ಜೀ ಕನ್ನಡ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ', ಹೊಸ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು 50ನೇ ಸಂಚಿಕೆ ದಾಟಿದೆ. ಆರ್ಯವರ್ಧನ್- ಅನು ಜೋಡಿ ಮಾಡಿರುವ ಮೋಡಿಗೆ ಇಂಡಸ್ಟ್ರಿಯಲ್ಲೇ ಸೆನ್ಸೇಷನ್ ಹುಟ್ಟುದಾಕಿದೆ. ಆರ್ಯವರ್ಧನ್ ಆಗಿ ತೆರೆ ಮೇಲೆ ಮಿಂಚುತ್ತಿರುವ ಅನಿರುದ್ಧ ಜೊತೆಗಿನ ಮಾತುಕಥೆ.
ಆರ್. ಕೇಶವಮೂರ್ತಿ
ಒಂದೇ ಧಾರಾವಾಹಿಯಿಂದ ಬೇಡಿಕೆಯ ಸ್ಟಾರ್ ಆಗಿದ್ದೀರಲ್ಲ?
ಇದು ನನ್ನ ಒಬ್ಬನ ಶ್ರಮ ಅಲ್ಲ. ಇಡೀ ತಂಡದ ಪ್ರೀತಿ. ‘ಜೊತೆ ಜೊತೆಯಲಿ’ ಚಿತ್ರದ ನಿರ್ದೇಶಕರು, ನನ್ನ ಸಹ ಕಲಾವಿದರು, ನಿರ್ಮಾಪಕರು, ತಾಂತ್ರಿಕ ವಿಭಾಗ, ಜೀ ಕನ್ನಡ ವಾಹಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹೀಗೆ ಎಲ್ಲರ ಶ್ರಮ ಇಲ್ಲಿದೆ. ಜತೆಗೆ ಧಾರಾವಾಹಿಯನ್ನು ಪ್ರೀತಿಸುತ್ತಿರುವ ಪ್ರತಿಯೊಬ್ಬರ ಅಭಿಮಾನ ಮತ್ತು ಅಶೀರ್ವಾದ. ಬಹುಶಃ ಇಷ್ಟುವರ್ಷ ಚಿತ್ರರಂಗದಲ್ಲಿ ಸಿಗದೆ ಇದ್ದ ಯಶಸ್ಸು ಕಿರುತೆರೆಯಲ್ಲಿ ಸಿಗುತ್ತಿದೆ.
ಸಿನಿಮಾಗಳಲ್ಲಿ ಈ ಯಶಸ್ಸು ಸಿಗದಿರುವುದಕ್ಕೆ ಬೇಸರ ಉಂಟಾ?
ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾ ಬಂದೆ. ಖಂಡಿತ ಸಿನಿಮಾಗಳಲ್ಲಿ ನಟಿಸುವಾಗ ನನಗೂ ಗೆಲುವಿನ ನಿರೀಕ್ಷೆಗಳು ಇರುತ್ತವೆ. ಆದರೆ, ಆ ನಿರೀಕ್ಷೆಗಳ ಫಲಿತಾಂಶ ನಮ್ಮ ಕೈಯಲ್ಲಿ ಇರಲ್ಲ. ಯಶಸ್ಸು ಕೊಡಬೇಕಾದವರು ಪ್ರೇಕ್ಷಕರು. ಧಾರಾವಾಹಿಯಲ್ಲಿ ಕೊಟ್ಟಿದ್ದಾರೆ. ಯಾವುದೇ ಬೇಸರ ಇಲ್ಲ.
ಈ ಯಶಸ್ಸು ನಿಮಗೆ ಕಲಿಸಿದ ಪಾಠವೇನು?
ಬಿದ್ದಾಗ ತಕ್ಷಣ ಎದ್ದೇಳಬೇಕು. ಯಾಕೆ ಬಿದ್ದೆ, ಯಾಕೆ ಸೋತೆ, ಅಯ್ಯೋ ನನಗೆ ಯಶಸ್ಸು ಸಿಗಲಿಲ್ಲ ಎಂದು ಯೋಚನೆ ಮಾಡುತ್ತಾ ಕೂರಬಾರದು. ಇದು ನಾನು ಕಲಿತ ಪಾಠ. ನಿಜ ಸಿನಿಮಾಗಳಲ್ಲಿ ನನಗೆ ನಿರೀಕ್ಷಿತ ಯಶಸ್ಸು ಸಿಗದಿದ್ದಾಗ ನನ್ನ ಬೇರೆ ಬೇರೆ ವಿಭಾಗಳಲ್ಲಿ ತೊಡಗಿಸಿಕೊಂಡೆ. ಲೇಖನಗಳನ್ನು ಬರೆಯಲಾರಂಭಿಸಿದೆ. ಹಾಡಲು ಮುಂದಾದೆ. ವಿಭಾ ಟ್ರೆಸ್ಟ್ ಕೆಲಸಗಳ ಕಡೆ ಗಮನ ಕೊಟ್ಟೆ, ಕಿರು ಚಿತ್ರಗಳ ನಿರ್ದೇಶನ ಮಾಡಿದೆ. ನನ್ನ ತಿಳುವಳಿಕೆಯನ್ನ ಸುಮ್ಮನೆ ಕೂರಲು ಬಿಡಲಿಲ್ಲ.
ಸೀರಿಯಲ್ ಲೋಕದ ಸೆನ್ಸೇಷನ್ 'ಜೊತೆ ಜೊತೆಯಲಿ' ಯಲ್ಲಿ ಭಾರೀ ಬದಲಾವಣೆ?
ಸರಿ, ಮತ್ತೆ ಕಿರುತೆರೆಗೆ ಬರಲು ಕಾರಣ ಅಥವಾ ಸ್ಫೂರ್ತಿ ಯಾರು?
ನಾನು ಚಿತ್ರರಂಗಕ್ಕೆ ಬಂದಿದ್ದು 2000ರಲ್ಲಿ. ಅದಕ್ಕೂ ಮೊದಲು ನಾನು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಆದರೆ, ಚಿತ್ರರಂಗಕ್ಕೆ ಬಂದ ಮೇಲೆ ಮತ್ತೆ ಕಿರುತೆರೆಯತ್ತ ಮುಖ ಮಾಡಿ ‘ಜೊತೆ ಜೊತೆಯಲಿ’ ಧಾರಾವಾಹಿ ಮಾಡಲು ಕಾರಣ ನನ್ನ ಮಗಳು ಶ್ಲೋಕ. ಅವಳು ಈ ಕತೆಯನ್ನು ಕೇಳುತ್ತಿದ್ದಾಗ ‘ಅಪ್ಪ ನೀವು ಈ ಧಾರಾವಾಹಿ ಮಾಡಿ. ಖಂಡಿತ ಎಲ್ಲರಿಗೂ ಇಷ್ಟವಾಗುತ್ತೀರಿ’ ಎಂದಾಗ ನಾನು ಒಪ್ಪಿಕೊಂಡೆ. ಜತೆಗೆ ನಿರ್ದೇಶಕ ಆರೂರು ಜಗದೀಶ್ ಹಾಗೂ ರಾಘವೇಂದ್ರ ಹುಣಸೂರು ಅವರ ಪ್ರೀತಿ ಕಾರಣ.
ನಟನೆಗೆ ಜತೆಗೆ ನನ್ನಲ್ಲಿ ಹೊಸ ಆಲೋಚನೆಗಳನ್ನು ಹುಟ್ಟಿಸುವುದು ನನ್ನ ಓದು. ಆತ್ಮಚರಿತ್ರೆಗಳನ್ನು ಹೆಚ್ಚು ಓದುತ್ತೇನೆ. ನನ್ನ ಗಾಢವಾಗಿ ಪ್ರಭಾವಿಸಿದ್ದು ಆಟೋಬಯೋಗ್ರಫಿ ಆಫ್ ಯೋಗಿ ಹಾಗೂ ಎಸ್ ಎಲ್ ಭೈರಪ್ಪ ಅವರ ದೀಪ್ತಿ.- ಅನಿರುದ್ಧು, ನಟ
ಇಷ್ಟುವರ್ಷಗಳಲ್ಲಿ ಯಶಸ್ಸು ಸಿಗದಿದ್ದರೂ ನೀವು ಇಷ್ಟುಗಟ್ಟಿಯಾಗಿ ಇಲ್ಲೇ ಇರುವುದರ ಹಿಂದಿನ ಶಕ್ತಿ ಏನು?
ನಾನು ಮೊದಲೇ ಹೇಳಿದಂತೆ ಯಶಸ್ಸು ನಮ್ಮ ಕೈಯಲ್ಲಿ ಇಲ್ಲ. ಆದರೂ ನಾನು ಇಲ್ಲಿದ್ದೀನಿ ಅಂದರೆ ಅದಕ್ಕೆ ಕಾರಣ ನನ್ನ ಕುಟುಂಬ. ಒಂದು ವೇಳೆ ವೈಯಕ್ತಿಕವಾಗಿ ನನ್ನ ಕುಟುಂಬದಲ್ಲಿ ಪತ್ನಿ ಕೀರ್ತಿ, ಅಮ್ಮ ಭಾರತಿ ವಿಷ್ಣುವರ್ಧನ್ ಹಾಗೂ ನನ್ನ ಮಕ್ಕಳ ಪ್ರೊತ್ಸಾಹ, ಧೈರ್ಯ ಹಾಗೂ ಬೆಂಬಲ ಇಲ್ಲದೆ ಹೋಗಿದ್ದರೆ ನಾನು ಬಣ್ಣದ ಜಗತ್ತು ಬಿಟ್ಟು ಎಂದೋ ಹೋಗುತ್ತಿದ್ದೆ.
ಕಿರುತೆರೆ ಜೀವನ ಹೇಗಿದೆ?
ಹಗಲು ರಾತ್ರಿ ಚಿತ್ರೀಕರಣ. ಧಾರಾವಾಹಿ ಆರಂಭವಾಗುವ ಮುನ್ನ ನಿದ್ದೆ ಮಾಡಕ್ಕೆ ಸಮಯ ಸಿಗದೆ ಕೆಲಸ ಮಾಡಿದ್ದೇವೆ. ಧಾರಾವಾಹಿ ಪ್ರಸಾರ ಆದ ಮೇಲೆ ಜನರ ಪ್ರೀತಿ ನನಗೆ ನೇರವಾಗಿ ಗೊತ್ತಾಗುತ್ತಿದೆ. ‘ನಿಮಗೆ ಒಳ್ಳೆಯದಾಗಬೇಕು ಎಂದು ಬಯಸಿದ್ವಿ. ಕೊನೆಗೂ ದೇವರು ಕೈ ಹಿಡಿದರು’ ಎಂದು ಹೇಳುತ್ತಿದ್ದಾಗ ಅವರ ಪ್ರೀತಿ ನೋಡಿ ಭಾವುಕನಾಗುತ್ತೇನೆ. ಪ್ರತಿಭೆ ಮತ್ತು ಶ್ರಮಕ್ಕೆ ಜನರು ಪ್ರೀತಿ ತೋರಿದರೆ ಹೇಗಿರುತ್ತದೆ ಎಂಬುದನ್ನು ನಾನು ಈಗ ನೇರವಾಗಿ ಕಂಡು ಅನುಭವಿಸುತ್ತಿದ್ದೇನೆ.
'ಜೊತೆ ಜೊತೆಯಲಿ' 50 ಸಂಚಿಕೆ ಸಂಭ್ರಮ; ಅನುಗೂ, ಆರ್ಯವರ್ಧನ್‌ಗೂ ಆಗುತ್ತಾ ಲಗ್ನ?
ನಿಮ್ಮ ಪ್ರಕಾರ ‘ಜೊತೆ ಜೊತೆಯಲಿ’ ಧಾರಾವಾಹಿಯ ಈ ಗೆಲವಿಗೆ ಕಾರಣ ಏನು?
ಪ್ರತಿ ಹಳ್ಳಿ, ಪ್ರತಿ ಮನೆ ಹಾಗೂ ಪ್ರತಿಯೊಬ್ಬರ ಮನಸ್ಸಿಗೆ ಕಿರುತೆರೆ ತಲುಪಿದೆ. ಅಂಥ ಮಾಧ್ಯಮದಲ್ಲಿ ನನ್ನ ನಟನೆಯ ಧಾರಾವಾಹಿ ಪ್ರಸಾರವಾಗುತ್ತಿದೆ. ಮಕ್ಕಳಿಂದ ಮುದುಕರವರೆಗೂ ನೋಡುತ್ತಿದ್ದಾರೆ. ತಿಳುದುಕೊಳ್ಳುವ ವಿಷಯಗಳು ಇವೆ. ಒಬ್ಬರ ಮೇಲೆ ಒಬ್ಬ ಸಂಚು ರೂಪಿಸುವ, ದ್ವೇಷಿಸುವಂತಹ ನಕಾರತ್ಮಕ ಅಂಶಗಳು ಇಲ್ಲಿಲ್ಲ. ಸಕರಾತ್ಮಕ ಅಂಶಗಳನ್ನೇ ಹೇಳಿದ್ದೇವೆ. ಅದಕ್ಕೆ ಬೇಕಾದ ಸಿನಿಮ್ಯಾಟಿಕ್ ಡ್ರಾಮಾ ಇದೆ. ರೊಮ್ಯಾಂಟಿಕ್ ಇದೆ. ತಿರುವುಗಳಿವೆ. ಪ್ರತಿಯೊಂದು ತಿರುವಿಗೆ ಒಂದೊಂದು ಕತೆ ಇದೆ. ಪ್ರತಿ ಎಪಿಸೋಡ್ ಕುತೂಹಲಭರಿತವಾಗಿ ಸಾಗುತ್ತದೆ. ಕನ್ನಡದಲ್ಲಿ ಈ ರೀತಿಯ ಕತೆ ಬಂದಿಲ್ಲ.
ಆರ್ಯವರ್ಧನ್ ಪಾತ್ರದಲ್ಲಿ ನಿಮ್ಮ ನೋಡಿದಾಗ ಡಾ ವಿಷ್ಣುವರ್ಧನ್ ನೆನಪಾಗುತ್ತಾರೆ ಎನ್ನುತ್ತಿದ್ದಾರಲ್ಲ?
ಅದು ನೋಡುಗರ ಪ್ರೀತಿ. ನಾನು ಅಪ್ಪಾಜಿ (ಡಾ ವಿಷ್ಣುವರ್ಧನ್) ಅವರನ್ನು ಮೀರಿದವನಲ್ಲ. ಆದರೆ, ನನ್ನ ನಟನೆ, ಪಾತ್ರದಲ್ಲಿ ಅವರನ್ನೇ ತುಂಬಿಕೊಂಡಿರುತ್ತೇನೆ. ನನ್ನ ಶಕ್ತಿಯೇ ವಿಷ್ಣು ಅಪ್ಪಾಜಿ. ದೊಡ್ಡವರನ್ನು ನನ್ನಲ್ಲಿ ನೋಡುತ್ತಿದ್ದಾರೆ ಎಂದರೆ ನನ್ನ ನಟನೆಯಲ್ಲಿ ಅವರು ಆ ಮಟ್ಟಿಗೆ ಪ್ರಭಾವಿಸಿದ್ದಾರೆ ಎಂದರ್ಥ.
ಈ ಧಾರಾವಾಹಿ ಕಿರುತೆರೆಯಲ್ಲಿ ತಂದ ಬದಲಾವಣೆ ಏನು?
ಮಹಿಳೆಯರು ಮಾತ್ರ ಟೀವಿ ಮುಂದೆ ಕೂರುವ ಪ್ರೇಕ್ಷಕ ವರ್ಗ ಎನ್ನುತ್ತಿದ್ದ ಸಂದರ್ಭದಲ್ಲಿ ಗಂಡಸರು ಕೂಡ ಧಾರಾವಾಹಿ ನೋಡುತ್ತಾರೆ ಎಂದು ತೋರಿಸಿಕೊಟ್ಟಿದ್ದು ‘ಜೊತೆ ಜೊತೆಯಲ್ಲಿ’. ಧಾರಾವಾಹಿಗಳು ಮಹಿಳೆಯರಿಗೆ ಮಾತ್ರ ಸೀಮಿತವಲ್ಲ ಎನ್ನುವ ಅಭಿಪ್ರಾಯ ಮೂಡಿಸಿದೆ.
ದರ್ಶನ್ ಜೊತೆಗಿನ ನಂಟು ಬಿಚ್ಚಿಟ್ಟ 'ಜೊತೆ ಜೊತೆಯಲಿ' ಅನು!
ಇಂಥ ಪಾತ್ರಗಳು ಸಿನಿಮಾದಲ್ಲಿ ಸಿಗಲ್ಲವೇ?
ಸಿಗುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ, ಮಾಡಕ್ಕೆ ಆಗಲ್ಲ. ಯಾಕೆಂದರೆ ಧಾರಾವಾಹಿಯಲ್ಲಿ ಮಾತ್ರ ಈ ರೀತಿಯ ಪಾತ್ರ, ಈ ರೀತಿಯ ಕತೆ ಮಾಡಲು ಸಾಧ್ಯ.
ಮುಂದೆ ಬೇರೆ ಧಾರಾವಾಹಿಗಳಲ್ಲೂ ನಟಿಸುತ್ತೀರಿ, ಆ ನಿಟ್ಟಿನಲ್ಲಿ ಅವಕಾಶಗಳು ಬಂದಿವೆಯೇ?
ಖಂಡಿತ ನಟಿಸುವ ಯೋಚನೆ ಇದೆ. ಆದರೆ, ತಕ್ಷಣಕ್ಕೆ ಒಪ್ಪುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಈಗಾಗಲೇ ‘ಜೊತೆ ಜೊತೆಯಲಿ’ ಪ್ರಸಾರ ಮಾಡುತ್ತಿರುವ ವಾಹಿನಿ ಜತೆ ಮಾಡಿಕೊಂಡಿರುವ ಒಪ್ಪಂದ.
ಕಿರುತೆರೆಯ ಜತೆಗೆ ಬೇರೆ ಏನು ಮಾಡುತ್ತಿದ್ದೀರಿ?
ಎಂದಿನಂತೆ ಕಿರು ಚಿತ್ರಗಳ ನಿರ್ದೇಶನ, ನಿರ್ಮಾಣ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇದರ ಜತೆಗೆ ಹಿರಿಯ ನಟ ಭಾರತಿ ವಿಷ್ಣುವರ್ಧನ್ ಅವರ ಜೀವನ ಪಯಣದ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯ ಚಿತ್ರ ನಿರ್ದೇಶನ, ನಿರ್ಮಾಣ ಮಾಡಿದ್ದು, ಅದರ ಅಂತಿಮ ಕೆಲಸಗಳು ನಡೆಯುತ್ತಿವೆ.
ಆರ್ಯವರ್ಧನ್ ಲುಕ್‌ಗೆ ಹುಡ್ಗೀರು ಈ ನಮೂನಿ ಬೀಳೋದ್ಯಾಕೆ? ಏನಿಟ್ಟವ್ರೆ ಗಡ್ಡದಲ್ಲಿ?
ಈ ಸಾಕ್ಷ್ಯಚಿತ್ರ ಹೇಗಿರುತ್ತದೆ, ಯಾವೆಲ್ಲ ಅಂಶಗಳು ಇಲ್ಲಿ ಬರಲಿವೆ?
ಚಿತ್ರೀಕರಣ ಸಂಪೂರ್ಣವಾಗಿ ಮುಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಗುರುಕಿರಣ್ ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಐದು ದಶಕಗಳ ಸಿನಿಮಾ ಪ್ರಾಯಣ, ಜತೆಗೆ ವೈಯಕ್ತಿಕ ಜೀವನ ಅಂದರೆ ಶಾಲೆ, ಕಾಲೇಜು, ಮುಂದೆ ಸಿನಿಮಾ ಪ್ರವೇಶ, ಆರು ಭಾಷೆಯಲ್ಲಿ ನಟನೆ, ವಿಷ್ಣು ಅವರೊಂದಿಗಿನ ಜೀವನ, ಗೃಹಿಣಿಯಾಗಿ, ತಾಯಿಯಾಗಿ, ಅವರ ಸಾಮಾಜಿಕ ಸೇವೆ. ಡಾಕ್ಟರೇಟ್, ಪದ್ಮಶ್ರೀ ಪಡೆದುಕೊಂಡಿದ್ದು... ಹೀಗೆ ಹಲವು ಮಹತ್ತರವಾದ ಅಂಶಗಳು ಇಲ್ಲಿವೆ.
ಭಾರತಿ ವಿಷ್ಣುವರ್ಧನ್ ಅವರ ಕುರಿತ ಸಾಕ್ಷ್ಯ ಚಿತ್ರ ಮಾಡಲು ಏನೆಲ್ಲ ತಯಾರಿ ಮಾಡಿಕೊಂಡಿದ್ರಿ?
ಹಲವು ನಿರ್ದೇಶಕ, ಕಲಾವಿದರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿದೆ. ಅವರ ನಟನೆಯ 100ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿದೆ. ಕೀರ್ತಿ ಇನ್ನೋವೆಷನ್ ತಂಡವನ್ನು ಜತೆ ಮಾಡಿಕೊಂಡು ಯಾರನ್ನೆಲ್ಲ ಮಾತನಾಡಿಸಬೇಕು ಎನ್ನುವ ಪಟ್ಟಿಮಾಡಿಕೊಂಡೆ. ಒಟ್ಟು 2 ಗಂಟೆ 18 ನಿಮಿಷ ಅವಧಿಯ ಸಾಕ್ಷ್ಯ ಚಿತ್ರವಿದು.
ಈ ನಡುವೆ ಕಿರುಚಿತ್ರಗಳನ್ನೂ ಮಾಡುತ್ತಿದ್ದೀರಲ್ಲ?
ಹೌದು, ಒಟ್ಟಿಗೆ ಆರು ಕಿರು ಚಿತ್ರಗಳನ್ನು ನಾನೇ ರಚನೆ ಮಾಡಿ, ನಿರ್ದೇಶಿಸಿದ್ದೇನೆ. ನನ್ನ ಪತ್ನಿ ಕೀರ್ತಿ ಅವರು ನಿರ್ಮಾಪಕರು. ಕಳೆದ ವರ್ಷ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆ ಮಾಡಿದೆ. ಐದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ದಾಖಲಾದವು. ಒಂದೇ ದಿನ ಬಿಡುಗಡೆ, ಸಾಮಾಜಿಕ ಕಳಕಳಿ, ಬೇರೆ ಬೇರೆ ಶೈಲಿಯಲ್ಲಿ ಅಂದರೆ ಹಾರರ್, ಕ್ರೈಮ್, ಡ್ರಾಮಾ, ಕಾಮಿಡಿ, ರಾಜಕೀಯ ವಿಷಯಗಳನ್ನು ಒಳಗೊಂಡಿದ್ದು, ಒಂದೇ ಒಂದು ಸಂಭಾಷಣೆ ಇಲ್ಲದೆ ಮಾಡಿದ್ದು... ಹೀಗೆ ನಾಲ್ಕು ಕಾರಣಗಳಿಗೆ ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದವು. ಒಟ್ಟಿಗೆ ನಾಲ್ಕು ಪ್ರಶಸ್ತಿಗಳಿಗೆ ಪಾತ್ರವಾಗಿದ್ದಕ್ಕೆ ಮತ್ತೊಂದು ಗೌರವ ಸಿಕ್ಕಿತು. 2019 ಅಗ್ರ ದಾಖಲೆಗಳಲ್ಲಿ ನನ್ನ ಹೆಸರು ಇದೆ. ಗ್ರ್ಯಾಂಡ್ ಮಾಸ್ಟರ್ ಅವಾರ್ಡ್, ಕಲಾಂ ಬುಕ್ಸ್ ಆಫ್ ವರ್ಡ್ ರೆಕಾರ್ಡ್ ಹಾಗೂ ಕಲಾಂ ಗೋಲ್ಡನ್ ಅವಾರ್ಡ್ ತಂದು ಕೊಟ್ಟಕಿರು ಚಿತ್ರಗಳಿವು.