ಜನರಿಗೆ ನೆರವಾಗುವುದೇ ನನಗೆ ಖುಷಿ: ಶ್ರುತಿ ನಾಯ್ಡು

By Kannadaprabha NewsFirst Published Dec 5, 2019, 3:21 PM IST
Highlights

ಕಿರುತೆರೆಯ ಜನಪ್ರಿಯ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ. ಪ್ಲಾಸ್ಟಿಕ್‌ ವಿರೋಧಿ ಅಭಿಯಾನ, ವನ್ಯಜೀವಿ ಸಂರಕ್ಷಣಾ ಅಭಿಯಾನ ಹೀಗೆ ಬೇರೆ ಬೇರೆ ರೀತಿಯ ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡಿರುವ ಅವರು ಈ ಸಲ ಅರಣ್ಯ ರಕ್ಷಣಾ ಸಿಬ್ಬಂದಿಗೆ ಮೆಡಿಕಲ್‌ ಕಿಟ್‌ ನೀಡುವ ಮೂಲಕ ತಮ್ಮ ಹುಟ್ಟುಹಬ್ಬ ಸಾರ್ಥಕಗೊಳಿಸಿದ್ದಾರೆ. ಹೊಸ ರೀತಿಯ ಧಾರಾವಾಹಿ, ವಿಭಿನ್ನ ಸಿನಿಮಾ ಮೂಲಕ ಮನರಂಜನಾ ಮಾಧ್ಯಮದ ಸ್ಟಾರ್‌ ಎನ್ನಿಸಿಕೊಂಡಿರುವ ಶ್ರುತಿ ನಾಯ್ಡು ಜತೆ ಮಾತುಕತೆ.

ದೇಶಾದ್ರಿ ಹೊಸ್ಮನೆ

ಈ ಬಾರಿಯ ಬತ್‌ರ್‍ಡೇ ವಿಶೇಷತೆ ಏನು?

ಬಾಲ್ಯದಿಂದಲೂ ನನಗೆ ಬತ್‌ರ್‍ಡೇ ಅಂದ್ರೆ ಒಂಥರ ಸಂಭ್ರಮ. ಆದ್ರೆ ನನಗೆ ನನ್ನದೇ ಜವಾಬ್ದಾರಿ ಅಂತ ಬಂದಾಗ ಕೇಕ್‌ ಕತ್ತರಿಸಿ, ಸಿಹಿ ಹಂಚುವ ಸಂಪ್ರಾದಾಯ ನಿಲ್ಲಿಸಿಬಿಟ್ಟೆ. ಬದಲಿಗೆ ನನಗೆ ತೃಪ್ತಿ ನೀಡುವ ಮತ್ತು ಸಮಾಜದಲ್ಲೂ ವಿಶೇಷ ಎನಿಸುವ ಸಾಮಾಜಿಕ ಕೆಲಸದ ಮೂಲಕ ಬತ್‌ರ್‍ಡೇ ಆಚರಿಸಿಕೊಳ್ಳುವುದು ಮಾಮೂಲು. ಈ ಬಾರಿಯ ಹುಟ್ಟುಹಬ್ಬಕ್ಕೆ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ದ ಮೂಲಕ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿದ್ದು, ಮತ್ತು ಅಲ್ಲಿನ ವಾಚರ್ಸ್‌ ಮತ್ತು ಗಾರ್ಡ್ಸ್ಗಳ ಆರೋಗ್ಯದ ದೃಷ್ಟಿಯಿಂದ ನನ್ನದೇ ಸಂಸ್ಥೆಯ ಮೂಲಕ ಮೆಡಿಕಲ್‌ ಕಿಟ್‌ ಕೊಟ್ಟಿದ್ದು ವಿಶೇಷ.

ಏನಿದು ವನ್ಯಜೀವಿ ಸಂರಕ್ಷಣಾ ಅಭಿಯಾನ, ನೀವ್ಯಾಕೆ ಇದರಲ್ಲಿ ಭಾಗವಹಿಸಿದ್ದೀರಿ?

‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ಹಮ್ಮಿಕೊಂಡಿರುವ ಅಭಿಯಾನ. ಹುಲಿ ಸಂರಕ್ಷಣಾ ಪ್ರದೇಶ ಹಾಗೂ ವನ್ಯಜೀವಿ ಧಾಮಗಳ ಅಕ್ಕಪಕ್ಕದಲ್ಲಿರುವ ಗ್ರಾಮಗಳಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಇದರಲ್ಲಿ ಪಾಲ್ಗೊಳ್ಳಲು ನನಗೆ ಈ ವರ್ಷ ಅವಕಾಶ ಸಿಕ್ಕಿದೆ. ಇದೊಂದು ನನ್ನ ಸೌಭಾಗ್ಯ. ಯಾಕಂದ್ರೆ, ಕಾಡು ಉಳಿಯಬೇಕು, ವನ್ಯಜೀವಿಗಳನ್ನು ಸಂರಕ್ಷಿಸಬೇಕು ಅಂತ ನಾನು ಕೂಡ ಒಂದಲ್ಲೊಂದು ರೀತಿ ಓಡಾಡುತ್ತಿದ್ದೆ. ಆದರೆ ನನ್ನೊಳಗಿನ ತುಡಿತಕ್ಕೆ ಸರಿಯಾಗಿ ಸ್ಪಂದಿಸಲು ಒಂದು ವೇದಿಕೆ ಸಿಕ್ಕಿರಲಿಲ್ಲ. ಅದು ಈಗ ಸಿಕ್ಕಿತು. ಜತೆಗೆ ಇದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಬೇರೆಯವರಿಗೆ ಸ್ಫೂರ್ತಿ ಆಗಬಹುದು ಎನ್ನುವುದು ನನ್ನಾಸೆ.

ನಮ್ಮನೆ ಯುವರಾಣಿಯಲ್ಲಿ Silli Lalli ಸೂಜಿ; ಈಗ ಹೇಗಿದ್ದಾರೆ ನೋಡಿ!

ಬಂಡೀಪುರ ಅಭಿಯಾನದ ಅನುಭವ ಹೇಗಿತ್ತು?

ದಟ್ಟಕಾಡಿನಲ್ಲಿ ಓಡಾಡುವ ಅವಕಾಶ ಸಿಕ್ಕಿತು. ಅಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದ ಹುಲಿ, ಚಿರತೆ, ಆನೆ ಸೇರಿದಂತೆ ಕಾಡು ಪ್ರಾಣಿಗಳನ್ನು ನೋಡಲು ಸಾಧ್ಯವಾಯಿತು. ಅವೆಲ್ಲ ನಿರ್ಭೀತಿಯಿಂದ ಕಾಡಿನಲ್ಲಿದ್ದರೆ ಎಷ್ಟುಚೆಂದ ಅಂತೆನಿಸಿತು. ವನ್ಯ ಸಂರಕ್ಷಣೆಗೆ ಸದಾ ಗಡಿ ಕಾಯುವ ಸೈನಿಕರಂತೆ ಕೆಲಸ ಮಾಡುವ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕಾಡಿನಂಚಿನಲ್ಲಿ ವಾಸವಾಗಿರುವ ಜನರ ಜತೆಗೆ ಸಂವಾದ ನಡೆಸಲು ಸಾಧ್ಯವಾಯಿತು. ಅವರ ಕಷ್ಟನಷ್ಟಗಳೇನು, ಹೇಗೆಲ್ಲ ಅವರು ದಿನವಿಡೀ ಎಚ್ಚರದಿಂದ ಇದ್ದು ಕಳ್ಳಬೇಟೆಗಳನ್ನು ತಡೆಯಬೇಕು ಎನ್ನುವುದು ಮನವರಿಕೆ ಆಯಿತು. ಅಲ್ಲಿಂದ ನಾವು ಬರುವಾಗ ನನ್ನೊಳಗಿನ ಸಾಮಾಜಿಕ ಕೆಲಸಗಳಿಗೆ ಅದು ಮತ್ತಷ್ಟುಪ್ರೇರಣೆ ನೀಡಿದ್ದು ಸುಳ್ಳಲ್ಲ.

ಗಾರ್ಡ್ಸ್ಗೆ ಮೆಡಿಕಲ್‌ ಕಿಟ್‌ ವಿತರಿಸಲಾಯಿತು ಅಂದ್ರೀ, ಅದೇನು, ಯಾಕಾಗಿ?

ಅಲ್ಲಿ ನಾವು ಅಭಿಯಾನದ ಮೂಲಕ ಸುತ್ತುವ ವೇಳೆ, ವಾಚರ್ಸ್‌ ಮತ್ತು ಗಾರ್ಡ್ಸ್ ಜತೆಗಿದ್ದರು. ಅವರು ದಿನವಿಡೀ ಕಾಡಿನಲ್ಲಿದ್ದು ಕೆಲಸ ಮಾಡುವಂತಹವರು. ಅವರ ಜತೆಗೆ ಸಂವಾದ ಮಾಡುತ್ತಿದ್ದಾಗ ನಿತ್ಯ ಕಾಡಿನಲ್ಲಿ ತಮಗೆ ಎದುರಾಗುವ ಸಮಸ್ಯೆ ಹೇಳಿಕೊಂಡರು. ವಿಷ ಜಂತುಗಳು ಅಥವಾ ವನ್ಯ ಪ್ರಾಣಿಗಳು ದಾಳಿ ಮಾಡಿದ್ರೆ, ತಕ್ಷಣಕ್ಕೆ ಆಸ್ಪತ್ರೆಗಳಿಗೆ ಹೋಗುವುದು ಕಷ್ಟ. ಅಂತಹ ವೇಳೆ ತಕ್ಷಣಕ್ಕೆ ಬೇಕಾಗುವ ಚಿಕಿತ್ಸಾ ಸೌಲಭ್ಯ ಕಲ್ಪಿಸಿದರೆ ಒಳ್ಳೆಯದಾಗುತ್ತೆ ಎನ್ನುವುದು ಅವರ ಬೇಡಿಕೆ ಆಗಿತ್ತು. ಇದೆಲ್ಲ ಸರ್ಕಾರ ಮಾಡುವಂತಹ ಕೆಲಸ. ಆದ್ರೆ ನನ್ನಿಂದ ಏನು ಮಾಡಬಹುದು ಅಂತ ಯೋಚಿಸುತ್ತಿದ್ದಾಗ ತಕ್ಷಣಕ್ಕೆ ಹೊಳೆದಿದ್ದು ಮೆಡಿಕಲ್‌ ಕಿಟ್‌. ಅಲ್ಲಿಂದ ಬಂದ ನಂತರ ಮತ್ತೆ ಅಲ್ಲಿಗೆ ಹೋಗಿ ಅರಣ್ಯಾಧಿಕಾರಿ ಬಾಲಚಂದ್ರ ಮೂಲಕ ವಾಚರ್ಸ್‌ ಮತ್ತು ಗಾರ್ಡ್ಸ್ ಗಳಿಗೆ ಅನುಕೂಲ ಆಗಲಿ ಅಂತ 60 ಮೆಡಿಕಲ್‌ ಕಿಟ್‌ ವಿತರಿಸಿ ಬಂದೆ. ಈ ವರ್ಷದ ಹುಟ್ಟು ಹಬ್ಬಕ್ಕೆ ಏನಾದ್ರೂ ಮಾಡೋಣ ಅಂದಾಗ ನನಗೆ ಹೊಳೆದಿದ್ದು ಈ ಕೆಲಸ.

ವೃತ್ತಿ ಬದುಕಿನಲ್ಲಿನ ಹೊಸ ಯೋಜನೆಗಳೇನು, ಯಾವುದರ ಮೇಲೆ ಹೆಚ್ಚು ಫೋಕಸ್‌?

ಸದ್ಯಕ್ಕೆ ಎರಡು ಸೀರಿಯಲ್‌ ನಿರ್ಮಾಣದಲ್ಲಿವೆ. ಎರಡೂ ಸೀರಿಯಲ್‌ಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ‘ಬ್ರಹ್ಮಗಂಟು’ ಹೊಸ ತರಹದ ಕತೆ ಆಗಿದ್ದರಿಂದ ಅದರ ಜನಪ್ರಿಯತೆ ದಿನೆ ದಿನೇ ಹೆಚ್ಚುತ್ತಿದೆ. ಅತ್ತೆ, ಸೊಸೆ ಹೊಡೆದಾಟ, ಫ್ಯಾಮಿಲಿ ನಡುವಿನ ಜಗಳಗಳು ಇವತ್ತು ಕಿರುತೆರೆಗೆ ಬೇಕಾಗಿಲ್ಲ ಎನ್ನುವುದನ್ನು ಇದು ತೋರಿಸಿದೆ. ಪ್ರೊಗ್ರೆಸ್ಸಿವ್‌ ಕತೆಗಳು ಇಲ್ಲಿಗೆ ಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಬ್ರಹ್ಮಗಂಟು ಯಶಸ್ಸು ಕಂಡಿದೆ. ಸೀರಿಯಲ್‌ ನಿರ್ಮಾಣಕ್ಕೆ ಇಂತಹ ಕತೆಗಳ ಹುಡುಕಾಟ ನಡೆದಿದೆ. ಇನ್ನು ಸಿನಿಮಾ ನನ್ನ ಆದ್ಯತೆ ಕ್ಷೇತ್ರ. ಇಷ್ಟರಲ್ಲೇ ಮತ್ತೊಂದು ಸಿನಿಮಾ ಶುರುವಾಗುತ್ತಿದೆ.

ಆಹಾ.! ಅದೇನು ಸೌಂದರ್ಯವತಿ ಅರಸನಕೋಟೆ ಅಖಿಲಾಂಡೇಶ್ವರಿ!

ನೀವೇ ಸಿನಿಮಾ ನಿರ್ದೇಶನ ಮಾಡುವ ಆಲೋಚನೆ ಎಲ್ಲಿಗೆ ಬಂತು?

ಅದು ಕೂಡ ಪ್ರೋಗ್ರೆಸ್‌ ಹಂತದಲ್ಲಿದೆ. ಒಂದೊಳ್ಳೆಯ ಮಾಸ್‌ ಸಿನಿಮಾ ನಿರ್ದೇಶಿಸಬೇಕೆಂದು ಆಲೋಚಿಸಿದ್ದೇನೆ. ಆ ನಿಟ್ಟಿನಲ್ಲೇ ಸ್ಕಿ್ರಪ್ಟ್‌ ರೆಡಿ ಆಗುತ್ತಿದೆ. ಬಹುತೇಕ ಮಾಚ್‌ರ್‍, ಏಪ್ರಿಲ್‌ ತಿಂಗಳಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ. ಸಾಮಾನ್ಯವಾಗಿ ನಿರ್ದೇಶಕಿಯರು ಅಂದ್ರೆ ಮಹಿಳಾ ಪ್ರಧಾನ ಸಿನಿಮಾ, ಇಲ್ಲವೇ ಕಲಾತ್ಮಕ ಸಿನಿಮಾ ಅಂತಂದುಕೊಂಡಿದ್ದು ಹೆಚ್ಚು. ಅದನ್ನು ಬ್ರೇಕ್‌ ಮಾಡಬೇಕು ಎನ್ನುವುದು ನನ್ನ ಹಂಬಲ.

ಮಹಿಳಾ ಉದ್ಯಮಿ ಆಗುವ ಕಡೆ ಹೆಜ್ಜೆ ಇಡುತ್ತಿದ್ದೀರಿ ಎನ್ನುವ ಸುದ್ದಿಯಿದೆ...

ಹೌದು, ಮೈಸೂರಿನಲ್ಲಿ ಒಂದು ನನ್ನದೇ ಸಂಸ್ಥೆಯಡಿ ಹೋಟೆಲ್‌ ಶುರುವಾಗುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಅದಕ್ಕೆ ಚಾಲನೆ ಸಿಗುತ್ತಿದೆ. ಹಣ ಹಾಕಿ ಹಣ ಮಾಡಬೇಕು ಎನ್ನುವುದು ಅದರ ಉದ್ದೇಶ ಅಲ್ಲ. ನಾನು ಸೀರಿಯಲ್‌ ನಿರ್ಮಾಣಕ್ಕಿಳಿದು ನನ್ನದೇ ಸಂಸ್ಥೆ ಶುರು ಮಾಡಿದ್ದರ ಹಿಂದೆ ಒಂದಷ್ಟುಜನರಿಗೆ ಉದ್ಯೋಗ ಕೊಡುವಂತಾಗಬೇಕೆನ್ನುವುದೇ ಆಗಿತ್ತು. ಆ ನಿಟ್ಟಿನಲ್ಲಿ ಒಂದಷ್ಟುಯಶಸ್ಸು ಕಂಡೆ. ಅದೇ ಬೇರೆ ಕ್ಷೇತ್ರಗಳಲ್ಲೂ ಸಾಧ್ಯವಾದಷ್ಟುಜನರಿಗೆ ಉದ್ಯೋಗ ಸಿಗಬೇಕು ಅಂತಲೇ ಹೋಟೆಲ್‌ ಉದ್ಯಮಕ್ಕೆ ಕಾಲಿಡುತ್ತಿದ್ದೇನೆ. ಜನರಿಂದಲೇ ಅದು ಸಾಧ್ಯವಾಗಿದ್ದು, ಅದು ಜನರಿಗಾಗಿಯೇ ಬಳಕೆ ಆಗುತ್ತಿದೆ ಎಂದರೆ, ಅದಕ್ಕಿಂತ ಸೌಭಾಗ್ಯ ಇನ್ನೇನು ಬೇಕಿಲ್ಲ.

ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಗ್ಲಾಮರಸ್‌ ಫೋಟೋಸ್!

click me!