Exclusive Interview: ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು: ಸತೀಶ್ ನೀನಾಸಂ ಸಂದರ್ಶನ

Published : Aug 06, 2026, 11:55 PM IST
Sathish Ninasam

ಸಾರಾಂಶ

ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ ಎಂದರು ಸತೀಶ್ ನೀನಾಸಂ.

- ರಾಜ್

* ಅಯೋಗ್ಯ 2 ಟ್ರೇಲರ್ ಬಿಡುಗಡೆಯಾಗಿಲ್ಲ, ಏನು ಕಾರಣ?

ಅದಕ್ಕೆ ಎರಡು ಕಾರಣವಿದೆ. ಮೊದಲನೆಯದಾಗಿ, ಹಾಡುಗಳಿಂದಲೇ ಜನರನ್ನು ಸೆಳೆಯಬೇಕು ಎಂಬ ಯೋಜನೆ ಮತ್ತು ಯೋಚನೆ ತಂಡಕ್ಕಿತ್ತು. ಮತ್ತೊಂದೆಡೆ, ಈಗಾಗಲೇ ಮೊದಲ ಭಾಗ ಸೂಪರ್ ಹಿಟ್ ಆಗಿರುವುದರಿಂದ, ಪ್ರೇಕ್ಷಕರಿಗೆ ಅದೇ ಟ್ರೇಲರ್ ಇದ್ದಂತೆ. ಮೊದಲ ಭಾಗದಂತೆ, ಎರಡನೇ ಭಾಗದ ಹಾಡುಗಳೂ ಜನರ ಮನ ಗೆದ್ದಿವೆ. ಚಿತ್ರದಲ್ಲಿ ಸಾಕಷ್ಟು ಅಚ್ಚರಿಯ ಅಂಶಗಳಿವೆ. ಪ್ರತಿಯೊಂದನ್ನೂ ಟ್ರೇಲರ್‌ನಲ್ಲೇ ತೋರಿಸುವ ಬದಲು, ನೇರವಾಗಿ ಚಿತ್ರಮಂದಿರಗಳಲ್ಲೇ ಪ್ರೇಕ್ಷಕರಿಗೆ ಆ ಅಚ್ಚರಿ ದಾಟಿಸೋಣ ಎಂದು ಇಡೀ ತಂಡ ತೀರ್ಮಾನಿಸಿದೆ. ಈ ಸಿನಿಮಾದ ವಿಶೇಷತೆ ಏನೆಂದರೆ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ನಗದೇ ಹೊರಗೆ ಹೋಗುವುದಿಲ್ಲ.

* ಚಿತ್ರರಂಗ ಕಷ್ಟದಲ್ಲಿರುವ ಹೊತ್ತು, ನೀವೆಷ್ಟು ಸೇಫು?

ಉತ್ತಮ ಬೆಲೆಗೆ ಬಿಸಿನೆಸ್ ಆಗಿರುವುದೇ ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿ. ಆಡಿಯೋ ರೈಟ್ಸ್ ಒಳ್ಳೆ ಬೆಲೆಗೆ ಸೇಲ್ ಆಯ್ತು. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದುಕೊಂಡಿದೆ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕಿಗೂ ಭಾರಿ ಡಿಮ್ಯಾಂಡ್ ಇದೆ. ನನ್ನ ಸಿನಿಮಾಗಳಲ್ಲಿಯೇ ಅತ್ಯುತ್ತಮ ಬಿಸಿನೆಸ್ ಈ ಸಿನಿಮಾಗೆ ಆಗಿದೆ.

* ಅಯೋಗ್ಯ 2 ವಿಶೇಷತೆ ಏನು?

ಒಂದು ಯಶಸ್ವಿ ಸಿನಿಮಾದ ಮುಂದುವರಿದ ಭಾಗ ಅನ್ನೋದೇ ಮೊದಲ ವಿಶೇಷತೆ. ಮೊದಲ ಭಾಗದಲ್ಲಿ ಕೇವಲ ಒಂದು ಮತದಿಂದ ನಾಯಕ ಹೇಗೆ ಗೆದ್ದ ಎಂಬಲ್ಲಿಗೆ ಕತೆ ಮುಕ್ತಾಯಗೊಳಿಸಿದ್ದೆವು. ಈಗ ಈ ಎರಡನೇ ಭಾಗದಲ್ಲಿ ನಾಯಕ ಗೆದ್ದ ನಂತರದ ಆಟಗಳು, ವಿರೋಧಿ ಬಣ ನೀಡುವ ಕಾಟಗಳು ಮತ್ತು ಪಂಚಾಯ್ತಿಯಲ್ಲಿ ಅಯೋಗ್ಯನ ಹಾವಳಿ ಹೇಗೆಲ್ಲ ಇರುತ್ತದೆ ಎಂಬುದನ್ನು ನೋಡಬಹುದು. ಉತ್ತಮ ಕತೆಯ ಜೊತೆ ಆಕರ್ಷಕ ಮನರಂಜನೆ ಕೊಟ್ಟಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್. ನನ್ನ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಪ್ರೇಕ್ಷಕರಿಗೆ ಖುಷಿಕೊಡಲಿದೆ. ಪ್ರತಿಯೊಂದು ಪಾತ್ರಕ್ಕೂ ಸೂಕ್ತ ತೂಕವಿದೆ. ಗುಣಮಟ್ಟದಲ್ಲಿ ಈ ಸಲ ಮತ್ತಷ್ಟು ಜೋರಾಗಿ ಬರುತ್ತಿದ್ದೇವೆ.

* ಮೊದಲ ಭಾಗಕ್ಕೂ ಈ ಭಾಗಕ್ಕೂ ಏನಾದರೂ ವ್ಯತ್ಯಾಸವಿದೆಯೇ?

ಮೊದಲ ಭಾಗದ ನಾಯಕನಿಗೂ ಈ ಹೊಸ ಅಯೋಗ್ಯನಿಗೂ ಹಾವ-ಭಾವದಿಂದ ಹಿಡಿದು, ಕಾಸ್ಟ್ಯೂಮ್, ಡೈಲಾಗ್ ಡೆಲಿವರಿಯವರೆಗೆ ಸಾಕಷ್ಟು ವ್ಯತ್ಯಾಸವಿದೆ. ಮುಖ್ಯವಾಗಿ ಆತನ ಆಟಿಟ್ಯೂಡ್ ಮತ್ತು ಮೆಚ್ಯೂರಿಟಿ ಲೆವೆಲ್‌ನಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಈ ಸಲ ನಾನು ಹೆಚ್ಚು ಗಮನ ಕೊಟ್ಟಿದ್ದೇನೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ.

* ಕಥೆಯ ವಾತಾವರಣ ಅಥವಾ ಹಳ್ಳಿಯ ಹಿನ್ನೆಲೆಯಲ್ಲಿ ಏನಾದರೂ ಬದಲಾವಣೆಗಳಿವೆಯೇ?

ಹಳ್ಳಿಗಳು ಬದಲಾಗುವುದಿಲ್ಲ, ಆದರೆ ಹಳ್ಳಿಯ ಜನರು ಬದಲಾಗುತ್ತಾರೆ. ಮೊದಲ ಭಾಗದಲ್ಲಿದ್ದ ಅದೇ ಹಳ್ಳಿಯೇ ಇಲ್ಲೂ ಇದೆ. ಆದರೆ ಜನ ಮತ್ತು ವಾತಾವರಣ ಬದಲಾಗಿದೆ. ಅಂದು ಸಿನಿಮಾ ನೋಡಿದ್ದ ಪ್ರೇಕ್ಷಕರು ಈಗ ನಾನಾ ಬಗೆಯಲ್ಲಿ ಬದಲಾಗಿರುತ್ತಾರೆ, ಅವರಿಗೆ ಈ ಸಿನಿಮಾ ನೆನಪಿನ ಬುತ್ತಿ ತೆರೆದಂತೆ ಅನಿಸಿದರೆ, ಹೊಸ ಪ್ರೇಕ್ಷಕರಿಗೆ ಡಬಲ್ ಮನರಂಜನೆ.

* ಹೊಸ ಅಯೋಗ್ಯನ ಮೇಲೆ ನಿಮ್ಮ ಭರವಸೆ ಏನು?

ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ. ಅದಕ್ಕಿಂತ ದುಪ್ಪಟ್ಟು ಮನರಂಜನೆ ಈ ಅಯೋಗ್ಯ 2ನಲ್ಲಿದೆ ಎಂಬ ಭರವಸೆ ನಮ್ಮಿಡೀ ತಂಡದಲ್ಲಿದೆ. ಮೊದಲನೇ ಭಾಗದ ಗೆಲುವು ಪ್ರೇಕ್ಷಕರು ನಮಗೆ ನೀಡಿದ ಕೊಡುಗೆಯಾದರೆ, ಈ ಎರಡನೇ ಭಾಗ ನಾವು ಅವರಿಗಾಗಿ ನೀಡುತ್ತಿರುವ ಉಡುಗೊರೆ. ಇದು ಎಲ್ಲರೂ ಚಿತ್ರಮಂದಿರಗಳಲ್ಲೇ ಕುಳಿತು ಸಂಭ್ರಮಿಸಬೇಕಾದ ಸಿನಿಮಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾಂತಿ ಕ್ರಾಂತಿ ರೀ-ರಿಲೀಸ್, ‘ಮುಧೋಳ್’ ಸಿನಿಮಾ, ನಿರ್ಮಾಪಕರ ಪ್ರಶ್ನೆ: ವಿಕ್ರಮ್ ರವಿಚಂದ್ರನ್ ಓಪನ್ ಟಾಕ್
Exclusive: ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ನನ್ನ ಆ್ಯಕ್ಷನ್‌ ಇಷ್ಟ ಆಗಿದೆ: ಪ್ರಿಯಾಂಕ ಉಪೇಂದ್ರ ಸಂದರ್ಶನ