ ಇಂತಹ ಕಾನೂನಿನ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ. ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸದಂತೆ ತಮಿಳುನಾಡು ಸರ್ಕಾರಕ್ಕೆ ವಿಜಯ್ ಮನವಿ ಮಾಡಿದ್ದಾರೆ.

ಕಂಗನಾಗೆ ನಿಜವಾಗಿಯೂ ಪ್ರಧಾನಿಯಾಗೋ ಆಸೆ ಇದ್ಯಾ? ’ಎಮರ್ಜೆನ್ಸಿ’ ನಟಿಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?

ಅದೇ ಇನ್ನೊಂದೆಡೆ, ಇದನ್ನು ವಿರೋಧಿಸುವವರಿಗೆ ನಟಿ ಕಂಗನಾ ರಣಾವತ್​ ತಿರುಗೇಟು ನೀಡಿದ್ದಾರೆ. ನಟಿ ತಮ್ಮ   ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಅವರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಇದಕ್ಕೆ CAA ಎಂಬ ಶೀರ್ಷಿಕೆ ನೀಡಿ, ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿರುವ ವಿಡಿಯೋವನ್ನೂ ನಟಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಇದನ್ನು ವಿರೋಧಿಸುವವರಿಗೆ ಟಾಂಗ್​ ಕೊಟ್ಟಿರುವ ನಟಿ,  ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನಿಮ್ಮ ಭಾವನೆ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೂ ಮುನ್ನ ಸಿಎಎ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳಿ ಎಂದು ಚುಚ್ಚಿದ್ದಾರೆ.  

ರಾಜಕೀಯದ ಎಂಟ್ರಿಯ ಕುರಿತು ಇದಾಗಲೇ ಘೋಷಿಸಿರುವ ನಟಿ ಕಂಗನಾ ಅವರಿಗೆ ಲೋಕಸಭೆಗೆ ಸೀಟು ಸಿಗಲಿದೆ ಎಂದೇ ಹೇಳಲಾಗುತ್ತಿದೆ. ಆದರೆ ಸದ್ಯ ಮೊದಲ ಲಿಸ್ಟ್​ನಲ್ಲಿ ಇವರ ಹೆಸರು ಇಲ್ಲ. ಇವರು ಸದ್ಯ ಎಮರ್ಜೆನ್ಸಿ ಚಿತ್ರದ ಬಿಡುಗಡೆಯಾಗಿ ಕಾಯುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ಇವರು ಮಿಂಚಿದ್ದಾರೆ.  ಇಂದಿರಾಗಾಂಧಿ ರೋಲ್‌ನಲ್ಲಿ ಮಿಂಚುತ್ತಿರುವ ನಡುವೆಯೇ, ಅವರಿಗೆ ಪ್ರಶ್ನೆಯೊಂದು ಎದರುರಾಗಿತ್ತು.  ‘ನೀವು ದೇಶದ ಪ್ರಧಾನಿಯಾಗಲು ಇಷ್ಟಪಡುತ್ತೀರಾ?’ ಎಂಬ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ನಟಿ ಜೋರಾಗಿ ನಗುತ್ತಲೇ,  ಉತ್ತರ ನೀಡಿದ್ದರು. ಇತ್ತೀಚೆಗಷ್ಟೇ  ಎಮರ್ಜೆನ್ಸಿ ಸಿನಿಮಾದಲ್ಲಿ ಇಂದಿರಾಗಾಂಧಿ ರೋಲ್‌ ಮಾಡಿದ್ದೇನೆ. ಇನ್ನೇನು ಅದು ಬಿಡುಗಡೆಯಾಗಲಿದೆ.  ಅದನ್ನು ನೋಡಿದ ನಂತರ ನಾನು ಪ್ರಧಾನಿಯಾಗುವುದು ಯಾರಿಗೂ ಇಷ್ಟವಾಗುವುದಿಲ್ಲ ಎಂದು ತಮಾಷೆಯಾಗಿ ಹೇಳುತ್ತಲೇ ಜೋರಾಗಿ ನಕ್ಕಿದ್ದರು. ಒಟ್ಟಿನಲ್ಲಿ ಬಿಜೆಪಿಯನ್ನು ಇವರು ಸದಾ ಬೆಂಬಲಿಸುತ್ತಲೇ ಬಂದಿದ್ದಾರೆ. 
 

ಸಿಎಎ ಕಾಯ್ದೆ ಅಧಿಕೃತವಾಗಿ ಜಾರಿ: ಏನಿದು ಪೌರತ್ವ ತಿದ್ದುಪಡಿ ಕಾಯ್ದೆ? ವಿರೋಧ ಯಾಕೆ ?

click me!