ಮಗಳಿಗೇ ಬೈದು, ಸಿಟ್ಟಾದೆ! 'ಸಿಟಿ ಲೈಟ್ಸ್' ಸೆಟ್‌ನ ಆ ಸೀಕ್ರೆಟ್ ಬಿಚ್ಚಿಟ್ಟ ದುನಿಯಾ ವಿಜಯ್

Published : Sep 18, 2026, 08:30 AM IST
Duniya Vijay Interview

ಸಾರಾಂಶ

‘ಸಿಟಿ ಲೈಟ್ಸ್’ ಸಿನಿಮಾದ ಕಥೆ, ರಿಯಲ್ ಘಟನೆ, ವಿನಯ್ ರಾಜ್‌ಕುಮಾರ್-ಮೋನಿಷಾ ಜೋಡಿ ಹಾಗೂ ಮಗಳ ನಟನೆ ಬಗ್ಗೆ ನಿರ್ದೇಶಕ ದುನಿಯಾ ವಿಜಯ್ ಮಾತನಾಡಿದ್ದಾರೆ. ಸಿನಿಮಾ ಕುರಿತ ವಿಶೇಷ ಸಂದರ್ಶನ ಇಲ್ಲಿದೆ.

ಆರ್. ಕೇಶವಮೂರ್ತಿ

* ಎರಡು ಚಿತ್ರಗಳಲ್ಲಿ ನಿರ್ದೇಶಕರಾಗಿ ಗೆದ್ದವರು. ಈಗ ಹ್ಯಾಟ್ರಿಕ್‌ ಡೈರೆಕ್ಟರ್‌ ಆಗಲು ಹೊರಟಿದ್ದೀರಿ?

ಅದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಸಿನಿಮಾ ನೋಡಿ ಪ್ರೇಕ್ಷಕರು ಏನು ಹೇಳಿದರೂ ಸ್ವೀಕರಿಸುತ್ತೇನೆ. ‘ಸಲಗ’ ಹಾಗೂ ‘ಭೀಮ’ ಚಿತ್ರಗಳನ್ನೂ ಇದೇ ನಂಬಿಕೆಯಲ್ಲಿ ನಿರ್ದೇಶಿಸಿದ್ದೆ. ಪ್ರೇಕ್ಷಕರು ಕೈ ಹಿಡಿದರು. ‘ಸಿಟಿ ಲೈಟ್ಸ್‌’ ಕೈ ಹಿಡಿದು ಹ್ಯಾಟ್ರಿಕ್‌ ಡೈರೆಕ್ಟರ್‌ ಮಾಡೋದು ಕೂಡ ಈಗ ಪ್ರೇಕ್ಷಕರಿಗೆ ಬಿಟ್ಟಿದ್ದೇನೆ.

* ಪ್ರೇಕ್ಷಕರು ನಿಮ್ಮ ಕೈ ಹಿಡಿಯುತ್ತಾರೆಂಬ ಗ್ಯಾರಂಟಿಗಳು ‘ಸಿಟಿ ಲೈಟ್ಸ್‌’ ಚಿತ್ರದಲ್ಲಿ ಏನಿವೆ?

ಗ್ಯಾರಂಟಿ ಎನ್ನುವುದಕ್ಕಿಂತ ನಾನು ವಾಸ್ತವಗಳನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ. ಅಂದರೆ ಸೂಕ್ಷ್ಮವಾದ ಎರಡು ವಿಚಾರಗಳು ಈ ಚಿತ್ರದಲ್ಲಿವೆ. ಅದು ಹೆಣ್ಣು ಮಕ್ಕಳ ಪರವಾಗಿರುವ ವಿಚಾರಗಳು. ಹೀಗಾಗಿ ‘ಸಿಟಿ ಲೈಟ್ಸ್‌’ ಅನ್ನೋದು ಬದುಕಿನ ವಾಸ್ತವಗಳನ್ನು ಹೇಳುವ ಬೆಳಕು.

* ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರಲ್ಲಿ ಹುಟ್ಟಿಕೊಳ್ಳುವ ಯೋಚನೆ ಏನು?

ಬದುಕಿನ ಪಯಣದಲ್ಲಿ ಹುಷಾರಾಗಿ ಇರಬೇಕು ಎನ್ನುವ ಎಚ್ಚರಿಕೆಯ ಆಲೋಚನೆ ಹುಟ್ಟಿಸುತ್ತದೆ. ಅದರಲ್ಲೂ ಗುರುತು, ಪರಿಚಯ ಇಲ್ಲದ ಬೆಂಗಳೂರಿನಂತಹ ಮಹಾನಗರಗಳಿಗೆ ಬಂದ ಮೇಲೆ ಲೈಫು ಹೇಗಿರುತ್ತದೆ ಎಂಬುದನ್ನು ತೋರಿಸಿದ್ದೇನೆ. ಆದರೆ, ಹೇಗೆ ನಡೆದುಕೊಳ್ಳಬೇಕು ಅಂತ ಹೇಳುವಷ್ಟು ದೊಡ್ಡವನಲ್ಲ.

* ಈ ಚಿತ್ರದ ಕತೆ ಹೊಳೆದಿದ್ದೇಗೆ?

ನನಗೆ ಒಂದು ರಿಯಲ್‌ ಘಟನೆ ಗೊತ್ತಾಯಿತು. ಅದರ ಬಗ್ಗೆ ವಿಚಾರ ಮಾಡುತ್ತಾ, ಯೋಚನೆ ಮಾಡುತ್ತಾ, ಮಾಹಿತಿ ಸಂಗ್ರಹಿಸಲು ಹೊರಟಾಗ ‘ಸಿಟಿ ಲೈಟ್ಸ್‌’ ಕತೆ ಹುಟ್ಟಿಕೊಂಡಿತು. ಆ ಘಟನೆಯನ್ನು ಚಿತ್ರದಲ್ಲಿ ತೋರಿಸಿದ್ದೇನೆ. ಅದೇನು ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.

* ಕ್ರೈಮು, ಅಪರಾಧ, ರಕ್ತದ ಚಿತ್ರಣಗಳ ಮೂಲಕ ಸಂದೇಶ ಕೊಟ್ಟ ಬದಲಾವಣೆ ತರಲು ಸಾಧ್ಯವೆ?

ಗೊತ್ತಿಲ್ಲ. ಆದರೆ, ನನ್ನ ಹಿಂದಿನ ಎರಡು ಚಿತ್ರಗಳಾದ ‘ಸಲಗ’ ಹಾಗೂ ‘ಭೀಮ’ ಚಿತ್ರಗಳಲ್ಲಿ ಇದು ವರ್ಕ್‌ ಆಗಿತ್ತು. ಅದನ್ನೇ ಇಲ್ಲಿ ಟ್ರೈ ಮಾಡಿದ್ದೇನೆ. ಸಿನಿಮಾ ನೋಡಿದ ಮೇಲೆ ಜನರು ‘ಚಿತ್ರದಲ್ಲಿ ಹೇಳಿರುವುದು ಸತ್ಯ’ ಅಂತ ಅಂದುಕೊಂಡರೆ ಅದೇ ದೊಡ್ಡ ಬದಲಾವಣೆ.

* ‘ಸಿಟಿ ಲೈಟ್ಸ್‌’ ಕತೆ ಮಾಡುವಾಗಲೇ ಚಿತ್ರಕ್ಕೆ ಮೋನಿಷಾ, ವಿನಯ್‌ ರಾಜ್‌ಕುಮಾರ್‌ ಜೋಡಿ ಅಂದುಕೊಂಡಿದ್ರಾ?

ಇಲ್ಲ. ಮೊದಲು ಕತೆ ಬರೆದುಕೊಂಡಿದ್ದೆ. ಈ ಕತೆಗೆ ವಿನಯ್‌ ಹೀರೋ ಆಗಿ ಬಂದ ಮೇಲೆ ಕತೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದೆ. ಅದರ ಗ್ರಾಫ್‌ ಚೇಂಜ್‌ ಆಯಿತು. ವಿನಯ್‌ಗೆ ನಾಯಕಿಯಾಗಿ ಮೋನಿಷಾ ಸೂಕ್ತ ಅನಿಸಿತು. ಹೀಗಾಗಿ ಕತೆಯ ನಂತರವೇ ನಾಯಕ, ನಾಯಕಿ ಆಯ್ಕೆ ಆಗಿದ್ದು.

* ಚಿತ್ರದ ನಾಯಕಿ ಮೋನಿಷಾ ಪಾಲಿಗೆ ನೀವು ತಂದೆ ಮತ್ತು ನಿರ್ದೇಶಕ. ಸೆಟ್‌ನಲ್ಲಿ ಹೆಚ್ಚು ಕೆಲಸ ಮಾಡಿದ್ದು ತಂದೆಯ ಮನಸ್ಸಾ, ನಿರ್ದೇಶಕನ ಮನಸ್ಸಾ?

ನಿರ್ದೇಶಕನ ಮನಸ್ಸು. ಯಾಕೆಂದರೆ ನಾನು ಬರೆದುಕೊಂಡಿರುವ ಕತೆ ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಬರಬೇಕು ಎಂದರೆ ತಂದೆಯಾಗಿ ಯೋಚನೆ ಮಾಡಿದರೆ ಆಗಲ್ಲ. ನಿರ್ದೇಶಕನಾಗಿರಬೇಕು. ಸಿಟ್ಟು, ಕೋಪ, ಬೈದಿದ್ದು ಎಲ್ಲವೂ ಆಗಾಗ ನಡೆಯುತ್ತಿತ್ತು. ಅದು ಪ್ರೀತಿಯಿಂದ.

* ತಂದೆಯಾಗಿ ನಿಮ್ಮ ಮಗಳ ಪಾತ್ರ ಪೋಷನೆ, ನಟನೆ ನೋಡಿದಾಗ ಏನಿಸಿತು?

ನಾನೇ ಭಾವಕನಾಗುತ್ತಿದ್ದೆ. ಕಣ್ಣಲ್ಲಿ ನೀರು ತುಂಬಿಕೊಂಡಿದ್ದೆ. ಯಾಕೆಂದರೆ ಆ ಪಾತ್ರವನ್ನು ನಾನು ಆ ರೀತಿ ರೂಪಿಸಿದ್ದೆ. ‘ನನ್ನ ಮಗಳಂತೆಯೇ ಎಷ್ಟೊಂದು ನೊಂದ ಹೆಣ್ಣು ಮಕ್ಕಳು ಇರಬಹುದಲ್ಲಾ’ ಅಂತ ನೆನಪಿಸಿಕೊಂಡು ಭಾವುಕನಾಗಿದ್ದೇನೆ. ಇದರ ಜೊತೆಗೆ ಶ್ರದ್ಧೆ, ಪ್ರಾಮಾಣಿಕತೆ, ಸತ್ಯದ ದಾರಿಯಲ್ಲಿದ್ದರೆ ನನ್ನ ಮಗಳು ನಟಿಯಾಗಿ ಎಲ್ಲಿ ಬೇಕಾದರೂ ಯಶಸ್ಸು ಕಾಣುತ್ತಾಳೆ ಅನಿಸಿತು.

* ತೆರೆ ಮೇಲೆ ವಿನಯ್‌ ರಾಜ್‌ಕುಮಾರ್‌ ಹಾಗೂ ಮೋನಿಷಾ ಜೋಡಿ ಹೇಗಿದೆ?

ತುಂಬಾ ಮುದ್ದಾಗಿ ಕಾಣುತ್ತಾರೆ. ಸಿನಿಮಾ ನೋಡುವವರಿಗೆ ಈ ಇಬ್ಬರು ಹೀರೋ, ಹೀರೋಯಿನ್‌ ಎನ್ನುವುದಕ್ಕಿಂತ ಅವರ ಮನೆ ಮಕ್ಕಳಂತೆ ಕಾಣುತ್ತಾರೆ.

* ನಿಮ್ಮಿಂದ ಒಂದು ಸ್ವಚ್ಚವಾದ ಪ್ರೀತಿ- ಪ್ರೇಮ, ಸಾಂಸರಿಕ ಕತೆಯ ಚಿತ್ರ ನಿರೀಕ್ಷೆ ಮಾಡಬಹುದೇ?

‘ಸಿಟಿ ಲೈಟ್ಸ್‌’ ಪಾರ್ಟ್‌ 2ನಲ್ಲಿ ಮಾಡಬಹುದು. ಯುವ ಪ್ರೇಮಿಗಳ ಸಂಸಾರ, ಅವರ ಒದ್ದಾಟಗಳು, ಆಮಾಯಕತನಗಳನ್ನ ಸುತ್ತಾ ಕತೆ ರೂಪಿಸಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೆಜೆಸ್ಟಿಕ್‌ನಲ್ಲಿ ನೈಜ ಬದುಕು ಕಂಡ ಮೋನಿಷಾ: 'ಸಿಟಿ ಲೈಟ್ಸ್' ಕುರಿತು ವಿನಯ್ ಹಂಚಿಕೊಂಡ ಅನುಭವವೇನು?
ಎಲ್ಲಾ ವರ್ಗದ ಪ್ರೇಕ್ಷಕರನ್ನು ತಟ್ಟುವ ಸಿನಿಮಾ ಅಮೆರಿಕಾ ಅಮೆರಿಕಾ: ನಾಗತಿಹಳ್ಳಿ ಚಂದ್ರಶೇಖರ್‌ ಸಂದರ್ಶನ