ಕನ್ನಡ ಆದರ್ಶ, ಇಂಗ್ಲಿಷ್‌ ವಾಸ್ತವ: ಎಚ್ಚೆಸ್ವಿ

By Kannadaprabha News  |  First Published Dec 5, 2019, 9:37 AM IST

ಕನ್ನಡ ಅನ್ನದ ಭಾಷೆಯಾಗಲೇಬೇಕಾದ ಅನಿವಾರ್ಯತೆ ಇದೆ 


ಕಲಬುರಗಿ (ಡಿ. 05): ಫೆಬ್ರವರಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಡಾ ಎಚ್‌.ಎಸ್‌.ವೆಂಕಟೇಶ ಮೂರ್ತಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ  ಸಂದರ್ಶನ ನೀಡಿರುವ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಈ ಸಮಾಚಾರ ನಿರೀಕ್ಷಿತವಾ ಅಥವಾ ಅನಿರೀಕ್ಷಿತ ಸಂಭ್ರಮವಾ?

Tap to resize

Latest Videos

ಇದು ಅನಿರೀಕ್ಷಿತ. ಹಾಗಾಗಿಯೇ ಸಂಭ್ರಮ ಹೆಚ್ಚು. ಲೈಫ್‌ ಅನ್ನೋದೇ ಯಾವಾಗಲೂ ಅನಿರೀಕ್ಷಿತ. ಇದೂ ಹಾಗೇ.

ಈ ಮೂಲಕ ಎಚ್‌ಎಸ್‌ವಿ ಅವರ ಜವಾಬ್ದಾರಿ ಹೆಚ್ಚಾಗಿದೆಯಾ?

ಹಾಗೇನಾಗಿಲ್ಲ. ಯಾಕೆಂದರೆ ನಾನು ಯಾವುದೇ ವೇದಿಕೆಯಲ್ಲಿ ಮಾತಾಡಬೇಕಾದರೂ ಪ್ರಾಮಾಣಿಕ ಎಚ್ಚರದಲ್ಲೇ ಮಾತಾಡುತ್ತೇನೆ. ವೇದಿಕೆಯ ಗಾತ್ರ ದೊಡ್ಡದಾಯಿತೇ ಹೊರತು ಸ್ವರೂಪ ಬದಲಾಗಿಲ್ಲ. ಕ್ಲಾಸ್‌ ರೂಮ್‌ನಲ್ಲಿ ಮಕ್ಕಳಿಗೆ ಏನು ಹೇಳ್ತೀನೋ ಅದನ್ನೇ ಸಾವಿರಾರು ಜನ ಸೇರುವ ದೊಡ್ಡ ಸಭೆಯಲ್ಲಿ ಮಾತಾಡುತ್ತೇನೆ.

ಕಲಬುರಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ ಮೂರ್ತಿ ಆಯ್ಕೆ

ಇದು ವಿಸ್ತಾರದ ಪ್ರಶ್ನೆಯೇ ಹೊರತು ಆಳದ ಪ್ರಶ್ನೆಯಲ್ಲ. ಆಳದಲ್ಲಿ ಎಲ್ಲವೂ ಒಂದೇ. ಮೂಲಭೂತವಾಗಿ ನಾನು ಏನೋ ಅದನ್ನೇ ಹೇಳಬೇಕು. ಕೇಳೋರು ಹೆಚ್ಚಿದ್ದಾರೆ. ಹಾಗಾಗಿ ಹೆಚ್ಚು ಸಂತೋಷ. ಸಮ್ಮೇಳನ ದೊಡ್ಡ ಕನ್ನಡಿಗರ ಸಮೂಹವನ್ನು ಎದುರುಗೊಳಿಸುತ್ತದೆ. ಇದು ದೊಡ್ಡದು.

ನಾಡು, ನುಡಿ ವಿಚಾರದಲ್ಲಿ ಬಹಳಷ್ಟುಗೊಂದಲಗಳಿವೆ, ಇದಕ್ಕೊಂದು ಸ್ಪಷ್ಟರೂಪ ಈ ಸಮ್ಮೇಳನದಲ್ಲಾದರೂ ನೀಡುವ ಪ್ರಯತ್ನ ಮಾಡಬಹುದಾ?

ಒಂದು ಆದರ್ಶದ ನೆಲೆ. ಇನ್ನೊಂದು ವಾಸ್ತವದ ನೆಲೆ. ಆದರ್ಶದ ನೆಲೆಯಲ್ಲಿ ಕನ್ನಡ ಬೇಕೇ ಬೇಕು. ಕನ್ನಡ ಬಿಟ್ಟರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಪರಂಪರೆ ಕಳೆದುಕೊಳ್ಳುತ್ತೇವೆ. ಹಾಗಾಗಿ ಕನ್ನಡ ಬೇಕು ಅನ್ನುವುದು ಆದರ್ಶ.

ಆದರೆ ವಾಸ್ತವದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯಲ್ಲಿ ಓದಿ ನಾವು ಸಂಪಾದನೆ ಮಾಡಲಿಕ್ಕಾಗುವುದಿಲ್ಲ. ಬದುಕಲಿಕ್ಕಾಗುವುದಿಲ್ಲ. ಬದುಕಬೇಕು, ಮಕ್ಕಳಿಗೆ ಉತ್ತಮ ಭವಿಷ್ಯ ಬೇಕು ಅಂದರೆ ಇಂಗ್ಲಿಷ್‌ಗೆ ಹೋಗಬೇಕು ಅನ್ನುವುದು ವಾಸ್ತವ. ಆದರ್ಶಕ್ಕೂ ವಾಸ್ತವಕ್ಕೂ ದೊಡ್ಡ ಕಂದಕವಿದೆ. ದಿನದಿಂದ ದಿನಕ್ಕೆ ಈ ಗ್ಯಾಪ್‌ ಹೆಚ್ಚಾಗುತ್ತಲೇ ಇದೆ.

ಕಲ್ಯಾಣ ಕರ್ನಾಟಕದ ಕನಸಿಗೆ ರೆಕ್ಕೆ ಪುಕ್ಕ!

ಕನ್ನಡ ಅನ್ನದ ಭಾಷೆಯಾಗದೇ ಇದು ಸಾಧ್ಯವಾ?

ಇದು ಬಹಳ ಮುಖ್ಯ. ಕನ್ನಡ ಅನ್ನದ ಭಾಷೆಯಾಗಲು ಏನು ಮಾಡಬೇಕು ಅನ್ನುವುದನ್ನು ಬಹಳ ಗಂಭೀರವಾಗಿ ಚಿಂತಿಸಬೇಕಿದೆ. ಅವರದೇ ಮಂತ್ರ ಬಳಸಬಹುದು. ಇಂಗ್ಲಿಷ್‌ನಲ್ಲಿ ಓದಿದರೆ ಬಿ.ಇ, ಮೆಡಿಕಲ್‌ ಸೀಟು ಸಿಗುತ್ತದೆ ಅನ್ನೋ ಪರಿಸ್ಥಿತಿ ಈಗಿದೆ. ಕನ್ನಡದಲ್ಲಿ ಹತ್ತನೇ ತರಗತಿವರೆಗೆ ಓದಿದವರಿಗೆ ಹೆಚ್ಚುವರಿ ಅಂಕ ಕೊಡುತ್ತೇವೆ ಅಂತಲೋ, ಕನ್ನಡ ಮೀಡಿಯಂ ಓದಿದವರಿಗೇ ಇಂತಿಷ್ಟುಪರ್ಸೆಂಟ್‌ ಮೆಡಿಕಲ್‌, ಇಂಜಿನಿಯರಿಂಗ್‌ ಸೀಟು ಕೊಡುತ್ತೇವೆ ಅಂತಲೋ ನಿಯಮ ತರಬೇಕು.

ಇದಕ್ಕೆ ಸರ್ಕಾರ ಒಪ್ಪಿದರೆ ಸಹಜವಾಗಿಯೇ ಎಲ್ಲರೂ ಕನ್ನಡದ ಕಡೆಗೇ ಹೋಗುತ್ತಾರೆ. ಮರಾಠಿಯಲ್ಲಿ ಓದಿದವರಿಗೆ ಇಂತಿಷ್ಟುಪರ್ಸೆಂಟ್‌ ಉದ್ಯೋಗ ಕೊಡುತ್ತೇವೆ ಅಂತ ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿದ್ದಾರೆ. ಅಂಥ ನಿಯಮ ನಮ್ಮಲ್ಲೂ ತರಬಹುದಲ್ಲವೇ? ಆ ವಿಲ್‌ಪವರ್‌ ಸರ್ಕಾರಕ್ಕಿದ್ದರೆ ಇದನ್ನು ಕಾರ್ಯರೂಪಕ್ಕೆ ತರುವುದು ಕಷ್ಟಅಲ್ಲ.

ಇದನ್ನು ನಿಮ್ಮ ಅಧ್ಯಕ್ಷೀಯ ಭಾಷಣದಲ್ಲೋ, ನಿರ್ಣಯಗಳಲ್ಲೋ ಪ್ರಸ್ತಾಪಿಸುತ್ತೀರಾ?

ಈ ದಿನವಷ್ಟೇ ನಾನು ಸಮ್ಮೇಳನಾಧ್ಯಕ್ಷನಾದ ಸುದ್ದಿ ಸಿಕ್ಕಿದೆ. ಸಮ್ಮೇಳನಕ್ಕಿನ್ನೂ ಎರಡು ತಿಂಗಳಿದೆ. ಅಲ್ಲಿ ಏನು ಮಾತಾಡಬೇಕು ಅನ್ನುವ ಬಗ್ಗೆ ಇನ್ನಷ್ಟೇ ಚಿಂತಿಸಬೇಕಿದೆ.

- ಪ್ರಿಯಾ ಕೇರ್ವಾಶೆ 

click me!