ಈ ನಟಿಯರ ಕಣ್ಣಲ್ಲಿ ಆದರ್ಶ ಮಹಿಳೆಯರು ಯಾರು ಗೊತ್ತೇ?

By Suvarna News  |  First Published Mar 8, 2020, 11:54 AM IST

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಒಂದಷ್ಟು ನಟಿಯರು ಇಂದು ಅವರ ಸಹಸ್ರಾರು ಅಭಿಮಾನಿಗಳಿಗೆ ಆದರ್ಶ ಮಹಿಳೆಯರಾಗಿದ್ದಾರೆ. ಆದರೆ ಅಂಥ ಆದರ್ಶ ನಟೀಮಣಿಯರೇ ತಮ್ಮ ದೃಷ್ಟಿಯಲ್ಲಿ ಸಮಾಜಕ್ಕೆ ಎಂಥ ಮಹಿಳೆ ಆದರ್ಶವಾಗಬಲ್ಲಳು ಎಂದು ಇಲ್ಲಿ ವಿವರಿಸಿದ್ದಾರೆ.


ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಒಂದಷ್ಟು ನಟಿಯರು ಇಂದು ಅವರ ಸಹಸ್ರಾರು ಅಭಿಮಾನಿಗಳಿಗೆ ಆದರ್ಶ ಮಹಿಳೆಯರಾಗಿದ್ದಾರೆ. ಆದರೆ ಅಂಥ ಆದರ್ಶ ನಟೀಮಣಿಯರೇ ತಮ್ಮ ದೃಷ್ಟಿಯಲ್ಲಿ ಸಮಾಜಕ್ಕೆ ಎಂಥ ಮಹಿಳೆ ಆದರ್ಶವಾಗಬಲ್ಲಳು ಎಂದು ವಿವರಿಸಿದರೆ ಹೇಗಿರುತ್ತದೆ? ಅಂಥದೊಂದು ಕಾನ್ಸೆಪ್ಟ್‌ನಲ್ಲಿ ಒಂದಷ್ಟು ಜನಪ್ರಿಯ ನಟಿಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇಲ್ಲಿ ಬೇರೆ ಬೇರೆ ಕಾಲಘಟ್ಟದ ನಟಿಯರಿದ್ದಾರೆ. ವೈವಿಧ್ಯಮಯ ಅಭಿಮಾನಿಗಳನ್ನು ಪಡೆದವರಿದ್ದಾರೆ. ಆದರೆ ಎಲ್ಲರೂ ಕೂಡ ಪ್ರಸ್ತುತ ಸಮಾಜದಲ್ಲಿ ಜನಪ್ರಿಯ ಸ್ಥಾನದಿಂದ ಗುರುತಿಸಿಕೊಳ್ಳುವವರೇ ಎನ್ನುವುದು ಸತ್ಯ. ಅವರ ಅಭಿಪ್ರಾಯಗಳಲ್ಲಿನ ಸಾಮ್ಯತೆ ಮತ್ತು ವೈವಿಧ್ಯತೆಯನ್ನು  ಸುವರ್ಣ ನ್ಯೂಸ್‌.ಕಾಮ್‌ ನಿಮ್ಮ ಮುಂದಿರಿಸುವ ಪ್ರಯತ್ನ ಮಾಡಿದೆ.

-ಶಶಿಕರ ಪಾತೂರು

Tap to resize

Latest Videos

undefined

ಮಹಿಳಾ ದಿನ ವಿಶೇಷ; ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಸಾಕೇ!

ಸಮಸ್ಯೆಗಳನ್ನು ಎದುರಿಸಿ ಗೆದ್ದು ಬರಬೇಕು!

ಆದರ್ಶ ಮಹಿಳೆ ಎಂದರೆ ಏನಾದರೊಂದು ಸಾಧನೆ ಮಾಡುವುದಕ್ಕೆ ಸೀಮಿತವಲ್ಲ. ಸಮಾಜದ ಸಮಸ್ಯೆಗಳನ್ನು ಎದುರಿಸಿ ಪರಿಹಾರ ಪಡೆದುಕೊಳ್ಳುವ ಮನೋಧೈರ್ಯ, ಛಲ ಕೂಡ ಹೊಂದಿರಬೇಕು ಎನ್ನುವುದು ನನ್ನ ಅನಿಸಿಕೆ. ಈ ವಿಚಾರದಲ್ಲಿ ನನಗೆ ಉದಾಹರಣೆಯಾಗಿ ಕಾಣುವವರು ಇಂದಿರಾ ಗಾಂಧಿ ಮತ್ತು ಜಯಲಲಿತಾ ಎಂದು ಧೈರ್ಯದಿಂದ ಹೇಳಬಲ್ಲೆ. ಅದಕ್ಕೆ ಕಾರಣ ಅವರು ರಾಜಕಾರಣಿಗಳಾಗಿ ಮೆರೆದವರು ಎನ್ನುವುದು ಅಲ್ಲವೇ ಅಲ್ಲ. ಆದರೆ ಅವರು ಯಾವಾಗಲೂ ಬೆಂಬಲವನ್ನು ಮಾತ್ರ ಪಡೆದು ಬೆಳೆದವರಲ್ಲ. ವಿರೋಧವನ್ನು ಕೂಡ ಕಂಡವರು. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸಿದವರು. ಫೆಯಿಲ್ಯೂರ್‌ನಿಂದ ಕೂಡ  ಫೀನಿಕ್ಸ್‌ನಂತೆ ಎದ್ದು ಬಂದವರು. ನಾವೆಲ್ಲ ಒಂದು ಸಣ್ಣ ವಿಚಾರಕ್ಕೆ ಕೂಡ ಹಂಗಾಯ್ತು, ಹಿಂಗಾಗಿ ಬಿಡ್ತು ಎಂದು ಚಿಂತಿಸಿ ಕುಳಿತು ಬಿಡುತ್ತೇವೆ. ಆದರೆ ಅದರಿಂದ ಎದ್ದು ನಿಂತು ಮುಂದುವರಿಯುವ ಅವರ ದಿಟ್ಟತನ ನನಗೆ ಆದರ್ಶವೆನಿಸಿದೆ.

-ಅಂಬಿಕಾ
ಬಹುಭಾಷಾ ತಾರೆ

-----------------------------------------

ಸಾಧನೆಯಿಂದ ನಮಗೆ ಸ್ಫೂರ್ತಿ ನೀಡುವವರಾಗಿಬೇಕು

ನನ್ನ ಪ್ರಕಾರ ಸಮಾಜದಲ್ಲಿ ಆದರ್ಶ ಮಹಿಳೆಯರ ವಿಚಾರ ಬಂದಾಗ ನೆನಪಾಗುವ ಇಬ್ಬರಿದ್ದಾರೆ. ಅದರಲ್ಲಿ ಒಬ್ಬರು ನಟಿ ಸೌಂದರ್ಯ ಅವರು. ಬಹುಶಃ ಅವರು ನಮ್ಮಿಂದ ಬಹಳ ಬೇಗನೆ ದೂರವಾದವರು. ಆದರೆ ನಟಿಯಾಗಿ ಇಂದಿಗೂ ನಾನು ಅವರ ಅಭಿನಯ ನೋಡಿ ಕಲಿಯುವಂಥದ್ದು ತುಂಬಾನೇ ಇದೆ. ಅವರು ಒಬ್ಬ ಗ್ಲಾಮರ್ ತಾರೆ ಎನ್ನುವ ಕಾರಣಕ್ಕಾಗಿ ಮಾತ್ರ ಗುರುತಿಸಿಕೊಂಡವರಲ್ಲ. ತಮ್ಮ ನಟನೆಯ ಪಾತ್ರಗಳ ಮೂಲಕ, ತಮ್ಮ ನಡವಳಿಕೆಯ ಮೂಲಕ ಬಹಳಷ್ಟು ಮಂದಿಗೆ ಸ್ಫೂರ್ತಿಯಾದಂಥವರು. ಹಾಗೆಯೇ ನನಗೆ ಇನ್ನೊಬ್ಬರು ಆದರ್ಶ ಮಹಿಳೆಯಾಗಿ ಕಾಣಿಸುವವರು ಸುಧಾ ಮೂರ್ತಿಯವರು. ಸಣ್ಣಮಟ್ಟದಲ್ಲಿ ಆರಂಭವಾದ ಸಂಸ್ಥೆಯೊಂದು ಇಂದು ಇನ್ಫೋಸಿಸ್ ಹೆಸರಲ್ಲಿ ವಿಶ್ವಾದ್ಯಂತ ದೊಡ್ಡಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾದಂಥವರು. ಹಾಗೆ ಗುರುತಿಸಿಕೊಂಡರೂ, ಸಮಾಜ ಸೇವಕಿಯಾಗಿ ಸಾಮಾನ್ಯರ ನಡುವೆ ಸಾಮಾನ್ಯರಂತೆ ಕಾಣಿಸಿಕೊಳ್ಳುವ ಅವರ  ವ್ಯಕ್ತಿತ್ವ ಖಂಡಿತವಾಗಿ ಎಲ್ಲ ಮಹಿಳೆಯರಿಗೂ ಆದರ್ಶ ಎಂದು ನಾನು ಅಂದುಕೊಳ್ಳುತ್ತೇನೆ.

ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಗೆದ್ದು ಬೀಗಿದ ಛಲಗಾತಿ ಶ್ರುತಿ ನಾಯ್ಡು!

-ರೂಪಿಕಾ
 ನಾಯಕಿ ನಟಿ

--------------------------------------------

ಪ್ರಮುಖವಾಗಿ ಪರಸ್ಪರ ಗೌರವ ನೀಡುವಂಥ ವಾತಾವರಣವಿರಬೇಕು!

ನಾನು ಮಹಿಳಾವಾದಿಯಾಗಿ ಯೋಚಿಸುವುದಕ್ಕಿಂತ ಮಾನವತಾ ವಾದಿಯಾಗಿ ಚಿಂತಿಸುತ್ತೇನೆ. ಹಾಗಾಗಿ ಆದರ್ಶಗಳ ವಿಚಾರದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಆದರ್ಶ, ಪುರುಷರಿಗೆ ಪ್ರತ್ಯೇಕವಾದ ಆದರ್ಶ ಇದೆ ಎಂದು ನನಗೆ ಅನಿಸುವುದಿಲ್ಲ. ಆದರ್ಶವನ್ನು ಇಬ್ಬರೂ ಇಟ್ಟುಕೊಳ್ಳಬೇಕು ಅನಿಸುತ್ತದೆ. ಗಂಡು, ಹೆಣ್ಣು ಸೇರಿದಂತೆ ಪ್ರತಿಯೊಬ್ಬ ಮನುಷ್ಯರು ಪರಸ್ಪರರನ್ನು ಒಪ್ಪಿಕೊಳ್ಳುವುದು ಮತ್ತು ಒಪ್ಪಿಕೊಂಡು ಕೂಡ ಅವರವರ ವೈಯಕ್ತಿಕ ವಿಚಾರಗಳಲ್ಲಿ ಸ್ವತಂತ್ರ್ಯವಾಗಿರುವುದು ಪ್ರಮುಖವಾಗಿ ಬೇಕಾಗಿರುವಂಥ ಆದರ್ಶ ಎನಿಸುತ್ತದೆ. ಎಲ್ಲರ ಅಭಿಪ್ರಾಯಗಳಿಗೂ ಹೇಗೆ ಮನ್ನಣೆ ನೀಡಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಮಾಂಸಾಹಾರಿ ಮತ್ತು ಸಸ್ಯಾಹಾರಿಗಳ ನಡುವಿನ ಹೊಂದಾಣಿಕೆಯನ್ನೇ ಹೇಳಬಹುದು. ಒಬ್ಬರಿಗೆ ಸಸ್ಯಾಹಾರ ಬೇಕು ಎನ್ನುವುದನ್ನು ಮುಖ್ಯವಾಗಿ ಪರಿಗಣಿಸುವ ವೇಳೆಯಲ್ಲಿಯೇ, ಮತ್ತೊಬ್ಬ ಮಾಂಸಾಹಾರಿಗೆ ಮಾಂಸ ತಿನ್ನುವ ಅವಕಾಶವನ್ನು ಒಪ್ಪಿಕೊಳ್ಳುವುದು ಆದರ್ಶವಾದ ವ್ಯಕ್ತಿತ್ವ ಎಂದು ನನ್ನ ಅನಿಸಿಕೆ.  ಅದರೊಂದಿಗೆ ಭಾವನಾತ್ಮಕ ಸ್ವಾತಂತ್ರ್ಯ, ಆರ್ಥಿಕವಾದ ಸ್ವಾತಂತ್ರ್ಯ ಕೂಡ ಇರಬೇಕು. ಇನ್ನು ಸಮಾಜದಲ್ಲಿ ಗುರುತಿಸಲ್ಪಟ್ಟಂಥ ಮಹಿಳೆಯರಲ್ಲಿ ನನಗೆ ಆದರ್ಶವಾಗಿ ಕಾಣುವವರು ಖಂಡಿತವಾಗಿ ಸುಧಾ ಮೂರ್ತಿಯವರು. ಯಾಕೆಂದರೆ ಅವರು ಸಾಧಕಿ ಎನ್ನುವುದರ ಜತೆಯಲ್ಲೇ ತಮ್ಮ ಸರಳತೆಯಿಂದ ಇಂದಿನ ಯುವ ಸಮಾಜಕ್ಕೆ ಮಾದರಿಯಾಗಿದ್ದಾರೆ.

-ರಂಜನಿ ರಾಘವನ್
 ನಟಿ, ನಿರ್ಮಾಪಕಿ

----------------------------------------------------

ಎರಡೂ ಕಡೆಗಳಲ್ಲಿ ನಿಭಾಯಿಸುವಂತಿರಬೇಕು!

ಕುಟುಂಬದ ಜವಾಬ್ದಾರಿಯೊಂದಿಗೆ ದೇಶವನ್ನು ಆಳುವ ತಾಕತ್ತು ಇರುವಾಕೆ ಮಹಿಳೆ. ಆದರೆ  ಅಷ್ಟಿದ್ದರೂ ಬಹಳಷ್ಟು ಬಾರಿ ಅಡುಗೆಕೋಣೆಗೆ ಸೀಮಿತವಾಗಿ ಬಿಡುತ್ತಾರೆ. ಅದನ್ನು ಮೀರಿ ಸಾಧಿಸುವವರೇ  ಆದರ್ಶ ಮಹಿಳೆ. ಹಾಗಂತ ಹೊರಗಡೆ ಸಾಧನೆ ಮಾಡುವ ಕಾರಣ ಹೇಳಿ ಮನೆಯ ಜವಾಬ್ದಾರಿಯನ್ನು ನಿಭಾಯಿಸದಿರುವುದು ನನ್ನ ಪ್ರಕಾರ ಆದರ್ಶಕ್ಕೆ ಸೇರುವುದಿಲ್ಲ. ಯಾಕೆಂದರೆ ಗಂಡನಿಗಿಂತ, ಗಂಡಿಗಿಂತ ಚೆನ್ನಾಗಿ ಮನೆ ನಿಭಾಯಿಸಬಲ್ಲ ಜಾಣ್ಮೆ ಮಹಿಳೆಯರಿಗಿರುತ್ತದೆ. ಹಾಗಾಗಿ ಅದನ್ನು ಬಿಟ್ಟು ಸಾಧನೆಯಲ್ಲಿ ಮುಳುಗುವುದು ಆದರ್ಶವಲ್ಲ. ಎರಡು ಕಡೆ ಸಮರ್ಥವಾಗಿರಬಲ್ಲ ಶಕ್ತಿಯನ್ನು ಪ್ರದರ್ಶಿಸಿ ಅದರಲ್ಲಿ ಗೆಲವು ಕಾಣುವಾಕೆ ಆದರ್ಶ ಮಹಿಳೆ. ನನ್ನ ಪಾಲಿನ ಆದರ್ಶ ಮಹಿಳೆ ಮತ್ತು ದೇವತೆ ಎಂದು ನಾನು ಸದಾ ಹೇಳುವುದು ನಟಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿಯವರನ್ನು.

-ಪದ್ಮಜಾ ರಾವ್
ನಟಿ, ವಸ್ತ್ರ ವಿನ್ಯಾಸಕಿ

-------------------------------------------------------------

ಸಮಾಜ ಸೇವೆಯ ಮೂಲಕ ಆದರ್ಶವಾಗಬೇಕು

ಜಗತ್ತಿನ ಎಲ್ಲ ಮಹಿಳೆಯರು ಅವರವರ ವೃತ್ತಿಯಲ್ಲಿ ಆದರ್ಶವಾಗಿರುತ್ತಾರೆ ಎಂದು ನನ್ನ ಅನಿಸಿಕೆ. ಅವರು ಮನೆ ಮತ್ತು ಹೊರಗಿನ ಕೆಲಸವನ್ನು ನಿಭಾಯಿಸುವ ರೀತಿ ಗಂಡಸರಿಂದ ಸಾಧ್ಯವಿಲ್ಲ. ನಾನು ನನ್ನ ತಾಯಿಯನ್ನೇ ಉದಾಹರಣೆಯಾಗಿ ಹೇಳುತ್ತೇನೆ. ಇಂದು ನಾನು ನಟಿಯಾಗಿ ಗುರುತಿಸಿಕೊಂಡಿದ್ದರೆ ಅದರಲ್ಲಿ ನನ್ನ ತಾಯಿಯ ಪ್ರಯತ್ನವಿದೆ. ಇಂದು ನಾವು ಮೂರು ಮಂದಿ ಹೆಣ್ಣುಮಕ್ಕಳು ಒಂದೊಂದು ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿರುವುದು ಅವರೇ. ಅವರು ನಮ್ಮ ತಾಯಿ ಎಂದು ಹೇಳಿಕೊಳ್ಳುವುದರಲ್ಲಿ ಖುಷಿ ಇದೆ ಎನ್ನುತ್ತಾರೆ. ಹಾಗಾಗಿ ಅದು ಅವರ ಸಾಧನೆ ಎಂದುಕೊಳ್ಳುತ್ತೇನೆ. ನಾನು ಆಕೆಯನ್ನು ಆದರ್ಶವಾಗಿ ಕಾಣುತ್ತೇನೆ. ಇಂದಿಗೂ ಅವರ ಪ್ರೋತ್ಸಾಹದ ಮಾತುಗಳಿಂದ ಮಾತ್ರ ನಾನು ಬದುಕಲ್ಲಿ ಉತ್ಸಾಹ ಪಡೆದುಕೊಳ್ಳುತ್ತೇನೆ. ಇನ್ನು ನೀವು ಹೇಳುವಂತೆ ನನಗೆ ಸಂಬಂಧವೇ ಇರದ ಒಬ್ಬರು ಸಮಾಜಕ್ಕೆ ಆದರ್ಶ ಮಹಿಳೆಯಾಗಿ ಕಾಣಿಸಿದ್ದಾರೆ ಎಂದು ನಾನು ಹೇಳುವುದಾದರೆ ಹಾಲಿವುಡ್ ನಟಿ ಏಂಜಲಿನ ಜೊಲಿಯನ್ನು ನೆನಪಿಸಿಕೊಳ್ಳುತ್ತೇನೆ. ಯಾಕೆಂದರೆ ಅವರು ಮಾಡುವ ಸಮಾಜ ಸೇವೆ ಒಂದು ಕಡೆಯಾದರೆ, ಕಾಂಬೋಡಿಯಾದಂಥ ದೇಶದಲ್ಲಿ ಅನಾಥವಾಗಿ ಕಷ್ಟಕ್ಕೊಳಗಾದ ಏಳರಿಂದ ಎಂಟರಷ್ಟು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಸಿನಿಮಾಗಳ ಮೂಲಕ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ಅವರು ಸಮಾಜಸೇವೆಯ ಸಂದೇಶವನ್ನು ಸಾರಿ ಆದರ್ಶವಾಗಿರುವಂಥವರು.

-ಪೂಜಾ ಗಾಂಧಿ
ನಟಿ, ನಿರ್ಮಾಪಕಿ

-----------------------------------------------------

`ಮಹಿಳೆಯಾಗಿದ್ದರಿಂದಲೇ ಕಷ್ಟ' ಎನ್ನುವಂತಿರಬಾರದು

ಹೆಣ್ಣು ಗಂಡಿಗೆ ಸಮಾನಳಾಗಿ ಬೆಳೆಯಬೇಕು ಎನ್ನುವುದು ಹಳೆಯ ಸ್ಲೋಗನ್. ನಮ್ಮ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎದುರಿಸಬೇಕಾದ ಕಷ್ಟಗಳು ಬೇರೆ ಬೇರೆಯಾಗಿರುತ್ತವೆ. ಮಹಿಳೆ ಎನ್ನುವ ಕಾರಣದಿಂದಲೇ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅದನ್ನು ಎದುರಿಸುವವಳು ಮಾತ್ರ ತಾನು ಮಹಿಳೆ ಅದನ್ನು ಹೇಗೆ ಎದುರಿಸುವುದು ಎಂದು ಚಿಂತಿಸುವಂತಿರಬಾರದು. ನನ್ನ ಪ್ರಕಾರ ಗಂಡಸರು ಮಹಿಳೆಯರಿಗೆ ಸಮಾನರಲ್ಲ. ನಾವು ಪುರುಷರಿಗಿಂತ ಮೇಲ್ಮಟ್ಟದಲ್ಲಿರುವವರು. ಅದನ್ನು ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರ ರಾಣಿ ಚೆನ್ನಮ್ಮ ಮೊದಲಾದವರು ಸಾಬೀತು ಮಾಡಿದ್ದಾರೆ. ಅಂದರೆ ಸಾಮಾನ್ಯ ಮಹಿಳೆಯಾಗಿದ್ದವರೇ ಸಂದರ್ಭ ಬಂದಾಗ ಸಮಾಜವನ್ನು ಹೇಗೆ ಮುನ್ನಡೆಸುವ ಶಕ್ತಿ ಹೊಂದಿದವರಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ. ಆದರೆ ಆ ಪ್ರಮಾಣದಲ್ಲಿ ಕ್ರಮೇಣ ಇಳಿಕೆಯಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಹಾಗೆ ಬೆಳೆದು ಆದರ್ಶವಾಗಿರುವ ಒಬ್ಬಾಕೆಯ ಉದಾಹರಣೆ ಹೇಳುವುದಾದರೆ ಮೇರಿಕೊಮ್ ಉದಾಹರಣೆ ನೀಡಬಲ್ಲೆ. ಸಾಮಾನ್ಯ ಮಹಿಳೆಯಾಗಿ ಮಕ್ಕಳ ತಾಯಿಯಾಗಿದ್ದುಕೊಂಡೇ ತಮ್ಮ ಸಾಧನೆಯ ಮೂಲಕ ಆದರ್ಶವಾಗಿದ್ದಾರೆ.

-ಶ್ರುತಿ ಕೃಷ್ಣ
ನಟಿ, ರಾಜಕಾರಣಿ

-------------------------------------------------------

ಕುಟುಂಬಕ್ಕಾಗಿ ದುಡಿಯುವುದು ಮುಖ್ಯ

ನನ್ನ ಪ್ರಕಾರ  ಒಬ್ಬ ಮಹಿಳೆ ಮೇಣದಂತೆ ಇರಬೇಕು.  ಆಕೆ ತಾನು ನಾಶವಾಗುತ್ತಿದ್ದರೂ ಕೂಡ ಬದುಕಿರುವಷ್ಟು ಕಾಲ ಕುಟುಂಬಕ್ಕೆ ಬೆಳಕಾಗಿ ಉಳಿಯಬೇಕು. ನನಗೆ ಆದರ್ಶ ಮಹಿಳೆ ಎಂದರೆ ಶಕೀಲಾ. ಅಂದರೆ ನಾನೇ..!

-ಶಕೀಲಾ
 ನಟಿ, ಮಾಜಿ ಗ್ಲಾಮರ್ ಮಾಡೆಲ್

click me!