ರಂಗಭೂಮಿ ಕಲಾವಿದರ ಬದುಕಿನಿಂದ ಹುಟ್ಟಿದ 'ಟಾಸ್': ಅರ್ಜುನ್ ಕಾಪಿಕಾಡ್ ಜೊತೆ ವಿಶೇಷ ಸಂದರ್ಶನ

Published : Sep 18, 2026, 08:45 AM IST
Arjun Kapikad

ಸಾರಾಂಶ

‘ಟಾಸ್’ ಕನ್ನಡ ಸಿನಿಮಾದ ಕಥೆ, ಅಪ್ಪ-ಮಗನ ಬಾಂಧವ್ಯ, ರಂಗಭೂಮಿ ಹಿನ್ನೆಲೆ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬೆಂಬಲದ ಬಗ್ಗೆ ನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್ ಮಾತನಾಡಿದ್ದಾರೆ. ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುವ ವಿಶ್ವಾಸವನ್ನೂ ಹಂಚಿಕೊಂಡಿದ್ದಾರೆ.

* ‘ಟಾಸ್’ ಕಥೆಯ ಎಳೆ ಹೊಳೆದದ್ದು ಹೇಗೆ ಮತ್ತು ಇದು ನಿಮಗೆ ಯಾಕೆ ಆಪ್ತವೆನಿಸಿತು?

ಈ ಕಥೆಯ ಮೂಲ ನಮ್ಮ ಮನೆಯಲ್ಲೇ ಇದೆ. ನಮ್ಮ ತಂದೆಯವರು ರಂಗಭೂಮಿ ಕಲಾವಿದರಾಗಿ ಸುದೀರ್ಘ ವರ್ಷಗಳಿಂದ ಬದುಕನ್ನು ಕಟ್ಟಿಕೊಂಡು ಬಂದವರು. ಅವರ ಬದುಕಿನ ಅನುಭವಗಳನ್ನು ಮತ್ತು ನಾನು ನೋಡಿದ, ಒಡನಾಡಿದ ಜೀವನವನ್ನು ಆಧಾರವಾಗಿಟ್ಟುಕೊಂಡು, ಅದಕ್ಕೆ ಸಿನಿಮಾ ವ್ಯಾಕರಣಕ್ಕೆ ತಕ್ಕಂತೆ ಕಾಮಿಡಿ, ಎಮೋಷನ್ಸ್ ಮತ್ತು ಬದುಕಿನ ಮೌಲ್ಯಗಳನ್ನು ಹದವಾಗಿ ಬೆರೆಸಿ ಈ ಕಥೆ ಸಿದ್ಧಪಡಿಸಿದ್ದೇವೆ. ಮುಖ್ಯವಾಗಿ ಅಪ್ಪ-ಮಗನ ನಡುವಿನ ಸಂಬಂಧ ಹಾಗೂ ಕಲಾವಿದರ ಬದುಕಿನ ಹಿನ್ನೆಲೆಯನ್ನು ಪರಿಚಯಿಸಲಾಗಿದೆ. ರಂಗಭೂಮಿಯ ಹಿನ್ನೆಲೆ ನನಗೂ ರಕ್ತಗತವಾಗಿ ಬಂದಿರುವುದರಿಂದ ಈ ಕಥೆಯನ್ನು ಹೇಳುವುದು ತುಂಬಾ ಸುಲಭ ಮತ್ತು ಆಪ್ತವಾಯಿತು.

* ಕನ್ನಡಕ್ಕೆ ದೊಡ್ಡದಾಗಿ ಹೆಜ್ಜೆ ಇಡುತ್ತಿದ್ದೀರಿ. ದೊಡ್ಡ ಮಟ್ಟದ ಮಾರುಕಟ್ಟೆಗೆ ಬರುವಾಗ ಭಯ ಅಥವಾ ಆತಂಕ ಇತ್ತಾ?

ಒಳ್ಳೆಯ ಕಥೆಯನ್ನು ಪ್ರಾಮಾಣಿಕವಾಗಿ ಕಟ್ಟಿ ಜನರಿಗೆ ತಲುಪಿಸಿದರೆ, ಕೊನೆಗೆ ಪ್ರೇಕ್ಷಕರು ಅದ್ಭುತ ಸಿನಿಮಾವನ್ನೇ ನೋಡಲು ಬಯಸುತ್ತಾರೆ ಎಂಬ ಧೈರ್ಯ ನನಗಿತ್ತು. ಆದರೆ ಕನ್ನಡದಂತಹ ದೊಡ್ಡ ಮಾರುಕಟ್ಟೆಗೆ ರೀಚ್ ಆಗಲು ಒಂದು ಬಲಿಷ್ಠ ಬ್ಯಾನರ್ ಅಗತ್ಯವಿತ್ತು. ಆ ಸಮಯದಲ್ಲಿ ದೇವರ ದಯೆಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಸರ್ ನಮ್ಮ ಬೆಂಬಲಕ್ಕೆ ನಿಂತು, ತಮ್ಮ ಬ್ಯಾನರ್ ಮೂಲಕ ನಮ್ಮ ಬೆನ್ನಿಗೆ ನಿಂತರು. ಗಣೇಶ್ ಸರ್ ಅವರಂತಹ ದೊಡ್ಡ ಸೆಲೆಬ್ರಿಟಿಯ ಬೆಂಬಲ ಸಿಕ್ಕಿದ್ದು ನಮಗೆ ಆನೆಬಲ ತಂದುಕೊಟ್ಟಿತು. ಮಂಗಳೂರು ಪ್ರೀಮಿಯರ್ ಮತ್ತು ಶಿವಮೊಗ್ಗದ ಶೋಗಳಲ್ಲಿ ಜನ ನೀಡಿದ ಭರ್ಜರಿ ರೆಸ್ಪಾನ್ಸ್, ಶಿಳ್ಳೆ-ಚಪ್ಪಾಳೆಗಳು ನಮ್ಮ ಧೈರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.

* ದೊಡ್ಡ ಸ್ಕೇಲ್, ನಿರ್ದೇಶನ ಮತ್ತು ನಟನೆ ಎಲ್ಲವನ್ನೂ ಒಟ್ಟಿಗೆ ನಿಭಾಯಿಸುವುದು ಸುಲಭವಾಗಿತ್ತೇ?

ಖಂಡಿತವಾಗಿಯೂ ಇದು ಸುಲಭದ ಕೆಲಸವಲ್ಲ. ಆದರೆ ಚಿತ್ರತಂಡದ ಶ್ರಮ ಮತ್ತು ವ್ಯವಸ್ಥಿತ ಪ್ಲಾನಿಂಗ್ ಇದನ್ನು ಸುಲಭವಾಗಿಸಿತು. ಶೂಟಿಂಗ್ ಆರಂಭಕ್ಕೂ ಮುನ್ನವೇ ನಾವು ಇಡೀ ಸಿನಿಮಾವನ್ನು ‘ಮಾಕ್ ಶೂಟ್’ ಮಾಡಿಕೊಂಡಿದ್ದೆವು. ಪ್ರತಿ ಶಾಟ್ ಹೇಗಿರಬೇಕು, ಆರ್ಟಿಸ್ಟ್‌ಗಳ ಪರ್ಫಾರ್ಮೆನ್ಸ್ ಹೇಗಿರಬೇಕು, ಎಡಿಟ್ ಪ್ಯಾಟರ್ನ್ ಹೇಗಿರಬೇಕು ಎಂಬುದು ಮೊದಲೇ ನಿಖರವಾಗಿ ಗೊತ್ತಿತ್ತು. ಹಾಗಾಗಿ ಸೆಟ್‌ಗೆ ಹೋದಾಗ ಕೇವಲ ನಟನೆಯ ಕಡೆಗೆ ಹೆಚ್ಚು ಗಮನಹರಿಸಲು ಸಾಧ್ಯವಾಯಿತು. ಪೂರ್ವಸಿದ್ಧತೆ ಚೆನ್ನಾಗಿದ್ದ ಕಾರಣ ಯಾವುದೇ ಗೊಂದಲವಿಲ್ಲದೆ ಶೆಡ್ಯೂಲ್ ಪ್ರಕಾರ ಶೂಟಿಂಗ್ ಮುಗಿಯಿತು.

* ನಿಮ್ಮ ತಂದೆ ದೇವದಾಸ್ ಕಾಪಿಕಾಡ್ ಅವರೊಂದಿಗೆ ಸ್ಕ್ರಿಪ್ಟ್ ಚರ್ಚೆ ಹೇಗಿತ್ತು?

ಅವರೊಂದಿಗೆ ಬ್ರೈನ್‌ಸ್ಟಾರ್ಮಿಂಗ್ ಮತ್ತು ಡಿಸ್ಕಷನ್ ಮಾಡುವುದು ಯಾವಾಗಲೂ ಉತ್ತಮ ಅನುಭವ. ಒಂದು ಸೀನ್ ಅನ್ನು ಹೇಗೆ ಎಲಿವೇಟ್ ಮಾಡಬೇಕು, ಸ್ಕ್ರೀನ್‌ಪ್ಲೇಯಲ್ಲಿ ಭಾವನೆಗಳನ್ನು ಹೇಗೆ ಕಟ್ಟಿಕೊಡಬೇಕು ಎಂಬುದನ್ನು ಸದಾ ಚರ್ಚಿಸುತ್ತಿದ್ದೆವು. ಅಪ್ಪ-ಮಗನ ಸಂಬಂಧದ ಜತೆಗೆ ಕ್ರಿಯೇಟಿವ್ ಆಗಿ ಇಬ್ಬರ ನಡುವೆ ಅದ್ಭುತ ಹೊಂದಾಣಿಕೆ ಇತ್ತು.

* ನಿಮ್ಮ ಚಿತ್ರರಂಗದ ಪಯಣವನ್ನು ಹಿಂತಿರುಗಿ ನೋಡಿದಾಗ ಏನನ್ನಿಸುತ್ತದೆ?

ಚಿತ್ರರಂಗ ಅಂದಮೇಲೆ ಏಳುಬೀಳುಗಳು ಸಹಜ. ಕ್ರಿಯೇಟಿವ್ ಫೀಲ್ಡ್‌ನಲ್ಲಿ ಕೆಲವೊಮ್ಮೆ ನಾವು ಅಂದುಕೊಂಡ ಐಡಿಯಾಗಳು ವರ್ಕ್ ಆಗುತ್ತವೆ, ಕೆಲವೊಮ್ಮೆ ಆಗಲ್ಲ. ಆದರೆ ಪ್ರತಿಯೊಂದು ಹೆಜ್ಜೆಯಲ್ಲೂ ಕಲಿಕೆ ನಿರಂತರವಾಗಿರುತ್ತದೆ. ನಾವು ಪ್ರಾಮಾಣಿಕವಾಗಿ ಶ್ರಮಪಟ್ಟು ಸಿನಿಮಾ ಮಾಡಿದ್ದೇವೆ. ಮಾನವೀಯ ಭಾವನೆಗಳು ಎಲ್ಲರಿಗೂ ಒಂದೇ. ಹಾಗಾಗಿ ಇಡೀ ಕರ್ನಾಟಕದ ಪ್ರೇಕ್ಷಕರಿಗೆ ಈ ಸಿನಿಮಾ ಕನೆಕ್ಟ್ ಆಗುತ್ತದೆ ಎಂಬ ಭರವಸೆಯಿದೆ.

* ಈ ಸಿನಿಮಾ ಯಾಕೆ ನೋಡಬೇಕು?

ಅಪ್ಪ, ಮಗನ ಬಾಂಧವ್ಯ ಈ ಚಿತ್ರದ ಹೈಲೈಟ್. ಈ ಸಿನಿಮಾ ನೋಡಲು ಬಂದವರು ಹೊಟ್ಟೆ ತುಂಬಾ ನಗಬಹುದು, ಕೆಲವೊಮ್ಮೆ ಅಳಬಹುದು, ಕೌಟುಂಬಿಕ ಭಾವನಾತ್ಮಕ ದೃಶ್ಯಗಳನ್ನು ನೋಡಬಹುದು, ಜೊತೆಗೆ ಆ್ಯಕ್ಷನ್ ಕೂಡ ಎಂಜಾಯ್ ಮಾಡಬಹುದು. ಕನ್ನಡಕ್ಕೆ ಬರಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಇದೇ ಸರಿಯಾದ ಅವಕಾಶ ಅನ್ನಿಸಿತು. ಪ್ರೇಕ್ಷಕರು ಬಂದು ಒಮ್ಮೆ ಈ ಸಿನಿಮಾ ನೋಡಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಗಳಿಗೇ ಬೈದು, ಸಿಟ್ಟಾದೆ! 'ಸಿಟಿ ಲೈಟ್ಸ್' ಸೆಟ್‌ನ ಆ ಸೀಕ್ರೆಟ್ ಬಿಚ್ಚಿಟ್ಟ ದುನಿಯಾ ವಿಜಯ್
ಮೆಜೆಸ್ಟಿಕ್‌ನಲ್ಲಿ ನೈಜ ಬದುಕು ಕಂಡ ಮೋನಿಷಾ: 'ಸಿಟಿ ಲೈಟ್ಸ್' ಕುರಿತು ವಿನಯ್ ಹಂಚಿಕೊಂಡ ಅನುಭವವೇನು?