ಯಾವತ್ತಿಗೂ ಸುದ್ದಿಯಾಗಬೇಕು ಎನ್ನುವ ಕಾರಣಕ್ಕೆ ವಿವಾದಗಳನ್ನು ಹುಡುಕಿ ಹೋಗದ, ಉತ್ತಮ ಅವಕಾಶಗಳನ್ನು ನೀಡಲಿಲ್ಲ ಎನ್ನುವುದಕ್ಕಾಗಿ ಚಿತ್ರರಂಗದತ್ತ ರೇಗದ, ಸಿಕ್ಕಿದ ಅವಕಾಶದಲ್ಲೇ ಕಾಸು ಮಾಡೋಣ ಎಂದು ಕೆಳದರ್ಜೆಯ ಸಿನಿಮಾಗಳತ್ತ ಬಾಗದ ಅಪರೂಪದ ನಟಿಯೊಬ್ಬರಿದ್ದರೆ ಅದು ರೂಪಿಕಾ ಎಂದು ಧೈರ್ಯದಿಂದ ಹೇಳಬಹುದು. ಇದೀಗ ದಶಕದ ಬಳಿಕ ಅವರು ನಟಿಸಿದ ಚಿತ್ರವೊಂದು ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಚಿತ್ರದ ಹೆಸರು `ಥರ್ಡ್ ಕ್ಲಾಸ್'. ಅದರ ಯಶಸ್ಸು ಮತ್ತು ಮೂಡಿರುವ ಹೊಸ ಹುಮ್ಮಸ್ಸಿನ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಖುದ್ದು ರೂಪಿಕಾ ಮಾತನಾಡಿದ್ದಾರೆ.
- ಶಶಿಕರ ಪಾತೂರು
`ಥರ್ಡ್ ಕ್ಲಾಸ್' ಸಿನಿಮಾದ ಗೆಲುವಿನ ಖುಷಿ ಹೇಗಿದೆ?
ಖಂಡಿತವಾಗಿ ತುಂಬಾನೇ ಇದೆ. ಅದಕ್ಕೆ ಕಾರಣ, ನಾನು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರೂ ಯಶಸ್ವಿ ಚಿತ್ರಗಳನ್ನು ನೀಡುವುದು ಕಷ್ಟವಾಗಿತ್ತು. ಅದಕ್ಕೆ ಕಾರಣಗಳೇನೇ ಇರಬಹುದು. ನನ್ನ ಮೊದಲ ಸಿನಿಮಾ `ಚೆಲುವಿನ ಚಿಲಿಪಿಲಿ'ಯ ಬಳಿಕ, ಈ ಮಟ್ಟದಲ್ಲಿ ಪ್ರಶಂಸೆಗಳನ್ನು ಪಡೆಯುತ್ತಿರುವ ಚಿತ್ರ `ಥರ್ಡ್ ಕ್ಲಾಸ್' ಎಂದು ಧೈರ್ಯದಿಂದ ಹೇಳಬಹುದು. ಅದರಲ್ಲಿ ಕೂಡ ಚಿತ್ರ ಬಿಡುಗಡೆ ಮಾಡುವುದೇ ಸಾಹಸ ಎನ್ನುವಂಥ ಕಾಲಘಟ್ಟದಲ್ಲಿದ್ದೇವೆ. ನಮ್ಮ ಸಿನಿಮಾ ಜತೆಗೆ ಇನ್ನೂ ಹತ್ತು ಚಿತ್ರಗಳು ತೆರೆಗೆ ಬಂದಿವೆ. ಹಾಗಿದ್ದರೂ ನಮ್ಮ ಸಿನಿಮಾ ಹಲವೆಡೆಗಳಲ್ಲಿ 25 ದಿನಗಳನ್ನು ದಾಟಿ ಮುಂದುವರಿಯುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ.
ಮನೋರಂಜನ್‌ಗೆ ತಾಯಿಯಾಗುತ್ತಿದ್ದಾರೆ ತಾರಾ
ಗೆಲುವಿನ ಬಳಿಕ ಯಶಸ್ಸಿನ ಕಾರಣಗಳ ಬಗ್ಗೆ ಅವಲೋಕನ ಮಾಡಿದ್ದೀರ?
ಈ ಸಿನಿಮಾದಲ್ಲಿ ನಾಯಕ ಹೊಸಬರಾಗಿರಬಹುದು. ಆದರೆ ನಾಯಕಿಯಾಗಿ ನಾನು ಗುರುತಿಸಿಕೊಂಡಷ್ಟೇ ನಮ್ ಜಗದೀಶ್ ಅವರು ಕೂಡ ಈ ಚಿತ್ರದ ಮೂಲಕ ಹೆಸರು ಮಾಡಿದ್ದಾರೆ. ಅದಕ್ಕೆ ಚಿತ್ರದಲ್ಲಿರುವ ಅವರ ಪಾತ್ರವೇ ಕಾರಣ. ಹಾಗಾಗಿ ಕತೆ,ಚಿತ್ರಕತೆ ಎನ್ನುವುದರ ಪ್ರಾಮುಖ್ಯತೆ ನಮಗೆ ಪದೇಪದೆ ಮನವರಿಕೆಯಾಗುತ್ತಲೇ ಇರುತ್ತದೆ. ಚಿತ್ರ ಪ್ರದರ್ಶನದ ವೇಳೆ ನಾವು ಹಲವಾರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೇವೆ. ಕುಟುಂಬ ಸಮೇತ ಬಂದಂಥ ಮಹಿಳೆಯರು ಕಣ್ಣೊರೆಸಿಕೊಂಡು ಬಂದು ಆತ್ಮೀಯವಾಗಿ ಮಾತನಾಡುವಾಗ ಅವರಿಗೆ ಚಿತ್ರದೊಳಗೆ ಎಷ್ಟು ತಲ್ಲೀನರಾಗಿದ್ದರೆನ್ನುವ ಅರಿವಾಗುತ್ತದೆ. ನಾನು ನಾಯಕಿಯಾಗಿ ಮಾತ್ರವಲ್ಲ, ತಂಡದಲ್ಲೊಬ್ಬಳಾಗಿ ತೊಡಗಿಸಿಕೊಂಡಿದ್ದರೆ ಅದಕ್ಕೆ ನಿರ್ಮಾಪಕ ಜಗದೀಶ್ ಮತ್ತು ನಿರ್ದೇಶಕ ಅಶೋಕ್ ದೇವ್ ಅವರು ಸಿನಿಮಾ ಬಗ್ಗೆ ಹೊಂದಿರುವಂಥ ಪ್ಯಾಷನ್ ಕಾರಣ. ಚಿತ್ರದ ನಾಯಕರೂ ಆಗಿರುವ ಜಗದೀಶ್ ಸಮಾಜ ಸೇವೆಗಳ ಮೂಲಕ ಗುರುತಿಸಿಕೊಂಡವರು. ಅವರು ಫಲಾಪೇಕ್ಷೆ ಇರದೆ ಮಾಡಿರುವ ಸೇವೆಗೆ ದೇವರು ಪ್ರಸ್ತುತ ಚಿತ್ರದ ಗೆಲುವಿನ ಮೂಲಕ ಪ್ರತಿಫಲ ನೀಡಿದ್ದಾನೆ ಎನ್ನಬಹುದು.
ಚಿತ್ರ ಮಂದಿರದ ಮುಂದೆ ನಿಮಗೆ ಕಟೌಟ್ ಹಾಕಿದ್ದರ ಬಗ್ಗೆ ಭಾವುಕರಾಗಿದ್ದಿರಿ?
ಹೌದು. ಯಾಕೆಂದರೆ ಗಾಂಧಿನಗರದಲ್ಲಿ ನಾಯಕಿಯರಿಗೆ ಕಟೌಟ್ ಹಾಕುವುದು ತೀರ ಅಪರೂಪ. ಅಂಥದ್ದರಲ್ಲಿ ಸಾಹಸ ಸಿನಿಮಾಗಳ ನಾಯಕಿಯೂ ಅಲ್ಲದ ನನಗೆ ಫ್ಯಾಮಿಲಿ ಚಿತ್ರವೊಂದರಲ್ಲೇ ಕಟೌಟ್ ಹಾಕಿದ್ದಾರೆ ಎನ್ನುವುದು ತಿಳಿದಾಗ ತುಂಬಾನೇ ಖುಷಿಯಾಯಿತು. ನಾನು ಚಿತ್ರೋದ್ಯಮಕ್ಕೆ ಬರಬೇಕೆಂದು ಯೋಜನೆ ಹಾಕಿದವಳೇ ಅಲ್ಲ. ಮನೆ ಮಂದಿಯ ಪ್ರೋತ್ಸಾಹ ಬಿಟ್ಟರೆ, ನನಗೆ ಸಿನಿಮಾರಂಗದಲ್ಲಿ ಯಾವುದೇ ಹಿನ್ನೆಲೆ ಇಲ್ಲ. ಅಂಥ ನನಗೆ ಕಟೌಟ್ ಹಾರಗಳು ಕನಸೇ ಆಗಿತ್ತು. ಅದು ಈ ಚಿತ್ರದ ಮೂಲಕ ನನಸಾದಾಗ ಮನೆ ಮಂದಿ ಕೂಡ ಖುಷಿ ಪಟ್ಟರು. ನಾನು ಸಹಜವಾಗಿ ಭಾವುಕಳಾದೆ.
ವಿಭಿನ್ನ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡ ರಂಗಿತರಂಗ ಬೆಡಗಿ
ಈಗ ನಿಮಗೆ ಮತ್ತೆ ಬೇಡಿಕೆ ಹೆಚ್ಚಾಗಿರುವಂತಿದೆ?
ಆಫರ್ ಬಂದಾಗಲ್ಲೆಲ್ಲ ನಾನು ಪಾತ್ರಗಳ ಆಯ್ಕೆಯಲ್ಲಿ ವೈವಿಧ್ಯತೆ ಬಯಸಿದ್ದೇನೆ. ಮಂಜರಿ ಸಿನಿಮಾದಲ್ಲಿ ಹಾರರ್, ರುದ್ರಾಕ್ಷಿಪುರದಲ್ಲಿ ಜಿಮಾಲಜಿಸ್ಟ್ ಅಲ್ಲದೆ ಡಾಕ್ಟರ್, ಪೊಲೀಸ್ ಮೊದಲಾದ ಪಾತ್ರಗಳನ್ನು ಮಾಡಿದ್ದೇನೆ. ಈಗ ಮತ್ತೆ ಶ್ರೀಮಂತನ ಮಗಳ ಪಾತ್ರಕ್ಕಾಗಿ ಆಫರ್‌ಗಳು ಬರುತ್ತಿವೆ! ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲ. ಆದರೆ ತೆಲುಗು ಭಾಷೆಯಲ್ಲಿ ಈಗಾಗಲೇ ಮೂರು ಚಿತ್ರಗಳು ಒಂದೊಂದಾಗಿ ತೆರೆಗೆ ಬರುವ ಸಾಧ್ಯತೆ ಇದೆ. ಅಲ್ಲಿನ ಸುಪರ್ ಹಿಟ್ ಚಿತ್ರವಾದ `ಜಬರ್‌ದಸ್ತ್' ಸಿನಿಮಾ ತಂಡದೊಂದಿಗೆ ಹೊಸ ಸಿನಿಮಾ ಮಾಡಿದ್ದೇನೆ. `ಟು ಪ್ಲಸ್ ಒನ್' ಎನ್ನುವ ಆ ಚಿತ್ರದಲ್ಲಿ ಅಲ್ಲಿನ ಜನಪ್ರಿಯ ಹಾಸ್ಯನಟ ಶಕಲಕ ಶಂಕರ್ ನಾಯಕರಾಗಿದ್ದಾರೆ. ಇನ್ನೊಂದು ಚಿತ್ರದಲ್ಲಿ ಅನುಷ್ಕಾ ಶೆಟ್ಟಿಯವರೊಂದಿಗೆ ನಟಿಸಿ ಗುರುತಿಸಿಕೊಂಡಿರುವ ಡಮರುಗಂ ಶಂಕರ್ ಅವರಿಗೆ ಜೋಡಿಯಾಗಿದ್ದೇನೆ. ಕನ್ನಡದಲ್ಲಿ ನಾಗ್ತಿಹಳ್ಳಿ ಚಂದ್ರಶೇಖರ್ ಸರ್ ಅವರ ಟೆಂಟ್ ಸಿನಿಮಾ ಪ್ರೊಡಕ್ಷನ್‌ನಲ್ಲಿ `ಡೈಮಂಡ್ ಕ್ರಾಸ್' ಚಿತ್ರ ಬರುವುದಿದೆ. ಇವೆಲ್ಲದರ ನಡುವೆ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದೇನೆ.