ಮೊದಲ ಭಾಗಕ್ಕಿಂತ ‘ಅಯೋಗ್ಯ 2’ ಹೇಗಿರಲಿದೆ? ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದೇನು?

Published : Aug 07, 2026, 06:16 PM IST
Ayogya 2

ಸಾರಾಂಶ

Ayogya 2: ಸೀಕ್ವೆಲ್ ಬಗ್ಗೆ ಯೋಚನೆ ಮೊದಲ ಸಿನಿಮಾದ ಯಶಸ್ಸಿನ ನಂತರವೇ ಬಂದಿತ್ತು ಎನ್ನುವ ಮಹೇಶ್ ಕುಮಾರ್, ಉದ್ದೇಶಪೂರ್ವಕವಾಗಿಯೇ ‘ಅಯೋಗ್ಯ 2’ ಅನ್ನು ತಡ ಮಾಡಿದ್ದಾಗಿ ಹೇಳಿದ್ದಾರೆ.

‘ಅಯೋಗ್ಯ’ ಸಿನಿಮಾ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದು ಇಂದಿಗೂ ಅದರ ಹಾಸ್ಯ, ಹಾಡುಗಳು ಹಾಗೂ ಪಾತ್ರಗಳನ್ನು ಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಇದೀಗ ಬರೋಬ್ಬರಿ ಎಂಟು ವರ್ಷಗಳ ಬಳಿಕ ಅದೇ ಲೋಕಕ್ಕೆ ‘ಅಯೋಗ್ಯ 2’ ಮೂಲಕ ನಿರ್ದೇಶಕ ಮಹೇಶ್ ಕುಮಾರ್ ಮರಳುತ್ತಿದ್ದಾರೆ. ಮೊದಲ ಭಾಗದ ಯಶಸ್ಸಿನ ಬಳಿಕ ತಕ್ಷಣವೇ ಸೀಕ್ವೆಲ್ ಮಾಡುವ ಬದಲು ಇಷ್ಟು ವರ್ಷ ಕಾಯಲು ಕಾರಣವೇನು?

ಮೊದಲ ಸಿನಿಮಾದ ಹಿಟ್ ಫಾರ್ಮುಲಾವನ್ನು ಎರಡನೇ ಭಾಗದಲ್ಲೂ ಮುಂದುವರಿಸಲಾಗಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ನಿರ್ದೇಶಕರು ಉತ್ತರಿಸಿದ್ದಾರೆ. ಎಂ. ಮುನೇಗೌಡ ಅವರು ಎಸ್‌ವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ ‘ಅಯೋಗ್ಯ 2’ನಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮತ್ತೊಮ್ಮೆ ಒಂದಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಮಾಸ್ತಿ ಸಂಭಾಷಣೆ, ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಸುರೇಶ್ ಅರುಮುಗಂ ಸಂಕಲನ ಚಿತ್ರಕ್ಕಿದೆ.

ಸೀಕ್ವೆಲ್ ತಡವಾಗಿದ್ದೇಕೆ?

ಸೀಕ್ವೆಲ್ ಬಗ್ಗೆ ಯೋಚನೆ ಮೊದಲ ಸಿನಿಮಾದ ಯಶಸ್ಸಿನ ನಂತರವೇ ಬಂದಿತ್ತು ಎನ್ನುವ ಮಹೇಶ್ ಕುಮಾರ್, ಉದ್ದೇಶಪೂರ್ವಕವಾಗಿಯೇ ‘ಅಯೋಗ್ಯ 2’ ಅನ್ನು ತಡ ಮಾಡಿದ್ದಾಗಿ ಹೇಳಿದ್ದಾರೆ. “ಒಂದು ಸಿನಿಮಾ ಬ್ಲಾಕ್‌ಬಸ್ಟರ್ ಆದಾಗ ಅದರ ಸೀಕ್ವೆಲ್ ಮಾಡಬೇಕು ಎಂಬ ಆಲೋಚನೆ ಸಹಜವಾಗಿಯೇ ಬರುತ್ತದೆ. ಆದರೆ ‘ಅಯೋಗ್ಯ’ ಸಿನಿಮಾ ಟೀವಿಯಲ್ಲಿ ಪ್ರಸಾರವಾಗುತ್ತಲೇ ಇತ್ತು. ಅದರ ಹಾಡುಗಳ ಬಗ್ಗೆಯೂ ಜನ ಮಾತನಾಡುತ್ತಿದ್ದರು. ಹಾಗಾಗಿ ಮೊದಲ ಸಿನಿಮಾದ ಯಶಸ್ಸಿನ ನೆನಪು ಸ್ವಲ್ಪ ತಣ್ಣಗಾಗಲಿ ಎಂದು ಕಾಯಲು ನಿರ್ಧರಿಸಿದೆ. ಪ್ರೇಕ್ಷಕರು ಮೊದಲ ಭಾಗದಿಂದ ಸ್ವಲ್ಪ ದೂರ ಸರಿದ ನಂತರ ಎರಡನೇ ಭಾಗ ಬಂದರೆ ಅದರ ಬಗ್ಗೆ ಹೊಸ ಕುತೂಹಲ ಮೂಡುತ್ತದೆ. ಇಲ್ಲದಿದ್ದರೆ, ಪ್ರೇಕ್ಷಕರು ಎರಡೂ ಸಿನಿಮಾಗಳನ್ನು ಹೋಲಿಸುತ್ತಲೇ ಇರುತ್ತಾರೆ. ಸೀಕ್ವೆಲ್ ಅನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು,” ಎಂದು ಮಹೇಶ್ ಹೇಳಿದ್ದಾರೆ.

‘ಅಯೋಗ್ಯ’ ಹಿಟ್ ಆಗಿದ್ದರಿಂದ ನಿರೀಕ್ಷೆಯೂ ಡಬಲ್

ಮೊದಲ ಭಾಗ ದೊಡ್ಡ ಯಶಸ್ಸು ಕಂಡಿದ್ದರಿಂದ ಎರಡನೇ ಭಾಗದ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸೂಕ್ತ ನಿರ್ಮಾಪಕರಿಗಾಗಿ ಕೂಡ ಸಮಯ ತೆಗೆದುಕೊಂಡಿದ್ದಾಗಿ ನಿರ್ದೇಶಕರು ಹೇಳಿದ್ದಾರೆ. “ಮೊದಲ ಸಿನಿಮಾ ಹಿಟ್ ಆದಾಗ ಸೀಕ್ವೆಲ್ ಮೇಲೆ ನಿರೀಕ್ಷೆ ದುಪ್ಪಟ್ಟಾಗುತ್ತದೆ. ಆ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವ ನಿರ್ಮಾಪಕರ ಅಗತ್ಯವಿತ್ತು. ಮುನೇಗೌಡ ಅವರನ್ನು ಭೇಟಿಯಾಗುವವರೆಗೆ ಸ್ವಲ್ಪ ಸಮಯ ಹಿಡಿಯಿತು,” ಎಂದಿದ್ದಾರೆ.

ಮೊದಲ ಭಾಗದ ಆತ್ಮ ಬದಲಾಗಲ್ಲ; ಮನರಂಜನೆ ಮಾತ್ರ ಇನ್ನಷ್ಟು!

‘ಅಯೋಗ್ಯ’ ಸಿನಿಮಾದ ಪ್ರಮುಖ ಆಕರ್ಷಣೆ ಅದರ ಹಾಸ್ಯ, ಭಾವನೆ ಮತ್ತು ಸಂಗೀತ. ಹೀಗಾಗಿ ಎರಡನೇ ಭಾಗದಲ್ಲಿ ಆ ಅಂಶಗಳನ್ನು ಬದಲಿಸುವ ಬದಲು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಿದ್ದೇವೆ ಎಂದು ಮಹೇಶ್ ಕುಮಾರ್ ತಿಳಿಸಿದ್ದಾರೆ. “ಮನರಂಜನೆ ‘ಅಯೋಗ್ಯ’ ಸಿನಿಮಾದ ದೊಡ್ಡ ಶಕ್ತಿಗಳಲ್ಲೊಂದು. ಚಿತ್ರದ ಹಾಡುಗಳು ಪ್ರೇಕ್ಷಕರನ್ನು ತಲುಪುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದವು. ಇದು ಮುಂದುವರಿದ ಕಥೆಯಾಗಿರುವುದರಿಂದ ಆ ಅಂಶಗಳನ್ನು ಉಳಿಸಿಕೊಂಡು ಮತ್ತಷ್ಟು ದೊಡ್ಡದಾಗಿ ತೋರಿಸಲು ಬಯಸಿದ್ದೇವೆ. ಅರ್ಜುನ್ ಜನ್ಯ ಕೂಡ ಅದ್ಭುತ ಆಲ್ಬಂ ನೀಡಿದ್ದಾರೆ. ಈ ಬಾರಿ ಪ್ರೇಕ್ಷಕರು ಇನ್ನಷ್ಟು ಮನರಂಜನೆಯನ್ನು ನಿರೀಕ್ಷಿಸಬಹುದು,” ಎಂದು ನಿರ್ದೇಶಕರು ಭರವಸೆ ನೀಡಿದ್ದಾರೆ.

ಹಳ್ಳಿ ಅದೇ, ಜನರ ಜೀವನ ಬದಲಾಗಿಲ್ಲ!

‘ಅಯೋಗ್ಯ’ದ ಯಶಸ್ಸಿನಲ್ಲಿ ಅದರ ಗ್ರಾಮೀಣ ವಾತಾವರಣವೂ ಪ್ರಮುಖ ಪಾತ್ರ ವಹಿಸಿತ್ತು. ಸೀಕ್ವೆಲ್‌ನಲ್ಲೂ ಅದೇ ಹಳ್ಳಿ ಸೊಗಡನ್ನು ಉಳಿಸಿಕೊಳ್ಳಲಾಗಿದೆ. “ಪಂಚಾಯಿತಿ ಕಟ್ಟೆಗಳು ಇನ್ನೂ ಇವೆ. ಹಳ್ಳಿ ರಾಜಕೀಯವೂ ಇದೆ. ವ್ಯತ್ಯಾಸವೆಂದರೆ ಈಗ ಜನರು ಹೆಚ್ಚು ಕಾರುಗಳಲ್ಲಿ ಓಡಾಡುತ್ತಾರೆ. ಆದರೆ ಜನರ ಸ್ವಭಾವದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆಗಳು ಬಂದಿದ್ದರೂ, ಚಿತ್ರದ ಕೆಲವು ಭಾಗಗಳಲ್ಲಿ ಮಣ್ಣಿನ ರಸ್ತೆಗಳನ್ನೇ ಮರುಸೃಷ್ಟಿಸಿದ್ದೇವೆ. ಹಳೆಯ ಕಾಲದ ಆ ಸೊಗಡು ಪ್ರೇಕ್ಷಕರಿಗೆ ಸಿಗಬೇಕು ಎಂಬ ಉದ್ದೇಶ,” ಎಂದು ಮಹೇಶ್ ಹೇಳಿದ್ದಾರೆ.ಅದರ ಜೊತೆಗೆ ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ಹಲವು ಅಂಶಗಳನ್ನು ಒಳಗೊಂಡಿದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.

ಹಳೆಯ ತಂಡ ಮರಳಿದ್ದು ದೊಡ್ಡ ಪ್ಲಸ್

ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್, ಗಿರಿ ಶಿವಣ್ಣ ಹಾಗೂ ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಮೊದಲ ಭಾಗದ ಪ್ರಮುಖ ಕಲಾವಿದರು ಮತ್ತೆ ‘ಅಯೋಗ್ಯ 2’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ಹೊಸ ಕಲಾವಿದರೂ ತಂಡವನ್ನು ಸೇರಿಕೊಂಡಿದ್ದಾರೆ. “ಮೂಲ ತಾರಾಗಣ ಮತ್ತೆ ಬಂದಾಗಲೇ ನನ್ನ ಅರ್ಧ ಕೆಲಸ ಮುಗಿದಂತಾಯಿತು. ಅವರಿಗೆ ‘ಅಯೋಗ್ಯ’ ಜಗತ್ತು ಈಗಾಗಲೇ ಪರಿಚಯವಿತ್ತು. ಹೀಗಾಗಿ ನಾನು ಮನಸ್ಸಿನಲ್ಲಿಟ್ಟುಕೊಂಡಿದ್ದ ರೀತಿಯಲ್ಲಿ ಕಥೆಯನ್ನು ತೆರೆಗೆ ತರಲು ಅದು ಸಾಕಷ್ಟು ಸಹಾಯ ಮಾಡಿತು,” ಎಂದು ನಿರ್ದೇಶಕರು ಹೇಳಿದ್ದಾರೆ.

‘ಅಯೋಗ್ಯ 2’ ಹಾಡುಗಳು ಹಳೆಯದನ್ನು ನಕಲು ಮಾಡಲ್ಲ

‘ಅಯೋಗ್ಯ’ ಸಿನಿಮಾದ ಹಾಡುಗಳು ಸೂಪರ್‌ಹಿಟ್ ಆಗಿದ್ದರಿಂದ ಎರಡನೇ ಭಾಗದ ಸಂಗೀತದ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಆದರೆ ಮೊದಲ ಭಾಗದ ಹಾಡುಗಳ ಯಶಸ್ಸನ್ನು ಮರುಸೃಷ್ಟಿಸುವ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ ಮಹೇಶ್. “ಅರ್ಜುನ್ ಜನ್ಯ ಅವರೊಂದಿಗೆ ಮಾತನಾಡುವಾಗ ಅವರು ಒಂದು ಮಾತು ಹೇಳಿದರು. ‘ಮುಂಗಾರು ಮಳೆ’ ಸಿನಿಮಾದ ಸಂಗೀತವನ್ನು ‘ಗಾಳಿಪಟ’ದಲ್ಲಿ ಮತ್ತೆ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತಿಯೊಂದು ಯಶಸ್ವಿ ಆಲ್ಬಂಗೂ ತನ್ನದೇ ಆದ ಗುರುತು ಇರುತ್ತದೆ ಎಂದರು. ಅದೇ ರೀತಿ ‘ಅಯೋಗ್ಯ 2’ಗೂ ತನ್ನದೇ ಆದ ಸಂಗೀತದ ಗುರುತು ಇರಬೇಕು ಎಂಬ ಪ್ರಯತ್ನ ನಮ್ಮದಾಗಿತ್ತು. ಹಳೆಯ ಹಾಡುಗಳನ್ನು ಮತ್ತೆ ಸೃಷ್ಟಿಸುವುದು ನಮ್ಮ ಉದ್ದೇಶವಾಗಿರಲಿಲ್ಲ,” ಎಂದು ಮಹೇಶ್ ವಿವರಿಸಿದ್ದಾರೆ.

ಹಳ್ಳಿ ಕಥೆಯಲ್ಲಿ ಕಮರ್ಷಿಯಲ್ ಸಿನಿಮಾದ ಎಲ್ಲ ಅಂಶಗಳೂ ಇವೆ

ಗ್ರಾಮೀಣ ಹಿನ್ನೆಲೆಯ ಕಥೆಗಳು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳನ್ನು ಒಳಗೊಳ್ಳಲು ಸೂಕ್ತವಾಗಿವೆ ಎಂಬುದು ನಿರ್ದೇಶಕರ ಅಭಿಪ್ರಾಯ.“‘ಅಯೋಗ್ಯ 2’ನಲ್ಲಿ ಮನರಂಜನೆ, ಭಾವನೆ, ಆ್ಯಕ್ಷನ್ ಹಾಗೂ ಕಾಮಿಡಿ ಎಲ್ಲಕ್ಕೂ ಜಾಗವಿದೆ. ಸಂಪೂರ್ಣ ಕಮರ್ಷಿಯಲ್ ಎಂಟರ್‌ಟೈನರ್‌ನಲ್ಲಿ ಪ್ರೇಕ್ಷಕರು ಏನನ್ನು ನಿರೀಕ್ಷಿಸುತ್ತಾರೋ, ಆ ಎಲ್ಲ ಅಂಶಗಳನ್ನು ಈ ಕಥೆಯಲ್ಲೇ ಸೇರಿಸಬಹುದು,” ಎಂದು ಅವರು ಹೇಳಿದ್ದಾರೆ.

ಮೊದಲ ‘ಅಯೋಗ್ಯ’ ನೋಡಿರಲಿಲ್ಲ; ಆದರೂ ಸೀಕ್ವೆಲ್ ನಿರ್ಮಿಸಲು ಮುಂದಾದರು!

‘ಅಯೋಗ್ಯ 2’ ನಿರ್ಮಾಪಕ ಮುನೇಗೌಡ ಅವರ ಕಥೆಯೂ ಸ್ವಲ್ಪ ವಿಭಿನ್ನ. ಮಹೇಶ್ ಕುಮಾರ್ ಸೀಕ್ವೆಲ್ ನಿರ್ಮಿಸುವ ಬಗ್ಗೆ ಮಾತುಕತೆ ನಡೆಸಿದಾಗ, ಅವರು ಮೊದಲ ‘ಅಯೋಗ್ಯ’ ಸಿನಿಮಾವನ್ನೇ ನೋಡಿರಲಿಲ್ಲವಂತೆ! “‘ಅಯೋಗ್ಯ’ ಸಿನಿಮಾದ ಹಾಡುಗಳು ಸೂಪರ್‌ಹಿಟ್ ಆಗಿದ್ದರಿಂದ ಅವುಗಳ ಬಗ್ಗೆ ನನಗೆ ಗೊತ್ತಿತ್ತು. ಆದರೆ ಸೀಕ್ವೆಲ್ ನಿರ್ಮಿಸುವ ಬಗ್ಗೆ ಮಾತುಕತೆ ಆರಂಭವಾದ ನಂತರವೇ ನಾನು ಮೊದಲ ಸಿನಿಮಾ ನೋಡಿದೆ. ಅದರ ಹಾಸ್ಯ ಮತ್ತು ಮನರಂಜನೆ ನನಗೆ ಬಹಳ ಇಷ್ಟವಾಯಿತು. ಒಳ್ಳೆಯ ಕಥೆ ಸಹಜವಾಗಿಯೇ ಒಳ್ಳೆಯ ಮನರಂಜನಾ ಸಿನಿಮಾವಾಗುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಬ್ಯಾನರ್‌ನಡಿ ನಾನು ನಿರ್ಮಿಸಲು ಬಯಸುವ ಸಿನಿಮಾಗಳೂ ಇದೇ ರೀತಿಯದ್ದಾಗಿರಬೇಕು,” ಎಂದು ಮುನೇಗೌಡ ಹೇಳಿದ್ದಾರೆ.

ಮೊದಲ ಭಾಗದ ಯಶಸ್ಸಿನ ಪರಂಪರೆಯೂ ಸೀಕ್ವೆಲ್ ನಿರ್ಮಿಸಲು ತಮ್ಮಲ್ಲಿ ವಿಶ್ವಾಸ ಮೂಡಿಸಿತು ಎಂದು ಅವರು ಹೇಳಿದ್ದಾರೆ. “ಪ್ರೇಕ್ಷಕರು ನಿರೀಕ್ಷಿಸುವ ಎಲ್ಲ ಅಂಶಗಳೂ ‘ಅಯೋಗ್ಯ 2’ನಲ್ಲಿವೆ ಎಂಬ ವಿಶ್ವಾಸ ನನಗಿದೆ. ಕಾಮಿಡಿ ಎಂದಿಗೂ ಹಳೆಯದಾಗುವುದಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಜನರನ್ನು ನಗಿಸುವ ಸಿನಿಮಾಗಳನ್ನು ಪ್ರೇಕ್ಷಕರು ಸ್ವೀಕರಿಸುತ್ತಲೇ ಬಂದಿದ್ದಾರೆ. ‘ಅಯೋಗ್ಯ 2’ ಕೂಡ ಆ ಪರಂಪರೆಯನ್ನು ಮುಂದುವರಿಸುತ್ತದೆ ಎಂಬ ನಂಬಿಕೆ ಇದೆ,” ಎಂದಿದ್ದಾರೆ.

‘ಅಯೋಗ್ಯ’ ಫ್ರಾಂಚೈಸಿ ಮುಂದುವರಿಯುತ್ತಾ?

‘ಅಯೋಗ್ಯ 2’ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಮೇಲೆ ಈ ಸರಣಿಯನ್ನು ಮುಂದುವರಿಸುವ ಆಸೆಯನ್ನೂ ನಿರ್ಮಾಪಕ ಮುನೇಗೌಡ ವ್ಯಕ್ತಪಡಿಸಿದ್ದಾರೆ.“ಪ್ರೇಕ್ಷಕರು ಬೆಂಬಲಿಸುತ್ತಿರುವವರೆಗೆ ನಮ್ಮ ಬ್ಯಾನರ್‌ನಡಿ ‘ಅಯೋಗ್ಯ’ ಫ್ರಾಂಚೈಸಿಯನ್ನು ಮುಂದುವರಿಸಲು ನನಗೆ ಇಷ್ಟವಿದೆ,” ಎಂದು ಅವರು ಹೇಳಿದ್ದಾರೆ. ಹೀಗಾಗಿ ಎಂಟು ವರ್ಷಗಳ ಬಳಿಕ ಬರುತ್ತಿರುವ ‘ಅಯೋಗ್ಯ 2’ ಕೇವಲ ಸೀಕ್ವೆಲ್ ಆಗಿ ಉಳಿಯುತ್ತದೆಯೇ ಅಥವಾ ಕನ್ನಡದಲ್ಲಿ ಮತ್ತೊಂದು ಜನಪ್ರಿಯ ಫ್ರಾಂಚೈಸಿಗೆ ನಾಂದಿ ಹಾಡುತ್ತದೆಯೇ ಎಂಬುದು ಸಿನಿಮಾ ಬಿಡುಗಡೆಯ ಬಳಿಕವಷ್ಟೇ ಗೊತ್ತಾಗಲಿದೆ. ಆದರೆ ನಿರ್ದೇಶಕ ಮಹೇಶ್ ಕುಮಾರ್ ಮಾತುಗಳನ್ನು ಕೇಳಿದರೆ, ಈ ಬಾರಿ ‘ಅಯೋಗ್ಯ’ಗಿಂತ ಮನರಂಜನೆ ಇನ್ನಷ್ಟು ಜೋರಾಗಲಿದೆ ಎಂಬುದಂತೂ ಸ್ಪಷ್ಟ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟ್ರೇಲರ್ ಇಲ್ಲ, ಆದರೆ ಸರ್ಪ್ರೈಸ್‌ಗೆ ಬರವಿಲ್ಲ: ‘ಅಯೋಗ್ಯ 2’ ಬಗ್ಗೆ ಸತೀಶ್ ನೀನಾಸಂ ಮಾತು!
Exclusive Interview: ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು: ಸತೀಶ್ ನೀನಾಸಂ ಸಂದರ್ಶನ