
‘ಅಯೋಗ್ಯ’ ಸಿನಿಮಾ ಕನ್ನಡ ಸಿನಿಪ್ರೇಕ್ಷಕರಿಗೆ ಸಿಕ್ಕ ಮರೆಯಲಾಗದ ಮನರಂಜನೆಯ ಅನುಭವ. ಹಾಸ್ಯ, ಹಳ್ಳಿ ಸೊಗಡು, ಹಾಡುಗಳು ಹಾಗೂ ಸಿದ್ದೇಗೌಡನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ ಇದೀಗ ಎಂಟು ವರ್ಷಗಳ ಬಳಿಕ ‘ಅಯೋಗ್ಯ 2’ ರೂಪದಲ್ಲಿ ತೆರೆಗೆ ಬಂದಿದೆ. ಆದರೆ ಈ ಬಾರಿ ಚಿತ್ರತಂಡದ ಪ್ರಚಾರದ ಸ್ಟ್ರಾಟಜಿ ಮಾತ್ರ ಕೊಂಚ ವಿಭಿನ್ನ.
ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೂ ಮುನ್ನ ಟೀಸರ್, ಟ್ರೇಲರ್, ಕೌಂಟ್‌ಡೌನ್ ಪ್ರಚಾರ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯಲಾಗುತ್ತದೆ. ಆದರೆ ‘ಅಯೋಗ್ಯ 2’ ತಂಡ ಮಾತ್ರ ಟ್ರೇಲರ್ ಬಿಡುಗಡೆ ಮಾಡದೆ, ಹಾಡುಗಳ ಮೂಲಕವೇ ಸಿನಿಮಾದತ್ತ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ಸಾಕಷ್ಟು ಸರ್ಪ್ರೈಸ್‌ಗಳಿರುವ ಕಾರಣ ಅವುಗಳನ್ನು ಟ್ರೇಲರ್‌ನಲ್ಲೇ ಬಿಟ್ಟುಕೊಡದೆ, ಚಿತ್ರಮಂದಿರದಲ್ಲೇ ಪ್ರೇಕ್ಷಕರು ಅನುಭವಿಸಲಿ ಎಂಬುದು ತಂಡದ ನಿರ್ಧಾರ.
‘ಅಯೋಗ್ಯ’ವೇ ‘ಅಯೋಗ್ಯ 2’ಗೆ ಟ್ರೇಲರ್!
ಟ್ರೇಲರ್ ಇಲ್ಲದಿರುವುದು ಯಾವುದೇ ರಿಸ್ಕ್ ಅಲ್ಲ, ಬದಲಿಗೆ ಮೊದಲ ಸಿನಿಮಾದ ಯಶಸ್ಸಿನ ಮೇಲೆ ಇಟ್ಟಿರುವ ನಂಬಿಕೆ ಎನ್ನುತ್ತಾರೆ ಸತೀಶ್ ನೀನಾಸಂ. “‘ಅಯೋಗ್ಯ’ ಸಿನಿಮಾದಲ್ಲಿ ಹಾಡುಗಳೇ ಚಿತ್ರದ ಬಗ್ಗೆ ಮಾತನಾಡಿದ್ದವು. ಈ ಬಾರಿಯೂ ಹಾಡುಗಳು ಜನರನ್ನು ತಲುಪಿವೆ. ಇದು ಸೀಕ್ವೆಲ್ ಆಗಿರುವುದರಿಂದ, ಮೊದಲ ‘ಅಯೋಗ್ಯ’ ಸಿನಿಮಾವೇ ಮುಂದಿನ ಭಾಗಕ್ಕೆ ಟ್ರೇಲರ್ ಇದ್ದಂತೆ ಎಂದು ನಾವು ಭಾವಿಸಿದ್ದೇವೆ. ಸಿನಿಮಾದಲ್ಲಿ ಸಾಕಷ್ಟು ಸರ್ಪ್ರೈಸ್‌ಗಳಿವೆ.
ಅವುಗಳನ್ನು ಟ್ರೇಲರ್ ಮೂಲಕ ತೋರಿಸುವ ಬದಲು, ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೇರವಾಗಿ ಅನುಭವಿಸಬೇಕು ಎಂಬುದು ನಮ್ಮ ಉದ್ದೇಶ,” ಎಂದು ಸತೀಶ್ ಹೇಳಿದ್ದಾರೆ.ಮಹೇಶ್ ಕುಮಾರ್ ನಿರ್ದೇಶನದ ‘ಅಯೋಗ್ಯ 2’ ಅನ್ನು ಮುನೇಗೌಡ ನಿರ್ಮಿಸುತ್ತಿದ್ದಾರೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಮತ್ತೊಮ್ಮೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಮೊದಲ ಭಾಗದ ಕಥೆ ಎಲ್ಲಿಗೆ ನಿಂತಿತ್ತೋ, ಅಲ್ಲಿಂದಲೇ ಸೀಕ್ವೆಲ್ ಮುಂದುವರಿಯಲಿದೆ.
ಒಂದು ಮತದಿಂದ ಗೆದ್ದ ಸಿದ್ದೇಗೌಡನ ಮುಂದಿನ ಕಥೆ!
ಮೊದಲ ಭಾಗದಲ್ಲಿ ಸಿದ್ದೇಗೌಡ ಪಂಚಾಯಿತಿ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಗೆಲ್ಲುತ್ತಾನೆ. ಅಲ್ಲಿಂದಲೇ ‘ಅಯೋಗ್ಯ 2’ ಕಥೆ ಆರಂಭವಾಗುತ್ತದೆ. “ಸಿದ್ದೇಗೌಡ ಕೇವಲ ಒಂದು ಮತದಿಂದ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಅಲ್ಲಿಂದ ಸೀಕ್ವೆಲ್ ಶುರುವಾಗುತ್ತದೆ. ಜವಾಬ್ದಾರಿ ಸಿಕ್ಕ ಬಳಿಕ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ? ಹಳ್ಳಿಯನ್ನು ಹೇಗೆ ಕಾಪಾಡುತ್ತಾನೆ? ನಾಯಕತ್ವದ ಜೊತೆಗೆ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ? ಎಂಬುದೇ ಚಿತ್ರದ ಮುಂದಿನ ಕಥೆ. ಮೊದಲ ‘ಅಯೋಗ್ಯ’ದಲ್ಲಿ ಪ್ರೇಕ್ಷಕರು ಇಷ್ಟಪಟ್ಟ ಹಾಸ್ಯ ಮತ್ತು ಮನರಂಜನೆಯನ್ನು ನಾವು ಉಳಿಸಿಕೊಂಡಿದ್ದೇವೆ. ಆದರೆ ಕಥೆ ಮಾತ್ರ ಮುಂದೆ ಸಾಗಿದೆ,” ಎಂದು ಸತೀಶ್ ವಿವರಿಸಿದ್ದಾರೆ.
ಮೊದಲ ಸಿನಿಮಾ ಹಿಟ್ ಆಯ್ತು ಅಂತ ಸೀಕ್ವೆಲ್ ಮಾಡಿಲ್ಲ
ಮೊದಲ ಭಾಗದ ಯಶಸ್ಸಿನ ನಂತರ ಸೀಕ್ವೆಲ್ ಮಾಡುವುದು ಸುಲಭದ ನಿರ್ಧಾರವಾಗಿರಲಿಲ್ಲ ಎನ್ನುವ ಸತೀಶ್, ಈ ಸಿನಿಮಾವನ್ನು ಕೇವಲ ಮೊದಲ ಭಾಗದ ಯಶಸ್ಸನ್ನು ಬಳಸಿಕೊಳ್ಳಲು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “‘ಅಯೋಗ್ಯ’ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಕನ್ನಡ ಪ್ರೇಕ್ಷಕರಿಗೆ ಸಲ್ಲಬೇಕು. ಅವರು ತೋರಿಸಿದ ಪ್ರೀತಿಗೆ ನಾವು ಸದಾ ಋಣಿಯಾಗಿರುತ್ತೇವೆ. ಮಹೇಶ್ ಕುಮಾರ್ ಅವರು ಮಂಡ್ಯ ಭಾಗದ ಹಳ್ಳಿಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಮನರಂಜನೆಯ ಕಥೆ ಹೇಳಿದ್ದರು. ಈ ಬಾರಿ ಕೂಡ ಗ್ರಾಮೀಣ ವಾತಾವರಣವಿದೆ. ಆದರೆ ವಿಷಯದ ವ್ಯಾಪ್ತಿ ದೊಡ್ಡದಾಗಿದೆ. ಕರ್ನಾಟಕದ ಯಾವುದೇ ಹಳ್ಳಿಯ ಜನರಿಗೂ ಕನೆಕ್ಟ್ ಆಗುವಂತಹ ಕಥೆ ಇದು,” ಎಂದು ಅವರು ಹೇಳಿದ್ದಾರೆ.
‘ಅಯೋಗ್ಯ 2’ ಎಲ್ಲದರಲ್ಲೂ ಅಪ್‌ಗ್ರೇಡ್!
ಮೊದಲ ಹಾಗೂ ಎರಡನೇ ಭಾಗದ ನಡುವಿನ ವರ್ಷಗಳು ಚಿತ್ರತಂಡಕ್ಕೂ ಸಾಕಷ್ಟು ಅನುಭವ ನೀಡಿವೆ ಎಂಬುದು ಸತೀಶ್ ಅಭಿಪ್ರಾಯ. “‘ಅಯೋಗ್ಯ 2’ ಎಲ್ಲದರಲ್ಲೂ ಒಂದು ಅಪ್‌ಗ್ರೇಡ್ ಆಗಿದೆ. ಬರವಣಿಗೆಯಿಂದ ಹಿಡಿದು ತಾಂತ್ರಿಕ ಗುಣಮಟ್ಟ, ಕಲಾವಿದರ ಅಭಿನಯ ಹಾಗೂ ಪಾತ್ರಗಳವರೆಗೆ ಎಲ್ಲದರಲ್ಲೂ ನಾವು ಒಂದು ಹೆಜ್ಜೆ ಮುಂದೆ ಬಂದಿದ್ದೇವೆ. ನಾನೂ ಒಬ್ಬ ನಟನಾಗಿ ಬದಲಾಗಿದ್ದೇನೆ. ಈಗ ಪಾತ್ರದ ಅಟಿಟ್ಯೂಡ್, ಸ್ಟೈಲ್, ಬಾಡಿ ಲ್ಯಾಂಗ್ವೇಜ್‌ನಂತಹ ಸಣ್ಣ ಸಣ್ಣ ವಿಚಾರಗಳಿಗೂ ಹೆಚ್ಚು ಗಮನ ಕೊಡುತ್ತೇನೆ. ಅದೇ ಸಮಯದಲ್ಲಿ ಸಿನಿಮಾದ ಕಮರ್ಷಿಯಲ್ ಫ್ಲೇವರ್ ಕೂಡ ಉಳಿಯುವಂತೆ ನೋಡಿಕೊಂಡಿದ್ದೇವೆ,” ಎಂದು ಸತೀಶ್ ಹೇಳಿದ್ದಾರೆ.
ಬಿಡುಗಡೆಗೂ ಮುನ್ನವೇ ಬಿಸಿನೆಸ್‌ಗೆ ಉತ್ತಮ ಪ್ರತಿಕ್ರಿಯೆ
ಸಿನಿಮಾ ಬಿಡುಗಡೆಗೂ ಮುನ್ನ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. “ನಿರ್ಮಾಪಕರು ಸಿನಿಮಾದ ಬಗ್ಗೆ ಸಂತೋಷವಾಗಿದ್ದಾರೆ. ಡಿಸ್ಟ್ರಿಬ್ಯೂಷನ್, ಸ್ಯಾಟಲೈಟ್ ಹಾಗೂ ಆಡಿಯೋ ಬಿಸಿನೆಸ್‌ನಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಪ್ರೀತ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಸಿನಿಮಾವನ್ನು ವಿತರಿಸುತ್ತಿರುವುದಕ್ಕೂ ನನಗೆ ಖುಷಿಯಿದೆ,” ಎಂದು ಸತೀಶ್ ತಿಳಿಸಿದ್ದಾರೆ.
‘ಅಯೋಗ್ಯ 2’ನಲ್ಲಿ ನಟಿಸಲು ರಚಿತಾಗೆ ಯಾವುದೇ ಗೊಂದಲವಿರಲಿಲ್ಲ!
ಮೊದಲ ಭಾಗದ ಯಶಸ್ಸಿನ ಬಳಿಕ ‘ಅಯೋಗ್ಯ 2’ನಲ್ಲಿ ಮತ್ತೆ ನಟಿಸುವ ಅವಕಾಶ ಬಂದಾಗ ರಚಿತಾ ರಾಮ್ ಕೂಡ ಯಾವುದೇ ಯೋಚನೆ ಮಾಡಲಿಲ್ಲವಂತೆ. “‘ಅಯೋಗ್ಯ’ ಮತ್ತು ‘ಅಯೋಗ್ಯ 2’ ನಾನು ನಟಿಸಿರುವ ಸಿನಿಮಾಗಳಲ್ಲಿ ನನಗೆ ಹೆಚ್ಚು ಇಷ್ಟವಾದ ಚಿತ್ರಗಳ ಸಾಲಿನಲ್ಲಿ ಬರುತ್ತವೆ. ನಮ್ಮ ನಿಜವಾದ ವಿಐಪಿಗಳಾದ ಪ್ರೇಕ್ಷಕರೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಈಗ ಕನ್ನಡ ಸಿನಿಮಾಗಳನ್ನು ನೋಡಿ ಎಂದು ಪ್ರೇಕ್ಷಕರನ್ನು ಕೇಳಿಕೊಳ್ಳುವ ಹಂತಕ್ಕೆ ನಾವು ಬಂದಿದ್ದೇವೆ. ಆದರೆ ‘ಅಯೋಗ್ಯ 2’ ನೋಡಲು ಬರುವ ಪ್ರತಿಯೊಬ್ಬರೂ ಖುಷಿಯಾಗಿ ಹೊರಗೆ ಬರುತ್ತಾರೆ ಎಂಬ ವಿಶ್ವಾಸ ನನಗಿದೆ,” ಎಂದು ರಚಿತಾ ರಾಮ್ ಹೇಳಿದ್ದಾರೆ.
ದೊಡ್ಡ ತಾರಾಬಳಗದ ಸಾಥ್
‘ಅಯೋಗ್ಯ 2’ನಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೊತೆಗೆ ರವಿಶಂಕರ್, ಸಾಧುಕೋಕಿಲ, ತಬಲಾ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಳರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಉಪ್ಪರಹಳ್ಳಿ ಸಂಭಾಷಣೆ ಬರೆದಿದ್ದಾರೆ.
‘ಅಯೋಗ್ಯ’ ಸಿನಿಮಾ ಸಿದ್ದೇಗೌಡನ ಪಾತ್ರದ ಮೂಲಕ ಸತೀಶ್ ನೀನಾಸಂ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಹೀಗಾಗಿ ಸೀಕ್ವೆಲ್ ಬಗ್ಗೆ ಮಾತನಾಡುವಾಗಲೂ ನಟ ಆ ಸಿನಿಮಾದ ಯಶಸ್ಸಿನ ಹಿಂದಿರುವ ಪ್ರೇಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. “‘ಅಯೋಗ್ಯ’ ಪ್ರೇಕ್ಷಕರು ನಮಗೆ ಕೊಟ್ಟ ಉಡುಗೊರೆ. ಈ ಬಾರಿ ನಾವು ಅವರಿಗೆ ಏನಾದರೂ ಮರಳಿ ಕೊಡಬೇಕು ಎಂಬ ಆಶಯವಿದೆ,” ಎಂದು ಸತೀಶ್ ನೀನಾಸಂ ಹೇಳಿದ್ದಾರೆ.
ಹೀಗಾಗಿ ಟ್ರೇಲರ್ ಇಲ್ಲದೆ, ಹಾಡುಗಳ ಮೂಲಕವೇ ಕುತೂಹಲ ಹೆಚ್ಚಿಸಿರುವ ‘ಅಯೋಗ್ಯ 2’, ಮೊದಲ ಭಾಗದ ಸೊಗಡನ್ನು ಉಳಿಸಿಕೊಂಡೇ ಕಥೆ, ತಾಂತ್ರಿಕತೆ, ಪಾತ್ರಗಳು ಹಾಗೂ ಮನರಂಜನೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆಯೇ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕಿದೆ. ಸತೀಶ್ ಮಾತಿನಂತೆ ಸಿನಿಮಾದಲ್ಲಿರುವ ಸರ್ಪ್ರೈಸ್‌ಗಳು ಪ್ರೇಕ್ಷಕರಿಗೆ ಥಿಯೇಟರ್‌ನಲ್ಲಿ ಯಾವ ರೀತಿಯ ಅನುಭವ ನೀಡಲಿವೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.